Advertisement

ನರೇಗಾ ಕಾಮಗಾರಿ ಚುರುಕಿಗೆ ಕ್ರಮ

11:50 AM Apr 25, 2020 | Naveen |

ಕಲಬುರಗಿ: ಲಾಕ್‌ಡೌನ್‌ ಜಾರಿ ಹಿನ್ನೆಲೆಯಲ್ಲಿ ರೈತರು, ಕೂಲಿ ಕಾರ್ಮಿಕರು ಸಂಕಷ್ಟಕ್ಕೆ ಸಿಲುಕಿದ್ದಾರೆ. ಆರ್ಥಿಕವಾಗಿ ಕುಸಿತ ಕಂಡಿರುವ ದುಡಿಯುವ ವರ್ಗದ ಜನರ ಕೈಗಳಿಗೆ ಉದ್ಯೋಗ ನೀಡಿ ಹಣದ ನೆರವಾಗುವ ನಿಟ್ಟಿನಲ್ಲಿ ಜಿಲ್ಲೆಯಲ್ಲಿ ಮಹಾತ್ಮಾ ಗಾಂಧಿ ಉದ್ಯೋಗ ಖಾತ್ರಿ ಯೋಜನೆಯಡಿ ಅನುಷ್ಠಾನಕ್ಕೆ ತರಲಾಗಿದೆ. ಕೊರೊನಾ ಭೀತಿ ಹಿನ್ನೆಲೆಯಲ್ಲಿ “ವೈಯಕ್ತಿಕ ಕಾಮಗಾರಿ’ಗಳಿಗೆ ಒತ್ತು ಕೊಡಲಾಗಿದೆ.

Advertisement

ಕಳೆದ ಒಂದು ತಿಂಗಳಿಂದ ಎಲ್ಲ ಚಟುವಟಿಕೆಗಳು ಸ್ತಬ್ಧಗೊಂಡಿವೆ. ಕೃಷಿ, ಕೂಲಿ, ಹಮಾಲಿ..ಹೀಗೆ ಸಣ್ಣ-ಪುಟ್ಟ ಕೆಲಸಗಳನ್ನೂ ನೆಚ್ಚಿಕೊಂಡು ಶ್ರಮಿಕರು ಕೆಲಸವಿಲ್ಲದೇ ಕಂಗಾಲಾಗಿದ್ದಾರೆ. ಗ್ರಾಮೀಣ ಭಾಗದ ಜನತೆಗೆ ಜೀವನ ನಿರ್ವಹಣೆಯೇ ಸವಾಲಾಗಿ ಪರಿಣಮಿಸಿದೆ. ಅಲ್ಲದೇ, ದೂರದ ನಗರ, ಪಟ್ಟಣಗಳಿಗೆ ತೆರಳಿದ್ದ ಲಕ್ಷಾಂತರ ಜಿಲ್ಲೆಗೆ ಮರಳಿ ಬಂದಿದ್ದಾರೆ. ಇದನ್ನು ಮನಗಂಡಿರುವ ಸರ್ಕಾರ ಕೊರೊನಾ ಆತಂಕದ ನಡುವೆಯೂ ನರೇಗಾ ಯೋಜನೆ ಅನುಷ್ಠಾನ ಚುರುಕುಗೊಳಿಸಿದೆ.

ಜಿಲ್ಲೆಯಲ್ಲಿ ಒಟ್ಟು 263 ಗ್ರಾಪಂಗಳ ಪೈಕಿ ಈಗಾಗಲೇ 191 ಗ್ರಾಪಂಗಳ ವ್ಯಾಪ್ತಿಯಲ್ಲಿ ನರೇಗಾ ಕಾಮಗಾರಿಗಳು ಪ್ರಗತಿಯಲ್ಲಿವೆ. ಸಾಮಾಜಿಕ ಅಂತರ ಕಾಪಾಡಿಕೊಳ್ಳಲು ಕಡಿಮೆ ಕೂಲಿಕಾರರು ಸೇರಿರುವ ಹೊಲ, ಕೆರೆಗಳ ಬದುವು ನಿರ್ಮಾಣ, ಕೃಷಿ ಹೊಂಡ, ಮರಗಳ ನೆಡುವುದು ಸೇರಿದಂತೆ ವೈಯಕ್ತಿಕ ಕಾಮಗಾರಿಗಳನ್ನು ನೀಡಲಾಗುತ್ತಿದೆ ಎನ್ನುತ್ತಾರೆ ಅಧಿಕಾರಿಗಳು.

