Advertisement

ಕಲಬುರಗಿ ಅಭಿವೃದ್ಧಿಯೇ ಗುರಿ

10:04 AM Jun 03, 2019 | Naveen |

ಕಲಬುರಗಿ: ನಾನು ಕೇಂದ್ರ ಸಚಿವ ಸ್ಥಾನದ ಪ್ರಬಲ ಆಕಾಂಕ್ಷಿಯಾಗಿರಲಿಲ್ಲ. ಮುಂದಿನ ದಿನಗಳಲ್ಲಿ ಸಚಿವ ಸ್ಥಾನ ನೀಡುವ ನಿರೀಕ್ಷೆ ಇದೆ ಎಂದು ಬಿಜೆಪಿ ಸಂಸದ ಡಾ| ಉಮೇಶ ಜಾಧವ ಹೇಳಿದರು.

Advertisement

ರವಿವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕ್ಷೇತ್ರ ಅಭಿವೃದ್ಧಿ ಪಡಿಸುವುದೇ ನನ್ನ ಗುರಿಯಾಗಿದೆ. ಸಚಿವ ಸ್ಥಾನ ಕೊಡಲಿ, ಕೊಡದೆ ಇರಲಿ. ನನಗೆ ವಹಿಸಿದ ಕೆಲಸವನ್ನು ಜವಾಬ್ದಾರಿಯಿಂದ ನಿಭಾಯಿಸುತ್ತೇನೆ ಎಂದರು.

ಕಾಂಗ್ರೆಸ್‌ ನಾಯಕ ಡಾ| ಮಲ್ಲಿಕಾರ್ಜುನ ಖರ್ಗೆ ಹಿರಿಯ ರಾಜಕಾರಣಿಯಾಗಿದ್ದು, ಅವರ ಸಲಹೆ ಪಡೆದು ಕ್ಷೇತ್ರದಲ್ಲಿ ಅಭಿವೃದ್ಧಿ ಕಾರ್ಯ ಮಾಡುತ್ತೇನೆ. ಖರ್ಗೆ ಕಾಲದಲ್ಲಿ ಅಪೂರ್ಣಗೊಂಡಿರುವ ಕಾರ್ಯಗಳನ್ನು ತ್ವರಿತವಾಗಿ ಮಾಡಲು ಶ್ರಮಿಸುತ್ತೇನೆ ಎಂದರು.

ವಿಮಾನಯಾನ ಮತ್ತು ರೈಲ್ವೆ ವಿಭಾಗೀಯ ಕೇಂದ್ರ ಆರಂಭಕ್ಕಾಗಿ ಕೇಂದ್ರ ಸಚಿವರ ಬೆನ್ನತ್ತಿ ಕೆಲಸ ಮಾಡಿಸಿಕೊಳ್ಳುವುದು ನನ್ನ ಮೊದಲ ಆದ್ಯತೆ. ಹೀಗಾಗಿ ರೈಲ್ವೆ ರಾಜ್ಯ ಖಾತೆ ಸಚಿವ ಸುರೇಶ ಅಂಗಡಿ, ನಾಗರಿಕ ವಿಮಾನಯಾನ ಸಚಿವ ಹರ್ದೀಪ್‌ ಸಿಂಗ್‌ ಪುರಿ ಅವರು ಅಧಿಕಾರ ಸ್ವೀಕರಿಸಿದ ತಕ್ಷಣವೇ ಭೇಟಿಯಾಗಿ ಮನವಿ ಸಲ್ಲಿಸಿದ್ದೇನೆ ಎಂದರು.

ಕ್ಷೇತ್ರದಲ್ಲಿ ಉದ್ಯೋಗ ಸೃಷ್ಟಿಗೆ ಆದ್ಯತೆ ನೀಡುತ್ತೇನೆ. ಜತೆಗೆ 371ನೇ (ಜೆ) ಕಲಂ ಪರಿಣಾಮಕಾರಿ ಅನುಷ್ಠಾನ ಹಾಗೂ ಅದರಡಿ ಸಿಗಬೇಕಾದ ಸೌಲಭ್ಯಗಳನ್ನು ಸಾರ್ವಜನಿಕರು ಪಡೆಯುವಂತಾಗಬೇಕು. ಕೇಂದ್ರದಿಂದ ಜಿಲ್ಲೆಗೆ ಬರಬೇಕಾದ ಅನುದಾನ ತರುವುದು ಮತ್ತು ಕೊಟ್ಟ ಭರವಸೆಗಳ ಈಡೇರಿಕೆಗಾಗಿ ಶ್ರಮಿಸುತ್ತೇನೆ ಎಂದು ಹೇಳಿದರು.

