ಹೊನ್ನಾಳಿ: ಪ್ರಧಾನ ಮಂತ್ರಿ ನರೇಂದ್ರ ಮೋದಿ ದೇಶಕ್ಕೆ ಕೊಟ್ಟ ಉತ್ತಮ ಆಡಳಿತ, ಬಿಜೆಪಿ ಮತ್ತೂಮ್ಮೆ ದೇಶದ ಆಡಳಿತದ ಚುಕ್ಕಾಣಿ ಹಿಡಿಯಲು ಕಾರಣವಾಗಿದೆ ಎಂದು ಶಾಸಕ ಎಂ.ಪಿ. ರೇಣುಕಾಚಾರ್ಯ ಹೇಳಿದರು.
ಗುರುವಾರ ಲೋಕಸಭಾ ಚುನಾವಣೆಯಲ್ಲಿ ಬಿಜೆಪಿ ಸ್ಪಷ್ಟ ಬಹುಮತದತ್ತ ದಾಪುಗಾಲು ಹಾಕುತ್ತಿದ್ದಂತೆ ಪಟ್ಟಣದ ಸಂಗೊಳ್ಳಿ ರಾಯಣ್ಣ ವೃತ್ತದಲ್ಲಿ ಬಿಜೆಪಿ ಕಾರ್ಯಕರ್ತರೊಂದಿಗೆ ವಿಜಯೋತ್ಸವ ಆಚರಿಸಿ ಅವರು ಮಾತನಾಡಿದರು.
ಲೋಕಸಭಾ ಚುನಾವಣೆ ಸಂದರ್ಭದಲ್ಲಿಯೇ ನಮ್ಮ ನಾಯಕರಾದ ಮಾಜಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ, ಮತ್ತೂಮ್ಮೆ ನರೇಂದ್ರ ಮೋದಿ ಪ್ರಧಾನಿಯಾಗುವುದು ಗ್ಯಾರಂಟಿ ಹಾಗೂ ರಾಜ್ಯದಲ್ಲಿ ಬಿಜೆಪಿಗೆ 22ಕ್ಕೂ ಹೆಚ್ಚು ಸ್ಥಾನಗಳು ಬರುತ್ತವೆ ಎಂದು ಘಂಟಾಘೋಷವಾಗಿ ಹೇಳಿದ್ದರು. ಅವರ ಹೇಳಿಕೆ ಇಂದು ನಿಜವಾಗಿದೆ. ರಾಜ್ಯದಲ್ಲೂ ಬಿಜೆಪಿ ಅಧಿಕಾರಕ್ಕೆ ಬರಲಿದ್ದು, ಮತ್ತೂಮ್ಮೆ ಬಿ.ಎಸ್.ಯಡಿಯೂರಪ್ಪ ಮುಖ್ಯಮಂತ್ರಿಯಾಗುವುದೂ ಅಷ್ಟೇ ಸತ್ಯ ಎಂದು ಹೇಳಿದರು.
ರಾಹುಲ್ ಗಾಂಧಿ, ಸೋನಿಯಾ ಗಾಂಧಿ ಮೊದಲಾದ ಕಾಂಗ್ರೆಸ್ ನಾಯಕರುಗಳಿಂದ ಆ ಪಕ್ಷ ನೆಲ ಕಚ್ಚಿದೆ. ಈ ಮುಖಂಡರು ಇನ್ನಾದರೂ ಮೋದಿ ವಿರುದ್ಧ ಟೀಕೆ ಮಾಡುವುದನ್ನು ನಿಲ್ಲಿಸಿ ದೇಶದ ಅಭಿವೃದ್ಧಿಗೆ ಬಿಜೆಪಿಯೊಂದಿಗೆ ಕೈ ಜೋಡಿಸಲಿ. ರಾಜ್ಯದಲ್ಲಿ ಕಾಂಗ್ರೆಸ್ ನಾಯಕರಾದ ಸಿದ್ದರಾಮಯ್ಯ, ಎಂ.ಬಿ. ಪಾಟೀಲ್ ಮೊದಲಾದವರು ನಾಮುಂದು, ತಾಮುಂದು ಎಂದು ಮುಖ್ಯಮಂತ್ರಿಯಾಗುವ ಹಗಲುಗನಸು ಕಾಣುತ್ತಿದ್ದರು. ಈಗ ಅವರೆಲ್ಲರ ಕನಸು ನುಚ್ಚುನೂರಾಗಿದೆ ಎಂದು ಕಟುಕಿದರು.
