ಕಲಬುರಗಿ: ಮೀಸಲಾತಿ ಬಗ್ಗೆ ಅವಹೇಳನಕಾರಿ ಹೇಳಿಕೆ ನೀಡಿರುವ ಸಂಸದ ಡಾ| ಉಮೇಶ ಜಾಧವ ವಿರುದ್ಧ ರಾಷ್ಟ್ರಪತಿಗಳು ಕಾನೂನು ಕ್ರಮ ಕೈಗೊಳ್ಳಬೇಕೆಂದು ಒತ್ತಾಯಿಸಿ ಜಿಲ್ಲಾಧಿಕಾರಿ ಕಚೇರಿ ಎದುರು ಬುಧವಾರ ದಲಿತ ಸಂಘರ್ಷ ಸಮಿತಿ ಒಕ್ಕೂಟದ ವತಿಯಿಂದ ಪ್ರತಿಭಟನೆ ನಡೆಸಲಾಯಿತು.
ಕೆಲ ದಿನಗಳ ಹಿಂದೆ ನಗರದಲ್ಲಿ ನಡೆದ ಕ್ಷತ್ರೀಯ ಸಮಾಜದ ಕಾರ್ಯಕ್ರಮದಲ್ಲಿ ಬಂಜಾರಾ ಸಮುದಾಯಕ್ಕೆ 1936ರಲ್ಲಿ ಮೈಸೂರಿನ ನಾಲ್ವಡಿ ಕೃಷ್ಣರಾಜ ಒಡೆಯರು ಮೀಸಲಾತಿ ಕಲ್ಪಿಸಿದ್ದರು. ಡಾ|ಬಿ.ಆರ್. ಅಂಬೇಡ್ಕರ್ ಮೀಸಲಾತಿ ಪ್ರಸ್ತಾವನೆ ಸಿದ್ಧಪಡಿಸುವ ಮುನ್ನ ಬಂಜಾರಾ ಸಮಾಜ ಮೀಸಲಾತಿ ಸೌಲಭ್ಯ ಪಡೆದುಕೊಳ್ಳುತ್ತಿತ್ತು ಎಂದು ಸಂಸದ ಡಾ| ಉಮೇಶ ಜಾಧವ ಹೇಳಿಕೆ ನೀಡಿದ್ದು ಖಂಡನಾರ್ಹವಾಗಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಒಬ್ಬ ಭಾರತೀಯ ಪ್ರಜೆಯಾಗಿ ದೇಶದ ಸಂವಿಧಾನ, ರಾಷ್ಟ್ರಗೀತೆ, ರಾಷ್ಟ್ರಧ್ವಜಕ್ಕೆ ಗೌರವ ಕೊಡಬೇಕು. ಆದರೆ, ಡಾ| ಜಾಧವ ಬಹಿರಂಗವಾಗಿಯೇ ಸಂವಿಧಾನ ಮತ್ತು ಅಂಬೇಡ್ಕರ್ ಬಗ್ಗೆ ಅವಹೇಳನ ಮಾಡಿದ್ದಾರೆ. ಹೀಗಾಗಿ ಅವರ ವಿರುದ್ಧ ಕಾನೂನು ಕ್ರಮ ತೆಗೆದುಕೊಳ್ಳಬೇಕೆಂದು ಜಿಲ್ಲಾಧಿಕಾರಿ ಮೂಲಕ ರಾಷ್ಟ್ರಪತಿಗಳಿಗೆ ಮನವಿ ಮಾಡಿದರು.
ಒಕ್ಕೂಟದ ಪದಾಧಿಕಾರಿಗಳಾದ ಡಾ| ಮಲ್ಲೇಶಿ ಸಜ್ಜನ, ಸುರೇಶ ಮೆಂಗನ್, ದತ್ತಾತ್ರೇಯ ಇಕ್ಕಳಕಿ, ಅರ್ಜುನ ಗೊಬ್ಬುರ, ಮಲ್ಲಪ್ಪ ಹೊಸಮನಿ, ಸಂಜು ಮಾಲೆ, ಭೀಮಶ್ಯಾ ಖನ್ನಾ, ಮಹಾದೇವ ಕೊಲ್ಕೂರ, ಪಾಂಡುರಂಗ ಮದನಕರ್, ಶಿವಾನಂದ ಸಾವಳಗಿ, ಶ್ಯಾಮರಾವ್ ಹೇರೂರು ಮತ್ತಿತರರು ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದರು.
1936ಕ್ಕಿಂತ ಮುನ್ನ 1932ರಲ್ಲೇ ಅಂಬೇಡ್ಕರ್ ಮತ್ತು ಮಹಾತ್ಮ ಗಾಂಧಿ ಮೀಸಲಾತಿ ಪ್ರಸ್ತಾವನೆ ಇಟ್ಟಿದ್ದರು. ಅಂಬೇಡ್ಕರ್ ಪ್ರಯತ್ನದ ಫಲವಾಗಿ ಪೂನಾ ಒಪ್ಪಂದದ ಸಂದರ್ಭದಲ್ಲಿ ರಾಜಕೀಯ, ಸಾಮಾಜಿಕ, ಆರ್ಥಿಕ ಹಾಗೂ ಉದ್ಯೋಗದಲ್ಲಿ ಅಸ್ಪೃಶ್ಯರಿಗೆ ಮೀಸಲಾತಿ ಕಲ್ಪಿಸಲು ಪ್ರಸ್ತಾವನೆಯಾಗಿತ್ತು. ಇತಿಹಾಸ ಪ್ರಜ್ಞೆ ಇಲ್ಲದೇ ಸಂಸದರು ಹೇಳಿಕೆ ಕೊಟ್ಟಿದ್ದಾರೆ. ಸಂವಿಧಾನದತ್ತವಾಗಿ ಕರ್ನಾಟಕದಲ್ಲಿ ಬಂಜಾರಾ ಸಮುದಾಯ ಪರಿಶಿಷ್ಟ ಜಾತಿ ಪಟ್ಟಿಗೆ ಸೇರಿ ಮೀಸಲಾತಿ ಸೌಲಭ್ಯ ಪಡೆಯುತ್ತಿದೆ. ಇದೇ ಮೀಸಲಾತಿಯಿಂದ ಅವರು ಸಂಸದರಾಗಿ ಆಯ್ಕೆ ಆಗಿರುವುದನ್ನು ಮರೆತಂತಿದೆ.
•
ಡಾ| ಮಲ್ಲೇಶಿ ಸಜ್ಜನ,
ದಸಂಸ ಮುಖಂಡ