Advertisement

‘ಜಲಾಮೃತ’ಸಮಿತಿ ರಚನೆಗೆ ಸೂಚನೆ

09:44 AM Jul 21, 2019 | Naveen |

ಕಲಬುರಗಿ: ರಾಜ್ಯ ಸತತ ಬರಗಾಲಕ್ಕೆ ತುತ್ತಾಗುತ್ತಿದ್ದು, ಇದರಿಂದ ಹೊರ ಬರಲು ಜಲ ಸಂರಕ್ಷಣೆ, ಜಲಸಾಕ್ಷರತೆ, ಜಲಮೂಲಗಳ ಪುನಶ್ಚೇತನ ಮತ್ತು ಹಸರೀಕರಣವನ್ನು ಕೇಂದ್ರವಾಗಿಟ್ಟುಕೊಂಡು ರಾಜ್ಯ ಸರ್ಕಾರವು 2019ನೇ ವರ್ಷವನ್ನು ‘ಜಲ ವರ್ಷ’ ಎಂದು ಘೋಷಿಸಿದ್ದು, ಅದರಂತೆ ಜಲಾಮೃತ ಯೋಜನೆಗಳ ಅನುಷ್ಟಾನಕ್ಕಾಗಿ ಎಲ್ಲ ಗ್ರಾಮ ಪಂಚಾಯಿತಿ ಮತ್ತು ತಾಲೂಕು ಮಟ್ಟದಲ್ಲಿ ಜಲಾಮೃತ ಸಮಿತಿ ರಚಿಸಬೇಕು ಎಂದು ಜಿಲ್ಲಾಧಿಕಾರಿ ಆರ್‌. ವೆಂಕಟೇಶಕುಮಾರ ಅಧಿಕಾರಿಗಳಿಗೆ ಸೂಚನೆ ನೀಡಿದರು.

Advertisement

ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಜಿಲ್ಲಾ ಮಟ್ಟದ ಜಲಾಮೃತ ಸಮಿತಿ ಸಭೆ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ಗ್ರಾಮ ಪಂಚಾಯತಿಯಲ್ಲಿ ಗ್ರಾಮ ಪಂಚಾಯತ್‌ ಅಧ್ಯಕ್ಷರನ್ನು ಹಾಗೂ ತಾಲೂಕು ಮಟ್ಟದಲ್ಲಿ ಉಪ ವಿಭಾಗದ ಸಹಾಯಕ ಆಯುಕ್ತರ ಅಧ್ಯಕ್ಷತೆಯಲ್ಲಿ ಸಮಿತಿ ರಚನೆ ಮಾಡಬೇಕು ಎಂದು ತಿಳಿಸಿದರು.

ಸಮಿತಿಯಲ್ಲಿ ಕೃಷಿ, ಜಲನಾಯನ, ಸಣ್ಣ ನೀರಾವರಿ, ತೋಟಗಾರಿಕೆ, ಗ್ರಾಮೀಣ ನೀರು ಸರಬರಾಜು ಇಲಾಖೆ ಅಧಿಕಾರಿಗಳು ಸೇರಿದಂತೆ ಆಸಕ್ತ ಸ್ವಯಂ ಸೇವಾ ಸಂಸ್ಥೆ ಸದಸ್ಯರು, ಪರಿಣಿತ ಜಲ ತಜ್ಞರು, ಪರಿಸರ ತಜ್ಞರು, ಪ್ರಗತಿಪರ ರೈತರು, ಸಾರ್ವಜನಿಕರು ಸೇರಿದಂತೆ ಒಟ್ಟು 9 ರಿಂದ 15 ಸದಸ್ಯರನ್ನೊಳಗೊಂಡ ಸಮಿತಿ ಕೂಡಲೇ ರಚಿಸಬೇಕಾಗಿದೆ ಎಂದರು.

