ಕಲಬುರಗಿ: ಲೋಕಸಭೆ ಚುನಾವಣೆಯಲ್ಲಿ ಪ್ರಚಂಡ ಗೆಲುವಿನಿಂದ ಎರಡನೇ ಅವಧಿಗೆ ಆಯ್ಕೆಯಾದ ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರ್ಕಾರ ಹಿಂದುಳಿದ ಹೈದ್ರಾಬಾದ ಕರ್ನಾಟಕ ಪ್ರದೇಶದ ಅಭಿವೃದ್ಧಿಗೆ ವಿಶೇಷ ಆದ್ಯತೆ ನೀಡಬೇಕೆಂದು ಹೈ.ಕ ಜನಪರ ಸಂಘರ್ಷ ಸಮಿತಿ ಅಧ್ಯಕ್ಷ ಲಕ್ಷ್ಮಣ ದಸ್ತಿ ಒತ್ತಾಯಿಸಿದರು.
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಹೈ.ಕ ಭಾಗದ ಐದೂ ಲೋಕಸಭಾ ಕ್ಷೇತ್ರಗಳಲ್ಲಿ ಬಿಜೆಪಿ ಅಭ್ಯರ್ಥಿಗಳು ಗೆಲುವು ಸಾಧಿಸಿದ್ದು, ಪ್ರಧಾನಿ ಮೋದಿ ತಮ್ಮ ಸಂಪುಟದಲ್ಲಿ ಈ ಭಾಗದ ಸಂಸದರಿಗೆ ಪ್ರಬಲ ಖಾತೆ ನೀಡಬೇಕು. ನನೆಗುದಿಗೆ ಬಿದ್ದಿರುವ ಅಭಿವೃದ್ಧಿ ಕಾಮಗಾರಿಗಳನ್ನು ಪೂರ್ಣಗೊಳಿಸಬೇಕು. ಮತ್ತಷ್ಟು ಅಭಿವೃದ್ಧಿ ಹೊಸ ಯೋಜನೆಗಳನ್ನು ಜಾರಿಗೊಳಿಸಿ ಕಾಲಮಿತಿಯೊಳಗೆ ಅನುಷ್ಠಾನಕ್ಕೆ ತರಬೇಕೆಂದು ಆಗ್ರಹಿಸಿದರು.
ಈ ಹಿಂದೆ ಮೋದಿ ಸರ್ಕಾರದಿಂದ ಹೈದ್ರಾಬಾದ ಕರ್ನಾಟಕದಲ್ಲಿ ನಿರೀಕ್ಷಿತ ಮಟ್ಟದಲ್ಲಿ ಕೆಲಸಗಳಾಗಲಿಲ್ಲ. ಅಂತಹ ಧೋರಣೆ ಮರುಕಳಿಸದಂತೆ ಈ ಭಾಗದ ಸಂಸದರು ಬದ್ಧತೆ ಪ್ರದರ್ಶಿಸಬೇಕು. ಕಲಬುರಗಿ ರೈಲ್ವೆ ವಿಭಾಗೀಯ ಕಚೇರಿ ಕಾಮಗಾರಿ ತ್ವರಿತವಾಗಿ ಪೂರ್ಣಗೊಳಿಸಬೇಕು. ಇನ್ನಿತರ ರೈಲ್ವೆ ಕಾಮಗಾರಿಗಳನ್ನು ಕಾಲಮಿತಿಯಲ್ಲಿ ಪೂರ್ಣಗೊಳಿಸಬೇಕು. ಹೊಸ ರೈಲ್ವೆ ಮಾರ್ಗಗಳಿಗೆ ಸಲ್ಲಿಸಿರುವ ಪ್ರಸ್ತಾವನೆಗಳಿಗೆ ಅನುಮೋದನೆ ನೀಡಬೇಕು ಎಂದರು.
