ಕಲಬುರಗಿ: ಸಂಸದರಾಗಿ ಚುನಾಯಿತರಾದ ನಂತರ ನವದೆಹಲಿಗೆ ಹೋಗಿ ಕೇಂದ್ರ ಸಂಪುಟ ಅಸ್ತಿತ್ವ ಸಮಾರಂಭದಲ್ಲಿ ಪಾಲ್ಗೊಂಡು ಶನಿವಾರ ಜಿಲ್ಲೆಗೆ ಆಗಮಿಸಿ ಕಾಳಗಿ ತಾಲೂಕಿನ ಮಂಗಲಗಿ ಗ್ರಾಮದಲ್ಲಿ ಸಿಡಿಲು ಬಡಿದು ಮೂವರು ಮೃತಪಟ್ಟ ಕುಟುಂಬಕ್ಕೆ ಸಾಂತ್ವನ ಹೇಳುವ ಮುಖಾಂತರ ಅಧಿಕೃತ ಜನಸೇವೆ ಕಾರ್ಯ ಆರಂಭಿಸಿರುವ ನೂತನ ಸಂಸದ ಡಾ| ಉಮೇಶ ಜಾಧವ ರವಿವಾರ ಸಂಜೆ ಇಲ್ಲಿನ ಕಾರ್ಮಿಕರ ವಿಮಾ ಆಸ್ಪತ್ರೆ (ಇಎಸ್‌ಐ)ಗೆ ದಿಢೀರ್ ಭೇಟಿ ನೀಡಿದರು.
ಆಸ್ಪತ್ರೆಯ ಎಲ್ಲ ವಾರ್ಡ್‌ಗಳಿಗೆ ತೆರಳಿ ರೋಗಿಗಳ ವಿಚಾರಣೆ ನಡೆಸಿ ವೈದ್ಯಕೀಯ ಸೇವೆಗಳನ್ನು ಕೂಲಕುಂಶವಾಗಿ ಅವಲೋಕಿಸಿದ ಡಾ| ಜಾಧವ, ವೈದ್ಯಕೀಯ ಸೇವೆ ಲೋಪವಾಗದಂತೆ ಮುತುವರ್ಜಿ ವಹಿಸಬೇಕು. ಆಸ್ಪತ್ರೆಗೆ ಬರುವ ರೋಗಿಗಳಿಗೆ ಹಾಗೂ ಸಾರ್ವಜನಿಕರಿಗೆ ಸೂಕ್ತ ಮಾಹಿತಿ ನೀಡಬೇಕೆಂದು ವೈದ್ಯರಿಗೆ ಸೂಚಿಸಿದರು.
ಜನರಿಗೆ ಅದರಲ್ಲೂ ಕಾರ್ಮಿಕ ವರ್ಗದವರಿಗೆ ಅತ್ಯುತ್ತಮ ವೈದ್ಯಕೀಯ ಸೇವೆ ದೊರಕಲೆಂದು ಆಸ್ಪತ್ರೆ ಸ್ಥಾಪಿತವಾಗಿದೆ. ಹೀಗಾಗಿ ಸೇವೆ ಗುಣಮಟ್ಟ ದಿನೇ-ದಿನೇ ಹೆಚ್ಚಳವಾಗಬೇಕು. ವೈದ್ಯಕೀಯ ಸೇವೆ ಸುಧಾರಣೆ ನಿಟ್ಟಿನಲ್ಲಿ ಕೈಗೊಳ್ಳಬೇಕಾದ ಕಾರ್ಯಗಳ ಕುರಿತಾಗಿ ಪಟ್ಟಿ ನೀಡುವಂತೆ ಆಸ್ಪತ್ರೆಯ ವೈದ್ಯಕೀಯ ಉಪ ಅಧೀಕ್ಷಕ ದೀನಾನಾಥ, ಡಾ| ಮಂಜುನಾಥ ಕೆ. ಅವರಿಗೆ ನಿರ್ದೇಶನ ನೀಡಿದರಲ್ಲದೇ ಇನ್ನೂ ಕೆಲವು ದಿನಗಳ ನಂತರ ಮತ್ತೂಮ್ಮೆ ಭೇಟಿ ನೀಡುವುದಾಗಿ ತಿಳಿಸಿದರು.
ಎಲ್ಲ ವಿಭಾಗಗಳ ಬಹುತೇಕ ರೋಗಿಗಳನ್ನು ಖುದ್ದಾಗಿ ಆರೋಗ್ಯ ವಿಚಾರಿಸಿ ಉತ್ತಮ ವೈದ್ಯಕೀಯ ಸೇವೆ ಕುರಿತಾಗಿ ಸಮಾಲೋಚಿಸಿದರು. ನೀರಿನ ಸಮಸ್ಯೆ ನಿವಾರಣೆ ಹಾಗೂ ವಿದ್ಯುತ್ ಸಮಸ್ಯೆ ಎದುರಾಗದಂತೆ ಹೆಚ್ಚಿನ ಮುತುವರ್ಜಿ ವಹಿಸಬೇಕೆಂದರಲ್ಲದೇ, ಹೆರಿಗೆ ಮತ್ತು ಪ್ರಸೂತಿ ವಿಭಾಗದಲ್ಲಿ ಉತ್ತಮ ಸೇವೆ ನೀಡುತ್ತಿರುವುದಕ್ಕೆ ಮೆಚ್ಚುಗೆ ವ್ಯಕ್ತಪಡಿಸಿದರು.
ಆಸ್ಪತ್ರೆ ಮುಖ್ಯಸ್ಥರು ಹಾಗೂ ವೈದ್ಯರೊಂದಿಗೆ ಸಭೆ ನಡೆಸಿದ ಸಂಸದರು, ಸಮಸ್ಯೆಗಳು ಹಾಗೂ ಪರಿಹಾರ ಕ್ರಮಗಳ ಕುರಿತು ಮಾಹಿತಿ ಪಡೆದುಕೊಂಡರು. ಶಾಸಕ ಡಾ| ಅವಿನಾಶ ಜಾಧವ, ಮಾಜಿ ಶಾಸಕ ವಿಶ್ವನಾಥ ಪಾಟೀಲ ಹೆಬ್ಟಾಳ, ಬಿಜೆಪಿ ಮುಖಂಡ ಲಿಂಗರಾಜ ಬಿರಾದಾರ ಮುಂತಾದವರಿದ್ದರು.