ಕಲಬುರಗಿ: ಹಿಂದಿನ ಸರ್ಕಾರಲ್ಲಾದ ಸಾಲ ಮನ್ನಾ ಲೋಪದೋಷ ಸರಿಪಡಿಸಿ ಪ್ರತಿ ರೈತ ಕುಟುಂಬದ ಎರಡು ಲಕ್ಷ ರೂ. ಸಾಲ ಮನ್ನಾ ಮಾಡುವಂತೆ, ಬೆಳೆವಿಮೆ ಮಂಜೂರಾತಿಯಲ್ಲಾದ ಅನ್ಯಾಯ ಸರಿಪಡಿಸುವುದು ಸೇರಿದಂತೆ ವಿವಿಧ ಬೇಡಿಕೆ ಈಡೇರಿಕೆಗೆ ಆಗ್ರಹಿಸಿ ಪ್ರಾಂತ ರೈತ ಸಂಘ ಹಾಗೂ ವ್ಯವಸಾಯ ಸೇವಾ ಸಹಕಾರ ಸಂಘಗಳ ಒಕ್ಕೂಟದ ನೇತೃತ್ವದಲ್ಲಿ ಶನಿವಾರ ಪ್ರತಿಭಟನೆ ನಡೆಯಿತು.
ಸಿದ್ದರಾಮಯ್ಯ ಸರ್ಕಾರದಲ್ಲಾದ 50 ಸಾವಿರ ರೂ. ಸಾಲ ಮನ್ನಾವನ್ನು ಡಿಸಿಸಿ ಬ್ಯಾಂಕ್‌ನವರು ರೈತರ ಖಾತೆಗೆ ಜಮಾ ಮಾಡಿಲ್ಲ. ಕುಮಾರಸ್ವಾಮಿ ಸರ್ಕಾರದಲ್ಲಾದ ಮನ್ನಾ ಹಣ ದೇವರೇ ಬಲ್ಲ ಎನ್ನುವಂತಾಗಿದೆ. ಆದ್ದರಿಂದ ಇವೆಲ್ಲವನ್ನು ಸರಿಪಡಿಸಿ ಎಲ್ಲ ರೈತರಿಗೂ ನ್ಯಾಯ ಕಲ್ಪಿಸಬೇಕೆಂದು ಪ್ರತಿಭಟನಾಕಾರರು ಆಗ್ರಹಿಸಿದರು.
ಕಳೆದ ವರ್ಷ ಭೀಕರ ಬರಗಾಲ ಬಿದ್ದಿದ್ದರೂ ಜಿಲ್ಲೆಗೆ ಕೇವಲ 12 ಕೋಟಿ ರೂ. ಬಿಡುಗಡೆ ಆಗಿರುವುದು ಅನ್ಯಾಯಕ್ಕೆ ಹಿಡಿದ ಕನ್ನಡಿಯಾಗಿದೆ. ಪಕ್ಕದ ಬೀದರ್, ವಿಜಯಪುರ ಜಿಲ್ಲೆಗಳಲ್ಲಿ 120 ಕೋಟಿ ರೂ. ಅಧಿಕ ಬೆಳೆವಿಮೆ ಬಿಡುಗಡೆಯಾಗಿದೆ.
ಕಲಬುರಗಿಗೆ ಮಂಜೂರಾದ 12 ಕೋಟಿ ರೂ. ಗಳಲ್ಲಿ ಎರಡು ಹಳ್ಳಿಗಳಿಗೆ 4 ಕೋಟಿ ರೂ., ಉಳಿದ ಹಣ ಜಿಲ್ಲೆಗೆ ಎನ್ನುವಂತಾಗಿದೆ. ಆದ್ದರಿಂದ ಕಲಬುರಗಿ ಜಿಲ್ಲೆಗೂ ಕನಿಷ್ಠ 100 ಕೋಟಿ ರೂ. ಬಿಡುಗಡೆ ಮಾಡಬೇಕೆಂದು ಘೋಷಣೆ ಕೂಗಿದರು.
ರೈತ ಸಂಘದ ರಾಜ್ಯ ಉಪಾಧ್ಯಕ್ಷ ಮಾರುತಿ ಮಾನ್ಪಡೆ ಮಾತನಾಡಿ, ರಾಜ್ಯ ಹಾಗೂ ಕೇಂದ್ರ ಸರ್ಕಾರ ರೈತರ ಬಗ್ಗೆ ಮಾತನಾಡುತ್ತಿವೆ ವಿನಃ ಯಾವುದೇ ನಿಟ್ಟಿನಲ್ಲಿ ಸ್ಪಂದಿಸುತ್ತಿಲ್ಲ. ಇದಕ್ಕೆ ಸಾಲ ಮನ್ನಾ ಹಾಗೂ ಮಂಜೂರಾಗದ ಬೆಳೆವಿಮೆ ಜತೆಗೆ ಕೃಷಿ ಉತ್ಪನ್ನಗಳಿಗೆ ಸೂಕ್ತ ಬೆಳೆ ಸಿಗದಿರುವುದೇ ಸಾಕ್ಷಿಯಾಗಿದೆ ಎಂದು ಆರೋಪಿಸಿದರು.
ಉದ್ಯೋಗ ಖಾತ್ರಿ ಬಾಕಿ ಹಣ ಬಿಡುಗಡೆ, ರೇಷನ್ ಕಾರ್ಡು ರದ್ದುಪಡಿಸಬಾರದು, ಪ್ರವಾಹ ಸಂತ್ರಸ್ತರಿಗೆ ಕನಿಷ್ಠ 10 ಸಾವಿರ ಕೋಟಿ ರೂ.
ಪರಿಹಾರ ಧನ ಬಿಡುಗಡೆ ಮಾಡಬೇಕೆಂದು ಆಗ್ರಹಿಸಿದರು.
ರೈತ ಸಂಘಟನೆಗಳ ಪ್ರಮುಖರಾದ ಶರಣಬಸಪ್ಪ ಮಮಶೆಟ್ಟಿ, ಅಶೋಕ ಮ್ಯಾಗೇರಿ, ಶಾಂತಪ್ಪ ಪಾಟೀಲ, ಸಿದ್ದಯ್ಯ ಸ್ವಾಮಿ, ಗೌರಮ್ಮ ಪಾಟೀಲ, ಮಲ್ಲಣ್ಣಗೌಡ ಬನ್ನೂರ, ಸುಧಾಮ ಧನ್ನಿ, ರೇವಣಸಿದ್ದಪ್ಪ ಮರಪಳ್ಳಿ ಇದ್ದರು.