560 ಹೊಸ ಜಾಬ್‌ ಕಾರ್ಡ್‌: ಜಿಲ್ಲೆಯಲ್ಲಿ ನರೇಗಾ ಯೋಜನೆಯಡಿ 2.81 ಲಕ್ಷ ಕುಟುಂಬಗಳಿಗೆ ಜಾಬ್‌ ಕಾರ್ಡ್‌ಗಳನ್ನು ನೀಡಲಾಗಿದೆ. 6.09 ಲಕ್ಷ ಜನರ ಕೂಲಿಕಾರರು ಇದ್ದಾರೆ. ಪ್ರಸಕ್ತ ಎಲ್ಲ ತಾಲೂಕುಗಳಲ್ಲೂ ನರೇಗಾ ಯೋಜನೆ ಅನುಷ್ಠಾನ ತರಲಾಗಿದ್ದು, ಇದೇ ತಿಂಗಳು 560 ಹೊಸ ಜಾಬ್‌ ಕಾರ್ಡ್‌ಗಳನ್ನು ವಿತರಿಸಲಾಗಿದೆ. ಹೊಸದಾಗಿ 1,214 ಜನ ಕೂಲಿ ಕಾರ್ಮಿಕರು ಸೇರ್ಪಡೆಯಾಗಿದ್ದಾರೆ.

ಅಫಜಲಪುರ ತಾಲೂಕಿನ 20 ಗ್ರಾಪಂಗಳ ವ್ಯಾಪ್ತಿಯಲ್ಲಿ 84 ಕಾಮಗಾರಿಗಳನ್ನು ಆರಂಭಿಸಲಾಗಿದೆ. 246 ಕಾರ್ಮಿಕರು ಕೆಲಸದಲ್ಲಿ ತೊಡಗಿಸಿಕೊಂಡಿದ್ದಾರೆ. ಆಳಂದ ತಾಲೂಕಿನ 30 ಗ್ರಾಪಂಗಳ ವ್ಯಾಪ್ತಿಯಲ್ಲಿ 119 ಕಾಮಗಾರಿಗಳು ಕೈಗೆತ್ತಿಕೊಂಡಿದ್ದು, 791 ಜನರು ದುಡಿಯುತ್ತಿದ್ದಾರೆ. ಚಿಂಚೋಳಿ ತಾಲೂಕಿನ 19 ಗ್ರಾಪಂಗಳ ವ್ಯಾಪ್ತಿಯಲ್ಲಿ 70 ಕಾಮಗಾರಿಗಳು ನಡೆಯುತ್ತಿದ್ದು, 191 ಮಂದಿ ಕೆಲಸ ಮಾಡುತ್ತಿದ್ದಾರೆ. ಚಿತ್ತಾಪುರ ತಾಲೂಕಿನ 30 ಗ್ರಾಪಂಗಳ ವ್ಯಾಪ್ತಿಯಲ್ಲಿ 205 ಕಾಮಗಾರಿಗಳು ನಡೆಯುತ್ತಿದ್ದು, 962 ಕೆಲಸ ಪಡೆದಿದ್ದಾರೆ.

