ಕಲಬುರಗಿ: ಕಲಬುರಗಿ ಮೀಸಲು ಲೋಕಸಭಾ ಕ್ಷೇತ್ರಕ್ಕೆ ಮಂಗಳವಾರ ನಡೆದ ಚುನಾವಣೆ ಸಣ್ಣ-ಪುಟ್ಟ ಗೊಂದಲ ನಡುವೆಯೂ ಬಹುತೇಕವಾಗಿ ಎಲ್ಲೆಡೆ ಶಾಂತಿಯುತವಾಗಿ ಮತದಾನ ನಡೆಯಿತು. ಜಿಲ್ಲಾದ್ಯಂತ ಮತದಾರರು ಬೆಳಗ್ಗೆ 7 ಗಂಟೆಯಿಂದ ಮತಗಟ್ಟೆಗಳಿಗೆ ಬಂದು ಸರದಿ ಸಾಲಿನಲ್ಲಿ ನಿಂತು ಮತದಾನ ಮಾಡಿ ಅಭ್ಯರ್ಥಿಗಳ ಭವಿಷ್ಯ ಬರೆದರು.
ಅನೇಕ ಕಡೆಗಳಲ್ಲಿ ಸುಡು ಬಿಸಿಲನ್ನು ಲೆಕ್ಕಿಸದೆ ಮತದಾರರು ತಮ್ಮ ಹಕ್ಕು ಚಲಾಯಿಸಿದರು. ಬೆಳಗ್ಗೆ ತಂಪಾದ ವಾತಾವರಣವಿದ್ದ ಕಾರಣ ಬಹುತೇಕ ಮತಗಟ್ಟೆಯಲ್ಲಿ ಬಂದು ಕುಟುಂಬ ಸಮೇತರಾಗಿ ಮತದಾನ ಮಾಡಿದರು. ಬಿಸಿಲು ಏರುತ್ತಿದ್ದಂತೆ ಮತಗಟ್ಟೆಗಳಿಗೆ ಬರುವ ಮತದಾರರ ಸಂಖ್ಯೆ ಕಡಿಮೆ ಇತ್ತು. ತದನಂತರದಲ್ಲಿ ಮಧ್ಯಾಹ್ನ 3 ಗಂಟೆ ಆಗುತ್ತಿದ್ದಂತೆ ಮನೆಗಳಿಂದ ಹೊರ ಬಂದು ಮತ ಚಲಾಯಿಸಿದರು.
ಮೊದಲ ಬಾರಿಗೆ ಮತ ಚಲಾಯಿಸಲು ಬಂದಿದ್ದ ಯುವಕರು, ಯುವತಿಯರು ಹಾಗೂ ಇತರರು ಮತದಾನ ಮಾಡಿ ಹೊರ ಬರುವುದನ್ನೇ ಉತ್ಸಾಹದಿಂದ ನೋಡುತ್ತಿದ್ದರು. ಮತ ಚಲಾಯಿಸಿ ಬಂದ ಕೆಲ ಯುವ ಮತದಾರರು ಶಾಹಿ ಹಚ್ಚಿದ ಬೆರಳನ್ನು ಮುಂದೆ ಚಾಚಿ ತೋರುತ್ತಾ ಏನೋ ಸಾಧಿಸಿದವರಂತೆ ಮಂದಹಾಸ ಬೀರಿದರು.
