Advertisement

ಬಿಜೆಪಿ ಪಡೆಗೆ ಡಬ್ಬಲ್ ಧ‌ಮಾಕ

10:06 AM May 24, 2019 | Team Udayavani |

ಕಲಬುರಗಿ: ತೀವ್ರ ಕುತೂಹಲ ಮೂಡಿಸಿದ ಲೋಕಸಭಾ ಚುನಾವಣೆ ಮತ್ತು ಚಿಂಚೋಳಿ ವಿಧಾನಸಭಾ ಕ್ಷೇತ್ರದ ಚುನಾವಣೆಗೆ ತೆರೆ ಬಿದ್ದಿದೆ. ಬುಧವಾರ ಚುನಾವಣಾ ಫಲಿತಾಂಶ ಹೊರ ಬೀಳುತ್ತಿದ್ದಂತೆ ಜಿಲ್ಲಾದ್ಯಂತ ಬಿಜೆಪಿಯಲ್ಲಿ ಸಂಭ್ರಮ ಮುಗಿಲು ಮುಟ್ಟಿದ್ದರೆ, ಕಾಂಗ್ರೆಸ್‌ನಲ್ಲಿ ಮೌನ ಆವರಿಸಿದೆ.

Advertisement

ಕಾಂಗ್ರೆಸ್‌ನ ಹಿರಿಯ ನಾಯಕ ಮಲ್ಲಿಕಾರ್ಜುನ ಖರ್ಗೆ ಅವರನ್ನು ಬಿಜೆಪಿ ಅಭ್ಯರ್ಥಿ ಡಾ| ಉಮೇಶ ಜಾಧವ್‌ ಮಣಿಸುವ ಮೂಲಕ ಗೆಲುವಿನ ಕೇಕೆ ಹಾಕಿದ್ದಾರೆ. ಚಿಂಚೋಳಿ ವಿಧಾನಸಭಾ ಕ್ಷೇತ್ರದಲ್ಲಿ ಕಾಂಗ್ರೆಸ್‌ನ ಸುಭಾಷ ರಾಠೊಡ ವಿರುದ್ಧ ಉಮೇಶ ಜಾಧವ ಪುತ್ರರಾದ ಬಿಜೆಪಿ ಅಭ್ಯರ್ಥಿ ಅವಿನಾಶ ಜಾಧವ್‌ ಜಯಭೇರಿ ಬಾರಿಸಿದ್ದಾರೆ. ಒಂದೇ ದಿನ ಬಿಜೆಪಿ ಡಬ್ಬಲ್ ಗೆಲುವು ಸಾಧಿಸಿದ್ದರಿಂದ ಇಡೀ ಬಿಜೆಪಿಯಲ್ಲಿ ಹೊಸ ಹಬ್ಬದ ವಾತಾವರಣ ನಿರ್ಮಾಣವಾಗಿದೆ.

ಬುಧವಾರ ಮತ ಎಣಿಕೆ ಕಾರ್ಯ ನಡೆಯುತ್ತಿದ್ದ ನಗರದ ಗುಲಬರ್ಗಾ ವಿಶ್ವವಿದ್ಯಾಲಯದ ಮುಂದೆ ಬೆಳಿಗ್ಗೆ ಬಿಜೆಪಿ ಮತ್ತು ಕಾಂಗ್ರೆಸ್‌ನ ಉಭಯ ಪಕ್ಷಗಳ ಕಾರ್ಯಕರ್ತರು ನೆರೆದಿದ್ದರು. ಬಿಜೆಪಿ ಅಭ್ಯರ್ಥಿ ಉಮೇಶ ಜಾಧವ್‌, ಅವಿನಾಶ ಜಾಧವ್‌ ಮುನ್ನಡೆ ಸಾಧಿಸುತ್ತಿದಂತೆ ಬಿಜೆಪಿ ಕಾರ್ಯಕರ್ತರು ಸಂಭ್ರಮಿಸ ತೊಡಗಿದರು.

ಉಮೇಶ ಜಾಧವ್‌, ಅವಿನಾಶ ಜಾಧವ್‌ ಗೆಲುವಿನತ್ತ ದಾಪುಗಾಲು ಹಾಕುತ್ತಿದಂತೆ ಕಾರ್ಯಕರ್ತರು, ಮುಖಂಡರಲ್ಲಿ ಸಂಭ್ರಮ ಮತ್ತಷ್ಟು ಹಿಮ್ಮಡಿಗೊಂಡಿತ್ತು. ಜತೆಗೆ ಬಿಜೆಪಿ ಕಾರ್ಯಕರ್ತರ ಸಂಖ್ಯೆಯಲ್ಲಿ ಹೆಚ್ಚಾಗ ತೊಡಗಿತು. ಚಿಂಚೋಳಿ ಮಾತ್ರವಲ್ಲದೇ ಖರ್ಗೆ ಸೋಲನ್ನು ಊಹಿಸಿದ ಕಾಂಗ್ರೆಸ್‌ ಕಾರ್ಯಕರ್ತರು ತೀವ್ರ ನಿರಾಶೆ ಅನುಭವಿಸಿದರು.

