Advertisement

ತಾವೇ ಗೆಲ್ಲಲಾಗದವರು ನನ್ನ ಸೋಲಿಸ್ತಾರಾ?

01:43 PM Apr 10, 2019 | Naveen |

ಚಿತ್ತಾಪುರ: ಜನರಿಗೆ ಸುಳ್ಳು ಹೇಳುತ್ತಾ ಬಿಜೆಪಿ ಮತ್ತು ನರೇಂದ್ರ ಮೋದಿ ತಂಡ ಜಾತಿ, ಧರ್ಮದ ಹೆಸರಲ್ಲಿ ಕೋಮುವಾದ ಸೃಷ್ಟಿಸಿ ದೇಶ, ಸಮಾಜ ಒಡೆಯುವ ಕೆಲಸ ಮಾಡುತ್ತಿದೆ ಎಂದು ಹಾಲಿ ಸಂಸದ, ಕಲಬುರಗಿ ಲೋಕಸಭೆ ಕ್ಷೇತ್ರದ ಕಾಂಗ್ರೆಸ್‌ ಅಭ್ಯರ್ಥಿ ಡಾ| ಮಲ್ಲಿಕಾರ್ಜುನ ಖರ್ಗೆ ಹೇಳಿದರು.

Advertisement

ತಾಲೂಕಿನ ತೆಂಗಳಿ ಜಿಪಂ ವ್ಯಾಪ್ತಿಯ ದಂಡೋತಿ ಗ್ರಾಮದಲ್ಲಿ ಕಲಬುರಗಿ ಲೋಕಸಭೆ ಚುನಾವಣೆ ಪ್ರಯುಕ್ತ ಹಮ್ಮಿಕೊಂಡಿದ್ದ ಕಾರ್ಯಕರ್ತರ ಸಭೆ ಉದ್ಘಾಟಿಸಿ ಅವರು ಮಾತನಾಡಿದರು.
ಚುನಾವಣೆಯಲ್ಲಿ ಜನರಿಂದ ತಿರಸ್ಕಾರಗೊಂಡು ಸೋತ ಕೂಡಲೇ ಸುಳ್ಳಿನ ಹಾಗೂ ಕೋಮುವಾದಿ ಬಿಜೆಪಿಗೆ ಸೇರಿ ನನ್ನನ್ನು ಸೋಲಿಸಲು ಸಾಧ್ಯವೇ? ಸೋತವರ ಸಂಘ ಕಟ್ಟಿಕೊಂಡು ಕೆಲವರು ಖರ್ಗೆ ಅದು ಮಾಡಿಲ್ಲ, ಇದು ಮಾಡಿಲ್ಲ ಎಂದು ನನ್ನ ವಿರುದ್ಧ ಪ್ರಚಾರ ಮಾಡುತ್ತಾ ತಿರುಗಾಡುತ್ತಿದ್ದಾರೆ. ಆದರೆ ನೀವು ಕಾಂಗ್ರೆಸ್‌ ಪಕ್ಷದಲ್ಲಿದ್ದುಕೊಂಡು ನಿವೇನ್‌ ಜನರಿಗೆ ಉಪಕಾರ
ಮಾಡಿದ್ದೀರಿ ಹೇಳಿ? ಅದನ್ನು ಬಿಟ್ಟು ಕಾಂಗ್ರೆಸ್‌ ಪಕ್ಷದಿಂದ ಗೆದ್ದು ಅ ಧಿಕಾರ, ಸಚಿವ ಸ್ಥಾನ ಪಡೆದು, ಖರ್ಗೆ ನಮ್ಮ ಪಾಲಿಗೆ ದೇವರು ಎಂದು ಹೇಳಿ, ಸೋತ ಕೂಡಲೇ ಖರ್ಗೆ ಅವರು ಕಲಬುರಗಿಗೆ ಏನು ಮಾಡಿದ್ದಾರೆ? ಎಂದು ಕೇಳುತ್ತಿರಲ್ಲ ಎಂದು ಕಾಂಗ್ರೆಸ್‌ ತೊರೆದವರ ವಿರುದ್ಧ ವಾಗ್ಧಾಳಿ ನಡೆಸಿದರು.