ಬೀದರ, ಕಲಬುರಗಿ ಮಾರ್ಗದಿಂದ ದೆಹಲಿ, ಬೆಂಗಳೂರು ಸೇರಿದಂತೆ ದೇಶದ ಮಹಾನಗರಗಳಿಗೆ ಹಾಗೂ ಹೈದ್ರಾಬಾದ ಕರ್ನಾಟಕದ ಎಲ್ಲ ಜಿಲ್ಲಾ ಕೇಂದ್ರಗಳಿಗೂ ಹೋಗಿ ಬರಲು ಹೊಸ ರೈಲುಗಳನ್ನು ಆರಂಭಿಸಬೇಕು. 371ನೇ (ಜೆ) ಕಲಂ ತಿದ್ದುಪಡಿ ಮಸೂದೆಯಡಿ ಕೇಂದ್ರ ಸರ್ಕಾರ ವಿಶೇಷ ಪ್ಯಾಕೇಜ್ ಘೋಷಿಸಬೇಕೆಂದು ಒತ್ತಾಯಿಸಿದರು.
ಉದ್ಯೋಗ ಸೃಷ್ಟಿಸಿ ಎಂಎಸ್‌ಕೆ ಮಿಲ್ ಮಾದರಿಯಲ್ಲಿ ಕನಿಷ್ಠ 10,000 ಉದ್ಯೋಗಗಳನ್ನು ಒದಗಿಸುವ ಬೃಹತ್ ಕಾರ್ಖಾನೆ ಆರಂಭಿಸಬೇಕು. ಇಎಸ್‌ಐ ಆಸ್ಪತ್ರೆಯನ್ನು ಏಮ್ಸ್ ಆಸ್ಪತ್ರೆಯನ್ನಾಗಿ ಮೇಲ್ದರ್ಜೆಗೇರಿಸಬೇಕು. ಸೌರಶಕ್ತಿ ಮತ್ತು ಇಲ್ಲಿನ ಸಂಪನ್ಮೂಲಗಳನ್ನು ಬಳಸಿಕೊಂಡು ಬೃಹತ್ ಉದ್ಯಮಗಳನ್ನು ಆರಂಭಿಸಬೇಕು ಎಂದರು.
ಡಾ| ಮಾಜಿದ್ ಡಾಗಿ, ಶಿವಲಿಂಗಪ್ಪ ಬಂಡಕ, ಮನೀಷ್ ಜಾಜು, ಎಚ್.ಎಂ.ಹಾಜಿ, ಅಸ್ಲಂ ಚೌಂಗೆ, ವಿಶಾಲದೇವ ಧನ್ನೇಕರ್, ಶಿವಕುಮಾರ ಬಿರಾದಾರ ಇದ್ದರು.
ಹೈದ್ರಾಬಾದ ಕರ್ನಾಟಕ ಭಾಗದಲ್ಲಿ ಬೇಸಿಗೆಯಲ್ಲಿ ಕುಡಿಯುವ ನೀರಿನ ಸಮಸ್ಯೆ ಅಧಿಕವಾಗುತ್ತದೆ. ಆದ್ದರಿಂದ ಕುಡಿಯುವ ನೀರು ಸೇರಿದಂತೆ ಮೂಲಭೂತ ಸೌಲಭ್ಯ ಕಲ್ಪಿಸಲು ಕೇಂದ್ರ ಸರ್ಕಾರ ಕ್ರಮ ಕೈಗೊಳ್ಳಬೇಕು. ಕಲಬುರಗಿ ವಿಮಾನಯಾನ ಸೇವೆ ಶೀಘ್ರವೇ ಆರಂಭಿಸಬೇಕು. ನನೆಗುದಿಗೆ ಬಿದ್ದಿರುವ ನಿಮ್ಜ್ ಕಾಲ ಮಿತಿಯಲ್ಲಿ ಅನುಷ್ಠಾನಗೊಳಿಸಬೇಕು. ನಗರದ ಎರಡನೇ ರಿಂಗ್ ರಸ್ತೆ ಕಾಮಗಾರಿಯನ್ನು ಸಮರೋಪಾದಿಯಲ್ಲಿ ಪೂರ್ಣಗೊಳಿಸಬೇಕು. ಕಳೆದ ಬಾರಿಯಂತೆ ಮತ್ತೆ ನಿರ್ಲಕ್ಷಿಸಿದರೆ ಕೇಂದ್ರ ಸರ್ಕಾರದ ವಿರುದ್ಧ ನಿರಂತರ ಹೋರಾಟ ನಡೆಸಬೇಕಾಗುತ್ತದೆ.
•
ಲಕ್ಷ್ಮಣ ದಸ್ತಿ,
ಅಧ್ಯಕ್ಷರು, ಹೈ.ಕ ಜನಪರ ಸಂಘರ್ಷ ಸಮಿತಿ