ಕಲಬುರಗಿ: ಜಿಲ್ಲೆ ಹಾಗೂ ಮಹಾನಗರದಲ್ಲಿ ಸರ್ಕಾರಿ ಭೂಮಿ ಒತ್ತುವರಿ ಮಾಡಿಕೊಂಡಿದ್ದನ್ನು ತೆರವುಗೊಳಿಸಿ ಸ್ವಾಧೀನಕ್ಕೆ ವಶಪಡಿಸಿಕೊಳ್ಳುವಂತೆ ಪ್ರಾದೇಶಿಕ ಆಯುಕ್ತರು, ಜಿಲ್ಲಾಧಿಕಾರಿಗೆ ನಿರ್ದೇಶನ ನೀಡಲಾಗಿದೆ ಎಂದು ಕಂದಾಯ ಸಚಿವ ಆರ್.ವಿ.ದೇಶಪಾಂಡೆ ತಿಳಿಸಿದರು.
ಬುಧವಾರ ಜಿಲ್ಲಾಧಿಕಾರಿ ಸಭಾಂಗಣದಲ್ಲಿ ಕಂದಾಯ ಇಲಾಖೆ ಪ್ರಗತಿ ಪರಿಶೀಲನೆ ನಡೆಸಿದ ನಂತರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಕಲಬುರಗಿ ನಗರ ಹಾಗೂ ತಾಲೂಕಿನಲ್ಲಿಯೇ 332 ಭೂಒತ್ತುವರಿ ಪ್ರಕರಣಗಳಿವೆ. ಇದರಲ್ಲಿ 319 ಪ್ರಕರಣಗಳನ್ನು ಇತ್ಯರ್ಥಗೊಳಿಸಿ 47 ಎಕರೆ ಮಾತ್ರ ಭೂಮಿ ವಶಪಡಿಸಿಕೊಳ್ಳಲಾಗಿದೆ. ವಶಪಡಿಸಿಕೊಂಡ ಭೂಮಿ ಸುತ್ತ ಬೇಲಿ ಹಾಕಿ ಬೋರ್ಡ್ ಹಾಕುವಂತೆ ಸೂಚಿಸಲಾಗಿದೆ ಎಂದರು.
ಗುಂಟೆ, ಅರ್ಧಗುಂಟೆ ಸೇರಿದಂತೆ ಅತಿ ಚಿಕ್ಕ ಸ್ಥಳದ ಭೂಮಿಗಿಂತ ಹೆಚ್ಚಿನ ಭೂಮಿ ಒತ್ತುವರಿ ಮಾಡಿಕೊಂಡಿರುವವರನ್ನು ತೆರವುಗೊಳಿಸುವಂತೆ ಹಾಗೂ ಇದರಲ್ಲಿ ಯಾರದ್ದೇ ಮುಲಾಜು ಬೇಡ ಎಂಬುದಾಗಿ ಸ್ಪಷ್ಟ ಎಚ್ಚರಿಕೆ ನೀಡಲಾಗಿದೆ. ಅದೇ ರೀತಿ ತಾಲೂಕು ಹಾಗೂ ಗ್ರಾಮಗಳಲ್ಲಿ ಭೂಮಿ ಒತ್ತುವರಿ ಮಾಡಿಕೊಂಡಿದ್ದನ್ನು ಪತ್ತೆ ಹಚ್ಚಿರುವ ಹಾಗೂ ಕೈಗೊಂಡ ಕ್ರಮದ ಕುರಿತಾಗಿ ಆಗಾಗ್ಗೆ ಕಡ್ಡಾಯವಾಗಿ ಸಭೆ ನಡೆಸುವಂತೆ ಕಂದಾಯ ಅಧಿಕಾರಿಗಳಿಗೆ ಸೂಚನೆ ನೀಡಲಾಗಿದೆ ಎಂದು ತಿಳಿಸಿದರು.
ಚಿತ್ತಾಪುರ ತಾಲೂಕಿನಲ್ಲಿರುವ 200 ಭೂ ಒತ್ತುವರಿ ಪ್ರಕರಣಗಳಲ್ಲಿ ಒಂದೂ ಇತ್ಯರ್ಥಗೊಂಡಿಲ್ಲ. ಯಾವ್ಯಾವ ತಾಲೂಕಿನಲ್ಲಿ ಎಷ್ಟು ಭೂ ಒತ್ತುವರಿ ಇವೆ ಎನ್ನುವುದು ತಮ್ಮ ಗಮನಕ್ಕೆ ಬಂದಿದೆ. ಈಗ ಅಧಿಕಾರಿಗಳು ಕಾಲಾನುಸಾರ ಸಭೆ ನಡೆಸಿ ಕ್ರಮದ ಕುರಿತಾಗಿ ಸರ್ಕಾರಕ್ಕೆ ವರದಿ ಸಲ್ಲಿಸಲಿದ್ದಾರೆ ಎಂದರು.
ಭೂಮಿ ಪರಿವರ್ತನೆ ಈಗ ಸರಳೀಕರಣಗೊಳಿಸಲಾಗಿದ್ದು, ಪಹಣಿ ಪತ್ರ, ಮ್ಯುಟೆಷನ್ ಹಾಗೂ 11 ಇನ್ ಅಫಿಡವಿಟ್ ಪ್ರಮಾಣ ಪತ್ರವಿದ್ದರೆ ಸಾಕು ಕೆಲಸವಾಗುತ್ತದೆ. ಆನ್‌ಲೈನ್ ಮೂಲಕ ಅರ್ಜಿ ಸಲ್ಲಿಸಿದರೆ ಸಾಕು, ಪಾರದರ್ಶಕತೆಯಿಂದ ಕೆಲಸವಾಗುತ್ತದೆ. ಈ ಮೊದಲು 22 ದಾಖಲೆ ಕೇಳಲಾಗುತ್ತಿತ್ತು. ಹೊಸ ಕ್ರಮ ಪರಿಣಾಮಕಾರಿ ಜಾರಿಗೆ ಸೂಚನೆ ನೀಡಲಾಗಿದೆ ಎಂದು ತಿಳಿಸಿದರು.
ಶೀಘ್ರ ಮಾಸಾಶನ ಮಂಜೂರಾತಿ ಮಾಡಿ: ವಯೋವೃದ್ಧ, ಅಂಗವಿಕಲ, ವಿಧವೆ ಮಾಸಾಶನ ಬಯಸಿ ಸಾರ್ವಜನರಿಂದ ಸಲ್ಲಿಕೆಯಾಗುವ ಅರ್ಜಿಗಳನ್ನು ಕಾಲಹರಣ ಮಾಡದೇ ಶೀಘ್ರ ಮಂಜೂರಾತಿ ನೀಡುವಂತೆ ಅಧಿಕಾರಿಗಳಿಗೆ ಸೂಚಿಸಲಾಗಿದೆ ಎಂದು ತಿಳಿಸಿದರು. ಸಚಿವ ಪ್ರಿಯಾಂಕ್ ಖರ್ಗೆ, ಜಿಲ್ಲಾಧಿಕಾರಿ ಆರ್. ವೆಂಕಟೇಶಕುಮಾರ ಇದ್ದರು.