ಕಲಬುರಗಿ: ರಾಜ್ಯದಲ್ಲಿ ವೃದ್ಧಾಪ್ಯ ವೇತನ ಪಡೆಯುವ 70ರಿಂದ 80 ಸಾವಿರ ಬೋಗಸ್ ಫಲಾನುಭವಿಗಳಿದ್ದಾರೆ. ಅಂತಹವರಿಗೆ ಕಡಿವಾಣ ಹಾಕಲಾಗುತ್ತದೆ ಎಂದು ಕಂದಾಯ ಸಚಿವ ಆರ್. ಅಶೋಕ ತಿಳಿಸಿದರು.
ನಗರದ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಶುಕ್ರವಾರ ಕಂದಾಯ ಇಲಾಖೆಯ ಪ್ರಗತಿ ಪರಿಶೀಲನಾ ಸಭೆ ನಡೆಸಿ ಮಾತನಾಡಿದ ಅವರು, ಪ್ರತಿವರ್ಷ ಬಜೆಟ್‌ನಲ್ಲಿ ವೃದ್ಧಾಪ್ಯ ವೇತನಕ್ಕಾಗಿಯೇ 7,500 ಕೋಟಿ ರೂ. ಬಿಡುಗಡೆ ಮಾಡಲಾಗುತ್ತಿದೆ. ಯೋಜನೆಯಲ್ಲಿ ಬೋಗಸ್ ಫಲಾನುಭವಿಗಳು, ಮಧ್ಯವರ್ತಿಗಳು ನುಸುಳದಂತೆ ತಡೆಯಬೇಕೆಂದು ತಹಶೀಲ್ದಾರ್‌ಗಳಿಗೆ ಕಟ್ಟುನಿಟ್ಟಿನ ಸೂಚನೆ ನೀಡಿದರು.
ವೃದ್ಧಾಪ್ಯ ವೇತನ ಪಡೆಯಲು ಇನ್ಮುಂದೆ ಜಿಲ್ಲಾಧಿಕಾರಿ, ತಹಶೀಲ್ದಾರ್ ಕಚೇರಿಗಳಿಗೆ ಅಲೆದಾಡಬೇಕಾಗಿಲ್ಲ. ಬದಲಿಗೆ ಆಧಾರ್ ಕಾರ್ಡ್ ಮಾಹಿತಿ ಅಡಿ 60 ವರ್ಷ ಪೂರೈಸಿದ ಬಡವರಿಗೆ ಮನೆ ಬಾಗಿಲಿಗೆ ವೃದ್ಧಾಪ್ಯ ವೇತನ ಅರ್ಜಿ ತಲುಪಿಸಲಾಗುವುದು. ಅಂಚೆ ಮೂಲಕ ಇಲ್ಲವೆ ಗ್ರಾಮಲೆಕ್ಕಿಗರೇ ಖುದ್ದಾಗಿ ಹೋಗಿ ವೃದ್ಧಾಪ್ಯ ವೇತನ ಪತ್ರ ನೀಡಲಾಗುವುದು. ಅರ್ಹರು ಬ್ಯಾಂಕ್ ಪಾಸ್ ಪುಸ್ತಕ ಮಾತ್ರ ನೀಡಿ, ಸರ್ಕಾರಿ ಕಚೇರಿಗೆ ಬಂದು ಭಾವಚಿತ್ರ ನೀಡಬೇಕು ಅಷ್ಟೆ. ಈ ಯೋಜನೆಯಿಂದ ಬೋಗಸ್ ಫಲಾನುಭವಿಗಳಿಗೂ ಕಡಿವಾಣ ಬಿದ್ದಂತಾಗುತ್ತದೆ ಎಂದು ಹೇಳಿದರು.
ಅಧಿಕಾರಿಗಳ ಚಪ್ಪಲಿ ಸವೆಯಲಿ: ಸಾರ್ವಜನಿಕರ ಸಮಸ್ಯೆ ಪರಿಹರಿಸಲು ಜಿಲ್ಲಾಧಿ ಕಾರಿಗಳು ಹೆಚ್ಚು ಸಮಸ್ಯೆಗಳಿರುವ ಗ್ರಾಮವನ್ನು ಆಯ್ಕೆ ಮಾಡಿಕೊಂಡು ಪ್ರತಿ ತಿಂಗಳ ಮೂರನೇ ಶನಿವಾರ ಭೇಟಿ ನೀಡಬೇಕು. ವೃದ್ಧಾಪ್ಯ ವೇತನ, ಪಹಣಿ ಸಮಸ್ಯೆ, ಪೋಡಿ, ಜಮೀನು ಒತ್ತುವರಿ ಮುಂತಾದ ಕಂದಾಯ ಇಲಾಖೆಗೆ ಸಂಬಂ ಧಿಸಿದ ಸಮಸ್ಯೆಗಳನ್ನು ಸ್ಥಳದಲ್ಲಿಯೇ ಪರಿಹರಿಸಬೇಕೆಂದು ಸೂಚಿಸಿದರು.
