Advertisement

ಶಿಂಧೆಗೆ ಸನ್ಯಾಸಿ ಸವಾಲ್‌

10:07 AM Apr 10, 2019 | Naveen |

ಕಲಬುರಗಿ: ಕೇಂದ್ರದ ಮಾಜಿ ಸಚಿವ ಮತ್ತು ಮಹಾರಾಷ್ಟ್ರ ಮಾಜಿ ಮುಖ್ಯಮಂತ್ರಿ, ಸಂವಿಧಾನ ಶಿಲ್ಪಿ ಡಾ|ಬಿ.ಆರ್‌.ಅಂಬೇಡ್ಕರ ಮೊಮ್ಮಗ ಮತ್ತು ವೀರಶೈವ ಸಮುದಾಯದ ಸನ್ಯಾಸಿಯೊಬ್ಬರ
ಸ್ಪರ್ಧೆಯಿಂದ ನೆರೆಯ ಮಹಾರಾಷ್ಟ್ರದ ಸೊಲ್ಲಾಪುರ ಮೀಸಲು ಲೋಕಸಭೆ ಕ್ಷೇತ್ರ ಹೈವೊಲ್ಟೇಜ್‌ ಕ್ಷೇತ್ರವಾಗಿ ಮಾರ್ಪಟ್ಟಿದೆ.

Advertisement

ಮಹಾರಾಷ್ಟ್ರದ ಮಾಜಿ ಮುಖ್ಯಮಂತ್ರಿ, ಕೇಂದ್ರದ ಮಾಜಿ ಸಚಿವ ಸುಶೀಲಕುಮಾರ ಶಿಂಧೆ, ಅಂಬೇಡ್ಕರ ಮೊಮ್ಮಗ ಡಾ| ಪ್ರಕಾಶ ಅಂಬೇಡ್ಕರ್‌, ಅಕ್ಕಲಕೋಟ ತಾಲೂಕಿನ ಗೌಡಗಾಂವ ಮಠದ ಡಾ|
ಜಯಸಿದ್ಧೇಶ್ವರ ಸ್ವಾಮೀಜಿ ಸೊಲ್ಲಾಪುರ ಕ್ಷೇತ್ರದಲ್ಲಿ ಅಭ್ಯರ್ಥಿಗಳಾಗಿದ್ದರಿಂದ ರಾಜ್ಯವಲ್ಲದೇ ದೇಶದ ಗಮನ ಸೆಳೆಯುತ್ತಿದೆ. ಏ.18ರಂದು ನಡೆಯುವ ಮತದಾನಕ್ಕೆ ದಿನಗಣನೆ ಆರಂಭವಾಗಿದ್ದು, ತಂತ್ರ-ಪ್ರತಿತಂತ್ರಗಳು ಜೋರಾಗಿ ನಡೆಯುತ್ತಿವೆ.
ಚುನಾವಣೆ ಕಣದಲ್ಲಿ 13 ಅಭ್ಯರ್ಥಿಗಳಿದ್ದರೂ ಮೂವರ ನಡುವೆ ಪೈಪೋಟಿ ಏರ್ಪಟ್ಟಿದೆ. ಯಾರೇ ಗೆದ್ದರೂ ಗೆಲುವಿನ ಅಂತರ ಕಡಿಮೆ.

