ಕಲಬುರಗಿ: ಮುಂಗಾರು ಆರಂಭದ ಮೃಗಶಿರ ಮಳೆ ಮುಂಚೆಯೇ ರೋಹಿಣಿ ಮಳೆಯು ರವಿವಾರ ಸಂಜೆ ಹಾಗೂ ಸೋಮವಾರ ಬೆಳಗಿನ ಜಾವ ಜಿಲ್ಲೆಯಾದ್ಯಂತ ಸುರಿದಿದ್ದ ಮಳೆಯು ಮಂಗಳವಾರ ಬೆಳಗಿನ ಜಾವವೂ ಬಿದ್ದಿದ್ದು, ಮುಂಗಾರು ಹಂಗಾಮಿನ ಬಿತ್ತನೆಗೆ ಶುರು ಎನ್ನುವಂತೆ ವಾತಾವರಣ ನಿರ್ಮಿಸಿದೆ.
ರವಿವಾರ ಸಂಜೆ ಹಾಗೂ ಸೋಮವಾರ ಜಿಲ್ಲೆಯಾದ್ಯಂತ ಒಟ್ಟಾರೆ 10 ಮಿಮೀ ಮಳೆ ಬಿದ್ದಿದ್ದರೆ ಮಂಗಳವಾರ ಬೆಳಗಿನ ಜಾವ ಜಿಲ್ಲೆಯಾದ್ಯಂತ 19 ಮಿಮೀ ಮಳೆಯಾಗಿದೆ. ಜಿಲ್ಲೆಯ ಎಲ್ಲ ತಾಲೂಕುಗಳಲ್ಲಿ ಮಳೆ ಆಗಿರುವುದು ನೆಮ್ಮದಿ ತರುವಂತಾಗಿದೆ. ಜಿಲ್ಲೆಯ ಎಲ್ಲ ತಾಲೂಕುಗಳಲ್ಲೂ ಮಳೆ ಸುರಿದಿರುವುದು ವಿಶೇಷವಾಗಿದೆ. 46 ಡಿಗ್ರಿ ಸೆಲ್ಸಿಯಸ್ ಬಿಸಿಲಿನಿಂದ ಕಂಗೆಟ್ಟಿದ್ದ ಜನತೆಗೆ ಈ ಮಳೆ ತಂಪೆರೆದಿದೆ. ಮುಂಗಾರು ಬಿತ್ತನೆಗೆ ಹದ ಮಾಡಿಟ್ಟಿದ್ದ ಭೂಮಿ ಮೆತ್ತಗಾಗುವಂತಾಗಿದೆ.
ಮಂಗಳವಾರ ಅಫಜಲಪುರ ತಾಲೂಕಿನಲ್ಲಿ 5 ಮಿಮೀ, ಆಳಂದ ತಾಲೂಕಿನಲ್ಲಿ 18 ಮಿಮೀ, ಚಿಂಚೋಳಿ ತಾಲೂಕಿನಲ್ಲಿ 15 ಮಿಮೀ, ಚಿತ್ತಾಪುರ ತಾಲೂಕಿನಲ್ಲಿ 32 ಮಿಮೀ, ಕಲಬುರಗಿ ತಾಲೂಕಿನಲ್ಲಿ 26 ಮಿಮೀ, ಜೇವರ್ಗಿ ತಾಲೂಕಿನಲ್ಲಿ 13 ಮಿಮೀ ಹಾಗೂ ಸೇಡಂ ತಾಲೂಕಿನಲ್ಲಿ 22 ಮಿಮೀ ಮಳೆಯಾಗಿದೆ. ಒಟ್ಟಾರೆ ಜಿಲ್ಲೆಯಾದ್ಯಂತ ಉತ್ತಮ ಮಳೆಯಾಗಿದೆ. ಸೋಮವಾರ ಬೆಳಗಿನ ಜಾವ ಅಫಜಲಪುರ ತಾಲೂಕಿನಲ್ಲಿ 11 ಮಿಮೀ, ಆಳಂದ ತಾಲೂಕಿನಲ್ಲಿ 5 ಮಿಮೀ, ಚಿಂಚೋಳಿ ತಾಲೂಕಿನಲ್ಲಿ 6 ಮಿಮೀ, ಚಿತ್ತಾಪುರ ತಾಲೂಕಿನಲ್ಲಿ 10 ಮಿಮೀ, ಕಲಬುರಗಿ ತಾಲೂಕಿನಲ್ಲಿ 14 ಮಿಮೀ, ಜೇವರ್ಗಿ ತಾಲೂಕಿನಲ್ಲಿ 13 ಮಿಮೀ ಹಾಗೂ ಸೇಡಂ ತಾಲೂಕಿನಲ್ಲಿ 11 ಮಿಮೀ ಮಳೆಯಾಗಿತ್ತು. ಅಲ್ಲಲ್ಲಿ ಮಳೆಯಿಂದ ಗಿಡಮರಗಳು ನೆಲಕ್ಕುರುಳಿವೆ. ಆದರೆ ಯಾವುದೇ ಜೀವ ಹಾನಿ ಸಂಭವಿಸಿಲ್ಲ.