ಸರ್ಕಾರಿ ಕಚೇರಿಗೆ ಅಲೆದಾಡಿ ಚಪ್ಪಲಿ ಸವೆದಿವೆ ಎಂದು ಜನರು ಗೋಳು ತೋಡಿಕೊಳ್ಳುತ್ತಾರೆ. ಗ್ರಾಮಕ್ಕೆ ಭೇಟಿ ಕೊಡುವ ಅಧಿಕಾರಿಗಳ ಚಪ್ಪಲಿ ಕೂಡ ಸವೆಯಲಿ ಎಂದು ಸಚಿವರು, ಬೆಳಗ್ಗೆ 10ರಿಂದ ಸಂಜೆ 5ಗಂಟೆ ವರೆಗೆ ಗ್ರಾಮದಲ್ಲಿಯೇ ಇದ್ದು, ಅಲ್ಲಿನ ಸಮಸ್ಯೆಗಳನ್ನು ಆಲಿಸಬೇಕು. ಜಿಲ್ಲಾಧಿ ಕಾರಿ ಭೇಟಿ ವೇಳೆ ಸಹಾಯಕ ಆಯುಕ್ತರು, ತಹಶೀಲ್ದಾರ್, ಕಂದಾಯ ನಿರೀಕ್ಷಕರು, ಗ್ರಾಮಲೆಕ್ಕಿಗರು ಸಂಬಂಧಪಟ್ಟ ಅಧಿಕಾರಿಗಳು ಕಡ್ಡಾಯವಾಗಿ ಹಾಜರಿರಬೇಕೆಂದರು.
ದಲಿತರು, ಬಡವರ ಮನೆಯಲ್ಲೇ ಜಿಲ್ಲಾಧಿಕಾರಿಗಳು ಮಧ್ಯಾಹ್ನದ ಭೋಜನ ಮಾಡಬೇಕು. ಯಾವುದೇ ರಾಜಕೀಯ ವ್ಯಕ್ತಿಗಳು, ವಿವಾದಿತ ವ್ಯಕ್ತಿಗಳ ಮನೆಯಲ್ಲಿ ಊಟ ಮಾಡಬಾರದು. ಮನೆಗಳಲ್ಲಿ ಊಟ ಮಾಡದಿದ್ದರೆ, ಅಂಗನವಾಡಿಯಲ್ಲಿ ಊಟದ ರುಚಿ ನೋಡಿ. ಇದರಿಂದ ಅಂಗನವಾಡಿ ಊಟವೂ ಗುಣ ಮಟ್ಟದಿಂದ ಕೊಡಿಸಲು ಸಾಧ್ಯವಾಗಲಿದೆ ಎಂದರು.
ಸಂಸದ ಡಾ| ಉಮೇಶ ಜಾಧವ, ಜಿಲ್ಲಾಧಿಕಾರಿ ಶರತ್.ಬಿ. ಮಾತನಾಡಿದರು. ಶಾಸಕರಾದ ಬಸವರಾಜ ಮತ್ತಿಮಡು, ಡಾ| ಅವಿನಾಶ ಜಾಧವ, ರಾಜಕುಮಾರ ಪಾಟೀಲ ತೇಲ್ಕೂರ, ಸುಭಾಷ ಗುತ್ತೇದಾರ, ವಿಧಾನ ಪರಿಷತ್ ಸದಸ್ಯ ಬಿ.ಜಿ. ಪಾಟೀಲ, ಪ್ರಾದೇಶಿಕ ಆಯುಕ್ತ ಹಾಗೂ ಕಲ್ಯಾಣ ಕರ್ನಾಟಕ ಪ್ರದೇಶ ಅಭಿವೃದ್ಧಿ ಮಂಡಳಿ ಕಾರ್ಯದರ್ಶಿ ಡಾ| ಎನ್.ವಿ. ಪ್ರಸಾದ, ಅಪರ ಜಿಲ್ಲಾಧಿಕಾರಿ ಡಾ| ಶಂಕರ ವಣಿಕ್ಯಾಳ ಹಾಗೂ ಎಲ್ಲ ತಾಲೂಕುಗಳ ತಹಶೀಲ್ದಾರರು, ಕಂದಾಯ ಇಲಾಖೆ ಅಧಿಕಾರಿಗಳು ಹಾಜರಿದ್ದರು.