Advertisement

ಪುತ್ರನನ್ನು ಗೆಲ್ಲಿಸುವಲ್ಲಿ ಖರ್ಗೆ-ಧರ್ಮಸಿಂಗ್‌ ಹಿಂದಿಕ್ಕಿದ ಜಾಧವ್‌

09:39 AM May 24, 2019 | Team Udayavani |

ಕಲಬುರಗಿ: ಕಾಂಗ್ರೆಸ್‌ ಪಕ್ಷದ ಹಿರಿಯ ನಾಯಕ ಮಲ್ಲಿಕಾರ್ಜುನ ಖರ್ಗೆ ಹಾಗೂ ಮಾಜಿ ಮುಖ್ಯಮಂತ್ರಿ ಎನ್‌. ಧರ್ಮಸಿಂಗ್‌ ತಮ್ಮ ಪುತ್ರನನ್ನು ಪ್ರಥಮ ಸಲ ಸ್ಪರ್ಧಿಸಿದ್ದ ವಿಧಾನಸಭಾ ಕ್ಷೇತ್ರದ ಉಪಚುನಾವಣೆಯಲ್ಲಿ ಗೆಲ್ಲಿಸಿಕೊಂಡು ಬರುವಲ್ಲಿ ವಿಫ‌ಲರಾಗಿದ್ದರು.

Advertisement

ಆದರೆ ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡಿ ಅದನ್ನು ಮಗನಿಗೆ ಬಿಟ್ಟುಕೊಟ್ಟಿದ್ದಲ್ಲದೇ ಮಗನನ್ನು ಗೆಲ್ಲಿಸುವುದರ ಮುಖಾಂತರ ಡಾ| ಉಮೇಶ ಜಾಧವ್‌ ಒಂದು ಕೈ ಮೇಲುಗೈ ಸಾಧಿಸಿದ್ದಾರೆ.

2008ರ ಸಾರ್ವತ್ರಿಕ ವಿಧಾನಸಭಾ ಚುನಾವಣೆಯಲ್ಲಿ ಮಲ್ಲಿಕಾರ್ಜುನ ಖರ್ಗೆ ಚಿತ್ತಾಪುರ ಮೀಸಲು ಕ್ಷೇತ್ರದಲ್ಲಿ ಜಯ ಸಾಧಿಸಿದ್ದರು. ಮುಂದೆ 2009ರಲ್ಲಿ ಲೋಕಸಭಾ ಚುನಾವಣೆಗೆ ಕಲಬುರಗಿ ಮೀಸಲು ಲೋಕಸಭಾ ಕ್ಷೇತ್ರದಲ್ಲಿ ಸ್ಪರ್ಧಿಸಿ ಸಂಸದರಾಗಿ ಚುನಾಯಿತರಾದರು. ತದನಂತರ ಚಿತ್ತಾಪುರ ಕ್ಷೇತ್ರದ ಶಾಸಕತ್ವ ಸ್ಥಾನಕ್ಕೆ ರಾಜೀನಾಮೆ ನೀಡಿದರು. ತದನಂತರ ನಡೆದ ಚಿತ್ತಾಪುರ ಕ್ಷೇತ್ರದ ಉಪಚುನಾವಣೆಯಲ್ಲಿ ಪ್ರಿಯಾಂಕ್‌ ಖರ್ಗೆ ಕಾಂಗ್ರೆಸ್‌ ಅಭ್ಯರ್ಥಿಯಾಗಿ ಸ್ಪರ್ಧಿಸಿದರು. ಆಗ ಬಿಜೆಪಿಯ ವಾಲ್ಮೀಕಿ ನಾಯಕ ಎದುರು ಪ್ರಿಯಾಂಕ್‌ ಖರ್ಗೆ ಸೋಲು ಅನುಭವಿಸಿದರು.

ಅದೇ ರೀತಿ 2010ರಲ್ಲಿ ನಡೆದ ಕಲಬುರಗಿ ದಕ್ಷಿಣ ವಿಧಾನಸಭಾ ಕ್ಷೇತ್ರಕ್ಕೆ ನಡೆದ ಉಪಚುನಾವಣೆಯಲ್ಲಿ ಕಾಂಗ್ರೆಸ್‌ನ ಅಭ್ಯರ್ಥಿಯಾಗಿ ಡಾ| ಅಜಯಸಿಂಗ್‌ ಸ್ಪರ್ಧಿಸಿ ಜೆಡಿಎಸ್‌ನ ಅರುಣಾ ಪಾಟೀಲ್ ರೇವೂರ ಎದುರು ಪರಾಭವಗೊಂಡರು. ಹೀಗೆ ಪ್ರಿಯಾಂಕ್‌ ಖರ್ಗೆ ಹಾಗೂ ಡಾ| ಅಜಯಸಿಂಗ್‌ ವಿಧಾನಸಭೆ ಪ್ರವೇಶಾತಿಯ ಅದರಲ್ಲೂ ಉಪಚುನಾವಣೆಯಲ್ಲಿ ಸ್ಪರ್ಧಿಸಿ ಪರಾಭವಗೊಂಡರು. ಮುಂದೆ 2013ರಲ್ಲಿ ನಡೆದ ಸಾರ್ವತ್ರಿಕ ವಿಧಾನಸಭಾ ಚುನಾವಣೆಯಲ್ಲಿ ಏಕಕಾಲಕ್ಕೆ ಇಬ್ಬರೂ ಚುನಾಯಿತರಾಗಿ ವಿಧಾನಸಭೆ ಪ್ರವೇಶಿಸಿದರು.

