ಕಲಬುರಗಿ: ಕಲ್ಯಾಣ ಕರ್ನಾಟಕ ಪ್ರದೇಶ ಅಭಿವೃದ್ಧಿ ಮಂಡಳಿ ನೇತೃತ್ವದಲ್ಲಿ ಮೈಕ್ರೋ, ಮ್ಯಾಕ್ರೋ ಅಡಿಯಲ್ಲಿ ಹಮ್ಮಿಕೊಂಡ ಕಾಮಗಾರಿಗಳನ್ನು ವಿನಾಕಾರಣ ನಿಧಾನಗತಿಯಲ್ಲಿ ಮುಂದುವರಿಸಿದರೆ ಶಿಸ್ತು ಕ್ರಮ ಕೈಗೊಳ್ಳಬೇಕಾಗುತ್ತದೆ ಎಂದು ಮಂಡಳಿ ಕಾರ್ಯದರ್ಶಿ ಸುಬೋಧ ಯಾದವ ಲೋಕೋಪಯೋಗಿ ಇಲಾಖೆ ಅಧಿಕಾರಿಗಳಿಗೆ ಖಡಕ್ ಎಚ್ಚರಿಕೆ ನೀಡಿದರು.
ಮಂಗಳವಾರ ಪ್ರಾದೇಶಿಕ ಆಯುಕ್ತರ ಕಚೇರಿ ಸಭಾಂಗಣದಲ್ಲಿ ಮಂಡಳಿಯ ಮೈಕ್ರೋ, ಮ್ಯಾಕ್ರೋ ಹಾಗೂ ಇತರೆ ಯೋಜನೆ ಅಡಿಯಲ್ಲಿ 2014-15ರಿಂದ 2019-20ನೇ ಸಾಲಿನ ವರೆಗೆ ಲೋಕೋಪಯೋಗಿ, ಬಂದರು, ಒಳನಾಡು ಮತ್ತು ಜಲ ಸಾರಿಗೆ ಇಲಾಖೆಯಿಂದ ಅನುಷ್ಠಾನ ಮಾಡಲಾಗುತ್ತಿರುವ ಕಾಮಗಾರಿಗಳ ಭೌತಿಕ, ಆರ್ಥಿಕ ಪ್ರಗತಿ ಪರಿಶೀಲಿಸಿ ಅವರು ಮಾತನಾಡಿದರು.
ಮಂಡಳಿಯು ಪ್ರಮುಖ ಮತ್ತು ಬೃಹತ್ ಮೊತ್ತದ ಬಹುತೇಕ ಕಾಮಗಾರಿಗಳನ್ನು ಲೋಕೋಪಯೋಗಿ ಇಲಾಖೆ ಸಮರ್ಥವಾಗಿ ನಿರ್ವಹಿಸುತ್ತದೆ ಎನ್ನುವ ಖಾತ್ರಿಯೊಂದಿಗೆ ಇಲಾಖೆಗೆ ಕಾಮಗಾರಿಗಳನ್ನು ವಹಿಸಲಾಗಿದೆ. ಇದನ್ನು ಅಧಿಕಾರಿಗಳು ಅರಿತು ಕಾರ್ಯನಿರ್ವಹಿಸಬೇಕು ಎಂದರು.
ಕಾಮಗಾರಿಗಳನ್ನು ನಿಗದಿತ ಅವಧಿಯಲ್ಲಿ ಫೂರ್ಣಗೊಳಿಸದೆ ಕಾಲಹರಣ ಮಾಡುತ್ತಿರುವುದು ಬೇಸರದ ಸಂಗತಿಯಾಗಿದೆ. 2014-15ನೇ ಸಾಲಿನ ಕಾಮಗಾರಿಗಳು ಇನ್ನೂ ಕೆಲವೆಡೆ ಪ್ರಗತಿಯಲ್ಲಿವೆ. ಇವುಗಳನ್ನು ಸಂಬಂಧಿಸಿದ ಅನುಷ್ಠಾನ ಅಧಿಕಾರಿಗಳು ಕೂಡಲೆ ಮುಗಿಸಬೇಕು ಎಂದು ತಾಕೀತು ಮಾಡಿದರು.
