Advertisement

ಅತ್ಯಾಚಾರಿಗಳ ಅಣಕು ಶವಯಾತ್ರೆ

12:57 PM Dec 05, 2019 | Naveen |

ಕಲಬುರಗಿ: ಜಿಲ್ಲೆಯ ಚಿಂಚೋಳಿ ತಾಲೂಕಿನ ಯಾಕಾಪುರ ಗ್ರಾಮದ ಬಾಲಕಿ ಹಾಗೂ ಹೈದ್ರಾಬಾದನ ಪಶುವೈದ್ಯೆ ಮೇಲಿನ ಅತ್ಯಾಚಾರ ಹಾಗೂ ಕೊಲೆ ಪ್ರರಕಣಗಳನ್ನು ಖಂಡಿಸಿ ನಗರದಲ್ಲಿ ಬುಧವಾರ ವಿವಿಧ ಸಂಘಟನೆಗಳಿಂದ ಪ್ರತ್ಯೇಕವಾಗಿ ಸರಣಿ ಪ್ರತಿಭಟನೆಗಳು ನಡೆದವು.

Advertisement

ಯುವಜನ ವಿದ್ಯಾರ್ಥಿ ಹಾಗೂ ಮಹಿಳಾ ಸಂಘಟನೆಗಳ ಕಾರ್ಯಕರ್ತರು, ಅಖೀಲ ಭಾರತೀಯ ವಿದ್ಯಾರ್ಥಿ ಪರಿಷತ್‌ (ಎಬಿವಿಪಿ) ಹಾಗೂ ವುಮೆನ್‌ ಇಂಡಿಯಾ ಮೊಮೆಂಟ್‌, ಗುಲಬರ್ಗಾ ಸಂಘಟನೆಗಳು ಕಾರ್ಯಕರ್ತೆಯರು ಬೃಹತ್‌ ಪ್ರತಿಭಟನೆ ನಡೆಸುವ ಮೂಲಕ ಆಕ್ರೋಶ ವ್ಯಕ್ತಪಡಿಸಿದರು. ಮಹಿಳಾ ಮೇಲಿನ ದೌಜ್ಯರ್ನಗಳನ್ನು ತಡೆಯಲು ಕಠಿಣ ಶಿಕ್ಷೆ ವಿಧಿಸಬೇಕು ಹಾಗೂ ಅತ್ಯಾಚಾರಿಗಳಿಗೆ ಗಲ್ಲಿಗೇರಿಸಬೇಕೆಂದು ಪ್ರತಿಭಟನಾನಿತರರು ಆಗ್ರಹಿಸಿದರು.

ಅತ್ಯಾಚಾರಿಗಳ ಭೂತ ದಹನ: ಹೈದ್ರಾಬಾದ್‌ನಲ್ಲಿ ಪಶುವೈದ್ಯೆ ಮೇಲೆ ಸಾಮೂಹಿಕ ಅತ್ಯಾಚಾರ ಎಸಗಿ ಸುಟ್ಟು ಕೊಲೆ ಮಾಡಲಾಗಿದೆ. ಅದೇ ರೀತಿ ಚಿಂಚೋಳಿ ತಾಲೂಕಿನ ಯಾಕಾಪುರದಲ್ಲಿ ಎಂಟು ವರ್ಷ ವಯಸ್ಸಿನ ಬಾಲಕಿಯ ಮೇಲೆ ಅತ್ಯಾಚಾರ ಮಾಡಿ ಕೊಲೆ ಮಾಡಲಾಗಿದೆ. ಎರಡೂ ಪ್ರರಕಣಗಳಲ್ಲಿನ ಆರೋಪಿಗಳಿಗೆ ಮರಣ ದಂಡನೆ ವಿಧಿ ಸಬೇಕೆಂದು ಎಬಿಪಿವಿ ಕಾರ್ಯಕರ್ತರು ಒತ್ತಾಯಿಸಿದರು.

