ವಾಡಿ: ಪಟ್ಟಣದ ಪುರಸಭೆ ವ್ಯಾಪ್ತಿಯ ಎಸಿಸಿ ಕಾಲೋನಿಯ ಮತದಾನ ಕೇಂದ್ರ ಸಂಖ್ಯೆ 159, 143, ತರ್ಕಸ್‌ಪೇಟೆ ಹಾಗೂ ಕಮರವಾಡಿ ಗ್ರಾಮದ ಮತಗಟ್ಟೆಗಳ ಇವಿಎಂ ಯಂತ್ರಗಳು ಒಂದು ತಾಸಿಗೂ ಹೆಚ್ಚು ಸಮಯ ಕೈಕೊಟ್ಟರೆ, ಕಡಬೂರ ಗ್ರಾಮದ ಮತದಾನ ಕೇಂದ್ರದ ಎದುರು ಕೈ-ಕಮಲ ಕಾರ್ಯಕರ್ತರ ಮಾತಿನ ವಾಗ್ವಾದ ಪ್ರಕರಣ ಘಟಿಸಿದ್ದು ಹೊರತುಪಡಿಸಿ ಎಲ್ಲೆಡೆ ಶಾಂತಿಯುತ ಮತದಾನ ನಡೆಯಿತು.
ಅತಿಸೂಕ್ಷ್ಮ ವಲಯ ಎಂದು ಗುರುತಿಸಲಾಗಿರುವ ನಗರದ ವಿವಿಧ ಮತಗಟ್ಟೆಗಳಿಗೆ ಪೊಲೀಸ್ ಬಿಗಿ ಭದ್ರತೆ ಒದಗಿಸಿದ್ದರ ಪರಿಣಾಮ ಯಾವುದೇ ಅಹಿತಕರ ಘಟನೆಗಳು ಘಟಿಸಲಿಲ್ಲ ಎನ್ನುವುದೇ ಸಮಾಧಾನದ ಸಂಗತಿ. ಬೆಳಗ್ಗೆ ರೆಸ್ಟ್‌ಕ್ಯಾಂಪ್ ತಾಂಡಾದ ಎಂಪಿಎಸ್ ಶಾಲೆಯ ಮತಗಟ್ಟೆಯಲ್ಲಿ ಮಾಜಿ ಶಾಸಕ, ಬಿಜೆಪಿಯ ವಾಲ್ಮೀಕಿ ನಾಯಕ ಅವರು ಪತ್ನಿ ಜತೆಗೆ ಮತದಾನ ಮಾಡಿದರು. ತಮ್ಮ ಪಕ್ಷಗಳ ಅಭ್ಯರ್ಥಿಗಳಿಗೆ ಹೆಚ್ಚಿನ ಬಹುಮತ ತಂದುಕೊಡುವ ಆತುರದಲ್ಲಿ ಕಾಂಗ್ರೆಸ್ ಹಾಗೂ ಬಿಜೆಪಿ ಕಾರ್ಯಕರ್ತರು, ಮತದಾರರನ್ನು ಮತಗಟ್ಟೆಗೆ ಕರೆತರುವಲ್ಲಿ ಇಡೀ ದಿನ ಶ್ರಮಿಸಿದ್ದು ಕಂಡುಬಂದಿತು. ಮತದಾರರೂ ಮಧ್ಯಾಹ್ನದ ರಣಬಿಸಿಲಿಗೆ ಹೆದರಿ ಬೆಳಗ್ಗೆಯೇ ಮತಗಟ್ಟೆಗೆ ಬಂದು ಹಕ್ಕು ಚಲಾಯಿಸುವ ಕಸರತ್ತು ನಡೆಸಿದರು.
ಪ್ರಿಯಾಂಕ್ ಖರ್ಗೆ ಮಿಂಚಿನ ಸಂಚಾರ: ಬಿಜೆಪಿ ವಿರುದ್ಧ ತೊಡೆತಟ್ಟಿ ಮತ ಪ್ರಚಾರದ ವೇಳೆ ಜಿಲ್ಲೆಯಾಧ್ಯಂತ ಮಾತಿನ ಸಂಘರ್ಷವೇ ನಡೆಸಿದ್ದ ಚಿತ್ತಾಪುರ ಶಾಸಕ, ಜಿಲ್ಲಾ ಉಸ್ತುವಾರಿ ಸಚಿವ ಪ್ರಿಯಾಂಕ್ ಖರ್ಗೆ, ನಾಲವಾರ, ಹಳಕರ್ಟಿ, ವಾಡಿ ಪಟ್ಟಣ ಸೇರಿದಂತೆ ತಾಲೂಕಿನ ವಿವಿಧ ಗ್ರಾಮಗಳಿಗೆ ಭೇಟಿ ನೀಡಿ ಮಿಂಚಿನ ಸಂಚಾರ ನಡೆಸುವ ಮೂಲಕ ಕಾರ್ಯಕರ್ತರಲ್ಲಿ ಆತ್ಮಸ್ಥೈರ್ಯ ತುಂಬಿದರು.
