ಕಲಬುರಗಿ: ನಗರಕ್ಕೆ ಕುಡಿಯುವ ನೀರು ಸರಬರಾಜು ಮಾಡುವ ಭೀಮಾ ನದಿ ಮತ್ತು ಬೆಣ್ಣೆತೋರಾ ಹೊರತುಪಡಿಸಿ ಭವಿಷ್ಯದ ಮುಂದಾಲೋಚನೆ ಕ್ರಮವಾಗಿ ರಾಜಕಾಲುವೆ ಅಥವಾ ಕೆರೆಗಳಿದ್ದಲ್ಲಿ ಅದನ್ನು ಪತ್ತೆ ಹಚ್ಚುವಂತೆ ಸಂಸದ ಡಾ.ಉಮೇಶ ಜಾಧವ್ ಕರ್ನಾಟಕ ನಗರ ನೀರು ಸರಬರಾಜು ಮತ್ತು ಒಳಚರಂಡಿ ಮಂಡಳಿಯ ಅಧಿಕಾರಿಗಳಿಗೆ ಸೂಚಿಸಿದರು.
ಶನಿವಾರ ಮಹಾನಗರ ಪಾಲಿಕೆ ಮತ್ತು ಕರ್ನಾಟಕ ಜಲ ಮಂಡಳಿ ಅಧಿಕಾರಿಗಳೊಂದಿಗೆ ಕಲಬುರಗಿ ನಗರಕ್ಕೆ ಬೇಸಿಗೆ ಕಾಲದಲ್ಲಿ ಕುಡಿಯುವ ನೀರು ಸರಬರಾಜು ಕುರಿತಂತೆ ಪ್ರಗತಿ ಪರಿಶೀಲನೆ ನಡೆಸಿ ಮಾತನಾಡಿದ ಅವರು, ಕುಡಿಯುವ ನೀರು ಸರಬರಾಜಿನ ಮೂಲ, ಪ್ರಮಾಣ, ಲಭ್ಯತೆ ಮತ್ತು ದೈನಂದಿನ ಬಳಕೆ ಕುರಿತಂತೆ ಅಧಿಕಾರಿಗಳಿಂದ ಮಾಹಿತಿ ಪಡೆದ ಸಂಸದರು, ಬೇಸಿಗೆ ಕಾಲ ಆರಂಭವಾಗಿದ್ದರಿಂದ ನಗರಕ್ಕೆ ಕುಡಿಯುವ ನೀರು ಸರಬರಾಜಿಗೆ ಯಾವುದೇ ರೀತಿಯ ತೊಂದರೆಯಾಗದಂತೆ ನೋಡಿಕೊಳ್ಳಬೇಕು. ಶುದ್ಧ ಕುಡಿಯುವ ನೀರು ಪೂರೈಕೆ ಮೊದಲ ಆದ್ಯತೆಯಾಗಿದೆ. ಕಲುಷಿತ ನೀರಿನಿಂದಲೇ ಹೆಚ್ಚಿನ ರೋಗಗಳ ಉತ್ಪತ್ತಿಗೆ ಕಾರಣವಾಗುವುದರಿಂದ ಕುಡಿಯಲು ಯೋಗ್ಯ ಮತ್ತು ಶುದ್ಧ ನೀರು ಮಾತ್ರ ಪೂರೈಕೆ ಮಾಡಬೇಕು ಎಂದು ಅಧಿಕಾರಿಗಳಿಗೆ ನಿರ್ದೇಶನ ನೀಡಿದರು.
