ಕಲಬುರಗಿ: ನಗರದ ಐತಿಹಾಸಿಕ ಬಹುಮನಿ ಕೋಟೆಯೊಳಗಿನ ಒತ್ತುವರಿ ತೆರವು ಸಂಬಂಧ ಕೇಂದ್ರ ಸಂಸ್ಕೃತಿ ಮಂತ್ರಾಲಯದ ಭಾರತೀಯ ಪುರಾತತ್ವ ಸರ್ವೇಕ್ಷಣಾ ಇಲಾಖೆ ಕೋಟೆಯಲ್ಲಿ ನೆಲೆಸಿರುವ ನಿವಾಸಿಗಳಿಗೆ ನೋಟಿಸ್ ಜಾರಿ ಮಾಡಿದೆ.
ಕೋಟೆಯಲ್ಲಿ ಅತಿಕ್ರಮಣ ಮಾಡಿಕೊಂಡು ನೆಲೆಸಿರುವ ಎಲ್ಲ 281 ಮಂದಿಗೆ ಅಧಿಕಾರಿಗಳು ನೋಟಿಸ್ ನೀಡಿ, ವಾರದೊಳಗೆ ಸ್ವಯಂಪ್ರೇರಿತವಾಗಿ ಒತ್ತುವರಿ ತೆರವು ಮಾಡಬೇಕೆಂದು ಸೂಚಿಸಿದ್ದಾರೆ.
ಅತಿಕ್ರಮಣ ಸಂಬಂಧ ಹೈಕೋರ್ಟ್‌ನಲ್ಲಿ ಸಾಮಾಜಿಕ ಕಾರ್ಯಕರ್ತ ಶರಣ ದೇಸಾಯಿ ಸಾರ್ವಜನಿಕ ಹಿತಾಸ್ತಕಿ ಅರ್ಜಿ ಸಲ್ಲಿಸಿದ್ದರು. ಜೂ.4ರಂದು ಅರ್ಜಿ ವಿಚಾರಣೆ ನಡೆಸಿದ್ದ ಹೈಕೋರ್ಟ್ ಕೋಟೆಯಲ್ಲಿನ ಅಕ್ರಮ ಮನೆ ಮತ್ತು ಕಟ್ಟಡಗಳನ್ನು ತೆರವುಗೊಳಿಸಲು ಆದೇಶಿಸಿದೆ.
ಹೈಕೋರ್ಟ್‌ನ ಆದೇಶದಂತೆ ಜುಲೈ ಮೊದಲ ವಾರದಲ್ಲಿ ಭಾರತೀಯ ಪುರಾತತ್ವ ಸರ್ವೇಕ್ಷಣಾ ಇಲಾಖೆ ಅಧಿಕಾರಿಗಳು ಮೂರು ದಿನಗಳ ಕಾಲ ಸರ್ವೇ ಮಾಡಿದ್ದರು. ಸರ್ವೇ ಪ್ರಕಾರ ಕೋಟೆಯೊಳಗೆ ಒಟ್ಟು 281 ಅಕ್ರಮ ಮನೆಗಳು ಇರುವುದು ಬೆಳಕಿಗೆ ಬಂದಿದೆ. ಕಲಬುರಗಿ ಉಪ ವಿಭಾಗದ ಸಹಾಯಕ ಸರ್ವೇಕ್ಷಣಾಧಿಕಾರಿ ವಿನಾಯಕ ಶಿರಹಟ್ಟಿ ನೇತೃತ್ವದಲ್ಲಿ ಜು.24ರಂದು 125 ಮಂದಿಗೆ ಮತ್ತು ಜು.25ರಂದು 156 ಮಂದಿಗೆ ನೋಟಿಸ್ ನೀಡಲಾಗಿದೆ.
