ಕಲಬುರಗಿ: 371ಜೆ ವಿಧಿ ಬಗ್ಗೆ ಮಾತನಾಡುವರು ಲೋಕೋಪಯೋಗಿ ಇಲಾಖೆಯಲ್ಲಿ 870 ಇಂಜನೀಯರ್ ಹಾಗೂ ಸಹಾಯಕ ಇಂಜನೀಯರುಗಳ ನೇಮಕಾತಿಯಲ್ಲಿ 371ಜೆ ವಿಧಿ ಮೀಸಲಾತಿಗೆ ಕೊಕ್ಕೆ ಹಾಕಿದರೂ ಸುಮ್ಮನೆ ಕುಳಿತಿರುವ ಕಲಬುರಗಿ ಲೋಕಸಭಾ ಅಭ್ಯರ್ಥಿ ಮಲ್ಲಿಕಾರ್ಜುನ ಖರ್ಗೆ ಅವರಿಗೆ ಮತ ಹಾಕದಿರುವ ಮುಖಾಂತರ ತಕ್ಕ ಪಾಠ ಕಲಿಸಬೇಕೆಂದು ಹೈದ್ರಾಬಾದ್ ಕರ್ನಾಟಕ ಹೋರಾಟ ಸಮಿತಿ ಅಧ್ಯಕ್ಷ, ಮಾಜಿ ಸಚಿವ ವೈಜನಾಥ ಪಾಟೀಲ್ ಕರೆ ನೀಡಿದರು.
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಲೋಕೋಪಯೋಗಿ ಇಲಾಖೆಯಲ್ಲಿ ಇಂಜನೀಯರ್ ಹಾಗೂ ಸಹಾಯಕ ಇಂಜನೀಯರುಗಳ ನೇಮಕಾತಿಯನ್ನು ವಿಶೇಷ ಎಂಬುದಾಗಿ ಉಲ್ಲೇಖೀಸಿ 371ಜೆ ವಿಧಿ ಮೀಸಲಾತಿ ಕಡೆಗಣಿಸಿ ಈ ಭಾಗಕ್ಕೆ ತುಂಬಾ ಅನ್ಯಾಯ ಎಸಗಲಾಗಿದೆ. ಈ ಹಿಂದೆಯೂ ಗ್ರಾಮ ಪಂಚಾಯಿತಿ ಆಪರೇಟರ್‌ಗಳನ್ನು ಸಹ ವಿಶೇಷ ಹುದ್ದೆ ಎಂಬುದಾಗಿ ಅಧಿಸೂಚನೆ ಹೊರಡಿಸಿ ಹಾಸನ, ಬೆಂಗಳೂರು, ಮಂಡ್ಯ ಭಾಗದವರನ್ನು ಭರ್ತಿ ಮಾಡಿಕೊಳ್ಳಲು ಮುಂದಾಗಲಾಗಿತ್ತು. ಇದನ್ನು ಆಕ್ಷೇಪಿಸಿ ಮನವಿ ಪತ್ರ ಸಲ್ಲಿಸಿದ ನಂತರ ಆಗ ಮುಖ್ಯ ಕಾರ್ಯದರ್ಶಿಗಳಾಗಿದ್ದ ಕೆ. ರತ್ನ ಪ್ರಭಾ ಅವರು ನೇಮಕಾತಿ ರದ್ದುಗೊಳಿಸಿದ್ದರು. ಆದರೆ ಲೋಕೋಪಯೋಗಿ ಇಲಾಖೆಯಲ್ಲಿನ ಅಕ್ರಮ ನೇಮಕಾತಿ ವಿರುದ್ಧ ಈಗಿನ ಮುಖ್ಯ ಕಾರ್ಯದರ್ಶಿಗಳಿಗೆ ಮನವಿ ಸಲ್ಲಿಸಿದ್ದರೂ ಯಾವುದೇ ಕ್ರಮ ಕೈಗೊಳ್ಳದೇ ಮನವಿ ಕಸದ ಬುಟ್ಟಿಗೆ ಎಸೆದಿದ್ದಾರೆ. ಆದರೆ ಈ ವಿಷಯ ಗೊತ್ತಿದ್ದರೂ ನಮ್ಮ ಲೋಕಸಭಾ ಅಭ್ಯರ್ಥಿ ಮಲ್ಲಿಕಾರ್ಜುನ ಖರ್ಗೆ ಹಾಗೂ 371ಜೆ ಜಾರಿ ಸಚಿವ ಸಂಪುಟದ ಉಪ ಸಮಿತಿ ಅಧ್ಯಕ್ಷರಾಗಿರುವ ಸಚಿವ ಪ್ರಿಯಾಂಕ್ ಖರ್ಗೆ ಬಾಯಿ ತೆರೆದಿರುವುದು ಅಸಲಿ ಬಣ್ಣ ಸಾಬೀತುಪಡಿಸುತ್ತಿದೆ ಎಂದು ವಾಗ್ಧಾಳಿ ನಡೆಸಿದರು.