ಕಲಬುರಗಿ ಜನತೆಗೆ ಗೊತ್ತು ನಾನು ಏನೇನು ಮಾಡಿದ್ದೇನೆ ಎನ್ನುವುದು. ಕಲಬರುಗಿ ಜನರ ಆಶೀರ್ವಾದ ಸದಾ ನನ್ನ ಮೇಲಿದೆ. ಅವರ ಆಶಿರ್ವಾದದಿಂದಲೇ ನಾನು ಅಧಿಕಾರದಲ್ಲಿದ್ದೇನೆ. ಕಲಬುರಗಿ ಜನರ ಆಶಿರ್ವಾದ ಇರುವವರೆಗೂ ನನ್ನನ್ನು ಸೋಲಿಸಲು ಯಾರಿಂದಲೂ ಆಗುವುದಿಲ್ಲ ಎಂದು ಹೇಳಿದರು.
ನನ್ನ ರಾಜಕೀಯ ಹಣೆಬರಹ ಬರೆಯುವವರು
ಮತದಾರರು. ನನಗೆ ಅಧಿಕಾರ ನೀಡುವವರು ಮತದಾರರು. ನನಗೆ ಸೋಲಿಸುವ ತಾಕತ್ತು ಸೋತವರಿಗೆ ಎಲ್ಲಿದೆ. ದ್ರೋಹದ ಕೆಲಸ ಮಾಡುವವರನ್ನು ಜನರು ಕ್ಷಮಿಸುವುದಿಲ್ಲ. ಸುಮ್ನೆ ಬಿಡುವುದೂ ಇಲ್ಲ. ಮೋದಿ ಹೆಸರಲ್ಲಿ ಮತಭಿಕ್ಷೆ ಬೇಡುವ ನಿಮಗೆ ಅದೇನು ನೈತಿಕತೆ ಇದೆ. ವ್ಯಕ್ತಿ ಹೆಸರು ಬಿಟ್ಟು ಕೆಲಸದ ಆಧಾರದಲ್ಲಿ ಮತ ಕೇಳಿ ಎಂದು ತರಾಟೆಗೆ ತೆಗೆದುಕೊಂಡರು.

ರಾಜಕೀಯವಾಗಿ ನಮ್ಮನ್ನು ಮಣ್ಣಲ್ಲಿ ಹೂತುಹಾಕುವ ದುಸ್ಸಾಹಸ ಮಾಡುತ್ತಿದ್ದಾರೆ. ಅವರಿಗೇನ್‌ ಗೋತ್ತು ನಾನು ಬೀಜ ಎನ್ನುವುದು. ನೀವು ಮಣ್ಣಲ್ಲಿ ಹೂತುಹಾಕುವ ಪ್ರಯತ್ನ ಮಾಡಿದರೂ ಮತ್ತೆ ಮೇಲೆ ಬರುವುದೇ ಬೀಜದ ಗುಣ ಎಂಬ ಸತ್ಯವನ್ನು ಮರೆಯಬೇಡಿ. ನಾನು ಕಲ್ಲಬಂಡೆ ಮೇಲೆ ನಿಂತಿದ್ದೇನೆ. ಕಲಬುರಗಿ ಜನತೆ ಮುಂದೆ ಮೋದಿಯ ಸುಳ್ಳಿನ ಆಟ ನಡೆಯುವುದಿಲ್ಲ ಎಂದರು.

ಮಾಜಿ ಸಚಿವ ಬಾಬುರಾವ ಚವ್ಹಾಣ ಮಾತನಾಡಿ, ಡಾ| ಉಮೇಶ ಜಾಧವ ಅವರಿಗೆ ಕಾಂಗ್ರೆಸ್‌ ಪಕ್ಷ ಉಪಕಾರ ಮಾಡಿತ್ತು. ಆದರೆ ಅವರು ಉಪಕಾರ ಮಾಡಿದ ಪಕ್ಷ ಬಿಟ್ಟು ದ್ರೋಹ ಮಾಡಿದ್ದಾರೆ. ಇವರಿಗೆ ಕಲಬುರಗಿ ಜನರೆ ಲೋಕಸಭೆ ಚುನಾವಣೆಯಲ್ಲಿ ತಕ್ಕ ಪಾಠ ಕಲಿಸುತ್ತಾರೆ. ಇಡೀ ಬಂಜಾರ ಸಮಾಜ ಅವರ ಹಿಂದೆ ಇಲ್ಲ.
ಚುನಾವಣೆಯಲ್ಲಿ ಅಧಿಕ ಸಂಖ್ಯೆಯಲ್ಲಿ ಬಂಜಾರ ಜನರು ಮಲ್ಲಿಕಾರ್ಜುನ ಖರ್ಗೆ ಅವರನ್ನು ಬೆಂಬಲಿಸಲಿದ್ದಾರೆ ಎಂದು ಹೇಳಿದರು.

