Advertisement
ನಗರದಲ್ಲಿ ಕರ್ನಾಟಕ ಪ್ರದೇಶ ಕುರುಬರ ಸಂಘ ಜಿಲ್ಲಾ ಶಾಖೆ, ಕುರುಬ ಗೊಂಡ ನೌಕರರ ಸಂಘ ಜಿಲ್ಲಾ ಶಾಖೆ ಮತ್ತು ಕನಕ ಡೆವಲಪರ್ಸ್ ವತಿಯಿಂದ ರವಿವಾರ ಹಮ್ಮಿಕೊಂಡಿದ್ದ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ, ಸನ್ಮಾನ ಸಮಾರಂಭದಲ್ಲಿ ಅವರು ಮಾತನಾಡಿದರು. ಕಲ್ಯಾಣ ಕರ್ನಾಟಕ ಮರು ನಾಮಕರಣ ಮಾಡುವ ಪ್ರಸ್ತಾವನೆ ನಮ್ಮ ಕಾಂಗ್ರೆಸ್ ಸರ್ಕಾರದ ಅವಧಿಯಲ್ಲೇ ಇತ್ತು. ಈಗ ಬಿಜೆಪಿಯವರು ಬದಲಿಸಿದ್ದಾರೆ. ಇದಕ್ಕೆ ನಮ್ಮ ಅಭ್ಯಂತರವೇನು ಇಲ್ಲ. ನಾನು ಎಚ್‌ಕೆಆರ್‌ಡಿಬಿ ಅನುದಾನವನ್ನು 1,500 ಕೋಟಿ ರೂ.ಗೆ ಹೆಚ್ಚಳ ಮಾಡಿದ್ದೆ.
ಅವರ ಶ್ರಮದಿಂದ ಈ ಭಾಗಕ್ಕೆ ಕಲಂ 371(ಜೆ) ಜಾರಿಯಾಗಿದೆ. ಇದರಿಂದ ಶಿಕ್ಷಣ ಮತ್ತು ಉದ್ಯೋಗದಲ್ಲಿ ಮೀಸಲಾತಿ ದೊರೆತಿದ್ದು, ಪ್ರತಿ ವರ್ಷ ಎಂಜಿನಿಯರಿಂಗ್, ಮೆಡಿಕಲ್ ಸೀಟುಗಳು ಸಿಗುತ್ತಿವೆ. ಬಿಜೆಪಿ ಸರ್ಕಾರ ಕಲಂ 371(ಜೆ) ಸಮರ್ಪಕವಾಗಿ ಅನುಷ್ಠಾನ ಮಾಡಿ ಅಭಿವೃದ್ಧಿಗೆ ಒತ್ತು ಕೊಡಬೇಕೆಂದು ಹೇಳಿದರು. ಪ್ರತಿಭೆಗೆ ಜಾತಿ ಇಲ್ಲ: ವಂಶ ಪಾರಂಪರ್ಯ ಮತ್ತು ಜಾತಿಯಿಂದ ಪ್ರತಿಭೆ ಬರುವುದಿಲ್ಲ. ಹಾಗೆ ಬುದ್ಧಿವಂತಿಕೆ, ಪ್ರತಿಭೆ, ಮೇಧಾವಿತನಕ್ಕೆ ಜಾತಿ ಕಾರಣವಲ್ಲ. ಗುಣಮಟ್ಟದ ಶಿಕ್ಷಣದ ಪಡೆದಾಗ ಪ್ರತಿಭಾವಂತ ಮಕ್ಕಳು ಬೆಳೆಯುತ್ತಾರೆ. ಗುರಿ, ಶ್ರದ್ಧೆ ಇರುವುದರೊಂದಿಗೆ ಶ್ರಮ ಪಟ್ಟರೆ ಮೇಧಾವಿಗಳಾಗಲು ಸಾಧ್ಯ ಎಂದರು.
Related Articles
Advertisement
ಮೀಸಲಾತಿ ಇರಲಿ: ದೇಶದಲ್ಲಿ ಜಾತಿಗಳು ಇರುವುದರಿಂದ ಜಾತಿ ವ್ಯವಸ್ಥೆ ಇದೆ. ಅಸಮಾನ ಸಮಾಜ ನಿರ್ಮಾಣಕ್ಕೂ ಜಾತಿ ವ್ಯವಸ್ಥೆ ಕಾರಣ. ಹೀಗಾಗಿ ಜಾತಿ ವ್ಯವಸ್ಥೆ ಇರುವವರೆಗೂ ಮೀಸಲಾತಿ ಇರಬೇಕೆಂದು ಸಿದ್ದರಾಮಯ್ಯ ಪ್ರತಿಪಾದಿಸಿದರು. ಹಸಿವು ಗೊತ್ತಿದ್ದವರಿಗೆ ಮಾತ್ರ ಬಡತನ, ಹಸಿವಿನ ಕಷ್ಟ ಅರ್ಥ ಮಾಡಿಕೊಳ್ಳಲು ಸಾಧ್ಯ. ಇದು ಗೊತ್ತಿದ್ದೆ ನಾನು ಮುಖ್ಯಮಂತ್ರಿಯಾಗಿದ್ದಾಗ ಅನ್ನ ಭಾಗ್ಯ ಯೋಜನೆ ಜಾರಿಗೆ ತಂದಿದ್ದೆ. ಆದರೆ, ವಿಧಾನಸೌಧದಲ್ಲಿ ಶಾಸಕರೊಬ್ಬರು ಉಚಿತ ಅಕ್ಕಿ ಕೊಟ್ಟು ಜನರನ್ನು ಸೋಮಾರಿ ಮಾಡಿದ್ರಿ ಎಂದರು. ಅದಕ್ಕೆ ಬಡವರು ಆರಾಮಾಗಿರಲಿ.
