ಕಲಬುರಗಿ: ಕಳೆದ ಲೋಕಸಭೆ ಚುನಾವಣೆಯಲ್ಲಿ ಉತ್ತಮ ಲೀಡ್ ಕೊಟ್ಟ ಕ್ಷೇತ್ರವಾಗಿದ್ದರಿಂದ ಈ ಸಲವೂ ಸೇಡಂ ಕ್ಷೇತ್ರ ಗಮನ ಸೆಳೆಯುತ್ತಿದ್ದು, ಕಾಂಗ್ರೆಸ್-ಬಿಜೆಪಿ ಇಬ್ಬರಲ್ಲಿ ಯಾರಿಗೆ ಲೀಡ್ ಬರಬಹುದು ಎಂದು ಕ್ಷೇತ್ರಾದ್ಯಂತ ತುರುಸಿನ ಚರ್ಚೆ ನಡೆದಿದೆ.
ಮಾಜಿ ಸಚಿವ ಡಾ| ಶರಣಪ್ರಕಾಶ ಪಾಟೀಲ ಲೋಕಸಭೆ ಚುನಾವಣೆ ಸಂದರ್ಭದಲ್ಲಿ ಎಲ್ಲೆಡೆ ಓಡಾಡಿ ಪ್ರಚಾರ ಮಾಡಿದ್ದಾರೆ. ಹೀಗಾಗಿ ಕಾಂಗ್ರೆಸ್‌ಗೆ ಹೆಚ್ಚಿನ ಲೀಡ್ ಬರುತ್ತದೆ ಎನ್ನುವ ವಿಶ್ವಾಸ ವ್ಯಕ್ತಪಡಿಸುತ್ತಾರೆ. ಅದೇ ರೀತಿ ಎಲ್ಲೆಡೆ ಬಿಜೆಪಿ ಪರ ಅಲೆ ಇರುವುದರಿಂದ ತಮಗೆ ಲಾಭವಾಗಲಿದೆ ಎಂದು ಕ್ಷೇತ್ರದ ಶಾಸಕ ರಾಜಕುಮಾರ ಪಾಟೀಲ ತೇಲ್ಕೂರ ಅಭಿಪ್ರಾಯ ವ್ಯಕ್ತಪಡಿಸುತ್ತಾರೆ. ಹೀಗಾಗಿ ಯಾವ ಪಕ್ಷಕ್ಕೆ ಲೀಡ್ ಬರಬಹುದು ಎನ್ನುವ ಕುತೂಹಲ ಹೆಚ್ಚಿದೆ.
ಕಳೆದ ವಿಧಾನಸಭೆ ಚುನಾವಣೆ ವೇಳೆ ವೀರಶೈವ-ಲಿಂಗಾಯತ ನಡುವಿನ ವೈಚಾರಿಕ ವಿಭಿನ್ನತೆ, ಲಿಂಗಾಯತ ಸ್ವತಂತ್ರದ ಧರ್ಮ ವಿಷಯ ಪ್ರಸ್ತಾಪಕ್ಕೆ ಬಂದಂತೆ, ಪ್ರಸ್ತುತ ಲೋಕಸಭೆ ಚುನಾವಣೆಯಲ್ಲೂ ಇದೇ ವಿಷಯ ಪ್ರಾಮುಖ್ಯತೆ ಪಡೆದಿತ್ತು. ಒಟ್ಟಾರೆ ಸೇಡಂ ಕ್ಷೇತ್ರ ಮೂಲಭೂತ ಸಮಸ್ಯೆಗಳಿಗಿಂತ ಧರ್ಮದ ಸಂಬಂಧವಾಗೇ ಹೆಚ್ಚು ಚರ್ಚೆಗೆ ಬರುತ್ತಿರುವುದು ಚುನಾವಣೆಯಲ್ಲಿ ಕಂಡು ಬರುತ್ತಿದೆ.
