Advertisement

ಹೈಕಕ್ಕೆ ದಕ್ಕುವುದೇ ಸಚಿವ ಸ್ಥಾನ?

09:44 AM Jul 29, 2019 | Naveen |

ಕಲಬುರಗಿ: ಮುಖ್ಯಮಂತ್ರಿ ಬಿ.ಎಸ್‌. ಯಡಿಯೂರಪ್ಪ ಮುಂದಿನ ದಿನಗಳಲ್ಲಿ ಸಚಿವ ಸಂಪುಟ ರಚನೆ ಮಾಡುವುದರಿಂದ ಬಿಸಿಲು ನಾಡು, ತೊಗರಿ ಕಣಜ ಕಲಬುರಗಿಯಿಂದ ಹಾಗೂ ಹೈದ್ರಾಬಾದ ಕರ್ನಾಟಕ ಭಾಗದಿಂದ ಯಾರು ಸ್ಥಾನ ಪಡೆಯುತ್ತಾರೆ ಎಂದು ಜಿಲ್ಲೆಯಾದ್ಯಂತ ಚರ್ಚೆಯಾಗುತ್ತಿದೆ.

Advertisement

ಯಡಿಯೂರಪ್ಪ ಅವರು ಕಲಬುರಗಿ ಮೇಲೆ ವಿಶೇಷ ಕಾಳಜಿ ಹೊಂದಿದ್ದು, ಕನಿಷ್ಠ ಒಂದು ಸ್ಥಾನವಾದರೂ ಸಿಗಬಹುದೆಂಬ ನಿರೀಕ್ಷೆ ಹಾಗೂ ಲೆಕ್ಕಚಾರ ಹೊಂದಲಾಗಿದೆ. ಒಂದು ಮೂಲಗಳ ಪ್ರಕಾರ ಒಂದೂ ಸ್ಥಾನ ಸಿಗದೇ ಇರಬಹುದು ಎನ್ನಲಾಗುತ್ತಿದೆ.

ಜಿಲ್ಲೆಯಲ್ಲಿ ಬಿಜೆಪಿಯಿಂದ ಐವರು ವಿಧಾನಸಭೆ ಸದಸ್ಯರಾಗಿದ್ದರೆ ಒಬ್ಬರು ವಿಧಾನಪರಿಷತ್‌ ಸದಸ್ಯರಾಗಿದ್ದಾರೆ. ಕಲಬುರಗಿಗೆ ಸಚಿವ ಸ್ಥಾನ ಸಿಗಬೇಕಾದರೆ ಜಿಲ್ಲೆ ಪ್ರಾತಿನಿಧ್ಯತೆ ಜತೆಗೆ ಜಾತಿ ಲೆಕ್ಕಚಾರ ಹೊಂದಾಣಿಕೆ ಆದಲ್ಲಿ ಮಾತ್ರ ಸಚಿವ ಸ್ಥಾನ ಸಿಗಬಹುದಾಗಿದೆ ಎನ್ನಲಾಗುತ್ತಿದೆ.

ಸಚಿವ ಸಂಪುಟದಲ್ಲಿ 10 ಸ್ಥಾನ ಅತೃಪ್ತರಿಗೆ, 10 ಹೊಸಬರಿಗೆ ಹಾಗೂ 10 ಜನ ಪಕ್ಷದ ಹಿರಿಯರಿಗೆ ಕಲ್ಪಿಸಲು ಯೋಜನೆ ರೂಪಿಸಲಾಗಿದೆ ಎನ್ನಲಾಗುತ್ತಿದೆ. ಅದರ ಪ್ರಕಾರ ಕಲಬುರಗಿಗೆ ಹೊಸಬರ ಸ್ಥಾನದಲ್ಲಿ ಅವಕಾಶ ಸಿಗಬಹುದೆನ್ನುವ ನಿರೀಕ್ಷೆ ಹೊಂದಲಾಗಿದೆ.

ಅನರ್ಹತೆ ವಿರುದ್ಧ ಎಲ್ಲ 17 ಶಾಸಕರು ಸುಪ್ರೀಂಕೋರ್ಟ್‌ಗೆ ನ್ಯಾಯ ಕೋರಿ ಮೆಟ್ಟಿಲೇರುವುದರಿಂದ ನ್ಯಾಯಾಲಯವು ಸ್ಪೀಕರ್‌ ಅವರ ಅನರ್ಹತೆಗೆ ತಡೆಯಾಜ್ಞೆ ನೀಡಬಹುದು ಎನ್ನುವ ನಿರೀಕ್ಷೆ ಅನರ್ಹ ಶಾಸಕರದ್ದಾಗಿದೆ. ಹೀಗಾದಲ್ಲಿ ಹೊಸ ಸ್ಪೀಕರ್‌ಗೆ ಎಲ್ಲರೂ ಮತ್ತೂಮ್ಮೆ ರಾಜೀನಾಮೆ ಸಲ್ಲಿಸಿ, ರಾಜೀನಾಮೆಗೆ ಅಂಗೀಕಾರ ಪಡೆಯಲಿದ್ದಾರೆ ಎನ್ನಲಾಗುತ್ತಿದೆ.