ನ್ಯಾಯಾಲಯದ ನಿರ್ದೇಶನದಂತೆ ಕೋಟೆಯೊಳಗೆ ಅಕ್ರಮವಾಗಿ ನೆಲೆಸಿರುವ ಎಲ್ಲ 281 ಮನೆಗಳಿಗೆ ಎರಡು ದಿನಗಳ ಕಾಲ ನೋಟಿಸ್ ನೀಡಲಾಗಿದೆ. ಅತಿಕ್ರಮಣ ತೆರವು ಮಾಡುವಂತೆ ಒಂದು ವಾರದ ಗಡುವು ಕೊಡಲಾಗಿದೆ. ಮುಂದಿನ ಕ್ರಮವನ್ನು ನ್ಯಾಯಾಲಯದ ಆದೇಶದಂತೆ ಪಾಲಿಸಲಾಗುವುದು ಎಂದು ಸಹಾಯಕ ಸರ್ವೇಕ್ಷಣಾಧಿಕಾರಿ ವಿನಾಯಕ ಶಿರಹಟ್ಟಿ ‘ಉದಯವಾಣಿ’ಗೆ ಸ್ಪಷ್ಟಪಡಿಸಿದ್ದಾರೆ.
ಕಲಬುರಗಿಯ ಐತಿಹಾಸಿಕ ಸಂಕೇತವಾಗಿರುವ ಕೋಟೆಯನ್ನು ಉಳಿಸಿಕೊಳ್ಳುವ ಉದ್ದೇಶದಿಂದ ಹೈಕೋರ್ಟ್‌ನಲ್ಲಿ ಪಿಐಎಲ್ ದಾಖಲಿಸಲಾಗಿದೆ. ಅದರಂತೆ ಹೈಕೋರ್ಟ್ ಕೋಟೆಯೊಳಗಿನ ಅತಿಕ್ರಮಣ ತೆರವಿಗೆ ಆದೇಶ ನೀಡಿದೆ. ನಿರಾಶ್ರಿತರಿಗೆ ಬೇರೆಕಡೆ ವಾಸ್ತವ್ಯಕ್ಕೆ ಅವಕಾಶ ಕಲ್ಪಿಸಿಕೊಟ್ಟಲ್ಲಿ ನ್ಯಾಯಾಲಯ ಮಧ್ಯಪ್ರವೇಶ ಮಾಡಲ್ಲ ಎಂದು ರಾಜ್ಯ ಸರ್ಕಾರಕ್ಕೆ ಸ್ಪಷ್ಟವಾಗಿ ಹೇಳಿದೆ. ಅಲ್ಲಿನ ನಿವಾಸಿಗಳಿಗೆ ನೋಟಿಸ್ ಜತೆಗೆ ಮನೆಯ ಹಕ್ಕು ಪತ್ರವನ್ನು ಜಿಲ್ಲಾಡಳಿತ ನೀಡಬೇಕಿತ್ತು ಎಂದು ಅರ್ಜಿದಾರ ಶರಣ ದೇಸಾಯಿ ತಿಳಿಸಿದರು.
ಬಹುಮನಿ ಕೋಟೆಯೊಳಗಿನ ಒತ್ತುವರಿ ತೆರವು ಕುರಿತು ಹೈಕೋರ್ಟ್ ಆದೇಶದಂತೆ ಸರ್ವೇ ಮಾಡಿ, ಎಲ್ಲ 281 ಮಂದಿಗೆ ನೋಟಿಸ್ ಜಾರಿ ಮಾಡಲಾಗಿದೆ. ಮುಂದಿನ ವಿಚಾರಣೆಯಲ್ಲಿ ನ್ಯಾಯಾಲಯ ನೀಡುವ ನಿರ್ದೇಶನ ಪ್ರಕಾರ ಕ್ರಮ ಕೈಗೊಳ್ಳಲಾಗುವುದು.
•
ವಿನಾಯಕ ಶಿರಹಟ್ಟಿ,
ಸಹಾಯಕ ಸರ್ವೇಕ್ಷಣಾಧಿಕಾರಿ, ಕಲಬುರಗಿ ಉಪ ವಿಭಾಗ