ಮೊಳಗಿದ ಜಯ ಘೋಷ: ಕಾಂಗ್ರೆಸ್‌ ಭದ್ರಕೋಟೆಯಲ್ಲಿ ಬಿಜೆಪಿ ಜಯಭೇರಿ ಬಾರಿಸುತ್ತಿದ್ದಂತೆ ಪ್ರಧಾನಿ ಮೋದಿ, ಉಮೇಶ ಜಾಧವ್‌ ಪರ ಬಿಜೆಪಿ ಕಾರ್ಯಕರ್ತರು ಜಯ ಘೋಷ ಮೊಳಗಿಸಿದರು. ಪಟಾಕಿ ಸಿಡಿಸಿ, ಬಣ್ಣ ಬಳಿದುಕೊಂಡು ಕಾರ್ಯಕರ್ತರು ಕುಣಿದು ಕುಪ್ಪಳಿಸಿದರು. ಪರಸ್ಪರ ಸಿಹಿ ಹಂಚಿಕೊಂಡು ಶಿಳ್ಳೆ, ಕೇಕೆ ಹಾಕಿ ಬಿಜೆಪಿ ಕಾರ್ಯಕರ್ತರು ಸಂಭ್ರಮಿಸಿದರು.

Advertisement

ಕಾಂಗ್ರೆಸ್‌ನಲ್ಲಿ ಮೌನ: ಸೋಲಿಲ್ಲದ ಸರದಾರ ಎಂದೇ ಖ್ಯಾತಿ ಗಳಿಸಿದ ಮಲ್ಲಿಕಾರ್ಜುನ ಖರ್ಗೆ ಮೊದಲ ಬಾರಿಗೆ ಸೋಲು ಕಂಡಿದ್ದರಿಂದ ಕಾಂಗ್ರೆಸ್‌ನಲ್ಲಿ ಮೌನ ಮನೆ ಮಾಡಿದೆ. ಚುನಾವಣಾ ಫಲಿತಾಂಶದ ನಿಖರವಾಗುತ್ತಿದ್ದಂತೆ ಕಾಂಗ್ರೆಸ್‌ ಕಚೇರಿಯಲ್ಲಿ ನೂರಾರು ಕಾರ್ಯಕರ್ತರು, ಮುಖಂಡರು ಸೇರಿದ್ದರು.

ಬೆಳಿಗ್ಗೆಯಿಂದ ಮನೆಯಲ್ಲಿದ್ದ ಮಲ್ಲಿಕಾರ್ಜುನ ಖರ್ಗೆ ಕೂಡ ಕಾಂಗ್ರೆಸ್‌ ಕಚೇರಿಗೆ ಬಂದರು. ಪ್ರಜಾಪ್ರಭುತ್ವದಲ್ಲಿ ಸೋಲು ಗೆಲುವು ಸಹಜ. ನನ್ನ ಸೋಲಿನ ಬಗ್ಗೆ ಕಾರ್ಯಕರ್ತರು ದೃತಿಗೇಡುವುದು ಬೇಡ. ಮುಂದೆ ಕೂಡ ಹೋರಾಟ ಮಾಡಿ ಪಕ್ಷವನ್ನು ಗಟ್ಟಿಗೊಳಿಸೋಣ ಎಂದು ಕರೆ ಕೊಟ್ಟರು. ಹಿರಿಯ ಮುಖಂಡರಾದ ಕೆ.ಬಿ. ಶಾಣಪ್ಪ, ಮಾರುತಿರಾವ ಮಾಲೆ, ಮಾಜಿ ಸಚಿವ ಡಾ| ಶರಣ ಪ್ರಕಾಶ ಪಾಟೀಲ, ಸಚಿವ ಪ್ರಿಯಾಂಕ್‌ ಖರ್ಗೆ ಸೇರಿದಂತೆ ಹಲವರು ಇದ್ದರು.

Advertisement

Udayavani is now on Telegram. Click here to join our channel and stay updated with the latest news.

Next