ವಾಡಿ: ಮುಂಬೈ, ಪುಣೆ, ಗೋವಾ ಸೇರಿದಂತೆ ಇನ್ನಿತರ ನಗರಗಳಿಗೆ ವಲಸೆ ಹೋಗಿದ್ದ ತಾಂಡಾ ನಿವಾಸಿಗಳು ತಮ್ಮ ಮತಕ್ಷೇತ್ರಕ್ಕೆ ಮರಳಿ ಬರುತ್ತಿದ್ದಾರೆ.
ಹೀಗಾಗಿ ಲೋಕಸಭೆ ಕಾಂಗ್ರೆಸ್ ಸಂಸದೀಯ ನಾಯಕ ಡಾ| ಮಲ್ಲಿಕಾರ್ಜುನ ಖರ್ಗೆ ಹಾಗೂ ಕಾಂಗ್ರೆಸ್ ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡಿ ಬಿಜೆಪಿ ಅಭ್ಯರ್ಥಿಯಾಗಿ ಎದುರು ನಿಂತಿರುವ ಡಾ| ಉಮೇಶ ಜಾಧವ ಅವರ ಸ್ಪರ್ಧೆಯಿಂದ ದೇಶದ ಜನರ ಗಮನ ಸೆಳೆದಿರುವ ಕಲಬುರಗಿ ಲೋಕಸಭೆ ಚುನಾವಣಾ ಪ್ರಚಾರ ದಿನೇದಿನೇ ರಂಗೇರುತ್ತಿದೆ.
ಲೋಕ ಸಮರಕ್ಕೆ ಜಿಲ್ಲೆಯಲ್ಲಿ ಏ.23 ರಂದು ಮತದಾನ ನಡೆಯಲಿದೆ. ಈ ಬಾರಿ ಮುಂಚಿತವಾಗಿಯೇ ವಲಸಿಗ ಮತದಾರರು ಊರು ಸೇರಿಕೊಳ್ಳುತ್ತಿದ್ದಾರೆ. ಬಂಜಾರಾ ಸಮುದಾಯದ ಮತಗಳ ಮೇಲೆ ಹದ್ದಿನ ಕಣ್ಣಿಟ್ಟಿರುವ ಕಾಂಗ್ರೆಸ್ ಹಾಗೂ ಬಿಜೆಪಿ ನಾಯಕರು, ದೇಶದ ಮೂಲೆ ಮೂಲೆಯಲ್ಲಿ ನೆಲೆಸಿರುವ ಸ್ಥಳೀಯ ತಾಂಡಾಗಳ ಜನರ ಮನೆ ಬಾಗಿಲು ಬಡೆಯುತ್ತಿದ್ದಾರೆ. ಕುಟುಂಬಗಳ ಮನವೊಲಿಸಿ ಕ್ಷೇತ್ರಕ್ಕೆ ಕರೆತರುವಲ್ಲಿ ಎರಡೂ ಪಕ್ಷಗಳ ರಾಜಕೀಯ ನಾಯಕರು ತೆರೆಮರೆ ಕಸರತ್ತು ನಡೆಸುತ್ತಿರುವುದು ಗುಟ್ಟಾಗಿ ಉಳಿದಿಲ್ಲ.
ಕಲಬುರಗಿ-ಯಾದಗಿರಿ ರಾಷ್ಟ್ರೀಯ ಹೆದ್ದಾರಿ ಮೇಲೆ ಲಂಬಾಣಿ ಜನರನ್ನು ಹೊತ್ತು ತಾಂಡಾಗಳತ್ತ ಮುಖಮಾಡಿದ ಮಹಾರಾಷ್ಟ್ರದ ಖಾಸಗಿ ವಾಹನಗಳ ಸಂಚಾರ ಹೆಚ್ಚಾಗಿ ಗೋಚರಿಸುತ್ತಿವೆ. ರೈಲು ನಿಲ್ದಾಣ, ಬಸ್ ನಿಲ್ದಾಣಗಳಲ್ಲಿ ಪ್ರತಿದಿನವೂ ಬಂಜಾರಾ ಪ್ರಯಾಣಿಕರು ಪ್ರತ್ಯಕ್ಷವಾಗುತ್ತಿದ್ದಾರೆ. ಪ್ರತಿಸಲ ಚುನಾವಣೆ ವೇಳೆ ಮತದಾನದ ದಿನವೇ ಕ್ಷೇತ್ರಕ್ಕೆ ಮರಳಿ ರಾಜಕೀಯ ಸಂಘರ್ಷಕ್ಕೆ ಕಾರಣವಾಗುತ್ತಿದ್ದ ವಲಸಿಗ ಮತದಾರರು, ಈ ಬಾರಿ ಚುನಾವಣೆಗೂ ಒಂದು ವಾರ ಮೊದಲೇ ಊರಿಗೆ ಮರಳುವ ಮೂಲಕ ಕಿರಿಕಿಯಿಂದ ಪಾರಾಗಿದ್ದಾರೆ. ವರ್ಷದಿಂದ ಮನೆಗಳಿಗೆ ಬೀಗ ಬಿದ್ದು ಬಿಕೋ ಎನ್ನುತ್ತಿದ್ದ ತಾಂಡಾಗಳಲ್ಲೀಗ ಜನರ ಸಂಭ್ರಮ ಮನೆಮಾಡಿದೆ. ಪ್ರಜಾಪ್ರಭುತ್ವದ ಹಬ್ಬದ ವಾತಾವರಣ ಮೂಡಿಸಿದೆ.
ಮತದಾನಕ್ಕೂ ಬದ್ಧ-ಜಾತ್ರೆಗೂ ಸಿದ್ಧ: ಪ್ರತಿ ವರ್ಷದ ಬೇಸಿಗೆ ಕಾಲದಲ್ಲಿ ಬಂಜಾರಾ ಜನರು ತಮ್ಮ ತಾಂಡಾಗಳತ್ತ ಮುಖಮಾಡುತ್ತಾರೆ. ಈ ಭಾಗದಲ್ಲಿ ನಡೆಯುವ ಲಾಡ್ಲಾಪುರ ಹಾಜಿಸರ್ವರ್ ಜಾತ್ರೆ ಸೇರಿದಂತೆ ಇನ್ನಿತರ ದೇವರುಗಳ ಜಾತ್ರೆಗಳಲ್ಲಿ ದೇವರಿಗೆ ಕುರಿಗಳನ್ನು ಬಲಿ ನೀಡಿ ಬಾಡೂಟ ಸವಿಯುವುದು ಸಂಪ್ರದಾಯ. ತಾಂಡಾಗಳಲ್ಲಿ ಮದುವೆ ಸಮಾರಂಭಗಳಿಗೆ ಕೊರತೆಯಿರುವುದಿಲ್ಲ.
ಇದರ ನಡುವೆ ನುಗ್ಗಿಬರುವ ಚುನಾವಣೆಗಳಲ್ಲೂ ಪಾಲ್ಗೊಂಡು ಮತದಾನದ ಹಕ್ಕು ಚಲಾಯಿಸುತ್ತಾರೆ. ಒಟ್ಟಾರೆ ಈ ಬಾರಿ ವಲಸೆ ಮತದಾರರು ಮತದಾನಕ್ಕೂ ಮುಂಚೆಯೇ ಮತಕ್ಷೇತ್ರ ಸೇರಿದ್ದು ಮಾತ್ರ ವಿಶೇಷ.
ಮಡಿವಾಳಪ್ಪ ಹೇರೂರ