ಜಲಮೂಲಗಳ ಪುನರುತ್ಥಾನ, ಕಾಲುವೆ ಮತ್ತು ಝರಿಗಳಿಗೆ ಪುನರ್ವಸತಿ ಕಲ್ಪಿಸುವುದು, ಚೆಕ್‌ ಡ್ಯಾಂ ಮತ್ತು ಸಣ್ಣ ಜಲಾಶಯಗಳ ನಿರ್ಮಾಣ, ಭೂ ಸಂರಕ್ಷಣೆ ಮತ್ತು ಜಲಚಲನೆ ತಡೆಯುವುದು ಸೇರಿದಂತೆ ಒಟ್ಟಾರೆ ಅಂತರ್ಜಲ ಹೆಚ್ಚಿಸುವುದು ಮತ್ತು ನೀರು ಸಂಗ್ರಹಣೆಗೆ ಒತ್ತು ನೀಡುವುದೇ ಯೋಜನೆ ಮೂಲ ಉದ್ದೇಶವಾಗಿದೆ.

ಶೇ.92ರಷ್ಟು ಒಣಭೂಮಿ ಹೊಂದಿರುವ ಬರದ ನಾಡು ಕಲಬುರಗಿ ಜಿಲ್ಲೆಗೆ ಈ ಯೋಜನೆ ವರದಾನವಾಗಿದ್ದು, ಅಧಿಕಾರಿಗಳು ಹೆಚ್ಚಿನ ಮುತುವರ್ಜಿ ವಹಿಸಿ ಜಲಾಮೃತ ಯೋಜನೆಗಳನ್ನು ಜನಾಂದೋಲನ ರೂಪದಲ್ಲಿ ಅನುಷ್ಠಾನಗೊಳಿಸಬೇಕು. ನರೇಗಾ, ಕೃಷಿ ಭಾಗ್ಯ, ಕೆರೆ ಸಂಜೀವಿನಿ. ಹಸಿರು ಕರ್ನಾಟಕ ಯೋಜನೆಗಳ ಆರ್ಥಿಕ ಸಂಪನ್ಮೂಲಗಳನ್ನು ಒಗ್ಗೂಡಿಸಿಕೊಂಡು ಈ ಯೋಜನೆ ಸಾಕಾರಗೊಳಿಸಬೇಕಾಗಿದೆ ಎಂದರು.

Advertisement

ಜಲಾಮೃತ ಯೋಜನೆಗಳ ಅನುಷ್ಟಾನಕ್ಕೆ ಹೆಚ್ಚಿನ ಅನುದಾನ ಪಡೆಯಲು ಶಾಸಕರು, ಸಂಸದರು ಹಾಗೂ ಕಾರ್ಪೋರೇಟ್ ಸಂಸ್ಥೆಗಳನ್ನು ಸಂಪರ್ಕಿಸಿ ಅನುದಾನ ಸಂಗ್ರಹಿಸಬೇಕು. ಯೋಜನೆ ಅನುಷ್ಠಾನಕ್ಕೆ ಸಾರ್ವಜನಿಕರಿಂದಲೂ ದಾನ ಪಡೆಯಲು ಅವಕಾಶವಿದ್ದು, ಇದಕ್ಕಾಗಿ ಗ್ರಾ.ಪಂ.ನಲ್ಲಿ ಪ್ರತ್ಯೇಕ ಬ್ಯಾಂಕ್‌ ಖಾತೆ ತೆಗೆದು ಹಣ ಸಂಗ್ರಹಿಸುವುದು. ಹೀಗೆ ಸಂಗ್ರಹವಾಗುವ ಅನುದಾನವನ್ನು ಗ್ರಾಮಗಳಲ್ಲಿ ಜಲಾನಯನ ಮತ್ತು ಕೆರೆಗಳ ಅಭಿವೃದ್ಧಿಗೆ ಗ್ರಾಮ ಸಭೆಯಲ್ಲಿ ಚರ್ಚಿಸಿ ಅನುಮೋದನೆ ಪಡೆದು ಅನುಷ್ಠಾನಗೊಳಿಸಬೇಕು ಎಂದರು.

