Advertisement

ಮೋದಿ ಸಾಧನೆ ಪಟ್ಟಿ ಕೊಡಲಿ

11:04 AM Apr 18, 2019 | Naveen |

ಕಲಬುರಗಿ: ನಾನು ಮುಖ್ಯಮಂತ್ರಿಯಾಗಿ ಐದು ವರ್ಷ ಅಧಿಕಾರ ನಡೆಸಿದ್ದೇನೆ, ನನ್ನ ಸರ್ಕಾರದ ಸಾಧನೆ ಪಟ್ಟಿ ಕೊಡುತ್ತೇನೆ. ಅದೇ ರೀತಿ ಪ್ರಧಾನಿಯಾಗಿ ಐದು ವರ್ಷದ ಸಾಧನೆ ಪಟ್ಟಿಯನ್ನು ಮೋದಿ ಕೊಡಲಿ ಎಂದು ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಸವಾಲೆಸೆದರು.

Advertisement

ಅಫಜಲಪುರದ ನ್ಯಾಷನಲ್‌ ಫಂಕ್ಷನ್‌ ಹಾಲ್‌ನಲ್ಲಿ ಹಮ್ಮಿಕೊಳ್ಳಲಾಗಿದ್ದ ಚುನಾವಣೆ ಪ್ರಚಾರ ಸಭೆಯಲ್ಲಿ ಮಾತನಾಡಿದ ಅವರು, ಸತತವಾಗಿ 11 ಬಾರಿ ಡಾ| ಮಲ್ಲಿಕಾರ್ಜುನ ಖರ್ಗೆ ಅವರನ್ನು ಕಲಬುರಗಿ ಮತದಾರರು ಗೆಲ್ಲಿಸಿದ್ದು ತಮಾಷೆಯಲ್ಲ. ಖರ್ಗೆ ಅವರ ಅಭಿವೃದ್ಧಿ ಕೆಲಸ ನೋಡಿ ಮತ ಹಾಕಿದ್ದಾರೆಯೇ ಹೊರತು ಬಿಜೆಪಿಗರ ಬಣ್ಣದ ಮಾತಿಗಲ್ಲ. ನರೇಂದ್ರ ಮೋದಿ ಅವರಿಗೆ ಮಲ್ಲಿಕಾರ್ಜುನ ಖರ್ಗೆ ಎಂದರೆ ಭಯ.

ಹೀಗಾಗಿ ಅವರನ್ನು ಸೋಲಿಸಲು ದಿಲ್ಲಿಯಿಂದ ಹಳ್ಳಿ ನಾಯಕರ ತನಕ ಸಂಚು ರೂಪಿಸಿದ್ದಾರೆ. ಆದರೆ ಲೋಕಸಭೆಯಲ್ಲಿ ಮಲ್ಲಿಕಾರ್ಜುನ ಖರ್ಗೆ ಇದ್ದರೆ ಲೋಕಸಭೆಗೆ ಗೌರವ ಇದ್ದಂತೆ ಎಂದರು. ಕಾಂಗ್ರೆಸ್‌ ಪಕ್ಷದಲ್ಲಿದ್ದು ಅ ಧಿಕಾರ ಅನುಭವಿಸಿ
ಉಂಡ ಮನೆಗೆ ದ್ರೋಹ ಬಗೆದ ಮಾಲೀಕಯ್ಯ ಗುತ್ತೇದಾರ, ಬಾಬುರಾವ ಚಿಂಚನಸೂರ ಹಾಗೂ ಉಮೇಶ ಜಾಧವರ ಕೊಡುಗೆ ಕಲಬುರಗಿಗೆ ಏನಿದೆ? ಉಮೇಶ ಜಾಧವ ಗೋಮುಖ ವ್ಯಾಘ್ರ, ತನ್ನನ್ನೇ ತಾನು ಮಾರಿಕೊಂಡವ ಕಲಬುರಗಿ ಬಿಡ್ತಾನಾ? ಹೀಗಾಗಿ ಮಾರಿಕೊಂಡವರಿಗೆ ಮನ್ನಣೆ ಕೊಡುವುದನ್ನು ಬಿಟ್ಟು ಕಣ್ಣಿಗೆ ಕಾಣುವಂತ, ಅಭಿವೃದ್ಧಿ ಕೆಲಸ ಮಾಡಿದ ಮಲ್ಲಿಕಾರ್ಜುನ ಖರ್ಗೆ ಅವರಿಗೆ ಮತ ಕೊಡಿ ಎಂದು ಮನವಿ ಮಾಡಿದರು.

