ಕಲಬುರಗಿ: ರೌಡಿಗಳು ಕುಡಿದು ಬೇಕಾಬಿಟ್ಟಿ ಸುತ್ತುವುದು, ನಶೆಯಲ್ಲಿ ಅಲ್ಲಲ್ಲಿ ಗಲಾಟೆ ಮಾಡುವುದು ಸಾಮಾನ್ಯ. ಆದರೆ, ಪೊಲೀಸ್ ಗ್ರೌಂಡ್‌ಗೂ ರೌಡಿಗಳು ಕುಡಿದೇ ಕಾಲಿಟ್ಟಿದ್ದರು.
ಹೌದು, ನಗರದ ಪೊಲೀಸ್ ಮೈದಾನದಲ್ಲಿ ಬುಧವಾರ ನಡೆದ ಪರೇಡ್‌ಗೆ ಕುಡಿದ ನಶೆಯಲ್ಲೇ ರೌಡಿಗಳು ಹಾಜರಾಗಿ ಪೊಲೀಸರೇ ಆಶ್ಚರ್ಯ ಮಾಡುವಂತೆ ಮಾಡಿದರು.
ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಯಡಾ ಮಾರ್ಟಿನ್ ಮಾರ್ಬನ್ಯಾಂಗ್ ನೇತೃತ್ವದಲ್ಲಿ ನಗರ ವ್ಯಾಪ್ತಿಯ ವಿವಿಧ ಪೊಲೀಸ್ ಠಾಣೆಗಳಲ್ಲಿ ಹೆಸರಿರುವ 150ಕ್ಕೂ ಹೆಚ್ಚು ರೌಡಿಗಳ ಪರೇಡ್ ನಡೆಸಲಾಯಿತು. ಎಲ್ಲರನ್ನೂ ವಿಚಾರಿಸಿ ತಪಾಸಣೆ ನಡೆಸುವಾಗ ಮೂವರು ರೌಡಿಗಳು ಮದ್ಯದ ನಶೆಯಲ್ಲಿರುವುದು ಗೊತ್ತಾಯಿತು. ಆಗ ರೌಡಿಗಳಿಗೆ ಕುಡಿದುಕೊಂಡು ಬರುತ್ತಿರಾ ಎಂದು ಪೊಲೀಸರು ತರಾಟೆಗೆ ತೆಗೆದುಕೊಂಡರು.
ನಂತರದಲ್ಲಿ ಅಲ್ಕೋಹಾಲ್ ಪ್ರಮಾಣ ಪರೀಕ್ಷೆ ಮಾಡುವ ಮಾಪನ ತರಿಸಿ ಪರೀಕ್ಷಿಸಲಾಯಿತು. ಇದರಲ್ಲೂ ಕುಡಿದಿರುವುದು ದೃಢ ಪಟ್ಟಿದ್ದರಿಂದ ಮೂವರ ವಿರುದ್ಧ ಪ್ರತ್ಯೇಕ ಕೇಸ್ ದಾಖಲಿಸಿ ದಂಡ ವಸೂಲಿ ಮಾಡುವಂತೆ ಪೊಲೀಸರಿಗೆ ಎಸ್‌ಪಿ ಸೂಚಿಸಿದರು.
ಉಳಿದ ಕೆಲ ರೌಡಿಗಳ ಪೂರ್ವಾಪರ ಮಾಹಿತಿ ಕಲೆಹಾಕಿ, ಇವರ ಮೇಲೆ ನಿಗಾ ಇಡುವಂತೆ ಆಯಾ ಠಾಣೆಗಳ ಅಧಿಕಾರಿಗಳಿಗೆ ತಾಕೀತು ಮಾಡಿದರು. ಜತೆಗೆ ರೌಡಿಗಳಿಗೆ ಮುಂದಿನಗಳಲ್ಲಿ ಸುಧಾರಿಸಿಕೊಳ್ಳಿ ಎನ್ನುವ ಪಾಠವನ್ನು ಎಸ್‌ಪಿ ಮಾಡಿದರು. ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಸಾರ್ವಜನಿಕರಿಗೆ ರೌಡಿಗಳಿಂದ ತೊಂದರೆ ಆಗದಂತೆ ನೋಡಿಕೊಳ್ಳಲು ಮತ್ತು ಉಪಟಳ ಮಟ್ಟ ಹಾಕಲು ಪರೇಡ್ ನಡೆಸಲಾಗುತ್ತಿದೆ. ಕೆಲ ದಿನಗಳ ಹಿಂದೆ ‘ಎ’ ಕೆಟಗರಿಯ ರೌಡಿಗಳು ಪರೇಡ್ ಮಾಡಲಾಗಿತ್ತು. ಇಂದು ‘ಬಿ’ ಕೆಟಗರಿಯ ರೌಡಿಗಳ ಪರೇಡ್ ನೆಡಸಲಾಗಿದೆ ಎಂದರು.
ಹೆಚ್ಚಿನ ಉಪಟಳ ಕಂಡು ಬಂದಲ್ಲಿ ಅಂತಹ ರೌಡಿಗಳ ವಿರುದ್ಧ ಗೂಂಡಾ ಕಾಯ್ದೆ ಪ್ರಯೋಗಿಸಲಾಗುತ್ತಿದೆ. ಈಗಾಗಲೇ ಅಂತಹವರ ಪಟ್ಟಿ ನೀಡುವಂತೆ ಆಯಾ ಠಾಣಾಧಿಕಾರಿಗಳಿಗೆ ಸೂಚನೆ ನೀಡಲಾಗಿದೆ. ಈ ತಿಂಗಳೊಳಗೆ ಸುಮಾರು 20 ರೌಡಿಗಳ ವಿರುದ್ಧ ಗೂಂಡಾ ಕಾಯ್ದೆ ಪ್ರಕರಣ ಹಾಕಲು ತೀರ್ಮಾನಿಸಲಾಗಿದೆ ಎಂದು ತಿಳಿಸಿದರು.
ಡಿಎಸ್‌ಪಿಗಳಾದ ಜೇಮ್ಸ್ ಮಿನೇಜಸ್, ಎಸ್.ಎಂ. ಪಟ್ಟಣಕರ್, ಪಾಂಡುರಂಗಯ್ಯ, ವಿಜಯಕುಮಾರ.ವಿ.ಎಚ್., ಇನ್‌ಸ್ಪೆಕ್ಟರ್‌ಗಳಾದ ಶಕೀಲ್ ಅಂಗಡಿ, ರಾಘವೇಂದ್ರ, ಘೋರ್ಪಡೆ, ರಮೇಶ ಕಾಂಬಳೆ ಮುಂತಾದ ಪೊಲೀಸ್ ಅಧಿಕಾರಿಗಳು ಇದ್ದರು.