Advertisement

ಮಸ್ಕಿಯಿಂದ ಪ್ರತಾಪಗೌಡ ಪಾಟೀಲ ಸಚಿವರಾದರೆ ಇನ್ನುಳಿದಂತೆ ಲಿಂಗಾಯತ್‌ ಅಥವಾ ಹಿಂದುಳಿದ ಕೋಟಾದಡಿ ಕಲಬುರಗಿಗೆ ಸಚಿವ ಸ್ಥಾನ ಸಿಗಲಿದೆ ಎಂದು ಊಹಿಸಲಾಗುತ್ತಿದೆ. ಹೀಗಾದಲ್ಲಿ ದತ್ತಾತ್ರೇಯ ಪಾಟೀಲ ರೇವೂರ, ರಾಜಕುಮಾರ ಪಾಟೀಲ ತೇಲ್ಕೂರ, ಸುಭಾಷ ಗುತ್ತೇದಾರ ಈ ಮೂವರಲ್ಲಿ ಒಬ್ಬರು ಸಚಿವರಾಗುವ ಸಾಧ್ಯತೆಗಳಿವೆ. ಈ ನಡುವೆ ಶಾಸಕರಾದ ಬಿ.ಜಿ. ಪಾಟೀಲ, ಚಿಂಚೋಳಿ ಶಾಸಕ ಡಾ| ಅವಿನಾಶ ಜಾಧವ ಹಾಗೂ ಗ್ರಾಮೀಣ ಶಾಸಕ ಬಸವರಾಜ ಮತ್ತಿಮಡು ಅವರಿಗೆ ಸಚಿವ ಸ್ಥಾನ ನೀಡುವಂತೆ ಆಗ್ರಹವೂ ಬಲವಾಗಿ ಕೇಳಿ ಬರುತ್ತಿದೆ. ಒಟ್ಟಾರೆ ಅಳೆದು ತೂಗಿದರೂ ಜಿಲ್ಲೆಗೆ ಸ್ಥಾನ ಸಿಗುವುದು ನಿಶ್ಚಿತವಿಲ್ಲ.

ವಿಧಾನ ಪರಿಷತ್‌ನಲ್ಲಿ ಒಂದು ಸ್ಥಾನದಲ್ಲಿ ಕೋಟಾ ಶ್ರೀನಿವಾಸ ಇಲ್ಲವೇ ಎನ್‌. ರವಿಕುಮಾರ ಈ ಇಬ್ಬರಲ್ಲಿ ಒಬ್ಬರಿಗೆ ಸ್ಥಾನ ಸಿಗಬಹುದು ಎನ್ನಲಾಗುತ್ತಿದೆ. ರವಿಕುಮಾರ ಆದಲ್ಲಿ ಕಲಬುರಗಿಯಿಂದ ಯಾರೊಬ್ಬರಿಗೂ ಸ್ಥಾನ ಸಿಗೋದಿಲ್ಲ. ರವಿಕುಮಾರ ಉಸ್ತುವಾರಿಯಿಂದ ಸಹ ಹೊರಬರಬಹುದು ಎನ್ನಲಾಗುತ್ತಿದೆ.

ಬೀದರ ಜಿಲ್ಲೆಯ ಔರಾದ ತಾಲೂಕಿನ ಪ್ರಭು ಚವ್ಹಾಣ ಮೂರು ಸಲ ಗೆದ್ದಿದ್ದು, ಜಿಲ್ಲೆಯ ಏಕೈಕ ಬಿಜೆಪಿ ವಿಧಾನಸಭಾ ಸದಸ್ಯರಾಗಿದ್ದಾರೆ. ಅವರ ಹೆಸರು ಸಚಿವ ಸ್ಥಾನಕ್ಕೆ ಕೇಳಿ ಬರುತ್ತಿದೆ. ಆದರೆ ಬಂಜಾರ ಸಮುದಾಯದಿಂದ ಕುಡಚಿ ಶಾಸಕ ಪಿ. ರಾಜೀವ್‌ ಹೆಸರು ಮುಂಚೂಣಿಯಲ್ಲಿದೆ. ಆದರೆ ಬೆಳಗಾವಿಯಿಂದಲೇ ಮೂವರು ಸಚಿವರಾದಲ್ಲಿ ರಾಜೀವ್‌ ಬದಲು ಚವ್ಹಾಣಗೆ ಅದೃಷ್ಟ ಒಲಿಯಬಹುದೆನ್ನಲಾಗುತ್ತಿದೆ.

ಕಲಬುರಗಿಗೆ ಸಚಿವ ಸ್ಥಾನ ದೊರೆಯುವಲ್ಲಿ ಮಾಜಿ ಸಚಿವರಾದ ಮಾಲೀಕಯ್ಯ ವಿ. ಗುತ್ತೇದಾರ ಹಾಗೂ ಬಾಬುರಾವ ಚವ್ಹಾಣ ಅವರ ಪಾತ್ರವೂ ಪ್ರಮುಖವಾಗಬಹುದು. ಇವರ ಶಕ್ತಿ ಯಾವ ಕಡೆ ವಾಲುತ್ತೇ ಅವರು ಸಚಿವರಾದರೂ ಆಶ್ಚರ್ಯವಿಲ್ಲ.

ಪ್ರತಾಪಗೌಡ ಪಾಟೀಲ ಸಚಿವರಾದರೆ ರಾಯಚೂರು ಖೋಟಾದಡಿ ಮತ್ತೂಬ್ಬರಿಗೆ ಹಾಗೂ ಯಾದಗಿರಿಯಿಂದ ಸಚಿವ ಸ್ಥಾನ ಸಿಗೋದು ನಿಶ್ಚಿತವಿಲ್ಲ ಎನ್ನಲಾಗುತ್ತಿದೆ. ಹೀಗೆ ಅಂತೆಕಂತೆಗಳ ಚರ್ಚೆ ಸಾರ್ವಜನಿಕ ವಲಯದಲ್ಲೇ ಜೋರಾಗಿ ನಡೆಯುತ್ತಿದೆ.

Advertisement

Udayavani is now on Telegram. Click here to join our channel and stay updated with the latest news.

Next