ಕಲಬುರಗಿ: ಅದು ಜಗತ್ತಿನ ಎತ್ತರ ಪ್ರದೇಶದ ಯುದ್ಧ ಭೂಮಿ. ಶತ್ರುಗಳೊಂದಿಗೆ ಗುಂಡಿನ ಕಾಳಗ ಜೋರಾಗಿಯೇ ನಡೆದಿತ್ತು. ನಮ್ಮ ಯೋಧರ ಕೈಯಲ್ಲಿದ್ದ ಪ್ರಮುಖ ಶಸ್ತ್ರಾಸ್ತ್ರ ಅಟೋಮೆಟಿಕ್ ಗ್ರೆನೇಡ್ ಲಾಂಚರ್ ಕೈಕೊಟ್ಟು ಬಿಟ್ಟಿತ್ತು. ಅತ್ತಿಂದ ಶತ್ರುಗಳ ದಾಳಿ ಮುಂದುವರಿದಿತ್ತು. ಖಾಲಿ ಕೈಯಲ್ಲಿದ್ದ ನಮ್ಮ ಯೋಧರು ಎದುರಾಳಿಗಳ ಎದೆ ಬಗೆಯಲು ಶಸ್ತ್ರಾಸ್ತ್ರಕ್ಕಾಗಿ ಎದುರು ನೋಡುತ್ತಿದ್ದರು. ಯೋಧರು ತಮ್ಮ ಪರಿಸ್ಥಿತಿ ಮಾಹಿತಿಯನ್ನು ಗುಡ್ಡದ ಕೆಳಗಡೆ ಇದ್ದ ಸಹೋದ್ಯೋಗಿಗಳಿಗೆ ಮುಟ್ಟಿಸಿದರು. ಆ ದುರ್ಗಮ ಪ್ರದೇಶದಲ್ಲಿ ಯೋಧರ ಬಳಿಗೆ ಹೋಗುವುದೂ ಅಷ್ಟು ಸುಲಭವಾಗಿರಲ್ಲಿಲ್ಲ….
ಇಷ್ಟು ಹೇಳಿ ಉಸಿರು ಬಿಗಿ ಹಿಡಿದು ಮುಂದುವರಿದ ಅವರು, ಕೊನೆಗೆ ಶಸ್ತ್ರಾಸ್ತ್ರ ಸರಿಪಡಿಸಿ 10 ಜನ ನನ್ನ ಸಹೋದ್ಯೋಗಿಗಳಿಗೆ ನಾನು ನೆರವಾದೆ. ಆಗ ತಡರಾತ್ರಿ 3 ಗಂಟೆಯಾಗಿತ್ತು ಎಂದು ನಿಟ್ಟುಸಿರು ಬಿಟ್ಟರು.
ಕಲಬುರಗಿ ಮಾಜಿ ಯೋಧ ಮಲ್ಲಿಕಾರ್ಜುನ ಮಡಿವಾಳ ಅವರು ಕಾರ್ಗಿಲ್ ಯುದ್ಧ ಭೂಮಿ ಚಿತ್ರಣವನ್ನು ಕಣ್ಣಿಗೆ ಕಟ್ಟುವ ಹಾಗೆ ಬಿಡಿಸಿಟ್ಟರು. ಕಾರ್ಗಿಲ್ ಯುದ್ಧ ಮುಗಿದು 20 ವರ್ಷಗಳಾದರೂ ಮಲ್ಲಿಕಾರ್ಜುನ ಅವರಲ್ಲಿ ಅಂದಿನ ಪ್ರತಿಯೊಂದು ಘಟನೆ ಹಚ್ಚ ಹಸಿರಾಗಿವೆ. ಯುದ್ಧ ಭೂಮಿಯಲ್ಲಿ ತಮ್ಮ ಕಣ್ಣೆದುರು ನಡೆದ ಪ್ರತಿ ಘಟನೆಯನ್ನು ಮನ ಮುಟ್ಟುವಂತೆ ಅವರು ವಿವರಿಸುತ್ತಾರೆ.
ಭಾರತೀಯ ಸೇನೆಯಲ್ಲಿ ಮಲ್ಲಿಕಾರ್ಜುನ ಮಡಿವಾಳ ಅವರು 17 ವರ್ಷ ಸೇವೆ ಸಲ್ಲಿಸಿ ನಿವೃತ್ತಿಯಾಗಿದ್ದಾರೆ. 1987ರಲ್ಲಿ ಸೇನೆಗೆ ಸೇರ್ಪಡೆಯಾಗಿದ್ದ ಅವರು, ಎಲೆಕ್ಟ್ರಾನಿಕ್ಸ್ ಆ್ಯಂಡ್ ಮೆಕ್ಯಾನಿಲ್ ಎಂಜಿನಿಯರ್ (ಇಎಂಇ) ವಿಭಾಗದಲ್ಲಿ ಶಸ್ತ್ರಾಸ್ತ್ರ ಅಧಿಕಾರಿಯಾಗಿ ಸೇವೆ ಸಲ್ಲಿಸಿದ್ದಾರೆ. 1999ರ ಮೇ ಮತ್ತು ಜುಲೈನಲ್ಲಿ ನಡೆದ ಕಾರ್ಗಿಲ್ ‘ಆಪರೇಷನ್ ವಿಜಯ್’ನ 60 ದಿನಗಳನ್ನು ಯುದ್ಧ ಭೂಮಿಯಲ್ಲಿ ಕಳೆದಿದ್ದಾರೆ.