Advertisement

ಜಿಲ್ಲೆಯಲ್ಲಿ ಭೀಕರ ಬರಗಾಲ ಇದ್ದು, ಜಿಲ್ಲಾ ಉಸ್ತುವಾರಿ ಸಚಿವರು, ಜಿಲ್ಲಾಧಿಕಾರಿಗಳು ಮತ್ತು ಜಿಪಂ ಸಿಇಒ ಜತೆಗೆ ಸಮಾಲೋಚನೆ ನಡೆಸುತ್ತೇನೆ. ಕುಡಿಯುವ ನೀರು ಸೇರಿದಂತೆ ಜನರಿಗೆ ಯಾವುದೇ ರೀತಿಯಿಂದ ಸಮಸ್ಯೆ ಉಂಟಾಗದಂತೆ ನೋಡಿಕೊಳ್ಳುವುದು ನಮ್ಮ ಹೊಣೆಯಾಗಿದೆ. ಎಲ್ಲರನ್ನು ವಿಶ್ವಾಸಕ್ಕೆ ತೆಗೆದುಕೊಂಡು ನನ್ನ ಶಕ್ತಿ ಮೀರಿ ಕೆಲಸ ಮಾಡುತ್ತೇನೆ. ಮಹಾರಾಷ್ಟ್ರದ ಉಜನಿ ಜಲಾಶಯದಿಂದ ಭೀಮಾ ನದಿಗೆ ನೀರು ಬಿಡುಗಡೆ ಮಾಡುವ ಸಂಬಂಧ ಕಾನೂನಿನ ಪ್ರಕಾರ ನಡೆದುಕೊಳ್ಳಲಾಗುವುದು ಎಂದರು.

ಹಾರ-ತುರಾಯಿ ಬೇಡ: ಬರಗಾಲ ಹಿನ್ನೆಲೆಯಲ್ಲಿ ಜಿಲ್ಲೆಯಲ್ಲಿ ಬಿಜೆಪಿಯಿಂದ ಯಾವುದೇ ವಿಜಯೋತ್ಸವ ಆಚರಿಸುವುದಿಲ್ಲ. ಅಭಿಮಾನಿಗಳು ಹಾಗೂ ಕಾರ್ಯಕರ್ತರಿಗೂ ಹಾರ-ತುರಾಯಿ ಕೊಡುವುದು ಬೇಡ ಎಂದು ಮನವಿ ಮಾಡಿದ್ದೇನೆ ಎಂದು ಹೇಳಿದರು.

ಪ್ರಿಯಾಂಕ್‌ ಹೇಳಿಕೆ ಶೋಭೆ ತರುವಂತದಲ್ಲ
ಅಮಿತ್‌ ಶಾ ಅವರಿಗೆ ಕೇಂದ್ರ ಗೃಹ ಖಾತೆ ನೀಡಿರು ವುದರಿಂದ ಇನ್ನು ಮುಂದೆ ಕೇಂದ್ರ ಗೃಹ ಇಲಾಖೆಗೆ ‘ಕ್ಲೀನ್‌ಚಿಟ್’ ಇಲಾಖೆ ಎಂದು ಹೆಸರಿಸಬೇಕೆಂದು ಜಿಲ್ಲಾ ಉಸ್ತುವಾರಿ ಸಚಿವ ಪ್ರಿಯಾಂಕ್‌ ಖರ್ಗೆ ಟ್ವೀಟ್ ಮಾಡಿರುವುದು ಸೂಕ್ತವಲ್ಲ. ಪ್ರಧಾನಿ ಮೋದಿ ಮತ್ತು ಅಮಿತ್‌ ಶಾ ಕುರಿತು ಈ ರೀತಿಯಾಗಿ ಹಗುರವಾಗಿ ಹೇಳಿಕೆ ನೀಡುವುದು ಶೋಭೆ ತರುವಂತದ್ದಲ್ಲ.
ಡಾ| ಉಮೇಶ ಜಾಧವ, ಸಂಸದ
Advertisement

Udayavani is now on Telegram. Click here to join our channel and stay updated with the latest news.

Next