ಶಾಸಕ ದತ್ತಾತ್ರೇಯ ಪಾಟೀಲ ರೇವೂರ ಮಾತನಾಡಿ, ಒಂದೆಡೆ ಬೇಸಿಗೆ ಇನ್ನೊಂದೆಡೆ ರಂಜಾನ್ ಪವಿತ್ರ ಮಾಸ ಆರಂಭವಾಗಿದೆ. ಲಾಕ್‌ಡೌನ್ ಪರಿಣಾಮ ಮನೆ ಬಿಟ್ಟು ಹೊರಗಡೆ ಎಲ್ಲೂ ಜನರಿಗೆ ನೀರು ಸಿಗುವುದಿಲ್ಲ. ಅಧಿಕಾರಿಗಳು ಇದನ್ನು ಅರಿತುಕೊಂಡು ಪ್ರತಿ ಪ್ರದೇಶಕ್ಕೆ ಸಮರ್ಪಕ ಕುಡಿಯುವ ನೀರು ಪೂರೈಕೆಯಾಗುವಂತೆ ಎಚ್ಚರ ವಹಿಸಬೇಕು ಎಂದರು. ಸಭೆಯ ಚರ್ಚೆಯಲ್ಲಿ ಜಲಮಂಡಳಿ ಕಚೇರಿಯಲ್ಲಿ 8 ಕಿರಿಯ ಅಭಿಯಂತರ ಹುದ್ದೆಗಳ ಪೈಕಿ 6 ಹುದ್ದೆಗಳ ಖಾಲಿ ಇವೆ ಎಂಬ ಮಾಹಿತಿಗೆ ಶಾಸಕರು ಅಸಮಾಧಾನ ವ್ಯಕ್ತಪಡಿಸಿದರು.
ಖಾಲಿ ಹುದ್ದೆಗಳ ಬಗ್ಗೆ ಇದೂವರೆಗೂ ತಮ್ಮ ಗಮನಕ್ಕೆ ಏಕೆ ತಂದಿಲ್ಲ ಎಂದು ಅಧಿಕಾರಿಗಳನ್ನು ಪ್ರಶ್ನಿಸಿದರು. ಹುದ್ದೆಗಳ ತುಂಬಲು ಸರ್ಕಾರದ ಮಟ್ಟದಲ್ಲಿ ಪ್ರಯತ್ನಿಸುವುದಾಗಿ ಹೇಳಿದರು. ಕರ್ನಾಟಕ ನಗರ ನೀರು ಸರಬರಾಜು ಮತ್ತು ಒಳಚರಂಡಿ ಮಂಡಳಿಯ ಕಾರ್ಯನಿರ್ವಾಹಕ ಅಭಿಯಂತರ ಯೂನಿಸ್ ಬಾಷಾ ಮಾತನಾಡಿ, ಕಲಬುರಗಿ ನಗರಕ್ಕೆ ಭೀಮಾ ನದಿಯಿಂದ ಶೇ.70 ಮತ್ತು ಬೆಣ್ಣೆತೋರಾದಿಂದ ಶೇ.30ರಷ್ಟು ಕುಡಿಯುವ ನೀರು ಪೂರೈಕೆಯಾಗುತ್ತಿದೆ. 300 ಮಿಲಿಯನ್ ಕ್ಯೂಬಿಕ್ ಫೀಟ್ ಸಾಮರ್ಥ್ಯದ ಸರಡಗಿ ಬ್ಯಾರೇಜ್ ನಲ್ಲಿ ಪ್ರಸ್ತುತ 128 ಮಿಲಿಯನ್ ಕ್ಯೂಬಿಕ್ ಫೀಟ್ ನೀರು ಲಭ್ಯವಿದೆ ಎಂದು ಮಾಹಿತಿ ನೀಡಿದರು.
ಮಹಾನಗರ ಪಾಲಿಕೆ ಆಯುಕ್ತ ರಾಹುಲ್ ಪಾಂಡ್ವೆ, ಪಾಲಿಕೆಯ ಪರಿಸರ ಅಭಿಯಂತ ಮುನಾಫ್ ಪಟೇಲ್, ಸಹಾಯಕ ಕಾರ್ಯನಿರ್ವಾಹಕ ಅಭಿಯಂತರರಾದ ಸುನೀಲ ವಂಟೆ, ಚೇತನ, ಅರುಣ ಹಾಗೂ ಜಲಮಂಡಳಿ ಸಹಾಯಕ ಕಾರ್ಯನಿರ್ವಾಹಕ ಅಭಿಯಂತ ದಿಲೀಪ್ ಸಿಂಗ್ ಹಾಜರಿದ್ದರು.