ಕಲಬುರಗಿ: ಜಿಲ್ಲೆಯಲ್ಲಿ ಗುರುವಾರ ಮತ್ತೆ ಮೂವರಿಗೆ ಕೋವಿಡ್ ಸೋಂಕು ಪತ್ತೆಯಾಗಿದ್ದು, ಇದರೊಂದಿಗೆ ಸೋಂಕಿತರ ಸಂಖ್ಯೆ 67ಕ್ಕೆ ಏರಿಕೆಯಾಗಿದೆ. ನಗರದ ಇಸ್ಲಾಮಾಬಾದ್ ಕಾಲೋನಿಯ 35 ವರ್ಷದ ಮಹಿಳೆ (ಪಿ-698), ಈಕೆಯ 41 ವರ್ಷದ ಪತಿ (ಪಿ-699) ಹಾಗೂ ಕರೀಮ್ ನಗರದ ನಿವಾಸಿ 35 ವರ್ಷದ ಲಾರಿ ಚಾಲಕ (ಪಿ-697)ನಿಗೆ ಮಹಾಮಾರಿ ಸೋಂಕು ಕಾಣಿಸಿಕೊಂಡಿದೆ. ಒಟ್ಟು 67 ಜನ ಸೋಂಕಿತರಲ್ಲಿ ಈಗಾಗಲೇ 29 ಜನರು ಸೋಂಕಿನಿಂದ ಗುಣಮುಖರಾಗಿ ಆಸ್ಪತ್ರೆಯಿಂದ ಬಿಡುಗಡೆಯಾಗಿದ್ದಾರೆ. ಆರು ಜನ ಸೋಂಕಿತರು ಮೃತಪಟ್ಟಿದ್ದು, ಉಳಿದಂತೆ 32 ಸೋಂಕಿತರು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.
ಹೆಚ್ಚಿದ ಆತಂಕ: ಇಸ್ಲಾಮಾಬಾದ್ ಕಾಲೋನಿಯ 36 ವರ್ಷದ ಮಹಿಳೆ (ಪಿ-641)ಯ ಸಂಪರ್ಕದಿಂದ 35 ವರ್ಷದ ಮಹಿಳೆ ಮತ್ತು 41 ವರ್ಷದ ವ್ಯಕ್ತಿಗೆ ಕೊರೊನಾ ಪತ್ತೆಯಾಗಿದೆ. ಆ ಮಹಿಳೆಗೆ ತನ್ನ 41 ವರ್ಷದ ಪತಿ (ಪಿ-604) ಯಿಂದ ಕಾಣಿಸಿಕೊಂಡಿತ್ತು. ಉಸಿರಾಟದ ಸಮಸ್ಯೆಯಿಂದ ಬಳಲುತ್ತಿದ್ದ ವ್ಯಕ್ತಿಗೆ ಮೇ 3ರಂದು ಸೋಂಕು ದೃಢವಾಗಿತ್ತು. 36 ವರ್ಷದ ಮಹಿಳೆ (ಪಿ-641) ಮತ್ತು 41 ವರ್ಷದ ವ್ಯಕ್ತಿ (ಪಿ-604) ಸ್ವಂತ ಮನೆ ಹೊಂದಿದ್ದು, ಹಲವು ಮನೆಗಳನ್ನು ಬಾಡಿಗೆ ನೀಡಿದ್ದಾರೆ. ಗುರುವಾರ ಸೋಂಕು ಪತ್ತೆಯಾದ ದಂಪತಿ ಸಹ ಇದೇ ಮನೆಯಲ್ಲಿ ಬಾಡಿಗೆ ಇದ್ದರು. ಹೀಗಾಗಿ ಅಕ್ಕ-ಪಕ್ಕದ ಮನೆಗಳು ಮತ್ತು ಇತರ ಬಾಡಿಗೆಯವರಿಗೆ ಆತಂಕ ಸೃಷ್ಟಿಸಿದ್ದಾರೆ. ಸೋಂಕಿತರ ನೇರ ಸಂಪರ್ಕಕ್ಕೆ ಮಕ್ಕಳು ಸೇರಿ ಹಲವರನ್ನು ಕ್ವಾರಂಟೈನ್ ಮಾಡಲಾಗಿದೆ.
ಚಾಲಕನಿಂದಲೂ ಭೀತಿ: ಕಾಳಗಿ ತಾಲೂಕಿನ ಕೋಡ್ಲಿ ಗ್ರಾಮದ 37 ವರ್ಷದ ವ್ಯಕ್ತಿ (ಪಿ-642) ಸಂಪರ್ಕದಿಂದ 35 ವರ್ಷದ ಲಾರಿ ಚಾಲಕನಿಗೆ (ಪಿ-697)ಸೋಂಕು ಹರಡಿದೆ. ಈತ ಏ.30ರಂದು ಹೈದ್ರಾಬಾದ್ ನಿಂದ ಕೋಡ್ಲಿ ಗ್ರಾಮದ ವ್ಯಕ್ತಿಯನ್ನು ತನ್ನ ಲಾರಿಯಲ್ಲಿ ಕರೆದುಕೊಂಡು ಬಂದಿದ್ದ. ಈತ ಉಳ್ಳಾಗಡ್ಡಿ ಸಾಗಾಟ ಮಾಡುವ ನೆಪದಲ್ಲಿ ಕದ್ದು-ಮುಚ್ಚಿ ಜನರನ್ನು ಕರೆ ತರುತ್ತಿದ್ದ ಎಂದು ಅನುಮಾನ ವ್ಯಕ್ತವಾಗಿದೆ. ಈ ರೀತಿ ಬಂದವರಲ್ಲಿ ಕೋಡ್ಲಿ ಗ್ರಾಮದ ವ್ಯಕ್ತಿ ಕೂಡ ಸೇರಿದ್ದಾನೆ. ಹೈದ್ರಾಬಾದ್‌ನಲ್ಲಿ ಕೆಲಸ ಮಾಡುತ್ತಿದ್ದ ಕೋಡ್ಲಿ ಗ್ರಾಮದ ವ್ಯಕ್ತಿಗೆ ಮೇ 4ರಂದು ಸೋಂಕು ಖಚಿತವಾಗಿತ್ತು. ಈತನ ನೇರ ಸಂಪರ್ಕಕ್ಕೆ ಬಂದ ಕಾರಣಕ್ಕೆ ಲಾರಿ ಚಾಲಕನನ್ನು ಪತ್ತೆ ಹಚ್ಚಿ ಕೊರೊನಾ ಪರೀಕ್ಷೆಗೆ ಒಳಪಡಿಸಲಾಗಿತ್ತು. ಲಾರಿ ಚಾಲಕ ಕರೀಮ್ ನಗರ ಸೇರಿ ಎರಡು ಕಡೆ ಮನೆಗಳನ್ನು ಹೊಂದಿದ್ದಾನೆ ಎಂದು ಹೇಳಲಾಗುತ್ತಿದ್ದು, ಈತನ ಕುಟುಂಬದವರು ಹಾಗೂ ಅಕ್ಕ-ಪಕ್ಕದವರನ್ನು ಕ್ವಾರಂಟೈನ್ ಮಾಡಿ, ನಿಗಾ ವಹಿಸಲಾಗಿದೆ.