ಕಲಬುರಗಿ: ಶ್ರೇಷ್ಠ ಗುಣಮಟ್ಟ ಮತ್ತು ಉತ್ತಮ ಖನಿಜಾಂಶವುಳ್ಳ ‘ಗುಲಬರ್ಗಾ ತೊಗರಿ’ಗೆ ಭೌಗೋಳಿಕ ಮಾನ್ಯತೆ ದೊರೆತಿದ್ದು, ರಾಷ್ಟ್ರ ಮತ್ತು ಅಂತಾರಾಷ್ಟ್ರೀಯ ಮಟ್ಟದಲ್ಲಿ ಮತ್ತಷ್ಟು ಪ್ರಸಿದ್ಧಿ ಪಡೆಯಲಿದೆ.
ಆ.14ರಂದು ‘ಗುಲಬರ್ಗಾ ತೊಗರಿ’ಗೆ ಕೇಂದ್ರ ಸರ್ಕಾರ ಭೌಗೋಳಿಕ ಸೂಚಕ (ಜಿಯಾಗ್ರಾಫಿಕಲ್ ಇಂಡಿಕೇಷನ್-ಜಿಐ) ಪ್ರಮಾಣ ಪತ್ರ ನೀಡಿದ್ದು, ಐಜಿ ಟ್ಯಾಗ್ ಪಡೆದ ಜಿಲ್ಲೆಯ ಎರಡನೇ ಉತ್ಪನ್ನ ತೊಗರಿಯಾಗಿದೆ. ಈಗಾಗಲೇ ಜಿಲ್ಲೆಯ ಕಮಲಾಪುರದ ಕೆಂಪು ಬಾಳೆ ಭೌಗೋಳಿಕ ಮಾನ್ಯತೆ ಗಳಿಸಿದೆ. ಜತೆಗೆ ಮೈಸೂರು ಮಲ್ಲಿಗೆ, ಧಾರವಾಡ ಪೇಡಾ, ನಂಜನಗೂಡಿನ ಬಾಳೆ ಹಣ್ಣು, ಇಳಕಲ್ ಸೀರೆ, ಅಪ್ಪೆ ಮಿಡಿ ಮಾವು ಸಾಲಿಗೆ ‘ಗುಲಬರ್ಗಾ ತೊಗರಿ’ಯೂ ಸೇರ್ಪಡೆಯಾಗಿದೆ.
‘ಗುಲಬರ್ಗಾ ತೊಗರಿ’ ಭೌಗೋಳಿಕ ವಿಶಿಷ್ಟ ಗುರುತು ಪಡೆಯುವ ನಿಟ್ಟಿನಲ್ಲಿ ಕರ್ನಾಟಕ ತೊಗರಿ ಮಂಡಳಿ ಮತ್ತು ರಾಯಚೂರು ಕೃಷಿ ವಿಶ್ವವಿದ್ಯಾಲಯ ಎರಡು ವರ್ಷಗಳಿಂದ ಪ್ರಯತ್ನ ಪಟ್ಟಿದ್ದವು. ‘ಗುಲಬರ್ಗಾ ತೊಗರಿ’ಗೆ ಭೌಗೋಳಿಕ ಮಾನ್ಯತೆ ನೀಡುವಂತೆ 2017ರಲ್ಲಿ ಕೇಂದ್ರ ಸರ್ಕಾರಕ್ಕೆ ಅರ್ಜಿ ಸಲ್ಲಿಸಲಾಗಿತ್ತು. ಈಗ ಯಶಸ್ವಿಯಾಗಿದ್ದೇವೆ ಎಂದು ರಾಯಚೂರು ಕೃಷಿ ವಿಶ್ವವಿದ್ಯಾಲಯ ವ್ಯಾಪ್ತಿಯ ಕಲಬುರಗಿ ಕೃಷಿ ಮಹಾ ವಿದ್ಯಾಲಯದ ಡೀನ್ ಡಾ| ಜಯಪ್ರಕಾಶ ಆರ್. ಪಾಟೀಲ ತಿಳಿಸಿದ್ದಾರೆ.
ಭೌಗೋಳಿಕ ಮಾನ್ಯತೆ ಏಕೆ?: ಗುಲಬರ್ಗಾ ಮಣ್ಣಿನಲ್ಲಿ ವಿಶೇಷ ಗುಣಗಳಿದ್ದು, ತೊಗರಿಯಲ್ಲಿ ಕ್ಯಾಲ್ಸಿಯಂ, ಪೊಟ್ಯಾಶಿಯಂ ಅಂಶ ಹೆಚ್ಚಾಗಿದೆ. ಈ ತೊಗರಿ ಅತ್ಯಂತ ರುಚಿ, ಪರಿಮಳ ಭರಿತವಾಗಿದೆ. ಗುಲಬರ್ಗಾ ತೊಗರಿ ಬೇಗನೇ ಬೇಯುತ್ತದೆ. ಮಣ್ಣಿನ ಪರೀಕ್ಷೆ ವರದಿ ಪ್ರಕಾರ ಕಲಬುರಗಿ ಮಣ್ಣಿನಲ್ಲಿ ಬೆಳೆಯುವ ತೊಗರಿಯಲ್ಲಿ 100 ಗ್ರಾಂಗೆ 3.6 ಗ್ರಾಂ ಕ್ಯಾಲ್ಸಿಯಂ, 0.1 ಗ್ರಾಂ ಪೊಟ್ಯಾಸಿಯಂ ಇದೆ. ಬೆಂಗಳೂರಿನಲ್ಲಿ ಬೆಳೆಯುವ ತೊಗರಿಯಲ್ಲಿ 100 ಗ್ರಾಂಗೆ ಕೇವಲ 0.135 ಗ್ರಾ ಕ್ಯಾಲ್ಸಿಯಂ ಮತ್ತು 0.045 ಗ್ರಾಂ ಪೊಟ್ಯಾಶಿಯಂ ಅಂಶವಿದೆ ಎನ್ನುತ್ತಾರೆ ಜಯಪ್ರಕಾಶ ಪಾಟೀಲ.
ಐಜಿ ಟ್ಯಾಗ್‌ನ ಲಾಭ ಏನು?: ರಾಜ್ಯಾದ್ಯಂತ 10 ಲಕ್ಷ ಹೆಕ್ಟೇರ್‌ನಲ್ಲಿ ತೊಗರಿ ಬೆಳೆಯಲಾಗುತ್ತದೆ. ಕಲಬುರಗಿ ಜಿಲ್ಲೆಯೊಂದರಲ್ಲೇ 4 ಲಕ್ಷ ಹೆಕ್ಟೇರ್‌ನಲ್ಲಿ ತೊಗರಿ ಬೆಳೆಯಲಾಗುತ್ತಿದೆ. ಅಲ್ಲದೇ ಸರ್ಕಾರಗಳು ನೀಡುವ ಕನಿಷ್ಟ ಬೆಂಬಲ ಬೆಲೆಯಲ್ಲಿ ಭೌಗೋಳಿಕ ಮಾನ್ಯತೆ ಪಡೆದ ಉತ್ಪನ್ನಕ್ಕೆ ಶೇ.10ರಷ್ಟು ಅಧಿಕ ಬೆಲೆ ಸಿಗಲಿದೆ.