ಸಂವಿಧಾನ ಬದಲಾಯಿಸುತ್ತೇವೆ, ಮಿಸಲಾತಿ ತೆಗೆಯುತ್ತೇವೆ ಎನ್ನುವ ಬಿಜೆಪಿಗರಿಗೆ ಮತ ಕೇಳುವ ನೈತಿಕತೆ ಇಲ್ಲ, ಅನಂತ ಕುಮಾರ ಹೆಗಡೆ ಒಬ್ಬ ನಾಲಾಯಕ ಆತ ಗ್ರಾ.ಪಂ ಸದಸ್ಯನಾಗಲು
ನಾಲಾಯಕ್‌ ಆಗಿದ್ದಾನೆ. ತೇಜಸ್ವಿ ಸೂರ್ಯ ಅಲ್ಲ ಆತ ಅಮಾವಾಸ್ಯೆಯ ಕತ್ತಲು ಇಂತವರಿಗೆ ಮತ ನೀಡಬೇಡಿ ಎಂದು ಗುಡುಗಿದರು.

ಕಲಬುರಗಿಯಲ್ಲಿ ಉಮೇಶ ಜಾಧವ ಠೇವಣಿ ಕಳೆದುಕೊಳ್ಳುವಂತೆ ಕಲಬುರಗಿಯ ಮತದಾರರು ನಿರ್ಣಯ ಮಾಡಬೇಕು. ಮಲ್ಲಿಕಾರ್ಜುನ ಖರ್ಗೆ ದೇಶದ ಸಂಪತ್ತು. ಮೋದಿ ಸರ್ಕಾರದ ವೈಫಲ್ಯ, ಭ್ರಷ್ಟಾಚಾರ, ಜನ ವಿರೋಧಿ  ನೀತಿಗಳನ್ನು ಖರ್ಗೆ ಸಮರ್ಥವಾಗಿ ಎದುರಿಸಿದ್ದಾರೆ. ಅಂತವರನ್ನು ಕಲಬುರಗಿ ಜನ ಯಾವತ್ತೂ ಮರೆಯೋದಿಲ್ಲ. ಅವರ ಗೆಲುವು ನಿಶ್ಚಿತವಾಗಿದೆ. ಆದರೆ ಅಫಜಲಪುರ ಮತಕ್ಷೇತ್ರದಿಂದ 25 ಸಾವಿರಕ್ಕೂ ಹೆಚ್ಚು ಅಂತರ ನೀಡುವ ಕೆಲಸ ಮಾಡಿ ಎಂದು ಮನವಿ ಮಾಡಿದರು.

Advertisement

ಸಚಿವ ಎಂ.ಸಿ. ಮನಗೂಳಿ, ಮಾಜಿ ಸಚಿವ ಸಿ.ಎಂ. ಇಬ್ರಾಹಿಂ ಮಾತನಾಡಿ, ಮಲ್ಲಿಕಾರ್ಜುನ ಖರ್ಗೆ ಅಭಿವೃದ್ಧಿ ಕೆಲಸ ನೋಡಿ ಮತ ನೀಡಿ, ಖರ್ಗೆ ಬಳಿ ರಾಜಕೀಯ ಕಲಿತವರೆ ಅವರ ವಿರುದ್ಧ ಸ್ಪರ್ಧೆ ಮಾಡುತ್ತಾರೆಂದರೆ ಇದಕ್ಕಿಂತ ಹಾಸ್ಯಾಸ್ಪದ ಇನ್ನೊಂದಿಲ್ಲ. ಇದು ಮಲ್ಲಿಕಾರ್ಜುನ ಖರ್ಗೆ ವಿರುದ್ಧದ ಚುನಾವಣೆ ಅನ್ನೊದಕ್ಕಿಂತ ಪ್ರಜಾಪ್ರಭುತ್ವದ ಅಳಿವು, ಉಳಿವಿನ ಚುನಾವಣೆಯಾಗಿದೆ ಎಂದರು.

ಶಾಸಕ ಎಂ.ವೈ. ಪಾಟೀಲ ಮಾತನಾಡಿ, ಕಲಬುರಗಿಯನ್ನು ಕರ್ನಾಟಕ ಮಾತ್ರವಲ್ಲ ದೇಶವೇ ಗಮನಿಸುವಂತೆ ಮಲ್ಲಿಕಾರ್ಜುನ ಖರ್ಗೆ ಮಾಡಿದ್ದಾರೆ. ನೂರಾರು ಅಭಿವೃದ್ಧಿ ಕೆಲಸಗಳನ್ನು ಮಾಡಿ ಜನ ಕಲ್ಯಾಣ ಮಾಡಿದ್ದಾರೆ.