ಸರ್ದಾರ ವಲ್ಲಭಬಾಯಿ ಪಟೇಲ್‌ ವೃತ್ತದಲ್ಲಿ ನೂರಾರು ವಿದ್ಯಾರ್ಥಿಗಳು, ಕಾರ್ಯಕರ್ತರು ಮಾನವ ಸರಪಳಿ ನಿರ್ಮಿಸಿ, ಅತ್ಯಾಚಾರಿಗಳ ಭೂತ ದಹಿಸಿ ಆಕ್ರೋಶ ವ್ಯಕ್ತಪಡಿಸಿದರು. ನಂತರ ಮೆರವಣಿಗೆಯಲ್ಲಿ ಜಿಲ್ಲಾಧಿಕಾರಿಗಳ ಕಚೇರಿಗೆ ತೆರಳಿ ಇತ್ತೀಚೆಗೆ ಸಹಾಯ ಮಾಡುವ ನೆಪದಲ್ಲಿ ಮಹಿಳೆಯರ ಮೇಲೆ ಅತ್ಯಾಚಾರ ಪ್ರಕರಣಗಳು ಹೆಚ್ಚಿನ ಪ್ರಮಾಣದಲ್ಲಿ ನಡೆಯುತ್ತಿವೆ.

ಅತ್ಯಾಚಾರ ಹಾಗೂ ಕೊಲೆ ಮಾಡುವ ಮಾನಸಿಕತೆಯುಳ್ಳವರು ಭೂಮಿಯ ಮೇಲೆ ಇರಬಾರದು. ನಿರ್ದಾಕ್ಷಿಣ್ಯವಾಗಿ ಸೂಕ್ತ ಕ್ರಮ ಕೈಗೊಳ್ಳಬೇಕೆಂದು ಜಿಲ್ಲಾ ಧಿಕಾರಿಗಳ ಮೂಲಕ ಕೇಂದ್ರ ಗೃಹ ಸಚಿವರಿಗೆ ಪ್ರತಿಭಟನಾಕಾರರು ಮನವಿ ಪತ್ರ ಸಲ್ಲಿಸಿದರು.

Advertisement

ಎಬಿವಿಪಿ ರಾಷ್ಟ್ರೀಯ ಕಾರ್ಯಕಾರಿಣಿ ಸದಸ್ಯ ರೇವಣಸಿದ್ದ ಜಾಡರ ನೇತೃತ್ವದಲ್ಲಿ ನಡೆದ ಪ್ರತಿಭಟನೆಯಲ್ಲಿ ಮುಖಂಡರಾದ ನಾಗರಾಜ ಬಟಗೇರಾ, ತೋಟಪ್ಪ, ಅರುಣ ಬಿರಾದಾರ, ಓಂಕಾರ, ಪ್ರಿಯಾ, ಕೃಷ್ಣಪ್ಪ, ವೈಭವ್‌, ವಿಶ್ವ ಪಾಟೀಲ ಸೇರಿದಂತೆ ಹಲವರು ಪಾಲ್ಗೊಂಡಿದ್ದರು.

ಬಾಲಕಿ ಸಾವಿಗೆ ನ್ಯಾಯ ಕೊಡಿ: ಯಾಕಾಪುರ ಗ್ರಾಮದ ಎರಡನೇ ತರಗತಿ ಬಾಲಕಿ ಮೇಲಿನ ಅತ್ಯಾಚಾರ ಹಾಗೂ ಕೊಲೆ ಪ್ರಕರಣವನ್ನು ತ್ವರಿತ ಗತಿಯ ನ್ಯಾಯಾಲಯದಿಂದ ತನಿಖೆ ನಡೆಸಬೇಕು. ಆರೋಪಿಗೆ ಕಠಿಣ ಶಿಕ್ಷೆಗೆ ಒಳಪಡಿಸಿ, ಮುಗ್ಧ ಬಾಲಕಿಯ ಸಾವಿನ ನ್ಯಾಯ ಕೊಡಬೇಕೆಂದು ಒತ್ತಾಯಿಸಿ ವುಮೆನ್‌ ಇಂಡಿಯಾ ಮೊಮೆಂಟ್‌, ಗುಲಬರ್ಗಾ ಸಂಘಟನೆಯ ಕಾರ್ಯಕರ್ತೆಯರು ಒತ್ತಾಯಿಸಿದರು.

