ಕಲಬುರಗಿ: ಕೋಟ್ಯಂತರ ರೂ. ವೆಚ್ಚದಲ್ಲಿ ನಿರ್ಮಿಸಲಾದ ಇಲ್ಲಿನ ಕಾರ್ಮಿಕರ ವಿಮಾ ಆಸ್ಪತ್ರೆಯಲ್ಲಿ ಇನ್ಮುಂದೆ ಆಯುಷ್ಮಾನ್ ಕಾರ್ಡುದಾರರಿಗೂ ಉತೃಷ್ಟ ವೈದ್ಯಕೀಯ ಸೇವೆ ಸಿಗಲಿದೆ.
ನವದೆಹಲಿಯಲ್ಲಿ ಶುಕ್ರವಾರ ನಡೆದ ಇಎಸ್‌ಐ ಬೋರ್ಡ್ ಸಭೆಯಲ್ಲಿ ಕಲಬುರಗಿಯಲ್ಲಿನ ಕಾರ್ಮಿಕರ ವಿಮಾ ಆಸ್ಪತ್ರೆಯಲ್ಲಿ ಆಯುಷ್ಮಾನ್ ಕಾರ್ಡುದಾರರಿಗೆ ವೈದ್ಯಕೀಯ ಸೇವೆ ಕಲ್ಪಿಸುವ ನಿಟ್ಟಿನ ಐತಿಹಾಸಿಕ ನಿರ್ಧಾರ ತೆಗೆದುಕೊಳ್ಳಲಾಗಿದೆ.
ಇಎಸ್‌ಐ ಬೋರ್ಡ್‌ನ ಈ ಐತಿಹಾಸಿಕ ನಿರ್ಣಯದಿಂದ ಆಯುಷ್ಮಾನ್ ಕಾರ್ಡ್ ಹೊಂದಿರುವ ಸಾಮಾನ್ಯ ಜನರು ಸರ್ಕಾರಿ ಆಸ್ಪತ್ರೆಯಲ್ಲಿಯಂತೆಯೇ ಸೂಪರ್ ಸ್ಪೆಷಾಲಿಟಿ ವೈದ್ಯಕೀಯ ಸೇವೆ, ಅದರಲ್ಲೂ ಐದು ಲಕ್ಷ ರೂ. ವರೆಗಿನ ವೈದ್ಯಕೀಯ ಸೇವೆ ಉಚಿತವಾಗಿ ಪಡೆಯಬಹುದಾಗಿದೆ.
ಕಳೆದ ಎರಡು ದಿನಗಳ ಹಿಂದೆ ಜಿಲ್ಲಾ ಸರ್ಕಾರಿ ಆಸ್ಪತ್ರೆಯಲ್ಲಿ ಡಯಾಲಿಸೆಸ್ ಘಟಕದಲ್ಲಿನ ದೋಷದಿಂದ 16 ವರ್ಷದ ಬಾಲಕ ಮೃತಪಟ್ಟಿದ್ದಲ್ಲದೇ, ಇಡೀ ಆಸ್ಪತ್ರೆಯ ವೈದ್ಯಕೀಯ ಸೇವೆಯೇ ಹಳ್ಳ ಹಿಡಿದಿರುವುದನ್ನು ಆಸ್ಪತ್ರೆಗೆ ಭೇಟಿ ನೀಡಿ ಸ್ವತಃ ಮನಗಂಡ ಕಲಬುರಗಿ ಸಂಸದ ಡಾ| ಉಮೇಶ ಜಾಧವ ಅವರು, ತಕ್ಷಣವೇ ನವದೆಹಲಿಗೆ ಹೋಗಿ ಇಎಸ್‌ಐ ಡೈರೆಕ್ಟರ್ ಆಫ್ ಜನರಲ್ ಅವರನ್ನು ಕಂಡು ಕಲಬುರಗಿ ‘ಇಎಸ್‌ಐ’ದಲ್ಲಿ ಆಯುಷ್ಮಾನ್ ಕಾರ್ಡುದಾರರಿಗೂ ವೈದ್ಯಕೀಯ ಸೇವೆ ಕಲ್ಪಿಸುವಂತೆ ಮನವಿ ಮಾಡಿ ಒತ್ತಡ ಹಾಕಿದ್ದರು. ಇದರ ಪರಿಣಾಮ ಬೋರ್ಡ್ ತನ್ನ ಸಭೆಯಲ್ಲಿ ನಿರ್ಣಯ ಕೈಗೊಳ್ಳುವುದರ ಮುಖಾಂತರ ಸಂಸದರ ಪ್ರಯತ್ನಕ್ಕೆ ತಕ್ಷಣವೇ ಫಲ ದೊರಕಿದಂತೆ ಆಗಿದೆ.
