ಕಲಬುರಗಿ: ಪ್ಲಾಸ್ಟಿಕ್ ನಿಷೇಧ ಕಾರ್ಯಾಚರಣೆ ಸಂದರ್ಭದಲ್ಲಿ ಪಾಲಿಕೆ ಅಧಿಕಾರಿಗಳ ಮೇಲೆ ಬೇಕರಿ ಸಿಬ್ಬಂದಿ ಹಲ್ಲೆ ಮಾಡಿದ ಘಟನೆ ಖಂಡಿಸಿ ಮಹಾನಗರ ಪಾಲಿಕೆ ಕಚೇರಿ ಎದುರು ಪಾಲಿಕೆ ನೌಕರರು ಮತ್ತು ಪೌರ ಕಾರ್ಮಿಕರು ಬೃಹತ್ ಪ್ರತಿಭಟನೆ ನಡೆಸಿದರು.
ಜಿಲ್ಲಾದ್ಯಂತ ಪ್ಲಾಸ್ಟಿಕ್ ನಿಷೇಧ ಅಭಿಯಾನ ಕೈಗೊಳ್ಳಲಾಗುತ್ತಿದ್ದು, ಸೋಮವಾರ ಸಂಜೆ ಏಶಿಯನ್ ಮಾಲ್ನಲ್ಲಿರುವ ಬೇಕರಿ ಮೇಲೆ ಪಾಲಿಕೆ ಪರಿಸರ ಮತ್ತು ಆರೋಗ್ಯ ಅಧಿಕಾರಿಗಳ ನೇತೃತ್ವದಲ್ಲಿ ದಾಳಿ ಮಾಡಲಾಗಿತ್ತು. ಈ ಸಂದರ್ಭದಲ್ಲಿ ಬೇಕರಿ ಮಾಲೀಕರು ಮತ್ತು ಕೆಲಸಗಾರರು ಅಧಿಕಾರಿಗಳನ್ನು ನಿಂದಿಸಿ, ಹಲ್ಲೆ ಮಾಡಿದ್ದಾರೆ ಎಂದು ಕಪ್ಪು ಪಟ್ಟಿ ಕಟ್ಟಿಕೊಂಡು ಖಂಡಿಸಿದರು.
ಹಸಿರು ನ್ಯಾಯಾಧೀಕರಣ ನಿರ್ದೇಶನದಂತೆ ಪ್ಲಾಸ್ಟಿಕ್ ಬಳಕೆ ನಿಷೇಧ ಹೇರಲಾಗಿದೆ. ಪರಿಸರಕ್ಕೆ ಮಾರಕವಾಗಿರುವ ಪ್ಲಾಸ್ಟಿಕ್ ಮಾರಾಟಗಾರರು ಹಾಗೂ ಬಳಕೆದಾರರ ವಿರುದ್ಧ ಪಾಲಿಕೆಯಿಂದ ದಾಳಿ ನಡೆಸಿ ಸೂಕ್ತ ಕ್ರಮ ಕೈಗೊಳ್ಳಲಾಗುತ್ತಿದೆ. ಈಗಾಗಲೇ ಹಲವಾರು ಮಳಿಗೆಗಳ ಮೇಲೆ ದಾಳಿ ಮಾಡಿ ಪ್ಲಾಸ್ಟಿಕ್ ಜಪ್ತಿ ಮಾಡಿ, ದಂಡ ವಿಧಿಸಲಾಗುತ್ತಿದೆ. ಅದರಂತೆ ಬೇಕರಿ ಮೇಲೂ ದಾಳಿ ನಡೆಸಲಾಗಿತ್ತು. ಆದರೆ, ಬೇಕರಿ ಪ್ರವೇಶಿಸುತ್ತಿದ್ದಂತೆ ಬೇಕರಿಯವರು ತಡೆದು ನಿಂದಿಸಿದರು. ಅಲ್ಲದೇ, ಮಹಿಳಾ ಪರಿಸರ ಅಭಿಯಂತರರ ಮೇಲೆ ಹಲ್ಲೆ ನಡೆಸಿದರು ಎಂದು ಪ್ರತಿಭಟನಾಕಾರರು ಆಕ್ರೋಶ ವ್ಯಕ್ತಪಡಿಸಿದರು.
ಬೇಕರಿಯಲ್ಲಿ 25 ಕೆ.ಜಿಗೂ ಅಧಿಕ ಪ್ಲಾಸ್ಟಿಕ್ ಬಳಕೆ ಮಾಡಲಾಗುತ್ತಿದೆ. ಇದನ್ನು ಅರಿತೇ ದಾಳಿ ಮಾಡಲಾಗಿತ್ತು. ಅಧಿಕಾರಿಗಳ ಮೇಲೆ ಹಲ್ಲೆ ಮತ್ತು ನಿಂದಿಸಿದ ಆರೋಪಿಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಬೇಕೆಂದು ನೌಕರರು ಮತ್ತು ಪೌರ ಕಾರ್ಮಿಕರು ಘೋಷಣೆ ಕೂಗಿದರು. ಪ್ರತಿಭಟನೆಗೆ ಮಾಜಿ ಮೇಯರ್ ಶರಣು ಮೋದಿ ಬೆಂಬಲ ಸೂಚಿಸಿದರು.
ಪರಿಸರ ಅಭಿಯಂತರೆ ಸುಷ್ಮಾ ಸಾಗರ, ಆರೋಗ್ಯ ನಿರೀಕ್ಷರಾದ ರಾಜಕುಮಾರ, ಅವಿನಾಶ, ವೀರಭದ್ರ ಸಿಂಪಿ ಹಾಗೂ ನೌಕರರು, ಪೌರ ಕಾರ್ಮಿಕರು ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದರು.
ಕೆಲ ದಿನಗಳ ಹಿಂದೆ ಜೇವರ್ಗಿ ಪಟ್ಟಣದಲ್ಲಿ ಪ್ಲಾಸ್ಟಿಕ್ ವಸ್ತುಗಳನ್ನು ಜಪ್ತಿ ಮಾಡಿದ್ದಕ್ಕೆ ವರ್ತಕರು, ಸಣ್ಣ ಮತ್ತು ಬೀದಿ ವ್ಯಾಪಾರಿಗಳು ಅಧಿಕಾರಿಗಳೊಂದಿಗೆ ವಾಗ್ವಾದ ನಡೆಸಿದ್ದಾರೆ. ಜತೆಗೆ ಪುರಸಭೆ ಟ್ರ್ಯಾಕ್ಟರ್ ಅಡ್ಡಗಟ್ಟಿದ್ದನ್ನು ಇಲ್ಲಿ ಸ್ಮರಿಸಬಹುದಾಗಿದೆ.