ಹೀಗಾಗಿ ಮಲ್ಲಿಕಾರ್ಜುನ ಖರ್ಗೆ ಅವರ ಗೆಲುವು ನಿಶ್ಚಿತವಾಗಿದ್ದು, ಅಫಜಲಪುರ ಮತಕ್ಷೇತ್ರದಿಂದ 25 ಸಾವಿರಕ್ಕೂ ಹೆಚ್ಚು ಲೀಡ್‌ ಬರುವುದಲ್ಲಿ ಸಂಶಯವಿಲ್ಲ ಎಂದು ಹೇಳಿದರು. ಡಾ| ಮಲ್ಲಿಕಾರ್ಜುನ ಖರ್ಗೆ ಮಾತನಾಡಿ, ಈ ಚುನಾವಣೆ ಕೇವಲ ನನ್ನನ್ನು ಸೋಲಿಸುವ ಹುನ್ನಾರ ಮಾತ್ರವಲ್ಲ, ಸಂವಿಧಾನ, ಪ್ರಜಾಪ್ರಭುತ್ವದ ಅಳಿವು, ಉಳಿವಿನ ಚುನಾವಣೆಯಾಗಿದೆ. ದಿಲ್ಲಿಯಿಂದ ಗಲ್ಲಿ ತನಕ ಪ್ರಜಾಪ್ರಭುತ್ವ ವಿರೋಧಿಗಳೆಲ್ಲ ಒಂದಾಗಿದ್ದಾರೆ. ಅವರಿಂದ ದೇಶಕ್ಕೆ ಗಂಡಾಂತರ ಇದೆ. ಹೀಗಾಗಿ ಪ್ರಜಾಪ್ರಭುತ್ವ ವಿರೋಧಿಗಳಿಗೆ ಮತದಾರ ಪ್ರಭುಗಳು ಬುದ್ಧಿ ಕಲಿಸಬೇಕು. ಕಲಬುರಗಿ ಮತದಾರರ ಆಶೀರ್ವಾದ ಇರುವ ತನಕ ಮೋದಿ ಮತ್ತವರ ಸಂಗಡಿಗರಿಂದ ಹಾಗೂ ಇಲ್ಲಿನ ಕೆಲ ನಾಯಕರಿಂದ ನನ್ನನ್ನು ಸೋಲಿಸಲು ಆಗುವುದಿಲ್ಲ. ಹೀಗಾಗಿ ದಯಮಾಡಿ ಕೋಮುವಾದಿ ಪಕ್ಷದವರಿಗೆ ಈ ಚುನಾವಣೆಯಲ್ಲಿ ಮತದಾರರು ಬುದ್ಧಿ ಕಲಿಸಬೇಕೆಂದು ಮನವಿ ಮಾಡಿದರು.

ಜಿಲ್ಲಾಧ್ಯಕ್ಷ ಜಗದೇವ ಗುತ್ತೇದಾರ, ತಾಲೂಕು ಅಧ್ಯಕ್ಷ ಮಹಾಂತೇಶ ಪಾಟೀಲ, ಶರಣಪ್ಪ ಮಟ್ಟೂರ, ಮುಖಂಡರಾದ ರಾಜೇಂದ್ರಕುಮಾರ ಪಾಟೀಲ, ಚಂದ್ರಕಾಂತ ಪಾಟೀಲ, ರಮೇಶ
ನಾಟಿಕಾರ, ದಿಲೀಪ ಪಾಟೀಲ, ಮಕ್ಬೂಲ್‌ ಪಟೇಲ್‌, ಮತೀನ್‌ ಪಟೇಲ್‌, ಶಾಮರಾವ ಪ್ಯಾಟಿ, ಪಪ್ಪು ಪಟೇಲ್‌, ಅರುಣ ಪಾಟೀಲ,
ಸಂಜು ಪಾಟೀಲ, ಚಂದು ದೇಸಾಯಿ, ಮತೀನ್‌ ಪಟೇಲ್‌, ಸಿದ್ಧಾರ್ಥ ಬಸರಿಗಿಡ, ದೇವೇಂದ್ರಪ್ಪ ಮಟ್ಟೂರ, ರವಿ ಶೆಟ್ಟಿ, ಶರಣು ಕುಂಬಾರ ಇತರರು ಇದ್ದರು.

Advertisement

Udayavani is now on Telegram. Click here to join our channel and stay updated with the latest news.

Next