Advertisement

23ರಂದು ನಿವೃತ್ತ ನೌಕರರ ಪಿಂಚಣಿ ಅದಾಲತ್‌

02:53 PM Aug 18, 2019 | Naveen |

ಕಲಬುರಗಿ: ಕೇಂದ್ರ ಮತ್ತು ರಾಜ್ಯ ಸರ್ಕಾರಿ ನಿವೃತ್ತ ನೌಕರರ ಪಿಂಚಣಿ ಸಮಸ್ಯೆ ಬಗೆಹರಿಸಲು ರಾಷ್ಟ್ರಾದ್ಯಂತ ಜಿಲ್ಲಾ ಕೇಂದ್ರಗಳಲ್ಲಿ ಏಕಕಾಲಕ್ಕೆ ಆ. 23ರಂದು ಪಿಂಚಣಿ ಅದಾಲತ್‌ ನಡೆಸಲಾಗುತ್ತಿದೆ. ಹೀಗಾಗಿ ಜಿಲ್ಲೆಯ ನಿವೃತ್ತ ನೌಕರರು ತಮ್ಮ ಪಿಂಚಣಿ ಸಮಸ್ಯೆಗಳಿದ್ದಲ್ಲಿ ಅದಾಲತ್‌ನಲ್ಲಿ ಭಾಗವಹಿಸಿ ಸಮಸ್ಯೆ ಬಗೆಹರಿಸಿಕೊಳ್ಳಬಹುದಾಗಿದೆ ಎಂದು ಜಿಲ್ಲಾಧಿಕಾರಿ ಆರ್‌. ವೆಂಕಟೇಶಕುಮಾರ ತಿಳಿಸಿದ್ದಾರೆ.

Advertisement

ನಗರದ ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ ಪಿಂಚಣಿ ಅದಾಲತ್‌ ಕುರಿತಂತೆ ಅಧಿಕಾರಿಗಳೊಂದಿಗೆ ಪೂರ್ವಭಾವಿ ಸಭೆ ನಡೆಸಿದ ಅವರು, ಪಿಂಚಣಿಗೆ ಸಂಬಂಧಿಸಿದಂತೆ ಸಮಸ್ಯೆಗಳಿದ್ದಲ್ಲಿ ಕೂಡಲೇ ಸೂಕ್ತ ದಾಖಲಾತಿ ಲಗತ್ತಿಸಿ ಸಣ್ಣ ಉಳಿತಾಯ ಮತ್ತು ಪಿಂಚಣಿ ಇಲಾಖೆ ಸಹಾಯಕ ನಿರ್ದೇಶಕರ ಕಚೇರಿಗಳಿಗೆ ಅರ್ಜಿ ಸಲ್ಲಿಸಬೇಕು ಎಂದು ಹೇಳಿದರು.

ಹೀಗೆ ಪಿಂಚಣಿ ಅದಾಲತ್‌ ಮುನ್ನಾ ಸ್ವೀಕರಿಸಲ್ಪಟ್ಟ ಎಲ್ಲ ಅರ್ಜಿಗಳನ್ನು ಕೂಲಂಕುಷವಾಗಿ ಪರಿಶೀಲಿಸಲು ಸಣ್ಣ ಉಳಿತಾಯ ಮತ್ತು ಪಿಂಚಣಿ ಇಲಾಖೆ ಸಹಾಯಕ ನಿರ್ದೇಶಕರು, ಜಿಲ್ಲಾ ಖಜಾನಾಧಿಕಾರಿ ಮತ್ತು ಸ್ಟೇಟ್ ಬ್ಯಾಂಕ್‌ ಆಫ್‌ ಇಂಡಿಯಾ ಅಧಿಕಾರಿಗಳನ್ನೊಳಗೊಂಡ ತ್ರಿಸದಸ್ಯ ಸಮಿತಿ ರಚಿಸಬೇಕು.

ಸಮಿತಿ ಅರ್ಜಿ ಪರಾಮರ್ಶಿಸಿ ತನ್ನ ಸ್ಪಷ್ಟವಾದ ಅಭಿಪ್ರಾಯವನ್ನು ಅದಾಲತ್‌ ನಡೆಸುವ ಜಿಲ್ಲಾಧಿಕಾರಿಗಳಿಗೆ ಮಂಡಿಸಬೇಕು. ಹೀಗೆ ಮಂಡಿಸಿದ ಅದಾಲತ್‌ ದಿನದಂದು ಹೆಚ್ಚಿನ ಅರ್ಜಿಗಳನ್ನು ವಿಲೇವಾರಿ ಮಾಡಲು ಸಾಧ್ಯವಾಗುತ್ತದೆ.

ಅದಾಲತ್‌ ದಿನದಂದು ಜಿಲ್ಲಾ ಖಜಾನಾಧಿಕಾರಿಗಳು, ಬ್ಯಾಂಕ್‌ ಅಧಿಕಾರಿಗಳು ಖುದ್ದಾಗಿ ಹಾಜರಿದ್ದು ಪಿಂಚಣಿ ಸಮಸ್ಯೆ ಬಗೆಹರಿಸಲು ಸಹಕಾರ ನೀಡಬೇಕು. ಇದಲ್ಲದೇ ಅಂದಿನ ಅದಾಲತ್‌ಗೆ ಜಿಲ್ಲಾ ಪ್ರಧಾನ ಮತ್ರು ಸೆಷನ್ಸ್‌ ನ್ಯಾಯಾಧಿಧೀಶರು ಸೇರಿದಂತೆ ಸಂಪನ್ಮೂಲ ವ್ಯಕ್ತಿಗಳನ್ನು ಸಹ ಆಹ್ವಾನಿಸಲು ಸಭೆ ನಿರ್ಧರಿಸಿತು.

