ಕಲಬುರಗಿ: ಜಿಲ್ಲೆಯಲ್ಲಿ ಮಹಾಮಾರಿ ಕೋವಿಡ್ ಸೋಂಕು ಹರಡಲು ದೆಹಲಿಗೆ ಹೋಗಿದ್ದ ಮೂವರು, ಮಹಾರಾಷ್ಟ್ರದಿಂದ ಬಂದ ಇಬ್ಬರು ಹಾಗೂ ಬೆಂಗಳೂರಿನಿಂದ ಬಂದ ಓರ್ವ ವ್ಯಕ್ತಿ ಸೇರಿ ಒಟ್ಟು ಆರು ಜನರು ಕಾರಣರಾಗಿದ್ದಾರೆ ಎಂದು ಜಿಲ್ಲಾ ಉಸ್ತುವಾರಿ ಸಚಿವರಾದ ಮುಖ್ಯಮಂತ್ರಿ ಗೋವಿಂದ ಕಾರಜೋಳ ತಿಳಿಸಿದರು.
ನಗರದ ಜಿಲ್ಲಾಧಿಕಾರಿಗಳ ಕಚೇರಿಯಲ್ಲಿ ಗುರುವಾರ ಕೋವಿಡ್ ಸೋಂಕು ಕುರಿತಂತೆ ಜನಪ್ರತಿನಿಧಿಗಳು ಮತ್ತು ಅಧಿಕಾರಿಗಳ ಸಭೆಯಲ್ಲಿ ಮಾತನಾಡಿದ ಅವರು, ಕೋವಿಡ್ ಸೋಂಕು ನಿಯಂತ್ರಣಕ್ಕೆ ಮತ್ತಷ್ಟು ಅಗತ್ಯ ಕ್ರಮಗಳನ್ನು ಕೈಗೊಳ್ಳಬೇಕೆಂದು ಅಧಿಕಾರಿಗಳಿಗೆ ಸೂಚಿಸಲಾಗಿದೆ. ಸೋಂಕಿತರ ಸಂಪರ್ಕ ಹೊಂದಿರುವ ಎಲ್ಲ ವ್ಯಕ್ತಿಗಳನ್ನು ಪತ್ತೆ ಮಾಡಿ ತಪಾಸಣೆಗೆ ಒಳಪಡಿಸಲಾಗುತ್ತದೆ ಎಂದರು.
ಸೋಂಕು ಹರಡದಂತೆ ನಿಯಂತ್ರಿಸಲು ಕಂಟೇನ್ಮೆಂಟ್ ಝೋನ್‌ನಲ್ಲಿ ಮತ್ತಷ್ಟು ಬಿಗಿ ಮಾಡಲಾಗುವುದು. ಅಲ್ಲಿ ವಾಸವಾಗಿರುವವರು ಹೊರಗಡೆ ಬರುವಂತಿಲ್ಲ. ಹೊರಗಿನ ಪ್ರದೇಶದವರು ಅಲ್ಲಿಗೆ ಹೋಗುವಂತಿಲ್ಲ. ಕೋವಿಡ್ ಸೋಂಕಿನ ಸಂಪರ್ಕ ಕಡಿತಗೊಳಿಸಲು ಕಠಿಣ ಕ್ರಮ ಕೈಗೊಳ್ಳಲಾಗುವುದು. ಅಗತ್ಯ ವಸ್ತುಗಳಿಗೆ ಯಾರಾದರೂ ಸಹಾಯವಾಣಿಗೆ ಕರೆ ಮಾಡಿದರೆ, ಅವರಿಗೆ ಜಿಲ್ಲಾಡಳಿತ ಪೂರೈಸಲಿದೆ ಎಂದರು. ತೆಲಂಗಾಣ, ಮಹಾರಾಷ್ಟ್ರ ಸೇರಿದಂತೆ ಯಾವುದೇ ಭಾಗಗಳಿಂದ ಜಿಲ್ಲೆಗೆ ಬಂದವರು ಕಡ್ಡಾಯವಾಗಿ ಕೋವಿಡ್ ತಪಾಸಣೆಗೊಳಗಾಗಬೇಕು. ಸಂಶಯ ಬಂದವರು ಸ್ವಯಂ ಪ್ರೇರಿತರಾಗಿ ಪರೀಕ್ಷೆ ಮಾಡಿಸಿಕೊಳ್ಳಬೇಕು. ಈ ಮೂಲಕ ಸಾರ್ವಜನಿಕರು ಕೋವಿಡ್ ಸೋಂಕು ಹರಡುವಿಕೆ ನಿಯಂತ್ರಿಸಲು ಸಹಕರಿಸಬೇಕು ಎಂದು ಡಿಸಿಎಂ ಮನವಿ ಮಾಡಿದರು.
