ಕಲಬುರಗಿ: ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ ಶುಕ್ರವಾರ ಮಂಡಿಸಿದ 2019-20ನೇ ಸಾಲಿನ ಕೇಂದ್ರದ ಮುಂಗಡ ಪತ್ರಕ್ಕೆ ಮಿಶ್ರ ಪ್ರತಿಕ್ರಿಯೆ ವ್ಯಕ್ತವಾಗಿದೆ.
ತೆರಿಗೆ ಆದಾಯ ಮಿತಿ ಐದು ಲಕ್ಷ ರೂ.ಗೆ ಹೆಚ್ಚಿಸಿರುವುದು, ಸಣ್ಣ ಹಾಗೂ ಅತಿ ಸಣ್ಣ ಕೈಗಾರಿಕೆಗಳಿಗೆ ಉತ್ತೇಜನ, ಕೃಷಿ ವಲಯಕ್ಕೆ ಆದ್ಯತೆ, ಗ್ರಾಮೀಣಾಭಿವೃದ್ಧಿಗೆ ಒತ್ತು, 1.95 ಕೋಟಿ ಮನೆಗಳ ನಿರ್ಮಾಣಕ್ಕೆ ದೃಢ ಹೆಜ್ಜೆ, ನೀರು ಬಳಕೆಗೆ ಮಾರ್ಗದರ್ಶಿ ಕಾರ್ಯಕ್ರಮ ಸೇರಿದಂತೆ ಇತರ ಘೋಷಣೆಗಳು ಜನಪರ ಯೋಜನಗಳಾಗಿವೆ ಎಂದು ಬಣ್ಣಿಸಲಾಗಿದೆ.
ನಿರ್ಮಲಾ ಸೀತಾರಾಮನ್ ಅವರು ಕರ್ನಾಟಕ ರಾಜ್ಯದಿಂದ ರಾಜ್ಯಸಭಾ ಸದಸ್ಯತ್ವ ಪ್ರತಿನಿಧಿಸುತ್ತಿರುವುದರಿಂದ ರಾಜ್ಯಕ್ಕೆ ಏನಾದರೂ ಕೊಡುಗೆ ನೀಡಬಹುದು ಎಂದು ನಿರೀಕ್ಷಿಸಲಾಗಿತ್ತು. ಆದರೆ ರಾಜ್ಯಕ್ಕೆ ಅದರಲ್ಲೂ ಹೈದ್ರಾಬಾದ್ ಕರ್ನಾಟಕ ಭಾಗಕ್ಕೆ ನಯಾಪೈಸೆ ಕೊಡುಗೆ ನೀಡಿಲ್ಲ ಎಂದು ಹಲವರು ಟೀಕಿಸಿದ್ದಾರೆ.
ರೈತರ ಕೃಷಿ ಉಪಕರಣಗಳಿಗೆ ಉತ್ತೇಜನ ನೀಡಿರುವುದು, ಜಲಶಕ್ತಿ ಸಚಿವಾಲಯ ಸ್ಥಾಪನೆ, ಎಲ್ಲ ಗ್ರಾಮಗಳಲ್ಲಿ ಘನತ್ಯಾಜ್ಯ ನಿರ್ವಹಣೆಗೆ ಯೋಜನೆ, ಚಿಲ್ಲರೆ ವ್ಯಾಪಾರಿಗಳಿಗೆ ಪ್ರಧಾನಮಂತ್ರಿ ಕರ್ಮಯೋಗಿ ಮಾನ್‌ಧನ್ ಪಿಂಚಣಿ ಯೋಜನೆ, ಶೂನ್ಯ ಬಂಡವಾಳ ಕೃಷಿಗೆ ಉತ್ತೇಜನ ನೀಡಿರುವುದು ಮಾದರಿ ಕಾರ್ಯಗಳಾಗಿವೆ ಎಂದು ಪ್ರಶಂಸೆ ವ್ಯಕ್ತಪಡಿಸಲಾಗಿದೆ.
ಬರೀ ಬಾಯಿ ಮಾತಲ್ಲಿ ಬಸವಣ್ಣನವರ ವಚನ ಹೇಳಿದರೆ ಸಾಲದು, ಕಾಯಕದಲ್ಲಿ ಸರ್ವರಿಗೂ ಸಮಪಾಲು ನೀತಿ ಕಾರ್ಯರೂಪಕ್ಕೆ ತರಬೇಕು. ಅಂದಾಗ ಮಾತ್ರ ಭಾಷಣಕ್ಕೆ ಅರ್ಥ ಬರುತ್ತದೆ. ತೈಲ ಬೆಲೆ ಹೆಚ್ಚಳ ಮಾಡಿರುವುದು ಬಡ ವಿರೋಧಿಯಾಗಿದೆ ಎಂದು ಕೆಲವರು ತಮ್ಮ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.
ಕಲಬುರಗಿಗೆ ರೈಲ್ವೆ ವಿಭಾಗೀಯ ಕಚೇರಿ ಕಾರ್ಯಾರಂಭ, ಏಮ್ಸ್ ಸ್ಥಾಪನೆ ಜತೆಗೆ ನಿಮ್l ಸ್ಥಾಪನೆ ಬಗ್ಗೆ ಘೋಷಣೆ ಮಾಡುವರು ಎಂದು ನಿರೀಕ್ಷಿಸಲಾಗಿತ್ತು. ಆದರೆ ಇವುಗಳಲ್ಲಿ ಒಂದರ ಕುರಿತಾಗಿಯೂ ಪ್ರಸ್ತಾಪವಿಲ್ಲ ಎಂದು ಕೆಲವರು ಅಸಮಾಧಾನ ವ್ಯಕ್ತಪಡಿಸಿದ್ದಾರೆ.