ಸೊಲ್ಲಾಪುರ ಲೋಕಸಭೆ ಕ್ಷೇತ್ರ ವ್ಯಾಪ್ತಿಯಲ್ಲಿ ಮೋಹೋಳ, ಉತ್ತರ ಸೊಲ್ಲಾಪುರ, ದಕ್ಷಿಣ ಸೊಲ್ಲಾಪುರ, ಅಕ್ಕಲಕೋಟ, ಸೊಲ್ಲಾಪುರ ಮಧ್ಯ ಹಾಗೂ ಪಂಢರಪುರ ಸೇರಿ ಆರು ವಿಧಾನಸಭೆ ಕ್ಷೇತ್ರಗಳು ಬರಲಿವೆ. ಮೂರರಲ್ಲಿ ಕಾಂಗ್ರೆಸ್‌, ಎರಡರಲ್ಲಿ ಬಿಜೆಪಿ ಹಾಗೂ ಒಂದು ಕ್ಷೇತ್ರದಲ್ಲಿ ಎನ್‌ಸಿಪಿ ಶಾಸಕರಿದ್ದಾರೆ. ಕಳೆದ ಸಲ ಹೊಸ
ಮುಖ ಶರದ್‌ ಬಸನೋಡೆ ಅವರು ಮೋದಿ ಗಾಳಿಯಲ್ಲಿ ನಿರೀಕ್ಷೆ ಮೀರಿ ಜಯ ಸಾಧಿಸಿದ್ದರು. ಆದರೆ ಈ ಸಲ ಕಾಂಗ್ರೆಸ್‌ ಹಾಗೂ ಬಿಜೆಪಿ ಹೇಗಾದರೂ ಮಾಡಿ ಸೊಲ್ಲಾಪುರ ಕ್ಷೇತ್ರ ತೆಕ್ಕೆಗೆ ತೆಗೆದುಕೊಳ್ಳಬೇಕೆಂದು ದೃಢ ಸಂಕಲ್ಪ ಮಾಡಿವೆ. ಇದಕ್ಕೆ ಕಳೆದ ಮೂರು ತಿಂಗಳಿನಿಂದ ನಡೆಯುತ್ತಿರುವ ಚುನಾವಣೆ ಸಿದ್ಧತೆಗಳು ಹಾಗೂ ತಂತ್ರಗಾರಿಕೆಗಳೇ ಸಾಕ್ಷಿಯಾಗಿವೆ.

ಕಾಂಗ್ರೆಸ್‌ನ ಸುಶೀಲಕುಮಾರ ಶಿಂಧೆ ಇದೇ ತಮ್ಮ ಕೊನೆ ಚುನಾವಣೆ ಎನ್ನುತ್ತಿದ್ದಾರೆ. ಕಳೆದ ಆರು ತಿಂಗಳಿನಿಂದಲೂ ಚುನಾವಣೆ ಕಾರ್ಯದಲ್ಲಿ ತೊಡಗಿಸಿಕೊಂಡಿದ್ದರೆ, ಬಿಜೆಪಿಯ ಡಾ|
ಜಯಸಿದ್ಧೇಶ್ವರ ಮಹಾಸ್ವಾಮೀಜಿ ಅವರಿಗೆ ಎರಡು ವಾರಗಳ ಹಿಂದೆ ಟಿಕೆಟ್‌ ಘೋಷಿಸಲಾಗಿದ್ದರೂ ಮೂರುವರೆ ತಿಂಗಳಿನಿಂದಲೂ ಚುನಾವಣೆಗೆ ತೆರೆಮರೆಯಲ್ಲಿ ತೊಡಗಿಸಿಕೊಳ್ಳುತ್ತ ಬಂದಿದ್ದಾರೆ. ಈಗಂತೂ ಪ್ರತಿ ಹಳ್ಳಿ-ಹಳ್ಳಿಗೆ ಸಂಚರಿಸುತ್ತಾ ಮತಗಳಿಗಾಗಿ ಜೋಳಿಗೆ ಹಿಡಿದಿದ್ದಾರೆ. ಮುಖ್ಯವಾಗಿ ಮಹಾರಾಷ್ಟ್ರದಲ್ಲಿ ಅಸಾದುದ್ದೀನ್‌ ಓವೈಸಿಯ ಎಂಐಎಂ ಹಾಗೂ ಡಾ| ಪ್ರಕಾಶ ಅಂಬೇಡ್ಕರ್‌ ಅವರ ಬಹುಜನ ಮಹಾಸಂಘ ಮೈತ್ರಿ
ಮಾಡಿಕೊಂಡಿದ್ದು, ಸ್ವತಃ ಪ್ರಕಾಶ ಅಂಬೇಡ್ಕರ್‌ ಅವರೇ ಅಭ್ಯರ್ಥಿಯಾಗಿ ಕಣದಲ್ಲಿರುವುದರಿಂದ ಹಾಗೂ ಮಾಜಿ ಗೃಹ ಸಚಿವರಿಗೆ ಅಳಿವು ಉಳಿವಿನ ಪ್ರಶ್ನೆಯಾಗಿದ್ದರಿಂದ ಈ ಕ್ಷೇತ್ರದ ಚುನಾವಣೆ ಬಹಳ ಮಹತ್ವ ಪಡೆದುಕೊಂಡಿದೆ.