ಸೇಡಂ ಕ್ಷೇತ್ರದಲ್ಲಿ ಒಟ್ಟಾರೆ 216353 ಮತದಾರರ ಪೈಕಿ 148162 ಮತದಾರರು ತಮ್ಮ ಹಕ್ಕು ಚಲಾಯಿಸಿದ್ದಾರೆ. 74709 ಪುರುಷರು ಹಾಗೂ 73463 ಮಹಿಳಾ ಮತದಾರರು ಇದರಲ್ಲಿದ್ದಾರೆ. ಜಿಲ್ಲೆಯಲ್ಲಿಯೇ ಅತ್ಯಂತ ಹೆಚ್ಚಿನ ಪ್ರಮಾಣದಲ್ಲಿ ಮತದಾನ ಈ ಕ್ಷೇತ್ರದಲ್ಲಿ ಆಗಿದ್ದು, ಶೇ. 68ರಷ್ಟು ಮತದಾನವಾಗಿದೆ. ಜಿಲ್ಲೆಯಲ್ಲಿಯೇ ಹೆಚ್ಚಿನ ಮತದಾನ ಈ ಕ್ಷೇತ್ರದಲ್ಲಿ ಆಗಿರುವುದರಿಂದ ಬಿಜೆಪಿಯವರು ಲಾಭವಾಗುವುದು ಎನ್ನುತ್ತಿದ್ದರೆ ಕಾಂಗ್ರೆಸ್-ಬಿಜೆಪಿ ಎರಡೂ ಪಕ್ಷದ ಮುಖಂಡರು ತಮ್ಮ ಪಕ್ಷಕ್ಕೇ ಲೀಡ್ ಬರುತ್ತದೆ ಎನ್ನುವ ವಿಶ್ವಾಸ ವ್ಯಕ್ತಪಡಿಸುತ್ತಿದ್ದಾರೆ. ಒಟ್ಟಾರೆ ಇವೆಲ್ಲ ಬೆಳವಣಿಗೆ ಅವಲೋಕಿಸಿದರೆ ನಾಲ್ಕೈದು ಸಾವಿರ ಬರಬಹುದು ಎನ್ನಲಾಗುತ್ತಿದೆ. ಸೇಡಂ ಪಟ್ಟಣದಲ್ಲಿ ಬಿಜೆಪಿಗೆ ಲೀಡ್ ಬಂದರೆ ಗ್ರಾಮೀಣ ಭಾಗದಲ್ಲಿ ಕಾಂಗ್ರೆಸ್‌ಗೆ ಉತ್ತಮ ಒಲವು ತೋರಲಾಗಿದೆ ಎಂದು ಹೇಳಲಾಗುತ್ತಿದೆ. ಒಟ್ಟಾರೆ ಇದಕ್ಕೆಲ್ಲ ಮೇ 23 ಉತ್ತರ ನೀಡಲಿದೆ.
ಮಲ್ಲಿಕಾರ್ಜುನ ಖರ್ಗೆ ಹಾಗೂ ಡಾ| ಶರಣಪ್ರಕಾಶ ಪಾಟೀಲ ವಿರುದ್ಧ ಮತ ಚಲಾಯಿಸಲು ಕಾರಣಗಳೇ ಇಲ್ಲ. ಕಳೆದ ವಿಧಾನಸಭೆ ಚುನಾವಣೆಯಲ್ಲಿ ಬಿಜೆಪಿ ಅಪಪ್ರಚಾರದಿಂದ ಕಾಂಗ್ರೆಸ್‌ಗೆ ಕಡಿಮೆ ಮತಗಳು ಬಂದವು. ಆದರೆ ಲೋಕಸಭೆ ಚುನಾವಣೆಯಲ್ಲಿ ಜನತೆ ಮತ್ತೆ ಕಾಂಗ್ರೆಸ್ ಕೈ ಹಿಡಿದಿದ್ದಾರೆ. ಹೀಗಾಗಿ ಪಕ್ಷ ಕನಿಷ್ಠ 10 ಸಾವಿರ ಲೀಡ್ ಪಡೆಯುತ್ತದೆ. ಮಾಜಿ ಸಚಿವ ಡಾ| ಶರಣಪ್ರಕಾಶ ಪಾಟೀಲ ಚುನಾವಣೆಯಲ್ಲಿ ಒಂದೂವರೆ ತಿಂಗಳ ಪರ್ಯಂತ ಕ್ಷೇತ್ರದಲ್ಲಿ ಓಡಾಡಿದ್ದಾರೆ. ಎಲ್ಲರನ್ನು ವಿಶ್ವಾಸಕ್ಕೆ ತೆಗೆದುಕೊಂಡಿದ್ದಾರೆ.