Advertisement

ಕಾಂಗ್ರೆಸ್‌ ಮುಖಂಡ ತಿಪ್ಪಣಪ್ಪ ಕಮಕನೂರ, ಮುಕ್ತಾರ ಪಟೇಲ್‌, ಡಾ| ದಾವುದ್‌ ಪಟೇಲ್‌, ಬ್ಲಾಕ್‌ ಕಾಂಗ್ರೆಸ್‌ ಜಿಲ್ಲಾಧ್ಯಕ್ಷ ಜಗದೇವ ಗುತ್ತೇದಾರ, ತಾಲೂಕು ಅಧ್ಯಕ್ಷ ಭೀಮಣ್ಣ ಸಾಲಿ, ಜಿಪಂ ಸದಸ್ಯೆ ಶಶಿಕಲಾ ತಿಮ್ಮನಾಯಕ, ಶಿವರುದ್ರ ಭೀಣಿ, ಶಿವಾನಂದ ಪಾಟೀಲ, ತಾಪಂ ಸದಸ್ಯ ಮುನಿಯಪ್ಪ ಕೊಳ್ಳಿ, ಆಲಂ ಖಾನ್‌, ವೀರಣ್ಣಗೌಡ
ಪರಸರೆಡ್ಡಿ, ರಾಜಗೋಪಾಲರೆಡ್ಡಿ, ಅಜೀಜ ಸೇs…, ಶ್ರೀನಿವಾಸ ಸಗರ, ಎಂ.ಎ. ರಶೀದ್‌, ವಿರೂಪಾಕ್ಷಪ್ಪ ಗಡ್ಡದ್‌, ಶಂಭುಲಿಂಗ ಗುಂಡಗುರ್ತಿ, ಮಹ್ಮದ್‌ ಇಸಾಕ್‌ ಸೌದಾಗರ್‌, ರಶೀದ್‌ ಪಠಾಣ, ಭೀಮರಾವ ತೋಟದ್‌, ಸೈಯದ್‌ ಅಹ್ಮದ್‌ ಪಠಾಣ, ಸಾಬಣ್ಣ ಕೊಳ್ಳಿ ಮತ್ತಿತರರು ಇದ್ದರು.

ರಾಜಶೇಖರ ತಿಮ್ಮನಾಯಕ ಸ್ವಾಗತಿಸಿದರು, ರೇವಣಸಿದ್ದಪ್ಪ ಕೊಂಚೂರ ನಿರೂಪಿಸಿ, ವಂದಿಸಿದರು. ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್‌ ಸರ್ಕಾರ ಕೋಲಿ ಸಮಾಜವನ್ನು ಎಸ್‌.ಟಿ ಪಟ್ಟಿಗೆ ಸೇರಿಸುವಂತೆ ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರ್ಕಾರಕ್ಕೆ ಶಿಫಾರಸು ಕಳುಹಿಸಲಾಗಿತ್ತು. ಎರಡು ಸಲ ಮೋದಿ ಸರ್ಕಾರ ಪ್ರಸ್ತಾವ ವಾಪಸು ಕಳುಹಿಸಿದೆ. ಈಗ ಕೆಲವರು ಎಸ್‌.ಟಿಗೆ ಸೇರಿಸಲು ಬಿಜೆಪಿಗೆ ಹೋಗಿರುವುದಾಗಿ ಹೇಳುತ್ತಾ ತಿರುಗುತ್ತಿದ್ದಾರೆ.
ಇದೆಂತಹ ನಾಚಿಕೆಗೇಡು ಕೆಲಸ.
ಆರ್‌.ಬಿ. ತಿಮ್ಮಾಪುರ, ಸಚಿವ

Advertisement

Udayavani is now on Telegram. Click here to join our channel and stay updated with the latest news.

Next