ಕಲಬುರಗಿ: ಹತ್ತು ವರ್ಷಗಳ ಕಾಲ ಸಂಸದನಾಗಿ ಕಲಬುರಗಿ ಕ್ಷೇತ್ರದಲ್ಲಿ ನಾನು ಸಾಕಷ್ಟು ಅಭಿವೃದ್ಧಿ ಮಾಡಿದ್ದೇನೆ. ನಾನು ಮಾಡಿದ ಕೆಲಸಕ್ಕೆ ಈಗ ಕೂಲಿ ಕೇಳುತ್ತಿದ್ದೇನೆ. ನನಗೆ ಮತದ ಕೂಲಿ ನೀಡುವ ಮೂಲಕ ಮತ್ತಷ್ಟು ನಿಮ್ಮ ಸೇವೆ ಮಾಡಲು ಅವಕಾಶ ನೀಡಬೇಕೆಂದು ಹಾಲಿ ಸಂಸದ, ಕಾಂಗ್ರೆಸ್ ಅಭ್ಯರ್ಥಿ ಡಾ| ಮಲ್ಲಿಕಾರ್ಜುನ ಖರ್ಗೆ ಮತದಾರರಲ್ಲಿ ಮನವಿ ಮಾಡಿದರು.
ನಗರದ ಜಿಡಿಎ ಲೇಔಟ್‌ನ ಫಿಲ್ಟರ್ ಬೆಡ್‌ನ ಗೋಕುಲ್ ನಗರದಲ್ಲಿ ಹಮ್ಮಿಕೊಂಡಿದ್ದ ಚುನಾವಣಾ ಪ್ರಚಾರ ಸಭೆಯಲ್ಲಿ ಮಾತನಾಡಿದ ಅವರು, ಕಲಬುರಗಿ ಲೋಕಸಭಾ ಕ್ಷೇತ್ರದ ಸಮಗ್ರ ಅಭಿವೃದ್ಧಿಗೆ ಹಲವಾರು ಯೋಜನೆಗಳನ್ನು ಜಾರಿಗೆ ತಂದಿದ್ದೇನೆ ಎಂದರು.
ಕಲಬರಗಿ ಸಮಗ್ರ ಅಭಿವೃದ್ಧಿಗೆ ನಾನು ಶ್ರಮಿಸುತ್ತಿದ್ದೇನೆ. ಆದರೆ, ಬಿಜೆಪಿಯವರು ಕಲಬುರಗಿಗೆ ಏನು ಕೊಡುಗೆ ಕೊಟ್ಟಿದ್ದಾರೆ? ಮತ ಕೇಳಲು ನಿಮ್ಮ ಮನೆ ಮುಂದೆ ಬಂದರೆ ಬಿಜೆಪಿಯವರಿಗೆ ಪ್ರಶ್ನೆ ಮಾಡಿ ಎಂದು ಕರೆ ಕೊಟ್ಟರು. ಅಭಿವೃದ್ಧಿ ಕೆಲಸ ಮಾಡಿದ ನನ್ನನ್ನು ಸೋಲಿಸಲು ಕೆಲವರು ಮಸಲತ್ತು ಮಾಡುತ್ತಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿದ ಅವರು, ನಾನು ಕೇಳುತ್ತಿದ್ದೇನೆ. ನಾನೇನಾದರೂ ನಿಮ್ಮ ಗಂಟು ತಿಂದಿದ್ದೇನಾ? ಇಲ್ಲ ಲೂಟಿ ಮಾಡಿದ್ದೇನಾ? ಅಜೀರ್ಣವಾಗುವಷ್ಟು ತಿಂದ ನಿಮ್ಮಿಂದ ನನ್ನನ್ನು ಸೋಲಿಸಲು ಆಗಲ್ಲ ಎಂದು ವಾಗ್ಧಾಳಿ ನಡೆಸಿದರು.
ನನ್ನ ವಿರುದ್ಧ ಬಿಜೆಪಿಯವರು ತುಂಬಾ ಮಾತನಾಡುತ್ತಿದ್ದಾರೆ. ಒಬ್ಬ ಎಂಎಲ್‌ಸಿ ಅಂತೂ ನನ್ನ ಆಸ್ತಿ ಲೆಕ್ಕ ಹಿಡಿದುಕೊಂಡು ಎಲ್ಲ ಕಡೆ ಅಪಪ್ರಚಾರ ಮಾಡುತ್ತಿದ್ದಾನೆ. ನಾನು ಸುಮ್ಮನಿದ್ದೇನೆ. ನಾನು ಕಾಲು ಕೆದರಿಕೊಂಡು ಜಗಳಕ್ಕೆ ನಿಲ್ಲುವುದಿಲ್ಲ. ಸಮಯ ಸಮಯ ಬಂದಾಗ ಮಾತನಾಡುತ್ತೇನೆ ಎಂದು ರಾಜ್ಯ ಬಿಜೆಪಿ ಪ್ರಧಾನ ಕಾರ್ಯದರ್ಶಿ ರವಿಕುಮಾರ ವಿರುದ್ಧ ಕಿಡಿಕಾರಿದರು.
ರತ್ನಪ್ರಭಾ ತಿಳಿದುಕೊಂಡಿಲ್ಲ ಹೈದ್ರಾಬಾದ ಕರ್ನಾಟಕ ಭಾಗ 50 ವರ್ಷವಾದರೂ ಹಿಂದುಳಿದೆ. ಅಭಿವೃದ್ಧಿ ಆಗಲು ಇಷ್ಟೊಂದು ವರ್ಷ ಬೇಕಾ ಎಂಬ ಮಾಜಿ ಮುಖ್ಯ ಕಾರ್ಯದರ್ಶಿ, ಬಿಜೆಪಿ ನಾಯಕಿ ಕೆ.ರತ್ನಪ್ರಭಾ ಹೇಳಿಕೆಗೆ ಮಲ್ಲಿಕಾರ್ಜುನ ಖರ್ಗೆ ಅಸಮಾಧಾನ ವ್ಯಕ್ತಪಡಿಸಿದ್ದು, ರತ್ನಪ್ರಭಾ ಇನ್ನೂ ಸರಿಯಾಗಿ ತಿಳದುಕೊಂಡಿಲ್ಲ ಎಂದು ತಿರುಗೇಟು ನೀಡಿದ್ದಾರೆ. ಹೈ.ಕ ಭಾಗ ಅಭಿವೃದ್ಧಿಯಾಗಿಲ್ಲ ಎನ್ನಲು ನಾನೇನು 50 ವರ್ಷ ಮುಖ್ಯಮಂತ್ರಿ ಆಗಿದ್ದೇನಾ? ರತ್ನಪ್ರಭಾ ಬಗ್ಗೆ ಕೆಲವೊಂದು ವಿಚಾರಗಳು ಹೇಳುವುದಿದೆ. ಆದರೆ, ಈಗ ಬೇಡ. ಸಮಯ ಬರಲಿ ಉತ್ತರ ಕೊಡುತ್ತೇನೆ ಎಂದು ಹೇಳಿದರು.