ವಾಡಿ : ಮಹಾಮಾರಿ ಸಾಂಕ್ರಾಮಿಕ ರೋಗ ಕೊರೊನಾ ಸೋಂಕಿನ ರೂಪಾಂತರಿ ವೈರಸ್ ಹೆಚ್ಚಾಗುತ್ತಿರುವ ಕಾರಣಕ್ಕೆ ಮಾರ್ಗಸೂಚಿಗಳನ್ವಯ ರದ್ದಾಗಿದ್ದ ಚಿತ್ತಾಪುರ ತಾಲೂಕಿನ ನಾಲವಾರ ಶ್ರೀಕೋರಿಸಿದ್ಧೇಶ್ವರ ರಥೋತ್ಸವ ಬುಧವಾರ ತಾಲೂಕು ಆಡಳಿತದ ಆದೇಶವನ್ನು ಧಿಕ್ಕರಿಸಿ ಸಾಗಿತು. ಪೊಲೀಸರ ಸರ್ಪಗಾವಲು ಬೇಧಿಸಿ ರಥ ಎಳೆದ ಭಕ್ತರು, ಜಯಘೋಷಗಳನ್ನು ಮೊಳಗಿಸಿ ಕಾನೂನಿನ ಬೇಲಿ ಜಿಗಿದರು.
ಜಾತ್ರೆಗೂ ಮುಂಚೆ ನಾಲವಾರ ಮಠದಲ್ಲಿ ಪೀಠಾಧಿಪತಿ ಡಾ.ಸಿದ್ಧ ತೋಟೇಂದ್ರ ಸ್ವಾಮೀಜಿ ಅವರ ಸಾನಿಧ್ಯದಲ್ಲಿ ಶಾಂತಿ ಸಭೆ ನಡೆಸಿ ಜಾತ್ರೆ, ತನಾರತಿ, ರಥೋತ್ಸವ ಸಂಪೂರ್ಣ ರದ್ದು ಎಂದು ಘೋಷಿಸಿದ್ದ ಪೊಲೀಸರು ಹಾಗೂ ತಹಶೀಲ್ದಾರರ ಸಮ್ಮುಖದಲ್ಲೇ ಬುಧವಾರ ಲಕ್ಷಾಂತರ ಭಕ್ತರ ಸಾಕ್ಷಿಯಾಗಿ ಅದ್ಧೂರಿ ರಥೋತ್ಸವ ನಡೆಯಿತು. ಸಾಂಪ್ರದಾಯಿಕ ಆಚರಣೆಗಾಗಿ ತಾಲೂಕು ಆಡಳಿತ ಕೇವಲ ಹತ್ತು ಅಡಿ ರಥ ಎಳೆಯಲು ಅವಕಾಶ ನೀಡಿತ್ತು. ಆದರೆ ಭಕ್ತರು ಮಾತು ಕೇಳಲಿಲ್ಲ. ತಹಶೀಲ್ದಾರ ಉಮಾಕಾಂತ ಹಳ್ಳೆ, ಸಿಪಿಐ ಪ್ರಕಾಶ ಯಾತನೂರ ಹಾಗೂ ಪಿಎಸ್‌ಐ ಮಹಾಂತೇಶ ಪಾಟೀಲ ಅವರು ರಥವನ್ನು ಏರಿ ಸ್ವಾಮೀಜಿಯ ಮನವೊಲಿಸುವ ಪ್ರಯತ್ನ ಮಾಡಿದರು. ರಥ ಎಳೆಯದಂತೆ ಮನವಿ ಮಾಡಿದರು. ಅದಾಗ್ಯೂ ಪ್ರತಿವರ್ಷದಂತೆ ರಥ ನಿಗದಿತ ಸ್ಥಳಕ್ಕೆ ತಲುಪುವ ಮೂಲಕ ಕೋವಿಡ್ ನಿಯಮ ಉಲ್ಲಂಘಿಸಿದ ಪ್ರಸಂಗ ನಡೆಯಿತು. ಸಾಗುತ್ತಿದ್ದ ತೇರನ್ನು ನೋಡುತ್ತ ಪೊಲೀಸರು ಮೂಕ ಪ್ರೇಕ್ಷರಂತೆ ನಿಂತರು. ಭಕ್ತರು ಬಾರೆ ಹಣ್ಣು ಎಸೆದು ಭಕ್ತಿಯ ಹರಕೆ ತೀರಿಸಿದರು.