Advertisement

ಜಿಲ್ಲಾದ್ಯಂತ ಪಿಂಚಣಿ ಪಡೆಯುವಲ್ಲಿ ಸಮಸ್ಯೆ ಎದುರಿಸುತ್ತಿರುವ ನಿವೃತ್ತ ನೌಕರರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಲು ನಿವೃತ್ತ ನೌಕರರ ಸಂಘ ಶ್ರಮಿಸಬೇಕು ಹಾಗೂ ಈ ಕುರಿತು ವ್ಯಾಪಕ ಪ್ರಚಾರ ಕೈಗೊಳ್ಳಬೇಕು ಎಂದು ಹೇಳಿದರು.

ಸಭೆಯಲ್ಲಿ ಭಾಗವಹಿಸಿದ ನಿವೃತ್ತ ನೌಕರರ ಸಂಘದ ಪ್ರತಿನಿಧಿಗಳು ಮಾತನಾಡಿ, ಪ್ರತಿ ತಿಂಗಳು ಪಿಂಚಣಿ ಪಡೆಯುವಾಗ ಬ್ಯಾಂಕ್‌ನಲ್ಲಿ ಜನದಟ್ಟಣೆ ಹೆಚ್ಚುತ್ತಿರುವುದರಿಂದ ಪಿಂಚಣಿದಾರರಿಗೆ, ವೃದ್ಧರಿಗೆ ತುಂಬಾ ತೊಂದರೆಯಾಗುತ್ತಿದೆ. ವಿಶೇಷ ಕೌಂಟರ್‌ ವ್ಯವಸ್ಥೆ ಮಾಡಬೇಕು ಎಂದು ಹೇಳಿದರು.

ಇದಕ್ಕೆ ಪ್ರತಿಕ್ರಿಯೆ ನೀಡಿದ ಜಿಲ್ಲಾಧಿಕಾರಿಗಳು ಪ್ರತಿ ಶಾಖೆಯಲ್ಲಿ ಮಾಸಾಂತ್ಯದ ವೇಳೆಯಲ್ಲಿ ಏಳು ದಿನಗಳ ಕಾಲ ಪಿಂಚಣಿದಾರರು ಮತ್ತು ವಯೋವೃದ್ಧರಿಗೆ ವಿಶೇಷ ಕೌಂಟರ್‌ ತೆರೆಯುವಂತೆ ಲೀಡ್‌ ಬ್ಯಾಂಕ್‌ ವ್ಯವಸ್ಥಾಪಕರಿಗೆ ಪತ್ರ ಬರೆಯುವಂತೆ ಅಧಿಕಾರಿಗಳಿಗೆ ನಿರ್ದೇಶನ ನೀಡಿದರು.

ಅಪರ ಜಿಲ್ಲಾಧಿಕಾರಿ ಬಿ. ಶರಣಪ್ಪ ಮಾತನಾಡಿ, ಜಿಲ್ಲಾ ಮಟ್ಟದ ಅಧಿಕಾರಿಗಳು, ಸ್ಥಳೀಯ ಸಂಸ್ಥೆಗಳ ಮುಖ್ಯಸ್ಥರು, ಬ್ಯಾಂಕ್‌ ವ್ಯವಸ್ಥಾಪಕರು, ಬಿಇಒ, ಎಸ್‌ಟಿಒ, ಆರೋಗ್ಯ ಇಲಾಖೆ, ಪೊಲೀಸ್‌ ಇಲಾಖೆ, ನಿವೃತ್ತ ನೌಕರರ ಸಂಘದವರು, ಜಿಲ್ಲಾ ಖಜಾನೆ ಹಾಗೂ ಇನ್ನಿತರ ಇಲಾಖೆ ಅಧಿಕಾರಿಗಳು ಅಂದು ಕಡ್ಡಾಯವಾಗಿ ಭಾಗವಹಿಸುವಂತೆ ಪತ್ರ ಬರೆಯಬೇಕು. ಪಿಂಚಣಿ ಅದಾಲತ್‌ ಕುರಿತಂತೆ ತಾಲೂಕು ಮಟ್ಟದಲ್ಲಿಯೂ ವ್ಯಾಪಕ ಪ್ರಚಾರ ಕೈಗೊಳ್ಳಬೇಕು ಎಂದು ಸೂಚಿಸಿದರು.

ಸಣ್ಣ ಉಳಿತಾಯ ಮತ್ತು ಪಿಂಚಣಿ ಇಲಾಖೆ ಸಹಾಯಕ ನಿರ್ದೇಶಕ ಎ.ಬಿ. ಭಜಂತ್ರಿ ಕಾರ್ಯಕ್ರಮದ ಕುರಿತು ವಿವರಿಸಿದರು. ಜಿಲ್ಲಾ ಖಜಾನಾಧಿಕಾರಿಗಳಾದ ದತ್ತಪ್ಪ ಗೊಬ್ಬುರ, ಸಿ. ವಿರುಪಾಕ್ಷಪ್ಪ, ಜಿಲ್ಲಾ ನಿವೃತ್ತ ನೌಕರರ ಸಂಘದ ಅಧ್ಯಕ್ಷ ನಾಗಣ್ಣ ಗಣಜಲಖೇಡ ಸೇರಿದಂತೆ ತಾಲೂಕಿನ ನಿವೃತ್ತ ನೌಕರರ ಸಂಘದ ಅಧ್ಯಕ್ಷರು ಭಾಗವಹಿಸಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next