ಎರಡು ದಿನ ನೀವು ಕೆಲಸ ಮಾಡಿ ಎಂದಿದ್ದೆ ಎಂದು ಸ್ಮರಿಸಿದರು. ಅನೇಕ ಯೋಜನೆಗಳ ಜಾರಿಯೊಂದಿಗೆ ನಾನು ರೈತರ 8,168 ಕೋಟಿ ರೂ. ಸಾಲ ಮನ್ನಾ ಮಾಡಿದ್ದೆ. ಇದೆಲ್ಲ ಮಾಡಿದರೂ ಯಾಕೋ ಜನ ಕಳೆದ ಚುನಾವಣೆಯಲ್ಲಿ ನಮ್ಮ ಕೈಹಿಡಿಲಿಲ್ಲ ಎಂದು ಬೇಸರ ವ್ಯಕ್ತಪಡಿಸಿದರು.
ಕುರುಬ ಸಮಾಜದ ಮುಖಂಡ ದೇವೇಂದ್ರಪ್ಪ ಮರತೂರ ಮಾತನಾಡಿ, ಸರ್ಕಾರದ ಅನುದಾನ ತೆಗೆದುಕೊಳ್ಳದೆ ಜಿಲ್ಲೆಯಲ್ಲಿ ಸಮಾಜದಿಂದ ಹಾಸ್ಟೆಲ್ ನಡೆಸಲಾಗುತ್ತಿರುವ ರಾಜ್ಯದ ಮೊದಲ ಹಾಸ್ಟೆಲ್ ಇದು ಎಂದರು. ಕುರುಬ ಗೊಂಡ ಸಮಾಜಕ್ಕೆ ಸಿಂಧುತ್ವ ಪ್ರಮಾಣ ಪತ್ರ ಸಿಗುತ್ತಿಲ್ಲ. ಇದರಿಂದ ನಾಲ್ಕು ವರ್ಷದಿಂದ ಸಮಸ್ಯೆ ಎದುರಿಸುತ್ತಿದ್ದಾರೆ. ಇದರ ಸಮಸ್ಯೆ ಪರಿಹರಿಸಬೇಕು. ಅನುದಾನಿತ ಶಿಕ್ಷಣ ಸಂಸ್ಥೆಗಳ ಶಿಕ್ಷಕರ ಕಾಲ್ಪನಿಕ ವೇತನ ಕುರಿತ ಹೊರಟ್ಟಿ ವರದಿಯನ್ನು ಸರ್ಕಾರದ ಮೇಲೆ ಒತ್ತಡ ಹೇರಿ ಜಾರಿಗೆ ತರಬೇಕೆಂದು ಒತ್ತಾಯಿಸಿದರು.
ಕಾಗಿನೆಲೆ ಕನಕ ಗುರುಪೀಠದ ಸಿದ್ದರಾಮಾನಂದ ಪುರಿ ಸ್ವಾಮೀಜಿ ಸಾನ್ನಿಧ್ಯ ವಹಿಸಿದ್ದರು. ಶಾಸಕರಾದ ಪ್ರಿಯಾಂಕ್ ಖರ್ಗೆ, ಡಾ| ಅಜಯಸಿಂಗ್, ಎಂ.ವೈ.ಪಾಟೀಲ, ಬಿ. ನಾರಾಯಣರಾವ, ವಿಧಾನ ಪರಿಷತ್ ಸದಸ್ಯ ತಿಪ್ಪಣ್ಣಪ್ಪ ಕಮಕನೂರ, ವಿಧಾನಪರಿಷತ್ ಮಾಜಿ ಸದಸ್ಯ ಅಲ್ಲಮಪ್ರಭು ಪಾಟೀಲ, ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಜಗದೇವ ಗುತ್ತೇದಾರ,ಕುರುಬ ಗೊಂಡ ನೌಕರರ ಸಂಘದ ರಾಜ್ಯಾಧ್ಯಕ್ಷ ರಾಜೇಂದ್ರ ಸಣ್ಣಕ್ಕಿ, ಪ್ರಧಾನ ಕಾರ್ಯದರ್ಶಿ ಕೆ.ಎಂ. ರಾಮಚಂದ್ರ, ಧರ್ಮಣ್ಣ ದೊಡ್ಡಮನಿ, ಬೈಲಪ್ಪ ನೆಲೋಗಿ, ಮೋಹನ ವೈದ್ಯ, ನೌಕರರ ಸಂಘದ ಜಯಪ್ಪ ಕೊರಬ, ನಿಂಗಣ್ಣ ಹೇರೂರ, ತಿಪ್ಪಣ್ಣ ಸಿರಸಗಿ, ಜಗದೇವಪ್ಪ ಮುಗುಟಾ, ಅನಿತಾ ಕೊಂಡಾಪುರ, ಪ್ರಧಾನೆಪ್ಪ ಮಳ್ಳಿ, ನಾಗೇಂದ್ರ, ಡಿ.ಬಿ. ಪಾಟೀಲ, ಮಲ್ಲಿನಾಥ ಮೇತ್ರೆ ಇದ್ದರು. ಸಮಾರಂಭದಲ್ಲಿ ಎಸ್ಸೆಸ್ಸೆಲ್ಸಿ, ಪಿಯುಸಿ ವಿದ್ಯಾರ್ಥಿಗಳು, ನಿವೃತ್ತ ನೌಕರರು, ಕುರುಬ ಹಾಸ್ಟೆಲ್ ನಿರ್ಮಾಣಕ್ಕೆ ನೆರವು ನೀಡಿದ ದಾನಿಗಳನ್ನು ಗಣ್ಯರು ಸನ್ಮಾನಿಸಿದರು.