ಬೋಸ್ಗಾ ಕೆರೆ ಅಭಿವೃದ್ಧಿಗೆ ಪ್ರಸ್ತಾವನೆ ಸಲ್ಲಿಸಿ: ರಾಜ್ಯ ಸರ್ಕಾವು 2019-20ನೇ ಸಾಲಿನ ಆಯವ್ಯಯದಲ್ಲಿ ಜಲಾಮೃತ ಯೋಜನೆಗೆ ಒಟ್ಟಾರೆ 100 ಕೋಟಿ ರೂ. ಅನುದಾನ ಮೀಸಲಿಟ್ಟಿದೆ. ಮೊದಲು ಪ್ರಸ್ತಾವನೆ ಸಲ್ಲಿಸಿದವರಿಗೆ ಮೊದಲು ಆದ್ಯತೆ ಆಧಾರದ ಮೇಲೆ ಅನುದಾನ ಹಂಚಿಕೆ ಮಾಡಲಾಗುತ್ತಿದೆ. ಹೀಗಾಗಿ ಕಲಬುರಗಿ ನಗರಕ್ಕೆ ಹೊಂದಿಕೊಂಡಿರುವ ಬೋಸ್ಗಾ ಮತ್ತು ಖಾಜಾ ಕೋಟನೂರ ಕೆರೆಗಳ ಸಮಗ್ರ ಅಭಿವೃದ್ಧಿಗೆ ಎರಡು ದಿನದೊಳಗಾಗಿ ಲೈನ್‌ ಎಸ್ಟಿಮೇಟ್ ಪ್ರಸ್ತಾವನೆ ಸಲ್ಲಿಸಬೇಕು ಎಂದು ಸಣ್ಣ ನೀರಾವರಿ ಮತ್ತು ಅಂತರ್ಜಲ ಅಭಿವೃದ್ಧಿ ಇಲಾಖೆ ಕಾರ್ಯನಿರ್ವಾಹಕ ಅಭಿಯಂತ ಅಶೋಕ ಅಂಬಲಗಿ ಅವರಿಗೆ ಡಿ.ಸಿ. ಸೂಚಿಸಿದರು.

ಜಿಪಂ ಸಿಇಒ ಡಾ| ಪಿ. ರಾಜಾ ಮಾತನಾಡಿ, ಗ್ರಾಮ ಮತ್ತು ತಾಲೂಕು ಮಟ್ಟದಲ್ಲಿ ಕೂಡಲೇ ಜಲಾಮೃತ ಅನುಷ್ಠಾನ ಸಮಿತಿ ರಚಿಸಿ ವರದಿ ಸಲ್ಲಿಸಬೇಕು. ಜಿಲ್ಲೆಯಾದ್ಯಂತ 300 ಸರ್ಕಾರಿ ಬೋರವೆಲ್ ಜಲಮೂಲಗಳ ಪುನರುತ್ಥಾನಕ್ಕೆ ಈಗಾಗಲೆ ಅನುಮೋದನೆ ನೀಡಲಾಗಿದೆ. ಅವಶ್ಯವಿದ್ದಲ್ಲಿ ಇನ್ನು ಹೆಚ್ಚಿನ ಬೋರವೆಲ್ ಜಲಮೂಲ ಉತ್ತಮಗೊಳಿಸಲು ತಾ.ಪಂ. ಕಾರ್ಯನಿರ್ವಾಹಕ ಅಧಿಕಾರಿಗಳು ಕ್ರಮವಹಿಸಬೇಕು ಎಂದರು.

ಜಿಪಂ ಸಹಾಯಕ ಕಾರ್ಯದರ್ಶಿ ಮಹಾದೇವ ಅವರು ಜಲಾಮೃತ ಸಮಿತಿ ರಚನೆ, ಉದ್ದೇಶ ಮತ್ತು ಸಮಿತಿಯ ಜವಾಬ್ದಾರಿ ಕುರಿತು ಸಭೆಗೆ ವಿವರಿಸಿದರು.

ಸಹಾಯಕ ಆಯುಕ್ತ ರಾಹುಲ ಪಾಂಡ್ವೆ, ಜಂಟಿ ಕೃಷಿ ನಿರ್ದೇಶಕ ಡಾ| ರತೇಂದ್ರನಾಥ ಸುಗೂರು, ಸಣ್ಣ ನೀರಾವರಿ ಇಲಾಖೆ ಅಧಿಕಾರಿಗಳು, ತಾ.ಪಂ. ಕಾರ್ಯನಿರ್ವಾಹಕ ಅಧಿಕಾರಿಗಳು ಹಾಗೂ ಇನ್ನಿತರ ಅಧಿಕಾರಿಗಳು ಇದ್ದರು.

Advertisement

Udayavani is now on Telegram. Click here to join our channel and stay updated with the latest news.

Next