ಕಲಬುರಗಿ: ರಾಜ್ಯಾದ್ಯಂತ ಲಾಕ್‌ಡೌನ್ ಸಡಿಲಿಕೆ ಮಾಡಿ, ಹಲವು ವ್ಯಾಪಾರ ವಹಿವಾಟುಗಳಿಗೆ ಅನುಮತಿ ನೀಡಲಾಗಿದ್ದರೂ ಜಿಲ್ಲೆಯಲ್ಲಿ ಮೇ 31ರವರೆಗೆ ಲಾಕ್ ಓಪನ್ ಆಗುವುದಿಲ್ಲ!.
ಲಾಕ್‌ಡೌನ್ ಸಡಿಲಿಕೆ ಕುರಿತಂತೆ ನಗರದ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಜಿಲ್ಲಾಧಿಕಾರಿ ಶರತ್ ಬಿ. ನೇತೃತ್ವದಲ್ಲಿ ವರ್ತಕರ ಸಭೆ ನಡೆಯಿತು. ದೇಶ ಮತ್ತು ರಾಜ್ಯದಲ್ಲಿ ಹಲವು ರೀತಿ ಸಡಿಲಿಕೆಗಳನ್ನು ಮಾಡಲಾಗಿದೆ. ಜಿಲ್ಲೆಯಲ್ಲೂ ಬಟ್ಟೆ, ಚಪ್ಪಲಿ ಮಳಿಗೆ, ಹೋಟೆಲ್ ತೆರೆಯುವುದು ಸೇರಿದಂತೆ ಆರ್ಥಿಕ ಚಟುವಟಿಕೆಗಳಿಗೆ ಅವಕಾಶ ಕಲ್ಪಿಸಬೇಕೆಂದು ವರ್ತಕರು ಮನವಿ ಮಾಡಿದರು. ಆದರೆ, ಸದ್ಯಕ್ಕೆ ಅದು ಆಗುವುದಿಲ್ಲ. ಮೇ 31ರವರೆಗೆ ಲಾಕ್ ಡೌನ್ ಮುಂದುವರೆಯಲಿದೆ ಎಂದು ಜಿಲ್ಲಾಧಿಕಾರಿ ಶರತ್ ಬಿ. ಸ್ಪಷ್ಟವಾಗಿ ಹೇಳಿದರು.
ಈಗ ಅವಕಾಶ ಕೊಟ್ಟಲ್ಲಿ ವರ್ತಕರು ಸಾಮಾಜಿಕ ಅಂತರ ಪಾಲನೆ ಮಾಡುವುದಿಲ್ಲ. ನಿತ್ಯವೂ ಕೋವಿಡ್ ಪ್ರಕರಣಗಳು ಪತ್ತೆಯಾಗುತ್ತಿವೆ. ಮಹಾರಾಷ್ಟ್ರ ಹಾಗೂ ಹೊರ ರಾಜ್ಯಗಳ ವಲಸಿಗರು ಜಿಲ್ಲೆಗೆ ಬರುತ್ತಿದ್ದಾರೆ. ಕಂಟೇನ್ಮೆಂಟ್ ಝೋನ್‌ಗಳಲ್ಲಿ ರ್‍ಯಾಂಡಮ್ ಟೆಸ್ಟಿಂಗ್ ನಡೆಸಲಾಗುತ್ತಿದೆ. ಆದ್ದರಿಂದ ವರ್ತರು ಸಹಕರಿಸಬೇಕೆಂದು ಕೋರಿದರು. ಇದರಿಂದ ನಿರಾಸೆಗೊಂಡ ವರ್ತಕರು ಒಲ್ಲದ ಮನಸ್ಸಿನಿಂದಲೇ ಒಪ್ಪಿದರು. ಈಗಾಗಲೇ ತುಂಬಾ ಸಹಕಾರ ನೀಡಿದ್ದೇವೆ. ಸುಮಾರು 60 ದಿನಗಳಿಂದ ವ್ಯಾಪಾರ-ವಹಿವಾಟು ಸ್ಥಗಿತಗೊಂಡಿದೆ. ಸಾಕಷ್ಟು ಆರ್ಥಿಕ ಸಂಕಷ್ಟ ಎದುರಿಸುವಂತೆ ಆಗಿದೆ. 31ರ ನಂತರವೂ ಲಾಕ್ ಡೌನ್ ಎಂದರೆ ನಾವು ಬದುಕುವುದೇ ಕಷ್ಟ ಎಂದು ವರ್ತಕರು ತಮ್ಮ ಸಂಕಟ ಹೊರ ಹಾಕಿದರು.
