ಕಲಬುರಗಿ: ರಾಜ್ಯದಲ್ಲಿ ಉಂಟಾಗಿರುವ ಪ್ರವಾಹದಿಂದಾಗಿ ಈಶಾನ್ಯ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆಯ ಮತ್ತಷ್ಟು ಬಸ್‌ಗಳ ಸಂಚಾರದಲ್ಲಿ ವ್ಯತ್ಯಯವಾಗಿದ್ದು, 358 ಬಸ್‌ಗಳ ಸಂಚಾರ ರದ್ದುಗೊಳಿಸಲಾಗಿದೆ. ಇದರಿಂದ ಪ್ರತಿ ದಿನ 34 ಲಕ್ಷ ರೂ.ಗೂ ಅಧಿಕ ನಷ್ಟವನ್ನು ಸಂಸ್ಥೆ ಅನುಭವಿಸುತ್ತಿದೆ. ಆದರೆ, ಇದರ ನಡುವೆಯೂ ಪ್ರವಾಹ ಸಂತ್ರಸ್ತರಿಗೆ ಉಚಿತ ಬಸ್ ಸೇವೆಯನ್ನು ಒದಗಿಸಲಾಗುತ್ತಿದೆ.
Advertisement
ಕಳೆದ ಒಂದು ವಾರದಿಂದ ಮಹಾರಾಷ್ಟ್ರ ಮತ್ತು ಉತ್ತರ ಕರ್ನಾಟಕ ಭಾಗದಲ್ಲಿ ಹೆಚ್ಚಿನ ಮಳೆಯಾಗುತ್ತಿದೆ. ಮಹಾರಾಷ್ಟ್ರದಿಂದ ಅಧಿಕ ಪ್ರಮಾಣದ ನೀರು ಹರಿಬಿಡುತ್ತಿರುವುದರಿಂದ ಉತ್ತರ ಕರ್ನಾಟಕದ ಬೆಳಗಾವಿ, ವಿಜಯಪುರ, ಬಾಗಲಕೋಟೆ ಹಾಗೂ ಹೈದ್ರಾಬಾದ ಕರ್ನಾಟಕದ ರಾಯಚೂರು, ಯಾದಗಿರಿ ಜಿಲ್ಲೆಗಳು ಪ್ರವಾಹಕ್ಕೆ ಸಿಲುಕಿ ತತ್ತರಿಸಿವೆ. ಹಲವು ಭಾಗಗಳಲ್ಲಿ ಪ್ರಮುಖ ರಸ್ತೆ, ಸೇತುವೆಗಳು ಮುಳುಗಡೆಯಾಗಿ ರಸ್ತೆ ಸಂಚಾರ ಸಂಪೂರ್ಣ ಬಂದ್ ಆಗಿದೆ.
Related Articles
Advertisement
ವಿಜಯಪುರದಲ್ಲಿ 150 ಬಸ್ ಸ್ಥಗಿತ: ಈಶಾನ್ಯ ಸಾರಿಗೆಯ ಕಲಬುರಗಿ, ಬಳ್ಳಾರಿ, ರಾಯಚೂರು, ಕೊಪ್ಪಳ, ಯಾದಗಿರಿ, ಬೀದರ್ ಮತ್ತು ವಿಜಯಪುರದಿಂದ ಕಾರ್ಯ ನಿರ್ವಹಿಸುತ್ತಿದ್ದ ಒಟ್ಟು 358 ಬಸ್‌ಗಳ ಸಂಚಾರ ರದ್ದುಗೊಂಡಿದೆ. ಇದರಲ್ಲಿ ಹೆಚ್ಚು ಬಸ್‌ಗಳು ವಿಜಯಪುರ ಘಟಕಕ್ಕೆ ಸೇರಿದ್ದು, ಒಟ್ಟಾರೆ 150 ಬಸ್‌ಗಳನ್ನು ರದ್ದು ಮಾಡಲಾಗಿದೆ.
ಯಾದಗಿರಿ ಘಟಕದ 60, ಕೊಪ್ಪಳ 38, ಹೊಸಪೇಟೆ 32, ರಾಯಚೂರು 30, ಬಳ್ಳಾರಿ 18, ಕಲಬುರಗಿ ಘಟಕ-1ರ 16, ಕಲಬುರಗಿ ಘಟಕ-2ರ 14 ಬಸ್‌ಗಳ ಸಂಚಾರ ಸ್ಥಗಿತಗೊಳಿಸಲಾಗಿದೆ. ನಿತ್ಯ ಈ ಎಲ್ಲ ಬಸ್‌ಗಳು 1,08,888 ಕಿ.ಮೀ. ದೂರವನ್ನು ಸಂಚರಿಸುತ್ತಿದ್ದವು ಎಂದು ಸಾರಿಗೆ ಇಲಾಖೆ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.