ಜಿಲ್ಲಾಧಿಕಾರಿ ಕಚೇರಿ ಮುಂದೆ ಬೃಹತ್‌ ಪ್ರತಿಭಟನಾ ಪ್ರದರ್ಶನ ನಡೆಸಿದ ಕಾರ್ಯಕರ್ತೆಯರು, ಬಾಲಕಿಯ ಮೇಲಿನ ಅತ್ಯಾಚಾರ ಮತ್ತು ಕೊಲೆ ಪ್ರಕರಣಕ್ಕೆ ಸಂಬಂಧ ರಾಜ್ಯ ಸರ್ಕಾರ ತ್ವರಿತ ನ್ಯಾಯಾಲಯ ಸ್ಥಾಪನೆ ಮಾಡಬೇಕು. ಮೂರು ತಿಂಗಳೊಳಗೆ ತನಿಖೆ ಪೂರ್ಣಗೊಳಿಸಿ, ಆರೋಪಿಗೆ ಕಠಿಣ ಕಾನೂನಿನಡಿ ಶಿಕ್ಷೆಗೆ ಒಳಪಡಿಸಬೇಕು. ಸಂತ್ರಸ್ತ ಬಾಲಕಿ ಕುಟುಂಬಕ್ಕೆ 50 ಲಕ್ಷ ರೂ.ಗಳ ಪರಿಹಾರ ನೀಡಬೇಕು ಹಾಗೂ ಪೊಲೀಸ್‌ ತನಿಖೆಯನ್ನು 15 ದಿನಗಳೊಳಗೆ ಪೂರ್ಣಗೊಳಿಸಿ ನ್ಯಾಯಾಲಯಕ್ಕೆ ದೋಷಾರೋಪ ಪಟ್ಟಿ ಸಲ್ಲಿಸಬೇಕು.

ಮಹಿಳೆಯರ ಮತ್ತು ಮಕ್ಕಳ ಸುರಕ್ಷತೆಗೆ ರಾಜ್ಯ ಸರ್ಕಾರ ಕಟ್ಟುನಿಟ್ಟಿನ ಕ್ರಮಗಳನ್ನು ಕೈಗೊಳ್ಳುಬೇಕೆಂದು ಆಗ್ರಹಿಸಿದರು. ಪ್ರತಿಭಟನೆಯಲ್ಲಿ ರೆಹನಾಬೇಗಂ, ಆಯೇಶಾ, ವಹೀದಾಬೇಗಂ, ಶಾಬಾನಾ ಮೋಹಸಿನ್‌, ಆಯೇಶಾ ಆಯಾಗ್‌, ಆಜ್ರಾ, ಮುಬೀಮಾ, ಸಾನಾ ಸುಲ್ತಾನಾ, ಅತಿಯಾ ಸೇರಿದಂತೆ ಹಲವರು ಭಾಗವಹಿಸಿದ್ದರು.

ಆರೋಪಿಗೆ ಉಗ್ರ ಶಿಕ್ಷೆ ವಿಧಿಸಿ: ಯಾಕಾಪುರ ಗ್ರಾಮದ ಬಾಲಕಿ ಮೇಲೆ ನಡೆದ ಕ್ರೌರ್ಯ ಜನತೆಯನ್ನು ಬೆಚ್ಚಿ ಬೀಳಿಸುವಂತೆ ಮಾಡಿದ್ದು, ಆರೋಪಿಗೆ ಕಠಿಣ ಕಾನೂನಿನ ಅಡಿ ಶಿಕ್ಷೆ ವಿಧಿಸಿ ಇಂತಹ ಘಟನೆಗಳು ಮರುಕಳಿಸದಂತೆ ಸೂಕ್ತ ಕ್ರಮಗಳನ್ನು ಕೈಗೊಳ್ಳಬೇಕೆಂದು ಯುವಜನ ವಿದ್ಯಾರ್ಥಿ ಹಾಗೂ ಮಹಿಳಾ ಸಂಘಟನೆಗಳ ಕಾರ್ಯಕರ್ತರು ಆಗ್ರಹಿಸಿದರು.

ಅಖೀಲ ಭಾರತ ಮಹಿಳಾ ಸಾಂಸ್ಕೃತಿಕ ಸಂಘಟನೆಯ ಜಿಲ್ಲಾಧ್ಯಕ್ಷೆ ಗುಂಡಮ್ಮ ಮಡಿವಾಳ, ಎಐಡಿಎಸ್‌ಓ ಜಿಲ್ಲಾಧ್ಯಕ್ಷ ಹಣಮಂತ ಎಸ್‌.ಎಚ್‌., ನೇತೃತ್ವದಲ್ಲಿ ನಡೆದ ಪ್ರತಿಭಟನೆಯಲ್ಲಿ ಅನೇಕ ಮಹಿಳಾ ಮತ್ತು ವಿದ್ಯಾರ್ಥಿಗಳು ಪಾಲ್ಗೊಂಡಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next