Advertisement

ಕೋವಿಡ್ ನಿಯಂತ್ರಣಕ್ಕೆ ಮನೆ-ಮನೆ ಸಮೀಕ್ಷೆ

03:09 PM Apr 19, 2020 | Naveen |

ಕಲಬುರಗಿ: ಮಹಾಮಾರಿ ಕೋವಿಡ್ ಸೋಂಕು ಹರಡುವಿಕೆ ತಡೆಯುವ ನಿಟ್ಟಿನಲ್ಲಿ ಮನೆ-ಮನೆ ಸಮೀಕ್ಷೆ ಕಾರ್ಯ ನಡೆಯುತ್ತಿದ್ದು, ಶುಕ್ರವಾರ ಅಂಗನವಾಡಿ, ಆಶಾ ಹಾಗೂ ಆರೋಗ್ಯ ಕಾರ್ಯಕರ್ತೆಯರು ಬಡಾವಣೆಯಲ್ಲಿ ಮನೆ-ಮನೆಗೆ ತೆರಳಿ ಮಾಹಿತಿ ಸಂಗ್ರಹಿಸಿದರು.

Advertisement

ಜಿಲ್ಲೆಯಲ್ಲಿ ಕೋವಿಡ್ ಸೋಂಕಿತರ ಸಂಖ್ಯೆ ದಿನದಿಂದ ದಿನಕ್ಕೆ ಏರಿಕೆಯಾಗುತ್ತಿದೆ. ಆದ್ದರಿಂದ ಸೋಂಕಿತ ವ್ಯಕ್ತಿಗಳು ವಾಸವಿದ್ದ ವಾರ್ಡ್‌ಗಳು ಮತ್ತು ಶಂಕಿತರ ಪ್ರದೇಶಗಳಲ್ಲಿ ಕಾರ್ಯಕರ್ತೆಯರು ಮನೆ-ಮನೆ ಸಮೀಕ್ಷೆ ನಡೆಸುತ್ತಿದ್ದಾರೆ. ಮನೆಯವರ ಮಾಹಿತಿ ಸಂದರ್ಭದಲ್ಲಿ ಯಾರಿಗಾದರೂ ಜ್ವರದ ಲಕ್ಷಣಗಳು ಕಂಡುಬಂದರೆ ಅಂತಹವನ್ನು ನೇರವಾಗಿ ಜ್ವರ ಕ್ಲಿನಿಕ್‌ಗಳಿಗೆ ಕರೆ ತರಲಿದ್ದಾರೆ.

ಅಲ್ಲಿಂದ ವೈದ್ಯರು ಸಿಬ್ಬಂದಿ ತಪಾಸಣೆಗೆ ಒಳಪಡಿಸಲಿದ್ದಾರೆ. ಕಂಟೇನ್ಮೆಂಟ್‌ ಝೋನ್‌ ನಲ್ಲಿ ವಾಸಿಸುವವರಿಗೆ ಜ್ವರ ಕಂಡು ಬಂದರೆ ಅವರನ್ನು ಮುನ್ನೆಚ್ಚರಿಕೆ ಕ್ರಮವಾಗಿ ಕ್ವಾರಂಟೈನ್‌ ಮಾಡಲಾಗುತ್ತದೆ. ಸಮೀಕ್ಷೆಗೆ ಆರರಿಂದ ಎಂಟು ಜನ ಕಾರ್ಯಕರ್ತೆಯರ ತಂಡ ರಚಿಸಲಾಗಿದೆ. ಶುಕ್ರವಾರ ಜೆ.ಆರ್‌. ನಗರ, ವಿವೇಕಾನಂದ ನಗರ, ಮಾಣಿಕೇಶ್ವರಿ ಕಾಲೋನಿಯಲ್ಲಿ ಆರೋಗ್ಯ ಸಿಬ್ಬಂದಿ ಮೇರಾ ಬಾಯಿ, ಅಂಗನವಾಡಿ ಕಾರ್ಯಕರ್ತೆಯರಾದ ವಿಶಾಲಾಕ್ಷಿ ಹಿರೇಮಠ, ಭಾರತಿ ಅವರ ತಂಡದವರು ಮಾಹಿತಿ ಸಂಗ್ರಹ ಮಾಡಿದರು.