ಮಹಾರಾಷ್ಟ್ರದಲ್ಲಿ ನಿಂತಿರುವ 10 ಬಸ್: ಪ್ರವಾಹದಿಂದ ಕಾರ್ಯಾಚರಣೆ ನಡೆಸಲಾಗದೆ ಒಟ್ಟು 12 ಬಸ್‌ಗಳನ್ನು ಬೇರೆ-ಬೇರೆ ಬಸ್ ನಿಲ್ದಾಣಗಳಲ್ಲೇ ನಿಲ್ಲಿಸಲಾಗಿದೆ. ಮಹಾರಾಷ್ಟ್ರಕ್ಕೆ ತೆರಳಿದ್ದ ಕೊಪ್ಪಳದ 4, ಹೊಸಪೇಟೆ-1, ರಾಯಚೂರು-1, ಕಲಬುರಗಿ -2, ವಿಜಯಪುರ ಘಟಕದ 2 ಬಸ್‌ಗಳನ್ನು ಕೊಲ್ಹಾಪುರ, ರತ್ನಗಿರಿ ಬಸ್ ನಿಲ್ದಾಣಗಳಲ್ಲಿ ನಿಲ್ಲಿಸಲಾಗಿದೆ. ಗದಗ ಜಿಲ್ಲೆಯ ಕೊಣ್ಣೂರು ಗ್ರಾಮ ಸಂಪೂರ್ಣ ಜಲಾವೃತಗೊಂಡಿರುವುರಿಂದ ವಿಜಯಪುರ ಘಟಕದ ಎರಡು ಬಸ್‌ಗಳನ್ನು ಅಲ್ಲಿನ ಬಸ್ ನಿಲ್ದಾಣದಲ್ಲೇ ಸ್ಥಗಿತಗೊಳಿಸಲಾಗಿದೆ. ಪ್ರವಾಹದ ನೀರು ಕಡಿಮೆಯಾದ ತಕ್ಷಣ ಮತ್ತೆ ಎಲ್ಲ ಮಾರ್ಗಗಳಲ್ಲಿ ಬಸ್ ಕಾರ್ಯಾಚರಣೆ ಯಥಾ ಸ್ಥಿತಿ ಆರಂಭಗೊಳ್ಳಲಿದೆ ಎನ್ನುತ್ತಾರೆ ಅಧಿಕಾರಿಗಳು.
40 ಬಸ್ ಉಚಿತ ಸೇವೆಪ್ರವಾಹ ಪೀಡಿತ ಗ್ರಾಮಗಳಲ್ಲಿ ಜನರ ಸ್ಥಳಾಂತರ ಮತ್ತು ಸಾಮಗ್ರಿಗಳನ್ನು ಸಾಗಿಸಲು ಈಶಾನ್ಯ ಸಾರಿಗೆಯಿಂದ ಉಚಿತವಾಗಿ 40 ಬಸ್‌ಗಳ ಸೇವೆ ಒದಗಿಸಲಾಗುತ್ತಿದೆ. ರಾಯಚೂರು ಜಿಲ್ಲೆಯ ದೇವದುರ್ಗ ತಾಲೂಕಿನ ಕುರಕೆಹಳ್ಳಿಗೆ ಏಳು ಮತ್ತು ರಾಯಚೂರು ತಾಲೂಕಿನ ಗುರ್ಜಾಪುರಕ್ಕೆ ಎರಡು ಬಸ್ ಹಾಗೂ ವಿಜಯಪುರ ಜಿಲ್ಲೆಯ ಮುದ್ದೇಬಿಹಾಳ ತಾಲೂಕಿನ ನಾಗರಾಳಕ್ಕೆ ಎರಡು, ದೇವೂರ ಗ್ರಾಮಕ್ಕೆ ಒಂದು ಬಸ್ ಸೇರಿ ಒಟ್ಟು 40 ಬಸ್‌ಗಳ ಮೂಲಕ ಸಂತ್ರಸ್ತರ ಸ್ಥಳಾಂತರ ಕಾರ್ಯಾಚರಣೆ ನಡೆಸಲಾಗುತ್ತಿದೆ. ಪ್ರವಾಹ ಹಿನ್ನೆಲೆಯಲ್ಲಿ ಆ.4ರಿಂದ ಈಶಾನ್ಯ ಸಾರಿಗೆ ಬಸ್‌ಗಳ ಸಂಚಾರದಲ್ಲಿ ವ್ಯತ್ಯಯವಾಗುತ್ತಿದೆ. ಮುನ್ನೆಚ್ಚರಿಕೆ ಕ್ರಮವಾಗಿ 358 ಬಸ್‌ಗಳ ಕಾರ್ಯಾಚರಣೆ ಸ್ಥಗಿತಗೊಳಿಸಲಾಗಿದೆ. ಇದರಿಂದ ಸಂಸ್ಥೆಗೆ ನಿತ್ಯ 34 ಲಕ್ಷ ರೂ. ನಷ್ಟ ಉಂಟಾಗುತ್ತಿದೆ. ಆದರೂ, ಜನತೆ ಅನುಕೂಲಕ್ಕಾಗಿ ಸಂಸ್ಥೆಯು ಸೇವೆ ಒದಗಿಸಲು ಸಿದ್ಧವಿದೆ. ಸಂಕಷ್ಟ ಸಮಯದಲ್ಲಿ ಮಾನವೀಯತೆ ಮುಖ್ಯವೇ ಹೊರತು ಲಾಭ-ನಷ್ಟದ ಲೆಕ್ಕಾಚಾರ ಹಾಕಬಾರದು. ಇದೇ ದೃಷ್ಟಿಯಿಂದ ಸಂಸ್ಥೆಯು ಕಾರ್ಯ ನಿರ್ವಹಿಸುತ್ತಿದೆ.
•ಜಹೀರಾ ನಸೀಮ್,
ಎಂಡಿ, ಎನ್‌ಇಕೆಆರ್‌ಟಿಸಿ, ಕಲಬುರಗಿ