ಮತ ಬ್ಯಾಂಕ್‌ಗೆ ಕನ್ನ: ಬಿಜೆಪಿ ಮೇಲ್ವರ್ಗದ ಅದರಲ್ಲೂ ಪ್ರಮುಖ ಲಿಂಗಾಯತ, ಸಾಳೆ ಸೇರಿದಂತೆ ಇತರ ಸಮುದಾಯಗಳ ಮತ ಹೆಚ್ಚಿನ ಸಂಖ್ಯೆಯಲ್ಲಿ ನೆಚ್ಚಿಕೊಂಡಿದ್ದರೆ, ಕಾಂಗ್ರೆಸ್‌ ದಲಿತ ಹಾಗೂ ಅಲ್ಪಸಂಖ್ಯಾತರ ಮತಗಳನ್ನು ನೆಚ್ಚಿಕೊಂಡಿದೆ. ಆದರೆ ಅಂಬೇಡ್ಕರ್‌ ಮೊಮ್ಮಗ ಡಾ| ಪ್ರಕಾಶ ಅಂಬೇಡ್ಕರ್‌ ಅವರೇ
ಈ ಎರಡು ಸಮುದಾಯಗಳ ಮತಗಳನ್ನು ಹೆಚ್ಚಿಗೆ ಸೆಳೆದುಕೊಳ್ಳುವ ಲಕ್ಷಣಗಳು ಕಂಡು ಬರುತ್ತಿವೆ. ಎಂಐಎಂನ ಅಸಾದುದ್ದಿನ್‌ ಓವೈಸಿ ಸಹ ಸೊಲ್ಲಾಪುರ ಕ್ಷೇತ್ರದ ಮೇಲೆ ತೀವ್ರ ನಿಗಾ ವಹಿಸಿದ್ದಾರೆ. ಜ.6ರಂದು ಸೊಲ್ಲಾಪುರಕ್ಕೆ ಬಂದು ಹೋಗಿರುವ ಪ್ರಧಾನಿ ನರೇಂದ್ರ ಮೋದಿ ಅವರು ಸೊಲ್ಲಾಪುರಕ್ಕೆ ಬಂದು ಸಾವಿರಾರು ಮನೆಗಳ ನಿರ್ಮಾಣಕ್ಕೆ ಅಡಿಗಲ್ಲು ಹಾಕಿ ಹೋಗಿದ್ದಾರೆ.

