Advertisement

19ಗಂಟೆಗೆ ಒಬ್ಬರಲ್ಲಿ ಕಾಣಿಸುತ್ತಿದೆ ಕೋವಿಡ್

11:48 AM Apr 29, 2020 | Naveen |

ಕಲಬುರಗಿ: ಕೋವಿಡ್ ಸೋಂಕು ನಿಯಂತ್ರಿಸುವಲ್ಲಿ ರಾಜ್ಯ ಸರ್ಕಾರ ವಿಫಲವಾಗಿದೆ ಎಂದು ವಿರೋಧ ಪಕ್ಷದ ಮುಖ್ಯ ಸಚೇತಕ, ಶಾಸಕ ಡಾ| ಅಜಯ್‌ ಸಿಂಗ್‌ ಮತ್ತು ಶಾಸಕ ಪ್ರಿಯಾಂಕ್‌ ಖರ್ಗೆ ವಾಗ್ಧಾಳಿ ನಡೆಸಿದ್ದಾರೆ.

Advertisement

ಕಾಂಗ್ರೆಸ್‌ ಕಚೇರಿಯಲ್ಲಿ ಮಂಗಳವಾರ ಸುದ್ದಿಗೋಷ್ಠಿಯಲ್ಲಿ ಜಂಟಿಯಾಗಿ ಮಾತನಾಡಿದ ಅವರು, ವೈದ್ಯರಿಗೆ ಪಿಪಿಇ ಕಿಟ್‌, ಮಾಸ್ಕ್ಸ ಸರಿಯಾಗಿ ಸಿಗುತ್ತಿಲ್ಲ. ಕ್ವಾರಂಟೈನ್‌ನಲ್ಲಿರುವವರಿಗೆ ಸೌಲಭ್ಯ ನೀಡುತ್ತಿಲ್ಲ. ಕುಡಿಯಲು ನೀರಿಲ್ಲ. ಶೌಚಾಲಯ ವ್ಯವಸ್ಥೆಯೂ ಇಲ್ಲ ಎಂದು ಅಸಮಾಧಾನ ವ್ಯಕ್ತಪಡಿಸಿದರು.

ಜಿಲ್ಲೆಯಲ್ಲಿ ಪ್ರತಿ 19 ಗಂಟೆಗೆ ಒಬ್ಬರಲ್ಲಿ ಕೋವಿಡ್ ಸೋಂಕು ಕಾಣಿಸಿಕೊಳ್ಳುತ್ತಿದೆ. ರಾಜ್ಯದಲ್ಲಿ ಸೋಂಕಿನಿಂದ ಮೃತಪಟ್ಟವರ ಪೈಕಿ ಹೆಚ್ಚಿನವರು ಕಲಬುರಗಿ ಜಿಲ್ಲೆಯವರು. ಆದರೂ, ಜಿಮ್ಸ್‌ ಲ್ಯಾಬ್‌ ಸಮರ್ಪಕವಾಗಿ ಕಾರ್ಯ ನಿರ್ವಹಿಸುತ್ತಿಲ್ಲ ಎಂದು ಟೀಕಿಸಿದರು. ಪ್ರತಿ ಜಿಲ್ಲೆಗೆ ಲ್ಯಾಬ್‌ ತೆಗೆಯುವುದಾಗಿ ಸರ್ಕಾರ ಹೇಳಿತ್ತು. ಆದರೆ, ಇಲ್ಲಿಯ ವರೆಗೆ ಎಲ್ಲ ಜಿಲ್ಲೆಗಳಲ್ಲಿ ಲ್ಯಾಬ್‌ ತೆರೆಯುವ ಕೆಲಸ ಮಾಡಿಲ್ಲ. ಹೀಗಾಗಿ ಕಲ್ಯಾಣ ಕರ್ನಾಟಕದ ಆರು ಜಿಲ್ಲೆಗಳು ಮತ್ತು ಪಕ್ಕದ ವಿಜಯಪುರದ ಮಾದರಿಗಳನ್ನು ಕಲಬುರಗಿಯ ಒಂದೇ ಲ್ಯಾಬ್‌ನಲ್ಲಿ ಪರೀಕ್ಷಿಸುವ ಪರಿಸ್ಥಿತಿ ಇದೆ. ಅದರಲ್ಲೂ ಲ್ಯಾಬ್‌ ಸಾಮರ್ಥ್ಯ ಕಡಿಮೆ ಇರುವುದರಿಂದ ಬೆಂಗಳೂರಿಗೆ ಮಾದರಿ ರವಾನಿಸಲಾಗುತ್ತಿದೆ. ವರದಿ ಬರುವ ವರೆಗೆ ಶಂಕಿತರು ಎಲ್ಲಿ ಇರುತ್ತಾರೆ? ಎಷ್ಟು ಜನರ ಸಂಪರ್ಕಕ್ಕೆ ಬಂದಿರುತ್ತಾರೆ ಎನ್ನುವ ಮಾಹಿತಿಯೂ ಸಿಗುತ್ತಿಲ್ಲ ಎಂದು ಆತಂಕ ವ್ಯಕ್ತಪಡಿಸಿದರು.