13 ಜ್ವರದ ಕ್ಲಿನಿಕ್‌: ನಗರದ 9 ಕಂಟೇನ್ಮೆಂಟ್‌ ಝೋನ್‌ಗಳನ್ನು ಗುರುತಿಸಲಾಗಿದ್ದು, ಇವುಗಳ ವ್ಯಾಪ್ತಿಯೊಳಗೆ ಸೇರಿದಂತೆ ಹಲವೆಡೆ 13 ಜ್ವರದ ಕ್ಲಿನಿಕ್‌ಗಳನ್ನು ಆರಂಭಿಸಲಾಗಿದೆ. ಇಲ್ಲಿ ಒಬ್ಬ ವೈದ್ಯರು ಸೇರಿ ನರ್ಸ್‌ ಹಾಗೂ ಆರೋಗ್ಯ ಸಹಾಯಕ ಸಿಬ್ಬಂದಿಯನ್ನು ಒಳಗೊಂಡ ತಂಡ ಕಾರ್ಯ ನಿರ್ವಹಿಸುತ್ತಿದೆ. ಕೊರೊನಾ ಸೋಂಕಿನ ಅರಿವು ಇಲ್ಲದವರನ್ನು ಪತ್ತೆ ಮಾಡುವ ಉದ್ದೇಶದಿಂದ ಕ್ಲಿನಿಕ್‌ಗಳನ್ನು ತೆರೆಯಲಾಗಿದೆ.

ಸಮೀಕ್ಷೆಗೆ ಬೇಲಿ ಅಡ್ಡಿ
ಕೋವಿಡ್ ಭೀತಿ ಹಿನ್ನೆಲೆಯಲ್ಲಿ ಹಲವು ಬಡಾವಣೆ ಜನರು ಸ್ವಯಂ ಪ್ರೇರಿತವಾಗಿ ದಿಗ್ಬಂಧನ ಹಾಕಿಕೊಂಡಿದ್ದಾರೆ. ತಮ್ಮ ಬಡಾವಣೆಗೆ ಬೇರೆ ಪ್ರದೇಶದಿಂದ ಜನರ ಪ್ರವೇಶ ತಡೆಯಲು ಕಲ್ಲು, ಮಣ್ಣು, ಮುಳ್ಳಿನ ಕಂಟಿ ಹಾಕಿ ರಸ್ತೆಗಳನ್ನು ಬಂದ್‌ ಮಾಡಿದ್ದಾರೆ. ಇದು ಮನೆ-ಮನೆಗೆ ತೆರಳುವ ಕಾರ್ಯಕರ್ತೆಯರಿಗೆ ಅಡ್ಡಿಯಾಗಿ ಪರಿಣಮಿಸಿದೆ.  ಸಮೀಕ್ಷೆ ತಂಡಗಳಲ್ಲಿ ವಯಸ್ಸಾದ ಕಾರ್ಯಕರ್ತೆಯರು ಇದ್ದು, ಅವರು “ತಡೆಗೋಡೆ’ ಬಡಾವಣೆಗಳಿಗೆ ಹೋಗಲು ತೊಂದರೆ ಅನುಭವಿಸುವಂತೆ ಆಗಿದೆ ಎಂದು ಕೆಲ ಕಾರ್ಯಕರ್ತೆಯರು ಅಳಲು ತೋಡಿಕೊಂಡಿದ್ದಾರೆ.

Advertisement
Advertisement

Udayavani is now on Telegram. Click here to join our channel and stay updated with the latest news.

Next