ಈಗ ಚಿಂಚೋಳಿ ಉಪಚುನಾವಣೆಯಲ್ಲಿ ಡಾ| ಅವಿನಾಶ ಜಾಧವ್‌ ಗೆಲ್ಲುವ ಮುಖಾಂತರ‰ ಡಾ| ಅಜಯಸಿಂಗ್‌ ಹಾಗೂ ಸಚಿವ ಪ್ರಿಯಾಂಕ್‌ ಖರ್ಗೆ ಅವರನ್ನು ಹಿಂದಿಕ್ಕಿದಂತಾಗಿದೆ. ಮೊದಲ ಸಲ ಸ್ಪರ್ಧಿಸಿದ್ದ ಉಪಚುನಾವಣೆಯಲ್ಲೇ ಅಮೋಘ ಗೆಲುವು ಸಾಧಿಸಿದ್ದಾರೆ.

Advertisement

ಲೋಕಸಭಾ ಚುನಾವಣೆಯಲ್ಲಿ ಸ್ಪರ್ಧಿಸಲು ಡಾ| ಉಮೇಶ ಜಾಧವ್‌ ತಾವು ಗೆದ್ದ ಚಿಂಚೋಳಿ ಕ್ಷೇತ್ರದ ಶಾಸಕತ್ವ ಸ್ಥಾನಕ್ಕೆ ರಾಜೀನಾಮೆ ನೀಡಿ ತೆರವಾದ ಚಿಂಚೋಳಿ ಕ್ಷೇತ್ರಕ್ಕೆ ತಮ್ಮ ಮಗನಾದ ಡಾ| ಅವಿನಾಶ ಜಾಧವ್‌ಗೆ ಸ್ಪರ್ಧಿಸಲು ಅವಕಾಶ ಕೊಟ್ಟು ಅಗ್ನಿ ಪರೀಕ್ಷೆಗೆ ಮುಂದಾಗಿದ್ದರು. ಈಗ ಅಗ್ನಿ ಪರೀಕ್ಷೆಯಲ್ಲಿ ಗೆಲುವು ಸಾಧಿಸಿ ಮಕ್ಕಳ ರಾಜಕೀಯದಲ್ಲಿ ಖರ್ಗೆ-ಧರ್ಮಸಿಂಗ್‌ ಅವರಿಗಿಂತ ಡಾ| ಉಮೇಶ ಜಾಧವ್‌ ಒಂದು ಮೇಲುಕೈ ಸಾಧಿಸಿದಂತಾಗಿದೆ.ಮಹಾನ್‌ ನಾಯಕರ ಪುತ್ರರೇ ಪ್ರಥಮ ಯತ್ನದ ವಿಧಾನಸಭಾ ಉಪಚುನಾವಣೆಯಲ್ಲಿಯೇ ಸೋತಿರುವಾಗ ಇನ್ನೂ ಡಾ| ಉಮೇಶ ಜಾಧವ್‌ ಪುತ್ರ ಗೆದ್ದಿರುವುದು ಒಂದು ದಾಖಲೆಯೇ ಸರಿ. ಒಟ್ಟಾರೆ ಚಿಂಚೋಳಿ ಉಪಚುನಾವಣೆ ಹಲವು ದೃಷ್ಟಿಗಳಿಂದ ಮಹತ್ವ ಪಡೆದುಕೊಂಡಿತು.

