ಕಲಬುರಗಿ: ದಾಸ್ಯದ ಸಂಕೇತ ಹಾಗೂ ಹೈದ್ರಾಬಾದ ಕರ್ನಾಟಕ ಎಂದ ತಕ್ಷಣ ಹಿಂದುಳಿಯುವಿಕೆ ಎನ್ನುವ ಶಾಶ್ವತ ಪದ ತೆಗೆದು ಹಾಕುವ ನಿಟ್ಟಿನಲ್ಲಿ ರಾಜ್ಯ ಸರ್ಕಾರ ಹೈದ್ರಾಬಾದ ಕರ್ನಾಟಕ ಹೆಸರನ್ನು ಕಲ್ಯಾಣ ಕರ್ನಾಟಕ ಎಂಬುದಾಗಿ ಬದಲಾಯಿಸುವ ಐತಿಹಾಸಿಕ ನಿರ್ಣಯ ತೆಗೆದುಕೊಂಡಿದೆ.
ಹೈ.ಕ ಭಾಗ ಕಲ್ಯಾಣ ಕರ್ನಾಟಕ ಆಗಬೇಕೆಂಬ ಹಲವು ದಶಕಗಳ ಬೇಡಿಕೆಗೆ ಶುಕ್ರವಾರ ನಡೆದ ರಾಜ್ಯ ಸಚಿವ ಸಂಪುಟ ಸಭೆಯಲ್ಲಿ ಚರ್ಚಿಸಿ, ಹೆಸರು ಬದಲಾವಣೆಗೆ ನಿರ್ಧಾರ ತೆಗೆದುಕೊಳ್ಳಲಾಗಿದೆ. ‘ಕಲ್ಯಾಣ ಕರ್ನಾಟಕ’ ಆಗಿರುವ ಕುರಿತು ವಾರದೊಳಗೆ ಅಧಿಸೂಚನೆ ಹೊರ ಬೀಳಲಿದೆ.
ಸಚಿವ ಸಂಪುಟ ಸಭೆಯಲ್ಲಿ ಹೈದ್ರಾಬಾದ ಕರ್ನಾಟಕ ಹೆಸರನ್ನು ಕಲ್ಯಾಣ ಕರ್ನಾಟಕ ನಾಮಕರಣಗೊಳಿಸಿರುವ ಕುರಿತು ನಿರ್ಣಯ ಕೈಗೊಳ್ಳಲಾಗಿದೆ ಎಂದು ಸೇಡಂ ಶಾಸಕ ರಾಜಕುಮಾರ ಪಾಟೀಲ ತಿಳಿಸಿದ್ದಾರೆ.
ಸಂಪುಟ ಸಭೆ ನಂತರ ಸಂಪುಟದ ನಿರ್ಣಯಗಳ ಕುರಿತಾಗಿ ಕಾನೂನು ಮತ್ತು ಸಂಸದೀಯ ವ್ಯವಹಾರಗಳ ಸಚಿವ ಮಾಧುಸ್ವಾಮಿ ಅವರೂ ಪತ್ರಿಕಾಗೋಷ್ಠಿ ನಡೆಸಿ ವಿವರಣೆ ನೀಡಿದ್ದಾರೆ. ಇದರಲ್ಲಿ ಕಲ್ಯಾಣ ಕರ್ನಾಟಕ ನಾಮಕರಣವೂ ಸೇರಿದೆ ಎಂದು ತಿಳಿಸಲಾಗಿದೆ.
371ನೇ (ಜೆ) ವಿಧಿ ಅಡಿ ಅಸ್ತಿತ್ವಕ್ಕೆ ಬಂದಿರುವ ಹೈದ್ರಾಬಾದ ಕರ್ನಾಟಕ ಅಭಿವೃದ್ಧಿ ಮಂಡಳಿ ಹೆಸರು ಕಲ್ಯಾಣ ಕರ್ನಾಟಕ ಅಭಿವೃದ್ಧಿ ಮಂಡಳಿಯಾಗಿ ಬದಲಾಗಲಿದೆ. ಒಟ್ಟಾರೆ ಎಚ್ಕೆಆರ್‌ಡಿಬಿ ಬದಲು ಕೆಕೆಆರ್‌ಡಿಬಿ ಆಗಿದೆ.
‘ಹೈದ್ರಾಬಾದ ಕರ್ನಾಟಕ’ ಹೆಸರನ್ನು ಬದಲಾಗಿ ‘ಕಲ್ಯಾಣ ಕರ್ನಾಟಕ’ ಎಂಬುದಾಗಿ ಹೆಸರು ಬದಲಾಗಬೇಕೆಂದು ಮೊದಲ ಬಾರಿಗೆ ಧ್ವನಿ ಎತ್ತಿದ್ದೇ ಬಿಜೆಪಿ. ದಶಕಗಳ ಹಿಂದೆ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಸೇರಿದಂತೆ ಹಲವರು ಮೊದಲ ಬಾರಿಗೆ ಕಲ್ಯಾಣ ಕರ್ನಾಟಕ ಹೆಸರನ್ನು ಪ್ರಸ್ತಾಪಿಸಿದ್ದರು. ಶರಣರು ನಡೆದಾಡಿದ ಈ ಭಾಗವೇ ಕಲ್ಯಾಣ ಆಗಿದ್ದರಿಂದ ‘ಕಲ್ಯಾಣ ಕರ್ನಾಟಕ’ ನಾಮಕರಣ ಆಗಬೇಕು ಎಂದಿದ್ದರು. ಈಗ ಅವರ ಅಧ್ಯಕ್ಷತೆಯಲ್ಲೇ ನಿರ್ಣಯ ಕೈಗೊಳ್ಳಲಾಗಿದೆ.