ಕಲಬುರಗಿ: ಕಳೆದ ವಾರದಿಂದ 44 ಡಿಗ್ರಿ ಸೆಲ್ಸಿಯಸ್ ಬಿಸಿಲಿನಿಂದ ಕಂಗೆಟ್ಟಿದ್ದ ಜಿಲ್ಲೆಯಲ್ಲಿ ಮಂಗಳವಾರ ಸಂಜೆ ಸುರಿದ ಮಳೆ ಸ್ವಲ್ಪ ತಂಪಿನ ವಾತಾವರಣ ಮೂಡಿಸಿತಾದರೂ ಭಾರಿ ಅನಾಹುತ ಸೃಷ್ಟಿಸಿದೆ. ಸಿಡಿಲಿಗೆ ಕಾರ್ಮಿಕನೊಬ್ಬ ಮೃತಪಟ್ಟಿದ್ದರೆ, ವೃದ್ದೆಯೊಬ್ಬರು ಗಾಯಗೊಂಡಿದ್ದಾರೆ.
ವಾಡಿ: ಕಲ್ಲು ಗಣಿಯಲ್ಲಿ ಕೆಲಸ ಮುಗಿಸಿ ಮನೆಗೆ ಬರುತ್ತಿದ್ದ ಗಣಿ ಕಾರ್ಮಿಕನೊಬ್ಬ ಸಿಡಿಲು ಬಡಿದು ಸ್ಥಳದಲ್ಲಿಯೇ ಮೃತಪಟ್ಟ ಘಟನೆ ಮಂಗಳವಾರ ಸಂಜೆ ಪಟ್ಟಣದ ಹೊರ ವಲಯದ ಕೊಂಚೂರು ಮಾರ್ಗದಲ್ಲಿ ಸಂಭವಿಸಿದೆ.
ಹಳಕರ್ಟಿ ಗ್ರಾಮ ನಿವಾಸಿ ದೊಡ್ಡಲಕ್ಷ್ಮಯ್ಯ ಭೀಮಯ್ಯ (60) ಮೃತ ಕಾರ್ಮಿಕ. ಬಿರುಗಾಳಿ ಸಹಿತ ಗುಡುಗು ಮಿಂಚಿನೊಂದಿಗೆ ಮಳೆಯಾದ್ದರಿಂದ ಸಿಡಿಲು ಬಿದ್ದಿದೆ. ಸಿಡಿಲ ಶಾಖಕ್ಕೆ ಸ್ಥಳದಲ್ಲಿಯೇ ವ್ಯಕ್ತಿ ಕುಸಿದುಬಿದ್ದು ಪ್ರಾಣಬಿಟ್ಟಿದ್ದಾನೆ. ಈ ಕುರಿತು ವಾಡಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಶಹಾಬಾದ: ತಾಲೂಕು ಮುತಗಾ ಗ್ರಾಮದಲ್ಲಿ ಮಂಗಳವಾರ ಸಂಜೆ ಸಿಡಿಲು ಬಡಿದು ಸರಸ್ವತಿ ಸಿದ್ದಣ್ಣ ಹಳ್ಳಿ ಎಂಬ ವೃದ್ಧೆ ಗಾಯಗೊಂಡಿದ್ದಾರೆ. ಮನೆಯಲ್ಲಿ ಕುಳಿತಿದ್ದಾಗ ಸಿಡಿಲು ಬಡಿದಿದ್ದು, ಶಹಾಬಾದ ಸಮುದಾಯ ಆರೋಗ್ಯ ಕೇಂದ್ರದಲ್ಲಿ ಚಿಕಿತ್ಸೆ ಕೊಡಿಸಲಾಗಿದೆ. ಶಹಾಬಾದ ನಗರದಲ್ಲಿ ಸಂಜೆ ಸುಮಾರು ಒಂದು ಗಂಟೆ ಜೋರಾದ ಮಳೆ ಸುರಿದಿದೆ.