371ಜೆ ಮೀಸಲಾತಿಗೆ ಕೊಕ್ಕೆ ಹಾಕಿದ್ದರಿಂದ ಹೈದ್ರಾಬಾದ್ ಕರ್ನಾಟಕ ಭಾಗಕ್ಕೆ ದೊರಕಬೇಕಾಗಿದ್ದ 110 ಇಂಜನೀಯರರು ವಂಚಿತರಾಗುವಂತಾಗಿದೆ. ಇನ್ನೂ ಲೋಕೋಪಯೋಗಿ ಸಚಿವರು, ಒಂದು ಇಂಜನೀಯರ್ ಹುದ್ದೆ 40 ಲಕ್ಷ ರೂ. ಬಿಕರಿಗೆ ಮುಂದಾಗಿದ್ದಾರೆ. ಇದನ್ನೆಲ್ಲ ಗೊತ್ತಿದ್ದರೂ ತಡೆಯಲು ಮುಂದಾಗುತ್ತಿಲ್ಲವೇಕೆ? ಎಂದು ಪಾಟಿಲರು ಪ್ರಶ್ನಿಸಿದರು.
ತಾವು ಹಾಗೂ ಇನ್ನಿತರ ನಾಯಕರು ತೆಲಂಗಾಣ ಹಾಗೂ ವಿದರ್ಭಕ್ಕೆ ಹೋಗಿ ಅಭ್ಯಸಿಸಿ ವರದಿ ಸಲ್ಲಿಸಿ ಕೇಂದ್ರಕ್ಕೆ ಶಿಫಾರಸ್ಸು ಕಳುಹಿಸಿದ ಎರಡು ದಶಕಗಳ ಹಿಂದಿನ ಸಂದರ್ಭದಲ್ಲೇ ಮಲ್ಲಿಕಾರ್ಜುನ ಖರ್ಗೆ ಹಾಗೂ ಧರ್ಮಸಿಂಗ್ ಮನಸ್ಸು ಮಾಡಿದ್ದರೆ ಅವಾಗಲೇ ಜಾರಿಯಾಗುತ್ತಿತ್ತು. ಆದರೆ ಅದರ ಕೀರ್ತಿ ತಾವು ಸೇರಿದಂತೆ ಇತರ ಹೋರಾಟಗಾರರಿಗೆ ಬರಬಾರದೆಂಬ ಮನೋಧೋರಣೆ ತಳೆದರು ಎಂದು ವೈಜನಾಥ ಪಾಟೀಲ್ ಆರೋಪಿಸಿದರು.
ಸಚಿವ ಸಂಪುಟ ಉಪ ಸಮಿತಿಗೆ ಎಚ್.ಕೆ. ಪಾಟೀಲರನ್ನು ಬೇಡ ಎಂದರೂ ಅವರನ್ನೇ ನೇಮಕ ಮಾಡಲಾಯಿತು. ಹೀಗಾಗಿ ನಿಯಮಗಳನ್ನು ಅವರ ಮನಸ್ಸಿಗೆ ಬಂದಂತೆ ರೂಪಿಸಿದರು. ಹೀಗಾಗಿ ಜಾರಿಯಲ್ಲಿ ಹಲವು ಲೋಪ-ದೋಷಗಳು ಹಾಗೂ ಮೀಸಲಾತಿ ಪಾಲನೆ ಉಲ್ಲಂಘನೆಗೆ ದಾರಿ ಮಾಡಿಕೊಡುವಂತಾಗಿದೆ ಎಂದು ಅಳಲು ತೋಡಿಕೊಂಡರು. ಮುಖಂಡರಾದ ಶಿವಶಂಕರ ಗಾರಂಪಳ್ಳಿ, ಅಶೋಕ ಮಾನೂರೆ, ರಮೇಶ ಧುತ್ತರಗಿ ಸೇರಿದಂತೆ ಮುಂತಾದವರಿದ್ದರು.