ಕಲಬುರಗಿ: ಕಲ್ಯಾಣ ಕರ್ನಾಟಕ ಪ್ರದೇಶ ಅಭಿವೃದ್ಧಿ ಮಂಡಳಿ ವತಿಯಿಂದ ನ.4ರಿಂದ ಎರಡು ದಿನಗಳ ಕಾಲ ಗುಲಬರ್ಗಾ ವಿಶ್ವವಿದ್ಯಾಲಯದ ಆವರಣದಲ್ಲಿ ಕಲ್ಯಾಣ ಕರ್ನಾಟಕ ಸಮಗ್ರ ಇತಿಹಾಸ ಕುರಿತು ರಾಜ್ಯ ಮಟ್ಟದ ಕಾರ್ಯಾಗಾರ ಏರ್ಪಡಿಸಲಾಗುತ್ತಿದೆ ಎಂದು ಕಲ್ಯಾಣ ಕರ್ನಾಟಕ ಪ್ರದೇಶ ಅಭಿವೃದ್ಧಿ ಮಂಡಳಿ ಕಾರ್ಯದರ್ಶಿ ಸುಬೋಧ ಯಾದವ ಹೇಳಿದರು.
ನಗರದ ಗುಲಬರ್ಗಾ ವಿಶ್ವವಿದ್ಯಾಲಯದ ಸಭಾಂಗಣದಲ್ಲಿ ಮಂಗಳವಾರ ನಡೆದ ಕಲ್ಯಾಣ ಕರ್ನಾಟಕ ಸಮಗ್ರ ಇತಿಹಾಸದ ಕಾರ್ಯಾಗಾರ ಹಾಗೂ ವಿಶ್ವವಿದ್ಯಾಲಯ ಅಭಿವೃದ್ಧಿ ಕುರಿತು ತುರ್ತು ಪೂರ್ವಭಾವಿ ಸಭೆಯಲ್ಲಿ ಮಾತನಾಡಿದ ಅವರು, ಈ ಹಿಂದೆ ಕಾರ್ಯಾಗಾರದ ದಿನವನ್ನು ಅಕ್ಟೋಬರ್ 12 ಮತ್ತು 13ರಂದು ನಿಗದಿಪಡಿಸಲಾಗಿತ್ತು. ರಾಜ್ಯದಲ್ಲಿ ವಿಧಾನಸಭೆ ಉಪಚುನಾವಣೆ ಇರುವ ಹಿನ್ನೆಲೆಯಲ್ಲಿ ಕಾರ್ಯಾಗಾರವು ಮುಂದೂಡಲಾಗಿದೆ ಎಂದರು.
ಕಲ್ಯಾಣ ಕರ್ನಾಟಕ ಸಮಗ್ರ ಇತಿಹಾಸ ಕಾರ್ಯಾಗಾರಕ್ಕೆ ಈ ಭಾಗದ ಏಳಿಗೆಗಾಗಿ ಸಂಶೋಧನೆ ಮಾಡಿದ ರಾಜ್ಯ ಮಟ್ಟದ ಹಾಗೂ ರಾಷ್ಟ್ರಮಟ್ಟದ ವಿದ್ವಾಂಸರನ್ನು ಆಹ್ವಾನಿಸಲಾಗುತ್ತಿದೆ ಎಂದು ತಿಳಿಸಿದರು.
ಕಲ್ಯಾಣ ಕರ್ನಾಟಕ ವಿಭಾಗದಲ್ಲಿ ಹಲವು ವಿಶ್ವವಿದ್ಯಾಲಯಗಳು ಏಳ್ಗೆಗೊಂಡಿವೆ. ಆದರೆ, ಗುಲಬರ್ಗಾ ವಿಶ್ವವಿದ್ಯಾಲಯ ಅತ್ಯಂತ ಹಳೆಯ ಹಾಗೂ ಮೊದಲ ವಿಶ್ವವಿದ್ಯಾಲಯವಾಗಿದ್ದು, 39 ವರ್ಷ ಪೂರ್ಣಗೊಳಿಸಿದರೂ ಇನ್ನೂ ಏಳ್ಗೆ ಆಗಿಲ್ಲ. ಈವರೆಗೆ ಗುಲಬರ್ಗಾ ವಿಶ್ವವಿದ್ಯಾಲಯದ ಏಳಿಗೆಗಾಗಿ ಕಲ್ಯಾಣ ಕರ್ನಾಟಕ ಪ್ರದೇಶ ಅಭಿವೃದ್ಧಿ
ಮಂಡಳಿಯಿಂದ ವಿವಿಧ 26 ಅಭಿವೃದ್ಧಿ ಕಾಮಗಾರಿಗಳಿಗೆ 11.86 ಕೋಟಿ ರೂ. ಬಿಡುಗಡೆ ಮಾಡಿದ್ದು, ಇದರಲ್ಲಿ 24 ಕಾಮಗಾರಿಗಳು ಪೂರ್ಣಗೊಂಡಿವೆ. ಇನ್ನು ಎರಡು
ಕಾಮಗಾರಿಗಳು ಪ್ರಗತಿಯಲ್ಲಿವೆ ಎಂದರು.
ಕಲ್ಯಾಣ ಕರ್ನಾಟಕ ಪ್ರದೇಶ ಅಭಿವೃದ್ಧಿ ಮಂಡಳಿಯು ವಿಶ್ವವಿದ್ಯಾಲಯದ ಏಳಿಗೆಗೆ ಇಲ್ಲಿಯವರೆಗೆ ಸ್ಪಂದಿಸಿದೆ. ಇನ್ನುಳಿದ ಮೂಲಭೂತ ಸೌಕರ್ಯಗಳು ಹಾಗೂ ಅಭಿವೃದ್ಧಿ ಕಾಮಗಾರಿಗಳ ಪ್ರಸ್ತಾವನೆ ಸರ್ಕಾರಕ್ಕೆ ಸಲ್ಲಿಸಿ ಅನುಮೋದನೆ ಪಡೆದುಕೊಳ್ಳಬೇಕು. ಸರ್ಕಾರದ ಹಂತದಲ್ಲಿ ಇತ್ಯರ್ಥವಾಗದಿದ್ದ ಪ್ರಸ್ತಾವನೆಯನ್ನು ಮಂಡಳಿಗೆ ಸಲ್ಲಿಸಿದಲ್ಲಿ ಮುಂದಿನ ಕ್ರಮ ಕೈಗೊಳ್ಳಲಾಗುವುದು ಎಂದರು.
ಗುಲಬರ್ಗಾ ವಿಶ್ವವಿದ್ಯಾಲಯದ ಪ್ರಭಾರಿ ಕುಲಪತಿ ಪ್ರೊ| ಪರಿಮಳಾ ಅಂಬೇಕರ್, ಮೌಲ್ಯಮಾಪನ ಕುಲಸಚಿವ ಡಾ| ದೇವಿಂದ್ರಪ್ಪ ಮದರಿ, ಹಣಕಾಸು ಅಧಿಕಾರಿ ಡಾ| ಬಿ.ವಿಜಯ, ಹೋರಾಟಗಾರ ಲಕ್ಷ್ಮಣ ದಸ್ತಿ ಹಾಗೂ ಪ್ರಾಧ್ಯಾಪಕರು, ಅಧಿಕಾರಿಗಳು ಹಾಜರಿದ್ದರು.