Advertisement

ವರದಿ ನಿಷ್ಪಕ್ಷಪಾತವಾಗಿರಲಿ

10:03 AM Jul 31, 2019 | Team Udayavani |

ಕಲಬುರಗಿ: ಪ್ರಜಾಪ್ರಭುತ್ವದ ವ್ಯವಸ್ಥೆಯಲ್ಲಿ ಪತ್ರಕರ್ತರ ಮೇಲೆ ಮಹತ್ತರ ಜವಾಬ್ದಾರಿ ಇದ್ದು, ವರದಿಗಳು ನಿಷ್ಪಕ್ಷಪಾತವಾಗಿ ಜನಸಾಮಾನ್ಯರಿಗೆ ತಲುಪಬೇಕೆಂದು ಕಲಬುರಗಿ ವಿಭಾಗದ ಪ್ರಾದೇಶಿಕ ಆಯುಕ್ತ ಹಾಗೂ ಎಚ್ಕೆಆರ್‌ಡಿಬಿ ಕಾರ್ಯದರ್ಶಿ ಸುಬೋಧ ಯಾದವ ತಿಳಿಸಿದರು.

Advertisement

ಪತ್ರಿಕಾ ಭವನದಲ್ಲಿ ಮಂಗಳವಾರ ಜಿಲ್ಲಾ ಮತ್ತು ಮಧ್ಯಮ ಪ್ರತಿಕೆಗಳ ಸಂಪಾದಕರ ಸಂಘ ಹಮ್ಮಿಕೊಂಡಿದ್ದ ಪತ್ರಿಕಾ ದಿನಾಚರಣೆ ಮತ್ತು ಸಂವಾದ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.

ಸಂವಿಧಾನದಲ್ಲಿ ಪತ್ರಕರ್ತರಿಗೆ ಪ್ರತ್ಯೇಕವಾದ ಸ್ವಾತಂತ್ರ್ಯದ ಅವಕಾಶವಿಲ್ಲ. ಆದರೂ, ಪರಿಚ್ಛೇದ 19ರ ಅಡಿಯಲ್ಲಿ ವ್ಯಕ್ತಿ ಸ್ವಾತಂತ್ರ್ಯದ ಮೂಲಕವೇ ಪತ್ರಕರ್ತರು ಕಾರ್ಯನಿರ್ವಹಿಸುತ್ತಿದ್ದಾರೆ. ಆದ್ದರಿಂದ ಪತ್ರಕರ್ತರ ವರದಿಗಳು ನಿಷ್ಪಕ್ಷಪಾತ ಹಾಗೂ ನಿರ್ಭಯದಿಂದ ಕೂಡಿರಬೇಕೆಂದು ಹೇಳಿದರು.

ಸರ್ಕಾರದ ಕಾರ್ಯಕ್ರಮಗಳು ಯಾವ ರೀತಿಯಲ್ಲಿ ಇವೆ. ಅವುಗಳನ್ನು ಅನುಷ್ಠಾನಗೊಳಿಸುವ ರೀತಿಯನ್ನು ಜನರಿಗೆ ಮಾಧ್ಯಮಗಳು ತಲುಪಿಸುತ್ತವೆ. ಆದ್ದರಿಂದ ಕಾರ್ಯಕ್ರಮಗಳ ತಪ್ಪು-ಒಪ್ಪುಗಳನ್ನು ಎತ್ತಿ ಹಿಡಿಯುವ ಕೆಲಸ ಮಾಧ್ಯಮಗಳಿಂದ ಆಗಬೇಕು. ಇಂತಹ ಸಂದರ್ಭದಲ್ಲಿ ಆಡಳಿತ ಮತ್ತು ಪ್ರತಿಪಕ್ಷಗಳ ಎರಡೂ ನಿಲುವುಗಳನ್ನು ಅರಿಯಬೇಕು. ಈ ಮೂಲಕ ವಾಸ್ತವಿಕ ವಿಷಯಗಳನ್ನು ಜನರಿಗೆ ಮುಟ್ಟಿಸಿ ಜನಪರವಾಗಿ ಪತ್ರಕರ್ತರು ಕಾರ್ಯನಿರ್ವಹಿಸಬೇಕು ಎಂದು ಸಲಹೆ ನೀಡಿದರು.

ಕೆಲ ಸಂದರ್ಭಗಳಲ್ಲಿ ಪತ್ರಕರ್ತರು ಒತ್ತಡಕ್ಕೆ ಒಳಗಾಗಬೇಕಾಗುತ್ತದೆ. ಅಂತಹ ಒತ್ತಡಗಳನ್ನು ಮೀರಿಯೂ ಕಾರ್ಯನಿರ್ವಹಿಸಲು ಸಾಧ್ಯವಿದೆ. ಪತ್ರಕರ್ತರು ತರಬೇತಿ ಪಡೆಬೇಕು. ಯಾವುದೇ ಒಂದು ವರದಿಯನ್ನು ಸಮಗ್ರ, ಪರಿಣಾಮಕಾರಿಯಾಗಿ ವರದಿ ಮಾಡಲು ಸೂಕ್ತ ತರಬೇತಿ ಅತ್ಯಂತ ಅಗತ್ಯವಾಗಿದೆ ಎಂದು ಅಭಿಪ್ರಾಯಪಟ್ಟರು.

Advertisement

ಇದೇ ವೇಳೆ ಸಂಪಾದಕರಾದ ಪಿ.ಎಂ. ಮಣ್ಣೂರ, ಶಂಕರ ಕೋಡ್ಲಾ, ವೆಂಕಟರಾವ್‌ ಖಮಿತಕರ, ಅಜೀಜುಲ್ಲಾ ಸರಮಸ್ತ್ ಅವರನ್ನು ಸನ್ಮಾನಿಸಲಾಯಿತು.

ಜಿಲ್ಲಾ ಸಂಪಾದಕರ ಸಂಘದ ಅಧ್ಯಕ್ಷ ಶರಣಬಸಪ್ಪ ಕೆ.ಎಚ್. ಅಧ್ಯಕ್ಷತೆ ವಹಿಸಿದ್ದರು. ಜಿಲ್ಲಾ ವಾರ್ತಾ ಮತ್ತು ಸಂಪರ್ಕ ಇಲಾಖೆ ಉಪ ನಿರ್ದೇಶಕ ಸಿದ್ಧೇಶ್ವರಪ್ಪ ಮುಖ್ಯ ಅತಿಥಿಯಾಗಿದ್ದರು. ಸಂಘದ ಉಪಾಧ್ಯಕ್ಷ ಮಲ್ಲಿಕಾರ್ಜುನ ವಿ.ಎನ್‌., ಪದಾಧಿಕಾರಿಗಳಾದ ಸಿದ್ಧಣಗೌಡ ಪಾಟೀಲ, ಬಾಲಾಜಿ ಚಿತ್ತೇಕರ, ಬೌದ್ಧಪ್ರಿಯಾ ನಾಗಸೇನ, ಗುರುರಾಜ ಕುಲಕರ್ಣಿ, ಚಂದ್ರಕಾಂತ ಹಾವನೂರ ಹಾಗೂ ಪತ್ರಕರ್ತರು ಪಾಲ್ಗೊಂಡಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next