ಲಾಕ್‌ಡೌನ್ ಹಿನ್ನೆಲೆಯಲ್ಲಿ ಕೃಷಿ, ಸಗಟು ಕಿರಾಣಿ ವ್ಯಾಪಾರ, ಕೃಷಿ ಮತ್ತು ತೋಟಗಾರಿಕೆ ಉತ್ಪನ್ನಗಳ ಮಾರಾಟ, ಕಟ್ಟಡಗಳ ನಿರ್ಮಾಣಕ್ಕೆ ಅನುಮತಿ ನೀಡಲಾಗಿದೆ. ನಿಯಮಿತ ಕಾರ್ಮಿಕರನ್ನು ಮಾತ್ರ ಬಳಸಿಕೊಂಡು ಕೆಲಸ ಮಾಡಲು ಅನುಮತಿ ನೀಡಲಾಗಿದೆ. ಯಾವುದೇ ಕೆಲಸ ಕಾರ್ಯಗಳಲ್ಲಿದ್ದರೂ ಸಾಮಾಜಿಕ ಅಂತರ ಕಾಯ್ದುಕೊಳ್ಳುವುದು ಕಡ್ಡಾಯವಾಗಿದೆ ಎಂದು ಹೇಳಿದರು.
ವಿಧಾನ ಪರಿಷತ್ತಿನ ಸದಸ್ಯ ತಿಪ್ಪಣಪ್ಪ ಕಮಕನೂರು ಮಾತನಾಡಿ, ನಗರದ ಮಾಣಿಕೇಶ್ವರಿ ನಗರದ ನಿವಾಸಿಯೊಬ್ಬರಿಗೆ ಕೋವಿಡ್ ಸೋಂಕು ಪತ್ತೆಯಾಗಿದ್ದರಿಂದ ಇಲ್ಲಿನ ಜನ ಭಯಭೀತರಾಗಿದ್ದಾರೆ. ಅನಕ್ಷರತೆ ಹೆಚ್ಚಿರುವ ಈ ಪ್ರದೇಶದಲ್ಲಿ ಅರಿವು ಮೂಡಿಸುವುದಲ್ಲದೆ ಸಂಪೂರ್ಣ ಪ್ರದೇಶ ಸೀಲ್ ಡೌನ್ ಮಾಡಲು ಕ್ರಮ ವಹಿಸಬೇಕೆಂದರು.
ಜಿಲ್ಲಾಧಿಕಾರಿ ಶರತ್ ಬಿ. ಮಾತನಾಡಿ, ಕೋವಿಡ್ ವಿರುದ್ಧ ಹೋರಾಟಕ್ಕೆ ವೈದ್ಯ ಸಿಬ್ಬಂದಿ ಉಪಯೋಗಕ್ಕಾಗಿ ಜಿಲ್ಲೆಯಲ್ಲಿ 7000 ಪಿಪಿಇ ಕಿಟ್, 20,000 ಎನ್-95 ಮಾಸ್ಕ್, 2.32 ಲಕ್ಷ 3 ಲೇಯರ್ ಮಾಸ್ಕ್, 60 ಸಾವಿರ ಹ್ಯಾಂಡ್ ಸ್ಯಾನಿಟೈಸರ್ ಸೇರಿದಂತೆ ಅಗತ್ಯ ಸಾಮಗ್ರಿಗಳು ಲಭ್ಯವಿದೆ. ಹೀಗಾಗಿ ಯಾವುದಕ್ಕೂ ಕೊರತೆಯಿಲ್ಲ ಎಂದರು.
ಸಂಸದ ಡಾ.ಉಮೇಶ ಜಾಧವ, ಜಿಪಂ ಅಧ್ಯಕ್ಷೆ ಸುವರ್ಣ ಮಲಾಜಿ, ಶಾಸಕರಾದ ದತ್ತಾತ್ರೇಯ ಪಾಟೀಲ ರೇವೂರ, ಬಸವರಾಜ ಮತ್ತಿಮಡು, ಡಾ.ಅವಿನಾಶ ಜಾಧವ, ಸುಭಾಷ ಗುತ್ತೇದಾರ, ವಿಧಾನ ಪರಿಷತ್ ಸದಸ್ಯರಾದ ಬಿ.ಜಿ.ಪಾಟೀಲ, ರಾಜ್ಯ ಮಹಿಳಾ ಅಭಿವೃದ್ಧಿ ನಿಗಮ ಅಧ್ಯಕ್ಷೆ ಶಶಿಕಲಾ ಟೆಂಗಳಿ, ಜಿಲ್ಲಾಧಿಕಾರಿ ಶರತ್ ಬಿ., ಪೊಲೀಸ್ ಆಯುಕ್ತ ಎನ್.ಸತೀಶಕುಮಾರ, ಜಿಪಂ ಸಿಇಒ ಡಾ.ರಾಜಾ. ಪಿ, ಎಸ್‌ಪಿ ಯಡಾ ಮಾರ್ಟಿನ್ ಮಾರ್ಬನ್ಯಾಂಗ್, ಡಿಸಿಪಿ ಕಿಶೋರಬಾಬು ಸೇರಿದಂತೆ ಹಲವು ಅಧಿಕಾರಿಗಳು ಪಾಲ್ಗೊಂಡಿದ್ದರು.