• ನಾಗೇಶ್ವರರಾವ್ ಮಾಲಿಪಾಟೀಲ,
ಅಧ್ಯಕ್ಷರು, ಸೇಡಂ ಬ್ಲಾಕ್ ಕಾಂಗ್ರೆಸ್
ಈ ಸಲ ಎಲ್ಲ ಸಮುದಾಯದ ಮತಗಳು ಬಿಜೆಪಿಗೆ ಬಂದಿವೆ. ಜತೆಗೆ ಮತದಾರರು ಪ್ರಧಾನಿ ಮೋದಿ ಮೇಲೆ ಹೊಂದಿರುವ ಅಭಿಮಾನ ನೋಡಿದರೆ ಕಾಂಗ್ರೆಸ್‌ಗೆ ಕಳೆದ ಸಲ ಗಳಿಸಿದ್ದ ಮತಗಳು ಬರೋದಿಲ್ಲ. ಕಾಂಗ್ರೆಸ್-ಬಿಜೆಪಿ ಸಮಾನ ಮತ ಗಳಿಸಲಿವೆ ಎಂದು ಅಂದಾಜಿಸಲಾಗಿದೆ. ದೇಶದ ದೃಷ್ಟಿಯಿಂದ ಬಿಜೆಪಿಗೆ ಮತ ಎಂಬುದಾಗಿ ಮತದಾರರು ಹೋದಲ್ಲೆಲ್ಲ ಹೇಳಿದ್ದರಿಂದ ಬಿಜೆಪಿಗೆ ಕನಿಷ್ಠ ಸಾವಿರ ಮತಗಳಾದರೂ ಲೀಡ್ ಬರುತ್ತವೆ ಎನ್ನು ದೃಢ ವಿಶ್ವಾಸ ಹೊಂದಲಾಗಿದೆ.
• ನಾಗಪ್ಪ ಕೊಳ್ಳಿ,
ತಾಲೂಕಾ ಬಿಜೆಪಿ ಅಧ್ಯಕ್ಷರು, ಸೇಡಂ
ಕಾಂಗ್ರೆಸ್‌ನೊಂದಿಗೆ ಒಗ್ಗೂಡಿ ಕೆಲಸ ಮಾಡಿದ್ದೇವೆ. ತಾಲೂಕಿನಾದ್ಯಂತ ಹೋದ ಕಡೆಯಲ್ಲೆಲ್ಲ ಮತದಾರರಿಂದ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದೆ. ಕನಿಷ್ಠ 10 ಸಾವಿರ ಲೀಡ್ ಕಾಂಗ್ರೆಸ್ ಪಡೆಯಲಿದೆ ಎನ್ನುವ ವಿಶ್ವಾಸ ಹೊಂದಲಾಗಿದೆ. ಸೇಡಂ ತಾಲೂಕಿನಲ್ಲಿ ಮೈತ್ರಿ ಧರ್ಮ ಪಾಲಿಸಲಾಗಿದೆ. ಅಲ್ಲದೇ ಕಾಂಗ್ರೆಸ್ ಪಕ್ಷದವರು ಸಹ ತಮ್ಮನ್ನು ವಿಶ್ವಾಸಕ್ಕೆ ತೆಗೆದುಕೊಂಡು ಜತೆಯಲ್ಲಿ ಕರೆದುಕೊಂಡು ಹೋಗಿದ್ದಾರೆ. ಸೇಡಂದಲ್ಲಿ ಜೆಡಿಎಸ್ ಅಸ್ತಿತ್ವದಲ್ಲಿದ್ದು, ಇವೆಲ್ಲದರ ಬೆಂಬಲ ಕಾಂಗ್ರೆಸ್ ಪಕ್ಷಕ್ಕೆ ಧಕ್ಕಲಿದೆ. ಹೀಗಾಗಿ ಕಾಂಗ್ರೆಸ್ ಅಭ್ಯರ್ಥಿ ಮಲ್ಲಿಕಾರ್ಜುನ ಖರ್ಗೆ ಅವರ ಗೆಲುವಿಗೆ ಅನುಕೂಲವಾಗಲಿದೆ ಎನ್ನುವ ವಿಶ್ವಾಸವಿದೆ.
• ಜಗನ್ನಾಥರೆಡ್ಥಿ ಗೋಟುರ,
ಜೆಡಿಎಸ್ ತಾಲೂಕಾಧ್ಯಕ್ಷರು, ಸೇಡಂ
ಹಣಮಂತರಾವ ಭೈರಾಮಡಗಿ