ವಯೋವೃದ್ಧರು, ಅಂಗವಿಕಲರು ಕುಟುಂಬದವರ ನೆರವಿನೊಂದಿಗೆ ಮತಗಟ್ಟೆಗಳಿಗೆ ಬಂದು ಮತದಾನ ಮಾಡಿ ಕರ್ತವ್ಯ ಪ್ರಜ್ಞೆ ಮೆರೆದರು. ಈ ಬಾರಿ ಚುನಾವಣೆಯಲ್ಲಿ ಚುನಾವಣಾ ಆಯೋಗವು ಅಂಗವಿಕಲರಿಗಾಗಿ ವಿನೂತನ ವ್ಯವಸ್ಥೆಗಳನ್ನು ಕೈಗೊಂಡಿತ್ತು. ಮತದಾನಕ್ಕೆ ಬರುವ ವಿಕಲಚೇತನರನ್ನು ಕರೆತರಲು ವಾಹನದ ವ್ಯವಸ್ಥೆ ಮಾಡಲಾಗಿತ್ತು. ಜತೆಗೆ ಮತಗಟ್ಟೆಗಳಲ್ಲಿ ರ್‍ಯಾಂಪ್ ಹಾಗೂ ವ್ಹೀಲ್ ಚೇರ್ ವ್ಯವಸ್ಥೆ ಮಾಡಿದ್ದರಿಂದ ಅಂಗವಿಕಲರ ಮೊಗದಲ್ಲೂ ಮಂದಹಾಸ ಮೂಡಿಸಿತು.
ಆಕರ್ಷಣೆ ಕೇಂದ್ರ ಬಿಂದು: ಮತದಾನಕ್ಕೆ ಮಹಿಳಾ ಮತದಾರರನ್ನು ಆಕರ್ಷಿಸಲು ಸ್ಥಾಪಿಸಲಾಗಿದ್ದ ಸಖೀ ಮತಗಟ್ಟೆಗಳು ಆಕರ್ಷಣೆಯ ಕೇಂದ್ರ ಬಿಂದುಗಳಾಗಿದ್ದವು. ವಿಧಾನಸಭಾ ಕ್ಷೇತ್ರಕ್ಕೆ ಒಂದರಂತೆ ಒಟ್ಟು ಒಂಭತ್ತು ಸಖೀ ಮತಗಟ್ಟೆಗಳನ್ನು ಸಿಂಗರಿಸಲಾಗಿತ್ತು. ವಿಶೇಷವಾಗಿ ಬಲೂನ್ ಮತ್ತು ಹೂವಿನಿಂದ ಅಲಂಕಾರ ಮಾಡಿದ್ದು, ಮಹಿಳಾ ಮತದಾರರನ್ನು ಆಕರ್ಷಿಸಿತು. ಅಲ್ಲದೇ, ಮಹಿಳೆಯರೊಂದಿಗೆ ಬರುವ ಚಿಕ್ಕ ಮಕ್ಕಳಿಗೆಂದೇ ಪ್ರತ್ಯೇಕ ಕೋಣೆ ಹಾಗೂ ಆಟಕ್ಕೆಂದು ಪ್ರತ್ಯೇಕ ಸ್ಥಳವನ್ನು ನಿಗದಿಗೊಳಿಸಲಾಗಿತ್ತು.
ವಿಧಾನಸಭಾವಾರು ಸಕಲ ಮೂಲಸೌಲಭ್ಯವುಳ್ಳ ಗ್ರಾಮೀಣ ಸೊಗಡಿನ ಒಂಭತ್ತು ಮಾದರಿ ಮತಗಟ್ಟೆಗಳನ್ನು ಸ್ಥಾಪಿಸಲಾಗಿತ್ತು. ಅಲ್ಲದೇ, ಅಂಗವಿಕಲರೇ ಕಾರ್ಯನಿರ್ವಹಿಸುವ ಒಂಭತ್ತು ಮತಗಟ್ಟೆಗಳನ್ನು ಸ್ಥಾಪಿಸಲಾಗಿತ್ತು. ಜತೆಗೆ ಮತಗಟ್ಟೆಯಲ್ಲಿ ಕನಿಷ್ಠ ಮೂಲಭೂತ ಸೌಲಭ್ಯಗಳನ್ನು ಚುನಾವಣಾ ಆಯೋಗ ಒದಗಿಸಿತ್ತು. ಇನ್ನು, ಕೆಲ ಮತಗಟ್ಟೆಗಳ ಹೊರ ಪಕ್ಷಗಳ ಏಜೆಂಟರು ಟೆಂಟ್ ಹಾಕಿ ತಂಪಾದ ಕುಡಿಯುವ ನೀರು ಪೂರೈಸಿದರು.