Advertisement

ಜೇವರ್ಗಿ ತಾಲೂಕಿನ 36 ಗ್ರಾಪಂಗಳಲ್ಲಿ 114 ಕಾಮಗಾರಿಗಳು ಪ್ರಾರಂಭವಾಗಿದ್ದು, 680 ಕೂಲಿಕಾರರು ಕೆಲಸದಲ್ಲಿ ತೊಡಗಿಸಿಕೊಂಡಿದ್ದಾರೆ. ಕಲಬುರಗಿ ತಾಲೂಕಿನ 33 ಗ್ರಾಪಂಗಳ ವ್ಯಾಪ್ತಿಯಲ್ಲಿ 198 ಕಾಮಗಾರಿಗಳು ಪ್ರಗತಿಯಲ್ಲಿದ್ದು, 1,271 ಮಂದಿ ಕೂಲಿ ಪಡೆದುಕೊಂಡಿದ್ದಾರೆ. ಸೇಡಂ ತಾಲೂಕಿನ 23 ಗ್ರಾಪಂಗಳ ವ್ಯಾಪ್ತಿಯಲ್ಲಿ 128 ಕಾಮಗಾರಿ ಚಾಲ್ತಿಯಲ್ಲಿದ್ದು, 729 ಜನರು ಕೆಲಸ ಮಾಡುತ್ತಿದ್ದಾರೆ. ಒಟ್ಟಾರೆ ಜಿಲ್ಲಾದ್ಯಂತ ನರೇಗಾ ಯೋಜನೆಯಡಿ 4,870 ಜನರಿಗೆ ಕೆಲಸ ಕಲ್ಪಿಸಲಾಗಿದೆ.

ಕೆಲಸಕ್ಕೆ ಬರಲು ಹಿಂದೇಟು: ಜಿಲ್ಲೆಯಲ್ಲಿ ಕೊರೊನಾ ರಣಕೇಕೆ ಮುಂದುವರಿದಿದೆ. ಅದರಲ್ಲೂ ಗ್ರಾಮೀಣಕ್ಕೂ ಸೋಂಕು ಹಬ್ಬಿದ್ದು, ಜನರನ್ನು ಚಿಂತೆಗೀಡು ಮಾಡಿದೆ. ಆದ್ದರಿಂದ ಕೆಲವು ಗ್ರಾಪಂಗಳ ವ್ಯಾಪ್ತಿಯಲ್ಲಿ ಕೆಲಸಕ್ಕೆ ಬರಲು ಜನರು ಹಿಂದೇಟು ಹಾಕುತ್ತಿದ್ದಾರೆ ಎಂದು ಅಧಿಕಾರಿಯೊಬ್ಬರು ಹೇಳುತ್ತಾರೆ. ಕಾಮಗಾರಿ ಸ್ಥಳದಲ್ಲಿ ಪ್ರತಿ ದಿನ ಕಾರ್ಮಿಕರಿಗೆ ಕೋವಿಡ್ ಕುರಿತ ಪ್ರತಿಜ್ಞಾವಿಧಿ ಬೋಧಿಸಲಾಗುತ್ತದೆ. ಎಲ್ಲರಿಗೂ ಮಾರ್ಸ್‌, ಸ್ಯಾನಿಟೈಸರ್‌ ಹಾಗೂ ಸಾಬೂನು ಸೋಂಕು ಹರಡುವಿಕೆ ನಿಯಂತ್ರಿಸಲು ಕ್ರಮಗಳನ್ನು ತೆಗೆದುಕೊಳ್ಳಲಾಗುತ್ತಿದೆ ಎನ್ನುತ್ತಾರೆ ಜಿಲ್ಲಾ ನರೇಗಾ ಯೋಜನೆಯ ಐಇಸಿ ಸಂಯೋಜಕ ಸಿದ್ದರಾಮ ಕೆರೂರ.

