ಕಲಬುರಗಿ: ಭಯೋತ್ಪಾದಕರ ದಾಳಿ ಸಾಧ್ಯತೆ ಬಗ್ಗೆ ಕೇಂದ್ರ ಗುಪ್ತಚರ ಇಲಾಖೆ ಎಚ್ಚರಿಕೆ ನೀಡಿರುವ ಹಿನ್ನೆಲೆಯಲ್ಲಿ ಶನಿವಾರದಿಂದ ನಗರದಲ್ಲೂ ಕಟ್ಟೆಚ್ಚರ ಘೋಷಿಸಲಾಗಿದ್ದು, ಎಲ್ಲೆಡೆ ಬಿಗಿ ಬಂದೋಬಸ್ತ್ ಕೈಗೊಳ್ಳಲಾಗಿದೆ.
ರಾಜ್ಯದ ಪ್ರಮುಖ ನಗರಗಳಲ್ಲಿ ಉಗ್ರರು ದಾಳಿ ನಡೆಸುವ ಶಂಕೆ ಇದೆ. ಆದ್ದರಿಂದ ಮುನ್ನೆಚ್ಚರಿಕೆ ವಹಿಸುವಂತೆ ಗುಪ್ತಚರ ಇಲಾಖೆ ಎಚ್ಚರಿಸಿದ್ದು, ಶನಿವಾರ ಬೆಳಗ್ಗೆಯಿಂದಲೇ ನಗರದ ಜನನಿಬಿಡ ಮತ್ತು ಸೂಕ್ಷ್ಮ ಪ್ರದೇಶಗಳಲ್ಲಿ ಪೊಲೀಸರನ್ನು ಭದ್ರತೆಗೆಂದು ನಿಯೋಜಿಸಲಾಗಿದೆ.
ನಗರದ ರೈಲ್ವೆ ನಿಲ್ದಾಣ, ಕೇಂದ್ರ ಬಸ್ ನಿಲ್ದಾಣ, ಪ್ರಮುಖ ದೇವಸ್ಥಾನಗಳು, ದರ್ಗಾಗಳು, ಚರ್ಚ್‌ಗಳು, ಶಾಪಿಂಗ್ ಮಾಲ್ಗಳು, ಜನನಿಬಿಡ ರಸ್ತೆಗಳು, ಜನ ವಸತಿ ಪ್ರದೇಶಗಳು ಹಾಗೂ ಹೊರವಲಯದ ಬುದ್ಧ ವಿಹಾರ, ನೂತನ ವಿಮಾನ ನಿಲ್ದಾಣ ಸೇರಿದಂತೆ ಹಲವು ಕಡೆಗಳಲ್ಲಿ ಹೆಚ್ಚುವರಿ ಪೊಲೀಸ್ ಭದ್ರತೆ ಒದಗಿಸಲಾಗಿದೆ.
ಮುನ್ನೆಚ್ಚರಿಕೆ ಕ್ರಮವಾಗಿ ಬಾಂಬ್ ನಿಷ್ಕ್ರಿಯ ದಳ, ಶ್ವಾನ ದಳದೊಂದಿಗೆ ರೈಲ್ವೆ ನಿಲ್ದಾಣ, ಬಸ್ ನಿಲ್ದಾಣ ಹಾಗೂ ಮತ್ತಿತರ ಸ್ಥಳಗಳಿಗೆ ಪೊಲೀಸರು ತೆರಳಿ ತಪಾಸಣೆ ನಡೆಸಿದರು. ಬಸ್ ಹಾಗೂ ರೈಲ್ವೆ ನಿಲ್ದಾಣಗಳಲ್ಲಿರುವ ಬೇಕರಿ, ಅಂಗಡಿಗಳ ಮುಂದಿದ್ದ ಕಸ ಬುಟ್ಟಿಗಳು, ಬಸ್‌ಗಳು, ಪ್ರಯಾಣಿಕರ ಬ್ಯಾಗ್‌ಗಳನ್ನು ಶ್ವಾನ ದಳ, ಬಾಂಬ್ ನಿಷ್ಕ್ರಿಯ ದಳದ ಮೂಲಕ ಪರಿಶೀಲನೆ ನಡೆಸಲಾಯಿತು.
ಎಲ್ಲೆಡೆ ತಪಾಸಣೆ ಮಾಡುತ್ತಿರುವುದನ್ನು ಕಂಡ ಪ್ರಯಾಣಿಕರು ಕೆಲ ಕಾಲ ಗಾಬರಿಯಾದರು. ಈ ಸಂದರ್ಭದಲ್ಲಿ ಯಾರೂ ಆತಂಕ ಪಡಬೇಕಾದ ಅಗತ್ಯವಿಲ್ಲ. ಮುಂಜಾಗೃತಾ ಕ್ರಮವಾಗಿ ತಪಾಸಣೆ ಮಾಡಲಾಗುತ್ತಿದೆ ಎಂದು ಪೊಲೀಸ್ ಮತ್ತು ಸಾರಿಗೆ ಸಿಬ್ಬಂದಿ ತಿಳಿಸಿದರು.
ಸರ್ದಾರ ವಲ್ಲಭಭಾಯಿ ಪಟೇಲ್ ವೃತ್ತ ಸೇರಿದಂತೆ ಆಯಕಟ್ಟಿನ ಸ್ಥಳಗಳಲ್ಲಿ ಪೊಲೀಸ್ ವಾಹನಗಳನ್ನು ನಿಲ್ಲಿಸಲಾಗಿದೆ. ಸಶಸ್ತ್ರ ಮೀಸಲು ಪಡೆ ಸನ್ನದ್ಧಗೊಳಿಸಲಾಗಿದೆ. ಅಧಿಕ ಜನರು ಓಡಾಡುವ ಸ್ಥಳಗಳಲ್ಲಿ ಮೆಟಲ್ ಡಿಟೆಕ್ಟರ್ ಯಂತ್ರಗಳನ್ನು ಅಳವಡಿಸಲಾಗಿದ್ದು, ಯಂತ್ರಗಳಲ್ಲೇ ಹಾಯ್ದು ಹೋಗುವಂತೆ ಸಾರ್ವಜನಿಕರಿಗೆ ಸೂಚಿಸಲಾಗುತ್ತಿದೆ ಎಂದು ಪೊಲೀಸ್ ಅಧಿಕಾರಿಗಳು ತಿಳಿಸಿದ್ದಾರೆ.