ಕಳೆದ 5 ವರ್ಷ ದಿನದ 18 ಗಂಟೆ ಕೆಲಸ ಮಾಡಿದ ಪ್ರಧಾನಿ ಮೋದಿಯವರನ್ನು ಏಕವಚನದಲ್ಲಿ ನಿಂದಿಸಿದ ವಿಪಕ್ಷಗಳಿಗೆ ಮತದಾರ ಮಂಗಳಾರತಿ ಮಾಡಿದ್ದಾನೆ. ಇನ್ನಾದರೂ ಟೀಕಿಸುವಾಗ ಎಚ್ಚರದಿಂದ ಮಾತನಾಡುವುದನ್ನು ವಿಪಕ್ಷಗಳ ನಾಯಕರು ಕಲಿಯಬೇಕಿದೆ. ಮಹಾಗಟಬಂಧನ್ ಹೆಸರಲ್ಲಿ ನಾವು ಒಂದಾಗಿ ಹೋದರೆ ಜನ ನಂಬುತ್ತಾರೆ ಎಂದು ವಿಪಕ್ಷಗಳ ನಾಯಕರು ಒಂದು ದೊಡ್ಡ ನಾಟಕವನ್ನೇ ಮಾಡಿದರು. ಆದರೆ ಸಂದರ್ಭಕ್ಕನುಸಾರವಾಗಿ ಒಂದಾಗಿ, ಆಮೇಲೆ ಕಿತ್ತಾಡುವ ನಾಯಕರಿಗೆ ಮತದಾರ ತಕ್ಕ ಪಾಠ ಕಲಿಸಿದ್ದಾನೆ ಎಂದು ವ್ಯಂಗ್ಯವಾಡಿದರು.
ಸಮ್ಮಿಶ್ರ ಸರ್ಕಾರದ ನೇತೃತ್ವ ವಹಿಸಿರುವ ಮುಖ್ಯಮಂತ್ರಿ ಎಚ್.ಡಿ. ಕುಮಾರಸ್ವಾಮಿ ನೈತಿಕ ಹೊಣೆ ಹೊತ್ತು ತಕ್ಷಣ ರಾಜೀನಾಮೆ ನೀಡಬೇಕು. ತಪ್ಪಿದಲ್ಲಿ ಜನರೇ ಮನೆಗೆ ಕಳಿಸುತ್ತಾರೆ ಎಂದು ಹೇಳಿದರು.
ಸುಭದ್ರ ಆಡಳಿತ ನೀಡುವ ಮತ್ತು ಉತ್ತಮ ನಾಯಕತ್ವದ ಗುಣ ಇರುವ ವ್ಯಕ್ತಿಯನ್ನು ಜನ ಪ್ರಧಾನಿಯಾಗಿ ಬಯಸಿದ್ದರು. ಮತದಾರರ ಆಶಯದಂತೆ ವಿಶ್ವಮಾನ್ಯತೆ ಪಡೆದ ನರೇಂದ್ರ ಮೋದಿ ಮತ್ತೂಮ್ಮೆ ಪ್ರಧಾನಿಯಾಗುತ್ತಿರುವುದು ನಮ್ಮ ಹೆಮ್ಮೆ ಎಂದು ಬಣ್ಣಿಸಿದರು.
ಪ.ಪಂ ಸದಸ್ಯ ಬಾಬು ಓಬಳುದಾರ, ಮುಖಂಡರಾದ ಮಹೇಶ್ ಹುಡೇದ್, ಸತೀಶ್, ಪಕ್ಷದ ಪದಾಧಿಕಾರಿಗಳು ಹಾಗೂ ಕಾರ್ಯಕರ್ತರು ಇದ್ದರು.