ಕಲಬುರಗಿ: ರಾಜ್ಯ ಸರ್ಕಾರದ ಕಾಲೇಜು ಶಿಕ್ಷಣ ಇಲಾಖೆ ವ್ಯಾಪ್ತಿಯಲ್ಲಿನ 412 ಸರ್ಕಾರಿ ಪದವಿ ಕಾಲೇಜುಗಳಲ್ಲಿ ದೀರ್ಘಾವಧಿಯಿಂದ ಒಂದೇ ಕಡೆ ಕಾರ್ಯ ನಿರ್ವಹಿಸುತ್ತಿರುವ ಅಧ್ಯಾಪಕರನ್ನು ಕಡ್ಡಾಯವಾಗಿ ವರ್ಗಾವಣೆ ಮಾಡುವ ಪ್ರಕ್ರಿಯೆ ಆರಂಭಿಸಬೇಕೆಂದು ಹೈದ್ರಾಬಾದ ಕರ್ನಾಟಕ ಸರ್ಕಾರಿ ಕಾಲೇಜು ಅಧ್ಯಾಪಕರ ಸಂಘ ಕಾಲೇಜು ಶಿಕ್ಷಣ ಇಲಾಖೆಯ ಜಂಟಿ ನಿರ್ದೇಶಕರ ಮೂಲಕ ಕಾಲೇಜು ಶಿಕ್ಷಣ ಇಲಾಖೆ ಆಯುಕ್ತರಿಗೆ ಮನವಿ ಸಲ್ಲಿಸಿತು.
ಕಳೆದ ಎರಡು ವರ್ಷಗಳಿಂದ ಪದವಿ ಕಾಲೇಜು ಅಧ್ಯಾಪಕರ ವರ್ಗಾವಣೆ ನಡೆದಿಲ್ಲ. ಚುನಾವಣೆ ನೆಪ ಹೇಳಿ ವರ್ಗಾವಣೆ ಮುಂದೂಡಲಾಗಿತ್ತು. ಪ್ರಸ್ತುತ ಶೈಕ್ಷಣಿಕ ವರ್ಷದಲ್ಲಿ ಬಹುತೇಕ ಶಾಲಾ ಕಾಲೇಜುಗಳು ಪ್ರಾರಂಭವಾಗಿ ಒಂದು ತಿಂಗಳು ಗತಿಸಿದರೂ ಕಾಲೇಜು ಶಿಕ್ಷಣ ಇಲಾಖೆ ವರ್ಗಾವಣೆ ಪ್ರಕ್ರಿಯೆ ಪ್ರಾರಂಭಿಸಿಲ್ಲ. ವಿಳಂಬ ಧೋರಣೆಯಿಂದಾಗಿ ವಿದ್ಯಾರ್ಥಿಗಳು ಮತ್ತು ಪ್ರಾಧ್ಯಾಪಕರು ತೀವ್ರ ತೊಂದರೆ ಅನುಭವಿಸುತ್ತಿದ್ದಾರೆ.
ಪ್ರತಿ ವರ್ಷ ಸರಕಾರಿ ಪ್ರಥಮ ದರ್ಜೆ ಕಾಲೇಜುಗಳ ಶೇ. 4ರಷ್ಟು ಅಧ್ಯಾಪಕರನ್ನು ವರ್ಗಾವಣೆ ಮಾಡಬೇಕೆಂಬ ನಿಯಮವಿದೆ. ಅಲ್ಲದೇ ಈ ವರ್ಷ ಕನಿಷ್ಠ ಶೇಕಡ 6 ರಷ್ಟು ವರ್ಗಾವಣೆ ಮಾಡಬೇಕೆಂದು ಸರಕಾರ ಇತ್ತೀಚೆಗೆ ಹೊಸ ಆದೇಶ ಹೊರಡಿಸಿದೆ. ಕೌನ್ಸೆಲಿಂಗ್‌ಗೆ ತಿದ್ದುಪಡಿ ತರಲು ಮತ್ತು ವಲಯ ಪದ್ಧತಿ ರದ್ದುಪಡಿಸಲು ಕಾಲೇಜು ಶಿಕ್ಷಣ ಇಲಾಖೆ ಆಯುಕ್ತರು ಇತ್ತೀಚೆಗೆ ಕ್ಯಾಬಿನೆಟ್‌ಗೆ ಮನವಿ ಮಾಡಿದ್ದಾರೆ. ಆದರೆ ಇಲ್ಲಿಯವರೆಗೆ ಕ್ಯಾಬಿನೆಟ್ ಯಾವುದೇ ತೀರ್ಮಾನ ತೆಗೆದುಕೊಂಡಿಲ್ಲ.