ಸುಧಾರಣೆಗೆ ಪ್ರಯತ್ನ: ಕಲಬುರಗಿ ಕ್ಷೇತ್ರದ ಸಂಸದರಾಗಿ ಚುನಾಯಿತರಾದ ನಂತರ ನವದೆಹಲಿಗೆ ಹೋಗಿ ಕೇಂದ್ರ ಸಂಪುಟ ಅಸ್ತಿತ್ವ ಸಮಾರಂಭದಲ್ಲಿ ಪಾಲ್ಗೊಂಡು ಪ್ರಥಮವಾಗಿ ಜಿಲ್ಲೆಗೆ ಆಗಮಿಸಿ ಕಾಳಗಿ ತಾಲೂಕಿನ ಮಂಗಲಗಿ ಗ್ರಾಮದಲ್ಲಿ ಸಿಡಿಲು ಬಡಿದು ಮೂವರು ಮೃತಪಟ್ಟ ಕುಟುಂಬಕ್ಕೆ ಸಾಂತ್ವನ ಹೇಳುವ ಮುಖಾಂತರ ಅಧಿಕೃತ ಜನಸೇವೆ ಕಾರ್ಯ ಆರಂಭಿಸಿದ್ದ ಸಂಸದರು ಎರಡು ದಿನಗಳ ನಂತರ ಜೂನ್ 2ರಂದು ನಗರದ ಸೇಡಂ ರಸ್ತೆಯಲ್ಲಿರುವ ಕಾರ್ಮಿಕರ ವಿಮಾ ಆಸ್ಪತ್ರೆ (ಇಎಸ್‌ಐ)ಗೆ ದಿಢೀರ್ ಭೇಟಿ ನೀಡಿ ವೈದ್ಯಕೀಯ ಸೇವೆ ಹಾಗೂ ನ್ಯೂನತೆಗಳನ್ನು ಸುದೀರ್ಘವಾಗಿ ಅವಲೋಕಿಸಿದ್ದರು.
ಈ ಭಾಗದ ಕಾರ್ಮಿಕರ ಜತೆಗೆ ಜನರಿಗೆ ಅತ್ಯುತ್ತಮ ವೈದ್ಯಕೀಯ ದೊರಕಲೆಂದು ಆಸ್ಪತ್ರೆ ಸ್ಥಾಪಿತವಾಗಿದೆ. ಹೀಗಾಗಿ ಸೇವೆ ದಿನೇ-ದಿನೇ ಹೆಚ್ಚಳವಾಗಬೇಕು. ವೈದ್ಯಕೀಯ ಸೇವೆ ಸುಧಾರಣೆ ನಿಟ್ಟಿನಲ್ಲಿ ಕೈಗೊಳ್ಳಬೇಕಾದ ಕಾರ್ಯಗಳತ್ತ ಗಮನ ಹರಿಸಲಾಗುವುದು. ಕಲಬುರಗಿ ಇಎಸ್‌ಐ ಆಸ್ಪತ್ರೆಯಲ್ಲಿ ಎಲ್ಲ ಸುಧಾರಿತ ವೈದ್ಯಕೀಯ ಸೌಲಭ್ಯಗಳಿವೆ. ಆದರೆ ಜನತೆಗೆ ಹೆಚ್ಚಿನ ಪ್ರಮಾಣದಲ್ಲಿ ಸದುಪಯೋಗ ಆಗುತ್ತಿಲ್ಲ. ಈ ನಿಟ್ಟಿನಲ್ಲಿ ರಾಜ್ಯದೊಂದಿಗೆ ಚರ್ಚಿಸಿ ಹಾಗೂ ರಾಜ್ಯದ ಎಲ್ಲ ಸಂಸದರ ವಿಶ್ವಾಸದೊಂದಿಗೆ ಕೇಂದ್ರದ ಮೇಲೆ ಒತ್ತಡ ಹಾಕಲಾಗುವುದು ಎಂದು ಹೇಳಿದ್ದರು. ಈಗ ಸಂಸದರು ಹೇಳಿರುವಂತೆ ಕಾರ್ಯರೂಪಕ್ಕೆ ಬಂದಿದೆ.
ಶುಕ್ರವಾರ ಇಎಸ್‌ಐ ಬೋರ್ಡ್‌ನಲ್ಲಿ ಕಲಬುರಗಿಯಲ್ಲಿನ ಕಾರ್ಮಿಕರ ವಿಮಾ ಆಸ್ಪತ್ರೆ (ಇಎಸ್‌ಐ)ಯಲ್ಲಿ ಆಯುಷ್ಮಾನ್ ಕಾರ್ಡುದಾರರಿಗೆ ವೈದ್ಯಕೀಯ ಸೇವೆ ಕಲ್ಪಿಸುವ ಕುರಿತಾಗಿ ನಿರ್ಣಯ ಕೈಗೊಳ್ಳಲಾಗಿದೆ. ಈಗ ಕೇಂದ್ರ ಸರ್ಕಾರ ಹಾಗೂ ರಾಜ್ಯ ಸರ್ಕಾರ ನಡುವೆ ಒಪ್ಪಂದ ಆಗಬೇಕಿದೆ. ಎರಡರ ನಡುವೆ ಒಪ್ಪಂದಕ್ಕೆ ಸಹಿ ಹಾಕಿದ ನಂತರ ಇದು ಕಾರ್ಯರೂಪಕ್ಕೆ ಬರಲಿದೆ. ಈ ನಿಟ್ಟಿನಲ್ಲಿ ಕೇಂದ್ರದ ಕಾರ್ಮಿಕ ಸಚಿವ ಸಂತೊಷ ಗಂಗವಾರ ಹಾಗೂ ಇಎಸ್‌ಐ ಡೈರೆಕ್ಟರ್ ಜನರಲ್ ರಾಜಕುಮಾರ ಅವರನ್ನು ಅಭಿನಂದಿಸುವೆ.
•
ಡಾ| ಉಮೇಶ ಜಾಧವ, ಸಂಸದರು, ಕಲಬುರಗಿ