ಸೇನೆಯಲ್ಲಿ ಶಸ್ತ್ರಾಸ್ತ್ರ ಅಧಿಕಾರಿಗಳ ಮೇಲೆ ಮಹತ್ವದ ಹೊಣೆ ಇರುತ್ತದೆ. ಯೋಧರಿಗೆ ಫೈರಿಂಗ್ ತರಬೇತಿ ಕೊಡುವುದರಿಂದ ಹಿಡಿದು ಪ್ರತಿ ಶಸ್ತ್ರಾಸ್ತ್ರವನ್ನು ಸುಸ್ಥಿತಿಯಲ್ಲಿ ಇಡುವುದು ಶಸ್ತ್ರಾಸ್ತ್ರ ಅಧಿಕಾರಿ ಜವಾಬ್ದಾರಿ. ಅದು ಯುದ್ಧ ಸಮಯವಾದರೂ ಸರಿ, ಯುದ್ಧ ಇಲ್ಲದ ಸಮಯದಲ್ಲೂ ಶಸ್ತ್ರಾಸ್ತ್ರಗಳನ್ನು ಸಂರಕ್ಷಿಸುವ ನಿತ್ಯದ ಕಾರ್ಯ. ಕಾರ್ಗಿಲ್ ಯುದ್ಧದಲ್ಲಿ ಆ ಒಂದು ದಿನ ಹತ್ತು ಜನ ನಮ್ಮ ಯೋಧರ ಬಳಿಯಿದ್ದ ಅಟೋಮೆಟಿಕ್ ಗ್ರೆನೇಡ್ ಲಾಂಚರ್ (ಎಜಿಎಲ್) ಕೈಕೊಟ್ಟಾಗ ನನಗೆ ತೀವ್ರ ಆತಂಕವಾಗಿತ್ತು. ನಂತರದಲ್ಲಿ ರೋಪ್ ಮೂಲಕ ಗುಡ್ಡ ಹತ್ತಿ ಎಜಿಎಲ್ ಸರಿಪಡಿಸಿ ನಮ್ಮ ಯೋಧರನ್ನು ಯುದ್ಧಕ್ಕೆ ಅಣಿಗೊಳಿಸಿದ ಕ್ಷಣವನ್ನು ಎಂದೂ ಮರೆಯಲು ಸಾಧ್ಯವಿಲ್ಲ ಎನ್ನುತ್ತಾರೆ ಮಲ್ಲಿಕಾರ್ಜುನ ಮಡಿವಾಳ.
ಪಾಕಿಸ್ತಾನದ ನಂಬಿಕೆ ದ್ರೋಹದ ಪರಿಣಾಮ ಕಾರ್ಗಿಲ್ ಯುದ್ಧ ನಡೆಸಬೇಕಾಯಿತು. ಪಾಕಿಸ್ತಾನದ ಸೇನೆಯ ಚಲನವಲನ ಗಮನಿಸಿದ ಕುರಿಗಾಹಿಯೊಬ್ಬ ಭಾರತೀಯ ಸೇನೆಗೆ ಮಾಹಿತಿ ಮುಟ್ಟಿಸಿದ. ಕ್ಯಾಪ್ಟನ್ ಸೌರಭ್ ಕಲಿಯಾ ನೇತೃತ್ವದ ತಂಡದ ಆರು ಜನರಿಗೆ ಪಾಕಿಸ್ತಾನ ರೇಂಜರ್ ಚಿತ್ರಹಿಂಸೆ ನೀಡಿ ಸಾಯಿಸಿದರು. ಇದು ನಮ್ಮ ಯೋಧರ ರಕ್ತ ಕುದಿಯುವಂತೆ ಮಾಡಿತು. ಕುಟುಂಬದವರಿಗೆ ಏನಾದರೂ ಸಂದೇಶ ಕಳುಹಿಸುವುದಾದರೆ ಕಳುಹಿಸಿ ಎಂದು ಅಧಿಕಾರಿಗಳು ಯುದ್ಧ ಭೂಮಿಯಲ್ಲಿದ್ದ ಯೋಧರಿಗೆ ತಿಳಿಸಿದರು. ಆ ಸಮಯದಲ್ಲಿ ನನ್ನ ಮಗ ಆರು ತಿಂಗಳ ಮಗುವಾಗಿದ್ದ ಎಂದು ಅವರು ಭಾವುಕರಾದರು. ಇಡೀ ಯುದ್ಧದಲ್ಲಿ 530 ಜನ ಭಾರತೀಯ ಯೋಧರು ತಾಯ್ನಾಡಿನ ರಕ್ಷಣೆಗಾಗಿ ಪ್ರಾಣ ಅರ್ಪಿಸಿದರು. ಆದರೆ, ಪಾಕಿಸ್ತಾನ ರೇಂಜರ್ ಸಾವಿನ ಲೆಕ್ಕವೇ ಇಲ್ಲ. ಸತ್ತವರನ್ನು ನಮ್ಮ ಯೋಧರೇ ಅಲ್ಲ ಎಂದು ಅವರ ಶವಗಳನ್ನು ಪಡೆಯಲು ಪಾಕ್ ನಿರಾಕರಿಸಿತು. ಅದೇನೆ ಆಗಲಿ ಕಾರ್ಗಿಲ್ ವಿಜಯೋತ್ಸವ ಭಾರತೀಯ ಯೋಧರಿಗೆ ಒಂದು ಮೇರು ಶಿಖರ. ನಮ್ಮ ಸಮವಸ್ತ್ರ, ಪದಕಗಳನ್ನು ನೋಡಿದಾಗ ಕಾರ್ಗಿಲ್ ಯುದ್ಧವೇ ಕಣ್ಣಿಗೆ ಕಟ್ಟುತ್ತದೆ ಎಂದು ಮಲ್ಲಿಕಾರ್ಜುನ ಮಡಿವಾಳ ಸ್ಮರಿಸಿದರು.