ಕ್ಯಾಬಿನೆಟ್ ಸಭೆಯ ನೆಪ ಹೇಳಿ ವರ್ಗಾವಣೆ ಮುಂದೂಡುವ ಹುನ್ನಾರ ಸರಿಯಲ್ಲ. ಇಲ್ಲವಾದರೇ ಹಳೆ ಪದ್ಧತಿಯಂತೆ ವರ್ಗಾವಣೆ ನಡೆಸಿ ಅಧ್ಯಾಪಕರಿಗೆ ನ್ಯಾಯ ಒದಗಿಸಿ. ಕಡ್ಡಾಯ ವರ್ಗಾವಣೆ ನಿಯಮ ಜಾರಿಯಿಲ್ಲದ ಪ್ರಯುಕ್ತ ಗ್ರಾಮೀಣ ಪ್ರದೇಶದಲ್ಲಿ ಸೇವೆ ಸಲ್ಲಿಸುತ್ತಿರುವ ಅಧ್ಯಾಪಕರು ತೀವ್ರ ತೊಂದರೆ ಅನುಭವಿಸುತ್ತಿದ್ದಾರೆ. ಪಟ್ಟಣ ಪ್ರದೇಶದ ಕಾಲೇಜಿನಲ್ಲಿ ಸುಮಾರು 20ರಿಂದ 25 ವರ್ಷಗಳ ಕಾಲ ಒಂದೇ ಸ್ಥಳದಲ್ಲಿ ಸೇವೆ ಸಲ್ಲಿಸುತ್ತಿರುವಂತಹ ಅಧ್ಯಾಪಕರ ವರ್ಗಾವಣೆ ಮಾಡದೆ ಇರುವುದು ಸಂವಿಧಾನದ ಸಮಾನ ತತ್ವಕ್ಕೆ ವಿರುದ್ಧವಾಗಿದೆ.
ಕೇವಲ ಖಾಲಿ ಹುದ್ದೆಗಳಿಗೆ ಮಾತ್ರ ಅಂದರೆ ಶೇ.6ರಷ್ಟು ವರ್ಗಾವಣೆ ಮಾಡುತ್ತಿರುವದರಿಂದ ಬಹುತೇಕ ಹಿರಿಯ ಪ್ರಾಧ್ಯಾಪಕರು ದೀರ್ಘಾವಧಿಯಿಂದ ಒಂದೇ ಕಡೆ ಕರ್ತವ್ಯ ನಿರ್ವಹಿಸುತ್ತಿದ್ದಾರೆ. ಅವರು ತಮ್ಮ ಹುದ್ದೆ ಎಂದಿಗೂ ಖಾಲಿ ಮಾಡುವುದಿಲ್ಲ. ಆದ್ದರಿಂದ ವರ್ಗಾವಣೆ ಉದ್ದೇಶ ಈಡೇರುವದಿಲ್ಲ. ಹೀಗಾಗಿ ಅಧ್ಯಾಪಕರು ಯಾವುದೇ ಸ್ಥಳದಲ್ಲಿ ಹತ್ತು ವರ್ಷ ಸೇವೆ ಸಲ್ಲಿಸಿದ ನಂತರ ಅದನ್ನು ಖಾಲಿ ಹುದ್ದೆ ಎಂದು ಪರಿಗಣಿಸಿ ಎಲ್ಲರಿಗೂ ಸಮಾನ ಸೌಲತ್ತು ಅನುಭವಿಸುವ ಅವಕಾಶ ಕಲ್ಪಿಸಿಕೊಡಬೇಕೆಂದು ಅಧ್ಯಾಪಕರ ಸಂಘ ಆಗ್ರಹಿಸಿದೆ.