ಸಭೆಯಲ್ಲಿ ಮಹಾನಗರ ಪಾಲಿಕೆ ಆಯುಕ್ತ ರಾಹುಲ್ ಪಾಂಡ್ವೆ, ಎಸ್‌ಪಿ ಯಡಾ ಮಾರ್ಟಿನ್ ಮಾರ್ಬನ್ಯಾಂಗ್, ಡಿಸಿಪಿ ಕಿಶೋರ್ ಬಾಬು, ಎಚ್‌ಕೆಸಿಸಿಐ ಅಧ್ಯಕ್ಷ ಅಮರನಾಥ ಪಾಟೀಲ, ಹೋಟೆಲ್ ಮಾಲೀಕರ ಸಂಘದ ಅಧ್ಯಕ್ಷ ನರಸಿಂಹ ಮೆಂಡನ್, ಚಂದ್ರಶೇಖರ್ ತಳ್ಳಳ್ಳಿ, ವಿಕ್ರಂ ನಾಗೇಶ ಸೇರಿದಂತೆ 37 ಅಸೋಸಿಯೇಷನ್‌ಗಳ ಪ್ರತಿನಿಧಿಗಳು ಪಾಲ್ಗೊಂಡಿದ್ದರು.
ಸರ್ಕಾರವೇ ಬಸ್, ರೈಲು ಸಂಚಾರ ಆರಂಭಿಸಿದೆ. ಈಗಾಗಲೇ ವರ್ತಕರು ಸಾಕಷ್ಟು ತೊಂದರೆಗೆ ಸಿಲುಕಿದ್ದು, 35ರಿಂದ 45 ಸಾವಿರ ಕಾರ್ಮಿಕರಿಗೆ ಏಪ್ರಿಲ್-ಮೇ ತಿಂಗಳ ಸಂಬಳ ಪಾವತಿಸಬೇಕಿದೆ. ಆದರೂ, ಜಿಲ್ಲಾಡಳಿತ ವಾಣಿಜ್ಯ ವ್ಯಾಪಾರ ವಹಿವಾಟಿಗೆ ಅವಕಾಶ ನೀಡದೇ ಇರುವುದು ನಿಜಕ್ಕೂ ಬೇಸರ ತರಿಸಿದೆ.
ಅಮರನಾಥ ಪಾಟೀಲ,
ಅಧ್ಯಕ್ಷ, ಎಚ್‌ಕೆಸಿಸಿಐ
ಜಿಲ್ಲಾಡಳಿತ ಹೋಟೆಲ್‌ನಲ್ಲಿ ಪಾರ್ಸೆಲ್‌ಗೆ ಅವಕಾಶ ನೀಡುವುದಾಗಿ ಹೇಳುತ್ತದೆ. ಆದರೆ, ಈ ಹಿಂದೆ ಪಾರ್ಸೆಲ್ ವ್ಯವಸ್ಥೆಯಿಂದ ನಷ್ಟ ಅನುಭವಿಸಿದ್ದೇವೆ. ಹೀಗಾಗಿ ಹೋಟೆಲ್‌ನಲ್ಲಿ ಸರ್ವೀಸ್‌ಗೆ ಅವಕಾಶ ಮಾಡಿಕೊಡಬೇಕು. ಅಲ್ಲಿವರೆಗೂ ಹೋಟೆಲ್ ಆರಂಭಿಸದಿರುವ ನಿರ್ಧಾರಕ್ಕೆ ಬರಲಾಗಿದೆ.
ನರಸಿಂಹ ಮೆಂಡನ್,
ಅಧ್ಯಕ್ಷ, ಹೋಟೆಲ್ ಮಾಲೀಕರ ಸಂಘ