Advertisement

ಜನಪದ ಹಾಡಿನ ಮೋಡಿಗೆ ಬಿಸಿಲೂರಿಗರು ಫಿದಾ

12:53 PM May 27, 2019 | Naveen |

ಕಲಬುರಗಿ: ನಗರದ ಕನ್ನಡ ಭವನದ ಆವರಣದಲ್ಲಿ ರವಿವಾರದ ಇಳಿಸಂಜೆ ತಂಗಾಳಿಯೊಂದಿಗೆ ತೆರೆದುಕೊಂಡ ಜನಪದ ಸಂಗೀತ ಲೋಕ ಬಿಸಿಲೂರಿನ ಜನತೆಯ ಮನಸೂರೆಗೊಳಿಸಿತು.

Advertisement

ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್‌ ಮತ್ತು ಮೈಸೂರಿನ ಇನಿದನಿ ಮಣ್ಣ ಮಕ್ಕಳ ಹೊನ್ನ ಪದಗಳ ಬಳಗದ ಸಂಯುಕ್ತಾಶ್ರಯದಲ್ಲಿ ಹಮ್ಮಿಕೊಂಡಿದ್ದ ‘ಹೊನ್ನ ಬಿತ್ತೇವೂ ಹೊಲಕೆಲ್ಲಾ’ ಜನಪದ ಮತ್ತು ಸುಗಮ ಸಂಗೀತ ಕಾರ್ಯಕ್ರಮ ನಗರವಾಸಿಗಳ ತನುಮನ ಮುಟ್ಟುವಲ್ಲಿ ಯಶಸ್ವಿಯಾಯಿತು.

ಅಂತಾರಾಷ್ಟ್ರೀಯ ಮಟ್ಟದಲ್ಲಿ ಖ್ಯಾತಿಯ ಮೈಸೂರಿನ ಇನಿದನಿ ಮಣ್ಣ ಮಕ್ಕಳ ಹೊನ್ನಪದಗಳ ಬಳಗದ ಕಲಾವಿದರು ಪ್ರಸ್ತುತ ಪಡಿಸಿದ ಸುಮಧುರ ಗೀತೆಗಳು ಪ್ರೇಕ್ಷಕರನ್ನು ಸೂಜಿಗಲ್ಲಿನಂತೆ ಹಿಡಿದಿಟ್ಟುಕೊಂಡವು. ಕಲಾವಿದರ ಕಂಚಿನ ಕಂಠದಿಂದ ಹೊರಹೊಮ್ಮಿದ ಜನಪದ ಹಾಡುಗಳಿಗೆ ಎಲ್ಲ ವರ್ಗದ ವಯಸ್ಸಿನವರು ಮಾರು ಹೋದರು. ಹಿರಿಯ ಮನಸುಗಳು, ಯುವ ಹೃದಯಗಳು, ಮಹಿಳೆಯರು ಕಲಾವಿದರ ಗಾಯನಕ್ಕೆ ತಲೆದೂಗಿ ನಲಿದು ಸಂಭ್ರಮಿಸಿದರು.

ಜಾನಪದ ಗಾರುಡಿ, ತಂಡದ ನಾಯಕ ಡಾ.ಕೆ.ರಾಮೇಶ್ವರಪ್ಪ ಅವರು ಕಂಡಾಯ ಹೊತ್ತು ಹೆಜ್ಜೆ ಹಾಕುತ್ತಲೇ ಭವನದ ಆವರಣದಲ್ಲಿ ಪ್ರವೇಶಿಸಿದರು. ಅವರು ಸುತ್ತ ಮುತ್ತ ಹಿಂದೆ ಸಹ ಕಲಾವಿದರೆಲ್ಲ ದೇಶಿ ಪದಗಳ ತಾಳಕ್ಕೆ ಹೆಜ್ಜೆ ಹಾಕಿದರು.

ವೇದಿಕೆ ಮೇಲೆ ಹುಮ್ಮಸ್ಸಿನಿಂದ ಕಡಕೋಳ ಮಹಾದೇವಪ್ಪನವರ ‘ಬಸವಣ್ಣನೇ ಗುರು, ಪ್ರಭುದೇವನೇ ಲಿಂಗ’, ‘ಬೆಳ್ಳನೆ ಎರಡೆತ್ತು, ಬೆಳ್ಳಿಯ ಬಾರಕೋಲು’, ‘ತಿಂಗಳು ಮುಳಗಿದವೋ, ರಂಗೋಲಿ ಬೆಳಗಿದವೋ’ ಹೀಗೆ ಒಂದರ ಹಿಂದೊಂದೆ ಹಾಡುಗಳು ಹೊರಹೊಮ್ಮಿದವು.

Advertisement

ನಾಯಕ ರಾಮೇಶ್ವರಪ್ಪನವರು ಏರು ದನಿಯಲ್ಲಿ ಹಾಡುತ್ತಾ, ಕುಣಿಯುತ್ತಿದ್ದರೆ, ಸಹ ಕಲಾವಿದರಾದ ಜನಪದ ಧೀರಧ್ವನಿ, ನರಸಿಂಗಮೂರ್ತಿ, ಜನಪದ ಜೀವಧಾರೆ ಬಿ.ಬಸವರಾಜ, ಜನಪದ ಸಿದ್ಧರೂಪ ನಟರಾಜ ಹರದನಹಳ್ಳಿ, ಜನಪದ ಜಾಣ ರವಿರಾಜ ಹಾಸು, ಜನಪದ ಜೀರುಂಡೆ ಅರುಣ ಕುಮಾರ ವೇದಿಕೆ ತುಂಬಾ ಓಡಾಡುತ್ತಾ ಪ್ರೇಕ್ಷಕರನ್ನು ಸೆಳೆದರು. ಗಾಯಕಿ ಸುಧಾರಾಣಿ ಸುಮಧುರವಾಗಿ ಹಾಡಿದರು. ಇವರ ನಡುವೆ ಜಾನಪದ ಮೋಡಿಕಾರ ಜಗ್ಗು ಜಾದುಗಾರ ತಮ್ಮ ಚಮತ್ಕಾರ ಪ್ರದರ್ಶಿಸಿದರು.

ಗುವಿವಿ ಕುಲಪತಿ ಪ್ರೊ| ಎಸ್‌.ಆರ್‌. ನಿರಂಜನ, ಮಹಾನಗರ ಪಾಲಿಕೆ ಆಯುಕ್ತೆ ಬಿ.ಫೌಜಿಯಾ ತರನ್ನುಮ್‌, ಕಸಾಪ ಅಧ್ಯಕ್ಷ ವೀರಭದ್ರ ಸಿಂಪಿ, ಕಾರ್ಯದರ್ಶಿ ಮಡಿವಾಳಪ್ಪ ನಾಗರಹಳ್ಳಿ, ದೌಲತರಾಯ ಮಾಲಿ ಪಾಟೀಲ ಇದ್ದರು.

Advertisement

Udayavani is now on Telegram. Click here to join our channel and stay updated with the latest news.

Next