2019-20ನೇ ಸಾಲಿನ ಕ್ರಿಯಾ ಯೋಜನೆ ಅನುಮೋದಿತ ಕಾಮಗಾರಿಗಳು ಇದೂವರೆಗೆ ಕೆಲವೆಡೆ ಆರಂಭ ಆಗದಿರುವುದ್ದಕ್ಕೆ ಅತೃಪ್ತಿ ಅವ್ಯಕ್ತಪಡಿಸಿದ ಸುಬೋಧ ಯಾದವ, ವರ್ಷ ಪೂರ್ತಿ ಯಾವುದೇ ಪ್ರಗತಿ ಮಾಡದೇ ಆರ್ಥಿಕ ವರ್ಷದ ಕೊನೆಯಲ್ಲಿ ಸ್ಥಳ ಲಭ್ಯತೆ ಇಲ್ಲ. ಕಾರಣಾಂತರ ಸಮಸ್ಯೆಗಳಿಂದ ಸ್ಥಳ ಬದಲಾವಣೆ ಮಾಡಲು ಪ್ರಸ್ತಾವನೆ ಸಲ್ಲಿಸುವುದು ಅಥವಾ ಭೌತಿಕ, ಆರ್ಥಿಕ ಸಾಧನೆ ಒಮ್ಮೆಲೆ ಮಾಡಲು ವರ್ಷಾಂತ್ಯಕ್ಕೆ ಕಾಯುವುದು ಎಷ್ಟರ ಮಟ್ಟಿಗೆ ಸರಿ ಎಂದು ಅಧಿಕಾರಿಗಳನ್ನು ಪ್ರಶ್ನಿಸಿದರು.
2019-20ನೇ ಸಾಲಿನ ಕಾಮಗಾರಿಗಳನ್ನು ಇದೂವರೆಗೆ ಆರಂಭಿಸದ ಸಂಬಂಧಪಟ್ಟ ಅಧಿಕಾರಿಗಳ ಮೇಲೆ ಶಿಸ್ತಿನ ಕ್ರಮ ಕೈಗೊಳ್ಳುವಂತೆ ಮಂಡಳಿ ಕಾರ್ಯದರ್ಶಿ ಸುಬೋಧ ಯಾದವ ಅಧಿಕಾರಿಗಳಿಗೆ ಆದೇಶ ನೀಡಿದರು. ಲೋಕೋಪಯೋಗಿ ಇಲಾಖೆಯ ಕಲಬುರಗಿ ವಲಯದ ಉಪ ಮುಖ್ಯ ಎಂಜಿನಿಯರ್ ಮಾಣಿಕ ಕನಕಟ್ಟೆ, ಕಲಬುರಗಿ ಅಧೀಕ್ಷಕ ಅಭಿಯಂತ ಪ್ರಕಾಶ ಶ್ರೀಹರಿ, ಬಳ್ಳಾರಿ ಅಧೀಕ್ಷಕ ಅಭಿಯಂತ ಜಿ.ಪಂಪಾಪತಿ, ಮಂಡಳಿ ವ್ಯಾಪ್ತಿಯ ಆರು ಜಿಲ್ಲೆಗಳ ಕಾರ್ಯನಿರ್ವಾಹಕ ಅಭಿಯಂತರರಾದ ಅಮೀನ್ ಮುಕ್ತಾರ, ಪ್ರಕಾಶ ಪಿ.ಆರ್., ದೇವಿದಾಸ ಚವ್ಹಾಣ, ತಿರುಮಲರಾವ್ ಕುಲಕರ್ಣಿ, ಕೆ.ಅಬ್ದುಲ್ ವಹಾಬ್, ಜಿ.ಹನುಮಂತರಾಯ, ರಾಷ್ಟ್ರೀಯ ಹೆದ್ದಾರಿ ವಿಭಾಗದ ಇ.ಇ.ಜಯರಾಂ ಚವ್ಹಾಣ, ಎ.ಇ. ಬಸವರಾಜ ಹಾಗೂ ಆರು ಜಿಲ್ಲೆಗಳ ಡಿ.ಸಿ.ಕಚೇರಿಯ ಕೆ.ಕೆ.ಆರ್.ಡಿ.ಬಿ. ಕೋಶದ ತಾಂತ್ರಿಕ ಸಹಾಯಕರು, ಇನ್ನಿತರ ಅಧಿಕಾರಿಗಳು ಇದ್ದರು.