Advertisement

ಜಾತಿ ಕತ್ತರಿ; ಧರ್ಮ ಸೂಜಿ’

10:02 AM Aug 30, 2019 | Naveen |

ಕಲಬುರಗಿ: ಸಮಾಜವನ್ನು ಧರ್ಮ ಸೂಜಿಯಂತೆ ಜೋಡಿಸುವ ಕೆಲಸ ಮಾಡುತ್ತದೆ. ಜಾತಿ ಸಮಾಜವನ್ನು ಕತ್ತರಿಸುತ್ತಾ ಹೋಗುತ್ತದೆ. ಆದ್ದರಿಂದ ಧರ್ಮವನ್ನು ಪ್ರೀತಿಸಿ ಸಮಾಜವನ್ನು ಸೂಜಿಯಂತೆ ಜೋಡಿಸುವ ಕೆಲಸ ಮಾಡಬೇಕಾಗಿದೆ. ಇದಕ್ಕಾಗಿ ನಾವೆಲ್ಲರೂ ಮಾನವ ಧರ್ಮವನ್ನು ಪಾಲಿಸಬೇಕೆಂದು ಸಾಣೇಹಳ್ಳಿಯ ಶ್ರೀಮಠದ ಡಾ| ಪಂಡಿತಾರಾಧ್ಯ ಶಿವಾಚಾರ್ಯ ಸ್ವಾಮಿಗಳು ಹೇಳಿದರು.

Advertisement

ನಗರದ ಎಸ್‌.ಎಂ. ಪಂಡಿತ ರಂಗ ಮಂದಿರದಲ್ಲಿ ಗುರುವಾರ ‘ಮತ್ತೆ ಕಲ್ಯಾಣ’ ಅಭಿಯಾನದ ಅಂಗವಾಗಿ ‘ಸಹಮತ ವೇದಿಕೆ’ ವತಿಯಿಂದ ವಿದ್ಯಾರ್ಥಿಗಳೊಂದಿಗೆ ಸಂವಾದ ಕಾರ್ಯಕ್ರಮ ನಡೆಯಿತು. ಡಾ| ಪಂಡಿತಾರಾಧ್ಯ ಶಿವಾಚಾರ್ಯ ಸ್ವಾಮಿಗಳು, ವಿಚಾರವಾದಿ ಪ್ರೊ| ಆರ್‌.ಕೆ.ಹುಡುಗಿ, ಮನೋತಜ್ಞ ಡಾ| ಆರ್‌.ವೆಂಕಟರೆಡ್ಡಿ, ಚಿಂತಕ ವಿಶ್ವರಾಧ್ಯ ಸತ್ಯಂಪೇಟೆ ಅವರು ಸಂವಾದ ನಡೆಸಿದರು.

ವಿದ್ಯಾರ್ಥಿಗಳ ಪ್ರಶ್ನೆಗಳಿಗೆ ಉತ್ತರಿಸಿದ ಸ್ವಾಮಿಗಳು, ಬಸವಾದಿ ಶರಣ ಪ್ರಕಾರ ದೇವರೆಂದರೆ ಮನುಷ್ಯ. ಅರಿವು, ಆಚಾರ ಯಾರಿಗೆ ಇರುತ್ತದೋ ಅವರೆಲ್ಲರೂ ದೇವರೇ. ಹೀಗಾಗಿ ಶರಣರು ಕಟ್ಟಿದ್ದು ಮಠ, ಮಂದಿರಗಳನ್ನಲ್ಲ. ಮನುಷ್ಯರ ಮನಸು ಹಾಗೂ ಹೃದಯಗಳನ್ನು ಕಟ್ಟಿದರು. ಭಕ್ತರ ಮನೆಗಳೆಲ್ಲವೂ ಮಠಗಳೆಂದು ಶರಣರು ಹೇಳಿದ್ದಾರೆ. ನಮ್ಮೆಲ್ಲ ಮಠಗಳು ಮನೆಗಳಾದರೆ ಮಠಗಳೇ ಇರುವುದಿಲ್ಲ ಎಂದರು.

ಕಲ್ಲು, ಮಣ್ಣು, ಕಟ್ಟಿಗೆಗಳೆಲ್ಲ ದೇವರಲ್ಲ. ಮಾಟ-ಮಂತ್ರಗಳು ನಡೆಯುವುದು ತಪ್ಪು ಕಲ್ಪನೆ. ಶರಣರ ದೃಷ್ಟಿಯಲ್ಲಿ ದಾನದ ಕಲ್ಪನೆಯೂ ಇಲ್ಲ. ಬರೀ ದಾಸೋಹದ ಪರಿಕಲ್ಪನೆ ಇದೆ. ಶರಣರು ಹೇಳಿದಂತೆ ಮನುಷ್ಯನ ಅಂತರಂಗ ಮತ್ತು ಬಹಿರಂಗವಾಗಿ ಶುದ್ಧವಾಗಿರಬೇಕು ಎಂದು ಹೇಳಿದರು.

ಬಸವ ಸಮಿತಿ ಅಧ್ಯಕ್ಷೆ ವಿಲಾಸವತಿ ಖೂಬಾ, ಶರಣು ಪಪ್ಪ, ಸುನಿಲ್ ಹುಡಗಿ, ರವೀಂದ್ರ ಶಾಬಾದಿ, ಪ್ರೊ| ಕುಪೇಂದ್ರ ಪಾಟೀಲ, ಆರ್‌.ಜಿ. ಶೆಟಗಾರ, ವಿಜಯಕುಮಾರ ತೇಗಲತಿಪ್ಪಿ, ಮಾಲತಿ ರೇಷ್ಮಿ, ಮಾರುತಿ ಗೋಖಲೆ, ರೇಣುಕಾ ಡಾಂಗೆ, ಪ್ರಭುಲಿಂಗ ಮಹಾಗಾಂವಕರ್‌, ಶಿವರಂಜನ್‌ ಸತ್ಯಂಪೇಟೆ, ಮಲ್ಲಿಕಾರ್ಜುನ, ವೀರಭದ್ರ, ಸಂಗೀತಾ ಸೇರಿದಂತೆ ವಿವಿಧ ಕಾಲೇಜಿನ ವಿದ್ಯಾರ್ಥಿಗಳು ಪಾಲ್ಗೊಂಡಿದ್ದರು.

Advertisement

ನಂತರ ಸಾಯಂಕಾಲ ಸರ್ವ ಧರ್ಮಿಯರೊಂದಿಗೆ ‘ಸಾಮರಸ್ಯ ನಡಿಗೆ’ ನಡೆಯಿತು. ನೂರಾರು ಜನ ಬಸವ ತತ್ವ ಅನುಯಾಯಿಗಳು ಭಾಗವಹಿಸಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next