ಬಿರುಗಾಳಿಯೊಂದಿಗೆ ಜಿಲ್ಲೆಯ ಹಲವು ಕಡೆ ಮುಂಗಾರು ಆಗಮನದ ಮುಂಚಿನ ರೋಹಿಣಿ ಮಳೆ ಸುರಿದಿದೆ. ಆದರೆ ಕಾದ ಕೆಂಡದಂತಾಗಿರುವ ಭೂಮಿಗೆ ಈ ಮಳೆ ಹಂಚಿನ ಮೇಲೆ ನೀರು ಚಿಮ್ಮಿಸಿದಂತಾಗಿದೆ. ಸ್ವಲ್ಪ ತಂಪಾದ ವಾತಾವರಣ ಮೂಡಿಸಿರುವ ಈ ಮಳೆಗೆ ಸಂತಸಪಡುವಂತಾಯಿತು. ಅರ್ಧ ಗಂಟೆ ಕಾಲ ಅಲ್ಲಲಿ ಮಳೆ ಸುರಿದಿದೆ. ಆದರೆ ಗಾಳಿ ರಭಸವಾಗಿದ್ದರಿಂದ ಮಳೆ ಬಾರದೇ ಮುಂದಕ್ಕೆ ಓಡಿ ಹೋಯಿತು. ಕಳೆದ ಮುಂಗಾರು ಹಾಗೂ ಹಿಂಗಾರು ಎರಡು ಮಳೆ ಸಂಪೂರ್ಣ ಕೈ ಕೊಟ್ಟ ಪರಿಣಾಮ ಕೃಷಿ ಕ್ಷೇತ್ರದ ಮೇಲೆ ಪರಿಣಾಮ ಬೀರಿದ್ದಲ್ಲದೇ ಕುಡಿಯುವ ನೀರಿಗೆ ಎಲ್ಲೆಲ್ಲೂ ಹಾಹಾಕಾರ ಉಂಟಾಗಿದೆ. ಜಿಲ್ಲಾದ್ಯಂತ ಶೇ. 70ರಷ್ಟು ನೀರಿನ ಮೂಲಗಳು ಒಣಗಿದ್ದು, ಜನರು ಕೊಡ ನೀರಿಗಾಗಿ ತಪಸ್ಸು ಮಾಡುವಂತಾಗಿದೆ.
ಕೆರೆಗಳೆಲ್ಲ ಮಾಯವಾಗಿದ್ದರಿಂದ ಜತೆಗೆ ನೀರು ಉಪಯೋಗ ಮಿತವಾಗಿ ಬಳಕೆ ಮಾಡದಿರುವರಿಗೆ ಈ ಬೇಸಿಗೆ ಸಾಕಷ್ಟು ಪಾಠ ಕಲಿಸಿತು ಎನ್ನಬಹುದಾಗಿದೆ.
ನೀರು ಮನೆಯೊಳಗೆ: ಇನ್ನೇನು ಮಳೆ ಸುರಿಯುವ ಲಕ್ಷಣಗಳು ಕಂಡು ಬರುತ್ತಿದೆ. ಇನ್ನು ಸ್ವಲ್ಪ ಮಳೆ ಬಂದರೆ ಕಲಬುರಗಿ ಮಹಾನಗರದಲ್ಲಿ ಕೆಲ ಬಡಾವಣೆಗಳಲ್ಲಿ ನೀರು ಮನೆಯೊಳಗೆ ಸೇರುತ್ತದೆ. ನೀರು ನಿಲ್ಲಲು ಸ್ಥಳ ಇಲ್ಲದಂತೆ ಮಾಡಿರುವುದು, ಒಳಚರಂಡಿಯೊಳಗೆ ನೀರು ಹರಿಯದಂತೆ ಆದರೊಳಗೆ ಕಸ -ತ್ಯಾಜ್ಯ ಹಾಗೂ ಪ್ಲಾಸ್ಟಿಕ್ ಹಾಕಿರುವುದು ಜತೆಗೆ ಚರಂಡಿ ಮೇಲೆಯೇ ಮನೆ ಕಟ್ಟಿದ್ದರಿಂದ ಮಳೆ ನೀರು ಆನಿವಾರ್ಯವಾಗಿ ಮನೆಯೊಳಗೆ ಬರದೇ ಬೇರೆ ದಾರಿಯೇ ಇಲ್ಲ. ಕಳೆದ ವರ್ಷದಿಂದ ಮುಂಗಾರು ಹಾಗೂ ಹಿಂಗಾರು ಎರಡೂ ಮಳೆ ಕೊಟ್ಟ ಪರಿಣಾಮ ಭೂಮಿ ಮರಭೂಮಿಯಂತಾಗಿದೆ. ಈಗ ಭೂಮಿ ಹಸಿವಾದಷ್ಟು ಮಳೆ ಬಂದರೆ ದನಕರುಗಳಿಗೆ ಮೇವು ಬೆಳೆಯಲು ಸಾಧ್ಯವಾಗುತ್ತದೆ. ಅಲ್ಲದೇ ಭೂಮಿಗೆ ಬೀಜ ಹಾಕಲು ರೈತನಿಗೆ ಸಹಾಯಕವಾಗುತ್ತದೆ. ಮೇ ಕೊನೆ ವಾರದಿಂದ ಮಳೆ ಬಂದರೆ ಮುಂಗಾರು ಹಂಗಾಮಿನ ಕೃಷಿ ಚಟುವಟಿಕೆಗಳಿಗೆ ಚಾಲನೆ ನೀಡಿದಂತಾಗುತ್ತದೆ. ಬಿತ್ತನೆ ಗುರಿ ಶೇ. 20ರಷ್ಟು ಹೆಚ್ಚಳವಾಗುತ್ತದೆ. ಒಟ್ಟಾರೆ ಮಂಗಳವಾರ ಮಳೆ ಎಲ್ಲರಲ್ಲೂ ಭರವಸೆ ಮೂಡಿಸಿದೆ.