ಬಿಜೆಪಿ ಸರ್ಕಾರ ರಚನೆಗೆ ನಾಂದಿಯಾಗುವುದೇ?
ಚಿಂಚೋಳಿಯಲ್ಲಿ ಗೆದ್ದ ಪಕ್ಷವೇ ರಾಜ್ಯದ ಆಡಳಿತ ಚುಕ್ಕಾಣಿ ಹಿಡಿಯುತ್ತದೆ ಎಂಬುದಾಗಿ ಇತಿಹಾಸ ನಿರೂಪಿಸುತ್ತದೆ. ಈಗ ಚಿಂಚೋಳಿ ವಿಧಾನಸಭಾ ಕ್ಷೇತ್ರದ ಉಪಚುನಾವಣೆಯಲ್ಲಿ ಬಿಜೆಪಿ ಗೆದ್ದಿರುವುದರಿಂದ ರಾಜ್ಯದಲ್ಲಿ ಬಿಜೆಪಿ ಸರ್ಕಾರ ರಚನೆಗೆ ನಾಂದಿಯಾಗುವುದೇ? ಎಂಬುದರ ಕುರಿತು ಸ್ವಾರಸ್ಯಕರ ಚರ್ಚೆ ನಡೆದಿದೆ. ಕ್ಷೇತ್ರದ ಮಾಜಿ ಶಾಸಕ, ಕಲಬುರಗಿ ನೂತನ ಸಂಸದ ಡಾ| ಉಮೇಶ ಜಾಧವ್‌, ಬಿ.ಎಸ್‌.ಯಡಿಯೂರಪ್ಪ ಮುಖ್ಯಮಂತ್ರಿಯಾಗಲೆಂದೇ ಚಿಂಚೋಳಿ ಕ್ಷೇತ್ರಕ್ಕೆ ಉಪಚುನಾವಣೆ ಎದುರಾಗಿದೆ ಎಂದಿದ್ದಾರಲ್ಲದೇ ಎಂಟು ದಿನದಲ್ಲಿ ರಾಜ್ಯದಲ್ಲಿ ಬಿಜೆಪಿ ಸರ್ಕಾರ ರಚನೆಯಾಗಿ ಬಿ.ಎಸ್‌.ಯಡಿಯೂಪ್ಪ ಮುಖ್ಯಮಂತ್ರಿಯಾಗುತ್ತಾರೆ ಎಂದು ಗುರುವಾರ ಸಂಸದರಾಗಿ ಗೆದ್ದ ನಂತರ ಹೇಳಿದ್ದಾರೆ. ಒಟ್ಟಾರೆ ಮುಂದಿನ ರಾಜಕೀಯ ಬೆಳವಣಿಗೆಗಳು ಚಿಂಚೋಳಿ ಕ್ಷೇತ್ರದ ಇತಿಹಾಸ ಸಾಬೀತುಪಡಿಸುತ್ತದೆಯೋ ಇಲ್ಲವೇ ಸುಳ್ಳು ಮಾಡುತ್ತದೆ ಎಂಬುದು ಕಾದು ನೋಡಬೇಕಿದೆ.

ರಾಜಕೀಯವಾಗಿ ಚರ್ಚೆ
2009ರಲ್ಲಿ ತಾವು ಪ್ರತಿನಿಧಿಸುತ್ತಿದ್ದ ಚಿತ್ತಾಪುರ ಕ್ಷೇತ್ರಕ್ಕೆ ಮಲ್ಲಿಕಾರ್ಜುನ ಖರ್ಗೆ ತಮ್ಮ ಮಗನನ್ನು ತಂದು ಉಪಚುನಾವಣೆಗೆ ನಿಲ್ಲಿಸಿದ್ದರೆ 2010ರಲ್ಲಿ ಜೇವರ್ಗಿ ವಿಧಾನಸಭಾ ಕ್ಷೇತ್ರದಲ್ಲಿ ಪರಾಭವಗೊಂಡು ಮುಂದೆ ಬೀದರ ಕ್ಷೇತ್ರದಿಂದ ಸಂಸದರಾಗಿದ್ದ ವೇಳೆಯಲ್ಲಿ ಪುತ್ರ ಡಾ| ಅಜಯಸಿಂಗ್‌ರನ್ನು ಕಲಬುರಗಿ ದಕ್ಷಿಣ ಮತಕ್ಷೇತ್ರದ ಉಪಚುನಾವಣೆಯಲ್ಲಿ ಕಣಕ್ಕಿಳಿಸಿದ್ದರು. ಇಬ್ಬರೂ ಪರಾಭವಗೊಂಡರು. ಹಿರಿಯ ನಾಯಕರು ತಮ್ಮ ಮಕ್ಕಳಿಗೆ ವಿಧಾನಸಭೆ ಪ್ರವೇಶದ ಪ್ರಥಮ ಯತ್ನದ ಚುನಾವಣೆಯಲ್ಲಿಯೇ ಸೋಲು ಎದುರು ನೋಡುವಂತಾಯಿತು. ಆದರೆ ಚಿಂಚೋಳಿಯಲ್ಲಿ ಡಾ| ಉಮೇಶ ಜಾಧವ್‌ ತಮ್ಮ ಉತ್ತರಾಧಿಕಾರಿಯಾಗಿ ಪುತ್ರ ಡಾ| ಅವಿನಾಶಗೆ ಸ್ಪರ್ಧಿಸಲು ಅವಕಾಶ ಕಲ್ಪಿಸಿ ಗೆಲ್ಲಿಸಿರುವುದು ರಾಜಕೀಯದಲ್ಲಿ ಬಹಳ ಅರ್ಥಪೂರ್ಣವಾಗಿ ವಿವರಿಸಲಾಗುತ್ತಿದೆ.

ಹಣಮಂತರಾವ ಭೈರಾಮಡಗಿ

Advertisement

Udayavani is now on Telegram. Click here to join our channel and stay updated with the latest news.

Next