ಇದನ್ನೂ ಓದಿ : ಶಿವಮೊಗ್ಗ: ಹಾವನ್ನು ತಪ್ಪಿಸಲು ಹೋಗಿ ನಾಲೆಗೆ ಉರುಳಿದ ಕಾರು; ಪತ್ನಿ ಸಾವು, ಪತಿ ಪಾರು
ಲಾಠಿ ಪ್ರಹಾರ-ಕಾಲ್ತುಳಿತ: ರಥೋತ್ಸವ ವೇಳೆ ಮಠದ ಮುಖಂಡರು, ಪೂಜಾರಿಗಳೊಂದಿಗೆ ಪೊಲೀಸರು ವಾಗ್ವಾದ ನಡೆಸಿದ ಪ್ರಸಂಗ ನಡೆಯಿತು. ಅಧಿಕಾರಿಗಳ ಕಟ್ಟೆಚ್ಚರ ಧಿಕ್ಕರಿಸಿ ಭಕ್ತರು ರಥ ಎಳೆಯುತ್ತಿದ್ದಾಗ ಏಕಾಏಕಿ ಪೊಲೀಸರು ಲಘು ಲಾಠಿ ಪ್ರಹಾರ ನಡೆಸಿದರು. ಪರಿಣಾಮ ಯುವಕರು ಓಡಲು ಶುರುಮಾಡಿದ್ದರಿಂದ ಮಕ್ಕಳೊಂದಿಗೆ ಜಾತ್ರೆಗೆ ಬಂದಿದ್ದ ಅನೇಕ ಜನ ಮಹಿಳೆಯರು ಕಾಲ್ತುಳಿತಕ್ಕೊಳಗಾಗಿ ಗಾಯಗೊಂಡರು. ಎದೋಬಿದ್ದೋ ಓಡಿದ ಜನರು ಉಸಿರುಗಟ್ಟುವ ಪರಸ್ಥಿತಿ ಅನುಭವಿಸಿದರು. ಇಷ್ಟು ಜನರು ಸೇರಲು ಬಿಟ್ಟು ಈಗ ಲಾಠಿ ಬೀಸುವುದು ಸರಿನಾ ಎಂದು ಭಕ್ತರು ಪೊಲೀಸರ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು. ಕೋವಿಡ್ ನಿಯಮಗಳ ನಡುವೆಯೂ ತಾಲೂಕು ಆಡಳಿತದ ಆದೇಶಕ್ಕೆ ತಿಲಾಂಜಲಿಯಿಟ್ಟ ನಾಲವಾರ ಮಠದ ಜಾತ್ರಾ ಸಮಿತಿ, ಸಡಗರದ ಜಾತ್ರೆ ನಡೆಸಿಯೇ ತೀರುವ ಮೂಲಕ ಕಾನೂನುಗಳಿಗೆ ಸವಾಲು ಹಾಕಿದ್ದು ಸಾರ್ವಜನಿಕ ಚರ್ಚೆಗೆ ಕಾರಣವಾಯಿತು.
ಹತ್ತು ಮಂದಿ ಮುಖಂಡರ ವಿರುದ್ಧ ಪ್ರಕರಣ ದಾಖಲು : ರಥೋತ್ಸವ ರದ್ಧುಪಡಿಸಿ ಕೋವಿಡ್ ಮಾರ್ಗಸೂಚಿ ಪಾಲಿಸುವುದಾಗಿ ಶಾಂತಿ ಸಭೆಯಲ್ಲಿ ಭರವಸೆ ನೀಡಿದ್ದ ನಾಲವಾರ ಮಠದ ಜಾತ್ರಾ ಸಮಿತಿಯ ಹತ್ತು ಜನ ಮುಖಂಡರ ವಿರುದ್ಧ ವಾಡಿ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ. ತನಾರತಿ, ರಥೋತ್ಸವ ಹಾಗೂ ಜಾತ್ರೆಗೆ ಅವಕಾಶ ಇರುವುದಿಲ್ಲ ಎಂದು ಪ್ರಕಟಣೆ ಹೊರಡಿಸಿದ್ದ ತಾಲೂಕು ಆಡಳಿತವೇ ನೆರೆದಿದ್ದ ಜನಸ್ತೋಮ ಕಂಡು ಬೆರಗಾಯಿತು. ಕೋವಿಡ್ ನಿಯಮಗಳನ್ನು ಉಲ್ಲಂಘಿಸಿದ ಕಾರಣಕ್ಕೆ ತಹಶೀಲ್ದಾರರ ಆದೇಶದ ಮೇರೆಗೆ ಪೊಲೀಸರು ನಾಲವಾರ ಮಠದ ಮುಖಂಡರ ವಿರುದ್ಧ ಪ್ರಕರಣ ದಾಖಲಿಸಿದ್ದಾರೆ.