3.76 ಲಕ್ಷ ಜನ ವಾಪಾಸ್‌:
ಗುಳೆ ಮತ್ತು ಉದ್ಯೋಗ ಅರಸಿ ಬೆಂಗಳೂರು, ದೆಹಲಿ, ಮಹಾರಾಷ್ಟ್ರ, ತೆಲಂಗಾಣ ಸೇರಿದಂತೆ ಅಂತಾರಾಜ್ಯ ಹಾಗೂ ಬೇರೆ ಜಿಲ್ಲೆಗಳಿಗೆ ತೆರಳಿದ್ದ ಸುಮಾರು 3.76 ಲಕ್ಷ ಜನರು ಲಾಕ್‌ಡೌನ್‌ ಹಿನ್ನೆಲೆಯಲ್ಲಿ ಜಿಲ್ಲೆಗೆ ಮರಳಿ ಆಗಮಿಸಿದ್ದರೆಂಬ ಮಾಹಿತಿಯನ್ನು ಜಿಲ್ಲಾಡಳಿತ ಕಲೆ ಹಾಕಿದೆ. ಇದರಲ್ಲಿ ಕೂಲಿ ಕಾರ್ಮಿಕರ ಸಂಖ್ಯೆಯೇ ಅಧಿಕ ಸಾಧ್ಯತೆ ಇದೆ.

ಸೋಂಕಿತ ಗ್ರಾಮಗಳಲ್ಲಿಲ್ಲ ನರೇಗಾ
ಕೋವಿಡ್ ಸೋಂಕು ಕಾಣಿಸಿಕೊಂಡಿರುವ ಗ್ರಾಮಗಳಲ್ಲಿ ಸದ್ಯಕ್ಕೆ ನರೇಗಾ ಅನುಷ್ಠಾನ ಮಾಡುತ್ತಿಲ್ಲ. ಕಲಬುರಗಿ ತಾಲೂಕಿನ ಕವಲಗಾ (ಬಿ), ಸರಡಗಿ (ಬಿ) ಮತ್ತು ಪಟ್ಟಣ ಗ್ರಾಮಗಳಲ್ಲಿ ಸೋಂಕಿತ ವ್ಯಕ್ತಿಗಳ “ಕರಿ ನೆರಳು’ ಇರುವುದರಿಂದ ಮುನ್ನೆಚ್ಚರಿಕೆ ಕ್ರಮವಾಗಿ ಅಲ್ಲಿ ಅನುಷ್ಠಾನ ಮಾಡುತ್ತಿಲ್ಲ. ಕೋವಿಡ್ ಸೋಂಕಿನ ಭೀತಿ ಕಡಿಮೆಯಾದ ನಂತರ ಯಥಾಪ್ರಕಾರ ಈ ಗ್ರಾಮಗಳಲ್ಲೂ ಆರಂಭಿಸಲಾಗುವುದು ಎಂದು ಅಧಿಕಾರಿಗಳು ಹೇಳಿದ್ದಾರೆ.

ಮಹಾತ್ಮಾ ಗಾಂಧಿ ಉದ್ಯೋಗ ಖಾತ್ರಿ ಯೋಜನೆಯಡಿ ವೈಯಕ್ತಿಕ ಕಾಮಗಾರಿಗಳಿಗೆ ಒತ್ತು ಕೊಟ್ಟು ಉದ್ಯೋಗ ನೀಡಲು ಆರಂಭಿಸಲಾಗಿದೆ. ಯಾರು ಕೆಲಸಬೇಕೆಂದು ಮುಂದೆ ಬರುತ್ತಾರೋ ಅವರಿಗೆ ಉದ್ಯೋಗ ಕಲ್ಪಿಸಲಾಗುವುದು. ಸದ್ಯ ಯಾವುದೇ ಟಾರ್ಗೆಟ್‌ ಇಲ್ಲದೇ ಕಾಮಗಾರಿ ಆರಂಭಿಸಲಾಗಿದೆ. ಪ್ರಸ್ತಕ ವರ್ಷ 60 ಲಕ್ಷ ಮಾನವ ದಿನಗಳ ಸೃಜನ ಗುರಿ ಇದೆ.
ಡಾ.ರಾಜಾ ಪಿ.,
ಸಿಇಒ, ಜಿಪಂ

ರಂಗಪ್ಪ ಗಧಾರ

Advertisement

Udayavani is now on Telegram. Click here to join our channel and stay updated with the latest news.

Next