ಕ್ಷೇತ್ರ ಸುತ್ತಿದ ಎಸ್‌ಯುಸಿಐ ಅಭ್ಯರ್ಥಿ: ಜಿಲ್ಲೆಯಲ್ಲಿ ತುರುಸಿನ ಪ್ರಚಾರ ಕೈಗೊಂಡು ಕಾಂಗ್ರೆಸ್ ಹಾಗೂ ಬಿಜೆಪಿಗೆ ಸೆಡ್ಡು ಹೊಡೆದ ಎಸ್‌ಯುಸಿಐ ಕಮ್ಯುನಿಸ್ಟ್ ಪಕ್ಷದ ಜಿಲ್ಲಾ ನಾಯಕ, ಪಕ್ಷೇತರ ಅಭ್ಯರ್ಥಿ ಕಾಮ್ರೇಡ್ ಎಸ್.ಎಂ. ಶರ್ಮಾ ತಾಲೂಕಿನ ವಿವಿಧ ಗ್ರಾಮಗಳಿಗೆ ಭೇಟಿ ನೀಡಿ ಮತದಾನ ಪ್ರಕ್ರಿಯೆ ಪರಿಶೀಲಿಸಿದರು. ಎಸ್‌ಯುಸಿಐ ಜಿಲ್ಲಾ ಕಾರ್ಯದರ್ಶಿ ಕಾ.ಎಚ್.ವಿ. ದಿವಾಕರ ಇದ್ದರು.
ರಾವೂರಿನಲ್ಲಿ ಮಾದರಿ ಮತಗಟ್ಟೆ: ಮಾದರಿ ಮತದಾನ ಕೇಂದ್ರವನ್ನು ರಾವೂರ ಗ್ರಾಮದಲ್ಲಿ ಸಿದ್ಧಗೊಳಿಸಲಾಗಿತ್ತು. ಗ್ರಾಪಂ ಪಿಡಿಒ ಕಾವೇರಿ ರಾಠೊಡ ಹಾಗೂ ಸಿಬ್ಬಂದಿ ಶ್ರಮ, ಮತದಾರರ ಮನ ಗೆಲ್ಲುವಲ್ಲಿ ಯಶಸ್ವಿಯಾಯಿತು.
ಕಳಪೆ ಉಪಹಾರ ಪೂರೈಕೆ: ಪುರಸಭೆ ವ್ಯಾಪ್ತಿಯ ವಿವಿಧ ಮತಗಟ್ಟೆಗಳ ಸಿಬ್ಬಂದಿಗೆ ಹಾಗೂ ಭದ್ರತೆಗೆ ನಿಯೋಜನೆಗೊಂಡ ಪೊಲೀಸ್ ಸಿಬ್ಬಂದಿಗೆ ಪೂರೈಸಲಾದ ಬೆಳಗಿನ ಉಪಹಾರ ಉಪ್ಪಿಟ್ಟು ತೀರಾ ಕಳಪೆಮಟ್ಟದ್ದಾಗಿತ್ತು ಎನ್ನುವ ದೂರುಗಳು ಕೇಳಿಬಂದವು. ಸಿಪಿಐ ಚಂದ್ರಶೇಖರ, ಪಿಎಸ್‌ಐ ವಿಜಯಕುಮಾರ ಭಾವಗಿ ಆದೇಶದಂತೆ ಸೂಕ್ಷ್ಮ ಮತದಾನ ಕೇಂದ್ರಗಳ ಭದ್ರತೆಗೆ ಕಾವಲು ನಿಂತಿದ್ದ ಪೊಲೀಸ್ ಸಿಬ್ಬಂದಿ ಕಾನೂನು ಸುವ್ಯವಸ್ಥೆ ಕಾಪಾಡಿದರು.