Advertisement

ಕಣದಲ್ಲಿರುವ ಅಭ್ಯರ್ಥಿಗಳು: ಸೊಲ್ಲಾಪುರ ಲೋಕಸಭಾ ಕ್ಷೇತ್ರದಲ್ಲಿ 13 ಅಭ್ಯರ್ಥಿಗಳು ಕಣದಲ್ಲಿದ್ದಾರೆ. ಡಾ| ಜಯಸಿದ್ಧೇಶ್ವರ ಶಿವಾಚಾರ್ಯ ಸ್ವಾಮೀಜಿ ಬಿಜೆಪಿ ಅಭ್ಯರ್ಥಿಯಾಗಿದ್ದರೆ, ಕಾಂಗ್ರೆಸ್‌
ನಿಂದ ಸುಶೀಲಕುಮಾರ ಶಿಂಧೆ ಹಾಗೂ ಪ್ರಕಾಶ ಅಂಬೇಡ್ಕರ್‌ ವಂಚಿತ ಬಹುಜನ ಆಘಾಡಿಯ ಅಭ್ಯರ್ಥಿಯಾಗಿದ್ದಾರೆ. ಉಳಿದಂತೆ ಡಾ| ಅರ್ಜುನ ಓಕಳೆ, ಕೃಷ್ಣಾ ಭೀಸೆ, ವಿಷ್ಣು ಗಾಯಧನಕರ,
ವೆಂಕಟೇಶ್ವರ ಸ್ವಾಮಿ (ಕಟಕದೊಂಡ ಡಿ.ಜಿ), ಅಶೋಕ ಉಘಡೆ, ಸುದರ್ಶನ ಖಂದಾರೆ, ಮನಿಷಾ ಕಾರಂಡೆ, ಮಲ್ಹಾರಿ ಪಾಟೋಳೆ, ವಿಕ್ರಮ ಕಸಬೆ, ಶ್ರೀಮಂತ ಮಸ್ಕೆ ಪಕ್ಷೇತರ ಅಭ್ಯರ್ಥಿಗಳಾಗಿದ್ದಾರೆ.

ನಿರ್ಣಾಯಕ ಅಂಶ
ಬಿಜೆಪಿ, ಕಾಂಗ್ರೆಸ್‌ ತನ್ನದೇಯಾದ ಮತ ಬ್ಯಾಂಕ್‌ ಹೊಂದಿದೆ. ಆದರೆ ಬಹುಜನ ಮಹಾಸಂಘ ಮೈತ್ರಿ ಅಭ್ಯರ್ಥಿ ಈ
ಎರಡೂ ಪಕ್ಷಗಳ ಮೂಲ ಮತಗಳನ್ನು ಸೆಳೆಯಲು ಮುಂದಾಗಿರುವುದು ಪ್ರಮುಖ ಅಂಶವಾಗಿದೆ. ಬಿಜೆಪಿಯ
ಡಾ| ಜಯಸಿದ್ಧೇಶ್ವರ ಹಾಗೂ ಕಾಂಗ್ರೆಸ್‌ನ ಸುಶೀಲಕುಮಾರ ಶಿಂಧೆ ಪಕ್ಷದ ಪರವಾಗಿ ಇರುವ ಮತ ಬ್ಯಾಂಕ್‌ ಒಡೆಯದಿರುವಂತೆ
ನೋಡಿಕೊಳ್ಳುವತ್ತ ನೋಟ ಬೀರಿದ್ದಾರೆ. ಅಲ್ಲದೇ ಮತಗಳು ಹರಿದು ಹಂಚಿ ಹೋಗದಂತೆ ಕಸರತ್ತು ನಡೆಸುತ್ತಿದ್ದಾರೆ. ಬಹುಜನ ಮಹಾಸಂಘದ ಮೈತ್ರಿ ಅಭ್ಯರ್ಥಿ ಪ್ರಕಾಶ ಅಂಬೇಡ್ಕರ್‌ ಅಲ್ಪಸಂಖ್ಯಾತರ ಹಾಗೂ ದಲಿತ ಮತಗಳನ್ನು ಹೆಚ್ಚಿನ
ಮತ ಸೆಳೆದರೆ ಆಶ್ಚರ್ಯಕರ ರೀತಿಯ ಫಲಿತಾಂಶ ಬರಬಹುದಾಗಿದೆ.

ಹಣಮಂತರಾವ ಭೈರಾಮಡಗಿ

Advertisement

Udayavani is now on Telegram. Click here to join our channel and stay updated with the latest news.

Next