ಕೋವಿಡ್ ಮಹಾಮಾರಿ ಯುದ್ಧ ಗೆಲ್ಲಬೇಕು ಎಂದರೆ ರಕ್ಷಕರಿಗೆ ಶ್ರೀರಕ್ಷೆ ದೊರಕಬೇಕು. ಐಸಿಎಂಆರ್‌ ಮಾರ್ಗಸೂಚಿ ಪ್ರಕಾರ ಪಿಪಿಇ ಕಿಟ್‌ ಇಲ್ಲ ಎಂದು ಸ್ವತಃ ವೈದ್ಯರೇ ಹೇಳುತ್ತಿದ್ದಾರೆ. ಕಳಪೆ ಪಿಪಿಇ ಕಿಟ್‌ ನೀಡಿದ್ದಾರೆ ಎಂದು ಪ್ರಾದೇಶಿಕ ಆಯುಕ್ತರಿಗೆ ವೈದ್ಯರು ಲಿಖೀತವಾಗಿ ಬರೆದುಕೊಟ್ಟಿದ್ದಾರೆ. ಕೊರೊನಾ ವಾರ್ಡ್‌ ಲ್ಲಿ ಸ್ಯಾನಿಟೈಸರ್‌ ಸಹ ನೀಡಿಲ್ಲ. ವೈದ್ಯ ಸಿಬ್ಬಂದಿ ದೂರು ನೀಡಿದರೂ ಅದನ್ನು ಸರಿಪಡಿಸುವ ಕೆಲಸವನ್ನು ಸರ್ಕಾರ ಮಾಡುತ್ತಿಲ್ಲ ಎಂದು ಕಿಡಿಕಾರಿದರು. ಚಿಕಿತ್ಸೆ ಸಿಗದೇ ಸತ್ತವರೆಷ್ಟು?: ಪ್ರತಿ ಜಿಲ್ಲೆಯಲ್ಲಿ ಒಂದು ಕೋವಿಡ್ ಆಸ್ಪತ್ರೆ ಇರಬೇಕೆಂದು ಸರ್ಕಾರ ಹೇಳಿದೆ. ಆದರೆ, ಜಿಲ್ಲೆಯಲ್ಲಿ ಇಎಸ್‌ಐ ಮತ್ತು ಜಿಮ್ಸ್‌ ಆಸ್ಪತ್ರೆ ಸೇರಿದಂತೆ ಎರಡನ್ನು ಕೋವಿಡ್ ಆಸ್ಪತ್ರೆ ಮಾಡಲಾಗಿದೆ. ಇದರಿಂದ ವೈದ್ಯರು, ಸಾರ್ವಜನಿಕರು ಸಮಸ್ಯೆ ಎದುರಿಸುವಂತೆ ಆಗಿದೆ ಎಂದು ಶಾಸಕರು ಹೇಳಿದರು.

ವೈದ್ಯರು ಜಿಮ್ಸ್‌, ಇಎಸ್‌ಐ ಆಸ್ಪತ್ರೆಗೆಂದು ಅಲೆದಾಡಬೇಕಾಗಿದ ಅನಿವಾರ್ಯತೆ ಸೃಷ್ಟಿಯಾಗಿದೆ. ಸಾಮಾನ್ಯ ಜನರು ಇತರ ಕಾಯಿಲೆಗಳಿಗೆ ಚಿಕಿತ್ಸೆ ಪಡೆಯಲು ತೊಂದರೆ ಅನುಭವಿಸುತ್ತಿದ್ದಾರೆ. ಲಾಕ್‌ ಡೌನ್‌ನಲ್ಲಿ ಕೊರೊನಾ ಹೊರತಾಗಿ ಇತರ ರೋಗಿಗಳು ಸತ್ತವರೆಷ್ಟು ಎಂದು ಕೇಳಿದರೂ ಡಿಎಚ್‌ಒಗೆ ಮಾಹಿತಿ ಕೊಟ್ಟಿಲ್ಲ. ಇಎಸ್‌ಐ ಆಸ್ಪತ್ರೆ ಮಾತ್ರ ಕೊರೊನಾಗೆ ಬಳಕೆ ಮಾಡಬೇಕು. ಜಿಮ್ಸ್‌ ಆಸ್ಪತ್ರೆಯಲ್ಲಿ ಸಾಮಾನ್ಯ ರೋಗಿಗಳಿಗೆ ಮೀಸಲಿಡಬೇಕೆಂದು ಸಲಹೆ ನೀಡಿದರು.

Advertisement

ರಾಜ್ಯಸಭಾ ಮಾಜಿ ಸದಸ್ಯ ಕೆ.ಬಿ. ಶರಣಪ್ಪ, ಶಾಸಕ ಎಂ.ವೈ. ಪಾಟೀಲ, ವಿಧಾನ ಪರಿಷತ್‌ ಸದಸ್ಯ ತಿಪ್ಪಣ್ಣಪ್ಪ ಕಮಕನೂರ, ಅಲ್ಲಮಪ್ರಭು ಪಾಟೀಲ, ಜಗದೇವ ಗುತ್ತೇದಾರ, ನೀಲಕಂಠ ಮೂಲಗೆ ಹಾಜರಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next