ಸರಕಾರಿ ಪ್ರಥಮ ದರ್ಜೆ ಕಾಲೇಜುಗಳನ್ನು ಎ,ಬಿ,ಸಿ ಎಂದು ಮೂರು ವಲಯಗಳಲ್ಲಿ ವರ್ಗೀಕರಿಸಲಾಗಿದೆ. ಜಿಲ್ಲಾ ಕೇಂದ್ರಗಳನ್ನು ‘ಎ’ ವಲಯವೆಂದು, ತಾಲೂಕು ಕೇಂದ್ರಗಳನ್ನು ‘ಬಿ’ ವಲಯವೆಂದು ಹಾಗೂ ಹೋಬಳಿಗಳನ್ನು ‘ಸಿ’ ವಲಯವೆಂದು ವರ್ಗೀಕರಿಸಿರುವುದು ಅವೈಜ್ಞಾನಿಕ ಅಷ್ಟೇ ಅಲ್ಲ, ಅಸಂವಿಧಾನಿಕವಾಗಿದೆ. ಕಾಲೇಜುಗಳನ್ನು ಮೂರು ವಲಯಗಳಾಗಿ ವಿಂಗಡಿಸಿರುವುದನ್ನು ತಕ್ಷಣವೇ ಕೈಬಿಡಬೇಕೆಂದು ಅಧ್ಯಾಪಕರ ಸಂಘ ಒತ್ತಾಯಿಸಿದೆ.
ಸಮಾನತೆ ತತ್ವಕ್ಕೆ ವಿರುದ್ಧವಾದ ಹಾಗೂ ಅಧ್ಯಾಪಕರ ವಿರೋಧಿಯಾದ ವರ್ಗಾವಣೆ ನೀತಿ ಹಿಂದಕ್ಕೆ ಪಡೆಯಬೇಕು. ಸಂವಿಧಾನದ 371ನೇ (ಜೆ) ಕಲಂ ಅಡಿಯಲ್ಲಿ ಹೈದ್ರಾಬಾದ ಕರ್ನಾಟಕ ಪ್ರದೇಶದ ಅಧ್ಯಾಪಕರಿಗೆ ಅನುಕೂಲವಾಗಲು ಸ್ಥಳೀಯ ವೃಂದ ರಚಿಸಬೇಕು. ವಿಭಾಗೀಯ ಕೇಂದ್ರವಾದ ಗುಲಬರ್ಗಾದಲ್ಲೇ ಕೌನ್ಸೆಲಿಂಗ್ ನಡೆಸಬೇಕು ಎಂದು ಮನವಿಯಲ್ಲಿ ಒತ್ತಾಯಿಸಲಾಗಿದೆ.
ಅಧ್ಯಾಪಕರ ಸಂಘದ ಅಧ್ಯಕ್ಷ ಡಾ| ಶರಣಪ್ಪ ಸೈದಾಪುರ ನೇತೃತ್ವದಲ್ಲಿ ನಿಯೋಗದ ಮೂಲಕ ಮನವಿ ಸಲ್ಲಿಸಲಾಯಿತು. ಪದಾಧಿಕಾರಿಗಳಾದ ಡಾ| ಮಲ್ಲಿಕಾರ್ಜುನ ಶೆಟ್ಟಿ, ಡಾ| ಶ್ರೀಮಂತ ಬಿ. ಹೋಳ್ಕರ್, ಡಾ| ಮಲ್ಲಿಕಾರ್ಜುನ ಸಾವರಕರ್, ಡಾ| ರವಿ ನಾಯಕ, ಪ್ರೊ| ಶಂಕರ ಸೂರಿ, ಡಾ| ಕೈಲಾಸಪತಿ ವಿಶ್ವಕರ್ಮ, ಡಾ| ರಮೇಶ ಪೋತೆ, ಡಾ| ಕೈಲಾಸಬಾಬು ಹೊಸಮನಿ, ಪ್ರೊ| ಮಹ್ಮದ್ ಯೂನುಸ್ ಇನ್ನಿತರರು ಈ ಸಂದರ್ಭದಲ್ಲಿದ್ದರು.